ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹3,028 ಕೋಟಿ ಹೂಡಿಕೆಗೆ ಅಸ್ತು

34 ಹೊಸ ಯೋಜನೆ, 8 ಯೋಜನೆ ವಿಸ್ತರಣೆ
Last Updated 30 ಏಪ್ರಿಲ್ 2016, 19:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆ, ವಿಸ್ತರಣೆ ಸೇರಿದಂತೆ ಒಟ್ಟು 42 ಯೋಜನೆಗಳಿಗೆ ಬೃಹತ್‌ ಕೈಗಾ ರಿಕಾ ಸಚಿವ ಆರ್‌.ವಿ.ದೇಶಪಾಂಡೆ ಅಧ್ಯಕ್ಷತೆಯ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ  ಅನುಮತಿ ನೀಡಿದೆ. ಇವುಗಳಿಂದ ₹3,028 ಕೋಟಿ ಹೂಡಿಕೆಯಾಗಲಿದೆ.

‘34 ಹೊಸ ಯೋಜನೆಗಳಿಗೆ ಹಾಗೂ ಎಂಟು   ಯೋಜನೆಗಳ ವಿಸ್ತರಣೆಗೆ  ಅನುಮತಿ ನೀಡಲು ಸಮಿತಿ ತೀರ್ಮಾನಿಸಿದೆ.    ಎಂಟು ಜಿಲ್ಲೆಗಳಲ್ಲಿ ಹೊಸ ಯೋಜನೆಗಳು ಜಾರಿ ಆಗಲಿದ್ದು, ಇದರಿಂದ ಒಟ್ಟು ₹ 2,581 ಕೋಟಿ  ಹೂಡಿಕೆ ಆಗಲಿದೆ. 6,175 ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂದು ಸಚಿವ ದೇಶಪಾಂಡೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಎಂಟು ಯೋಜನೆಗಳ ವಿಸ್ತರಣೆಯಿಂದ ಐದು ಜಿಲ್ಲೆಗಳಲ್ಲಿ ₹449 ಕೋಟಿ ಹೂಡಿಕೆ ಆಗಲಿದೆ. 939 ಉದ್ಯೋಗ  ಸೃಷ್ಟಿಯಾಗಲಿವೆ. ಟಿವಿಎಸ್‌ ಮೋಟಾರ್ಸ್‌ ಕಂಪೆನಿ  ಮೈಸೂರಿನಲ್ಲಿ ವಿಸ್ತರಣಾ ಘಟಕ ಆರಂಭಿಸಲಿದೆ’ ಎಂದರು. 

ಎಪಿಡಿಡಿಆರ್‌ಎಲ್‌ಗೆ ಜಾಗ: ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಲಾಸ್ಟಿಕ್‌ ಎಂಜಿನಿಯರಿಂಗ್‌ ಆಂಡ್‌ ಟೆಕ್ನಾಲಜಿ (ಸಿಪೆಟ್‌) ವತಿಯಿಂದ ಅತ್ಯಾಧುನಿಕ ಪಾಲಿಮರ್‌ ವಿನ್ಯಾಸ ಮತ್ತು ಅಭಿವೃದ್ಧಿ ಸಂಶೋಧನಾ ಪ್ರಯೋಗಾಲಯ ( ಎಪಿಡಿಡಿಆರ್‌ಎಲ್‌) ಸ್ಥಾಪನೆಗೆ ಜಾಗ ಒದಗಿಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ ಕುಮಾರ್‌ ಕೋರಿದ್ದರು. ಇದಕ್ಕೆ ದೇವನಹಳ್ಳಿಯ ಹಾರ್ಡ್‌ವೇರ್‌ ಪಾರ್ಕ್‌ ಬಳಿ 5 ಎಕರೆ ಜಾಗ ನೀಡಲಾಗುವುದು. ತಾತ್ಕಾಲಿಕ ಕಟ್ಟಡವನ್ನೂ  ಒದಗಿಸಲಾಗುವುದು’ ಎಂದರು.

‘ಫಾರ್ಮಾ ಪಾರ್ಕ್‌ ಸ್ಥಾಪನೆಗೆ  ಮೈಸೂರಿನಲ್ಲಿ 150 ಎಕರೆ ಜಾಗ ಒದಗಿಸಲಾಗುವುದು. ಮಾಹಿತಿ ತಂತ್ರಜ್ಞಾನ ಪಾರ್ಕ್‌ ಮಾದರಿಯಲ್ಲೇ ಫಾರ್ಮಾ ಪಾರ್ಕ್‌ನಲ್ಲಿ ಔಷಧ ತಯಾರಿಸುವ ಕೈಗಾರಿಕೆಗಳು ಒಂದೇ ಕಡೆ ಸ್ಥಾಪನೆ ಆಗಲಿವೆ’ ಎಂದರು.

