ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1ನೇ ತರಗತಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ನಗರದಲ್ಲಿ ಮತ್ತೊಂದು ಹೀನ ಕೃತ್ಯ: ಶಿಕ್ಷಕ ಬಂಧನ
Last Updated 30 ಅಕ್ಟೋಬರ್ 2014, 19:58 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಕಿಡ್ ದಿ ಇಂಟರ್‌­ನ್ಯಾಷನಲ್ ಶಾಲೆಯ ಮೂರು ವರ್ಷದ ನರ್ಸರಿ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಮಾಸುವ ಮುನ್ನವೇ, ತಿಪ್ಪಸಂದ್ರದ ‘ದಿ ಇಂದಿರಾ­ನಗರ್ ಕೇಂಬ್ರಿಡ್ಜ್‌ ಇಂಗ್ಲಿಷ್‌ ಶಾಲೆ’­ಯಲ್ಲಿ ಅಂತಹುದೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಶಾಲೆಯ ಹಿಂದಿ ಶಿಕ್ಷಕ ಜೈಶಂಕರ್‌ (38), ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಎರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಈ ಸಂಬಂಧ ಬಾಲಕಿಯ ಪೋಷ­ಕರು ದೂರು ಕೊಟ್ಟಿದ್ದು, ಆರೋಪಿ­ಯನ್ನು ಬಂಧಿಸಲಾಗಿದೆ ಎಂದು ಜೀವನ್‌­ಭಿಮಾನಗರ ಪೊಲೀಸರು ತಿಳಿಸಿದ್ದಾರೆ.

‘ಆರೋಪಿ ಅ.28 ಮತ್ತು ಅ.29­ರಂದು ಶಾಲೆಯ ಬಾಲಕರ ಶೌಚಾಲ­ಯದಲ್ಲಿ ಈ ಕೃತ್ಯ ಎಸಗಿದ್ದಾನೆ. ಬುಧ­ವಾರ ತರಗತಿ ಮುಗಿಸಿಕೊಂಡು ಮಧ್ಯಾಹ್ನ 3.30ಕ್ಕೆ ಮನೆಗೆ ಮರಳಿದ ಬಾಲಕಿ, ಹೊಟ್ಟೆ ನೋವಿನಿಂದ ನರಳಿ­ದ್ದಾಳೆ. ಹೀಗಾಗಿ ಪೋಷಕರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು, ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಹೇಳಿ­ದ್ದಾರೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಈ ಸಂಗತಿ ತಿಳಿದು ಗಾಬರಿಗೊಂಡ ಪೋಷಕರು, ಮಗಳನ್ನು ವಿಚಾರಿಸಿದಾಗ ಆಕೆ ನಡೆದ ಘಟನೆಯನ್ನು ವಿವರಿಸಿ­ದ್ದಾಳೆ. ನಂತರ ಪೋಷಕರು ಮಕ್ಕಳ ಕಲ್ಯಾಣ ಸಮಿತಿಗೆ ವಿಷಯ ತಿಳಿಸಿ, ಅವರ ಸೂಚನೆಯಂತೆ ಜೆ.ಬಿ.ನಗರ ಠಾಣೆಗೆ ಬಂದು ದೂರು ಕೊಟದ್ದಾರೆ.
ತಿಪ್