‘ಇನ್ವೆಸ್ಟ್‌ ಕರ್ನಾಟಕ ಸಮಾವೇಶದಲ್ಲಿ ಒಪ್ಪಂದ ಮಾಡಿಕೊಂಡ  ಐದು ಯೋಜನೆಗಳು ಆರಂಭವಾಗಿವೆ. ರುಚಿ ಸೋಯ ಕಂಪೆನಿ, ಐಒಸಿಎಲ್‌ನ ಎರಡು ಯೋಜನೆಗಳು, ಸೆಪೆಟ್‌ ಕಂಪೆನಿಯ ಘಟಕ  ಹಾಗೂ ಒಂದು ಆಹಾರೋದ್ಯಮ ಆರಂಭವಾಗಿದೆ. ಇದರಿಂದ ₹ 885 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, 2,130 ಮಂದಿಗೆ ಉದ್ಯೋಗ ಸಿಗಲಿದೆ’ ಎಂದರು.

ಇನ್ವೆಸ್ಟ್‌ ಕರ್ನಾಟಕ ಕಂಪೆನಿ ಸ್ಥಾಪನೆ
‘ಬಂಡವಾಳ ಆಕರ್ಷಣೆಗೆ ಉತ್ತೇಜನ ನೀಡಲು ಕಂಪೆನಿ ವ್ಯವಹಾರಗಳ ಕಾಯ್ದೆಯ ಸೆಕ್ಷನ್‌ 8ರ ಅನ್ವಯ ಇನ್ವೆಸ್ಟ್‌ ಕರ್ನಾಟಕ ಕಂಪೆನಿ ಸ್ಥಾಪಿಸುವ ಪ್ರಕ್ರಿಯೆ ಆರಂಭವಾಗಿದೆ. ಸರ್ಕಾರದ ಪ್ರತಿನಿಧಿಗಳ ಜೊತೆ ಕೈಗಾರಿಕಾ ಕ್ಷೇತ್ರದ ಪ್ರತಿನಿಧಿಗಳೂ ಇದರಲ್ಲಿರುತ್ತಾರೆ. ಇದೊಂದು ಲಾಭರಹಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ’ ಎಂದು ಸಚಿವ ದೇಶಪಾಂಡೆ ತಿಳಿಸಿದರು.

‘ಕಂಪೆನಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಸರ್ಕಾರವೇ ಹಣಕಾಸಿನ ನೆರವು ನೀಡಲಿದೆ.   ನಿರ್ದಿಷ್ಟ ದೇಶಗಳ ಕೈಗಾರಿಕೆಗಳ ಸ್ಥಿತಿಯ ಬಗ್ಗೆ, ಅಲ್ಲಿನ ಭಾಷೆ ಸಂಸ್ಕೃತಿಗಳ ಬಗ್ಗೆ ವಿಶೇಷ ಪರಿಜ್ಞಾನ ಹೊಂದಿದವರು ಇದರಲ್ಲಿ ಕಾರ್ಯನಿರ್ವಹಿಸುತ್ತಾರೆ. ಸರ್ಕಾರದ ನೀತಿಗಳನ್ನು  ಹೂಡಿಕೆದಾರರಿಗೆ ಮನವರಿಕೆ ಮಾಡಿ ಲಾಬಿ ನಡೆಸುವುದು  ಇದರ ಪ್ರಮುಖ ಉದ್ದೇಶ. ಅಧಿಕಾರಶಾಹಿ ವ್ಯವಸ್ಥೆಯ ತೊಡಕುಗಳನ್ನು ನಿವಾರಿಸಿ, ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇದು ಸಹಕಾರಿ ಆಗಲಿದೆ.   ಇದು ದೇಶದಲ್ಲೇ ಮೊದಲ ಪ್ರಯೋಗ’ ಎಂದರು.

** *** **
ಅತಿಹೆಚ್ಚು ಪ್ರಮಾಣದಲ್ಲಿ ಬಂಡವಾಳ ಆಕರ್ಷಿಸುವ ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಶೀಘ್ರವೇ ನಾವು ಮೊದಲ ಸ್ಥಾನಕ್ಕೆ ಏರಲಿದ್ದೇವೆ.
-ಆರ್‌.ವಿ.ದೇಶಪಾಂಡೆ, 
ಬೃಹತ್‌ ಕೈಗಾರಿಕಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT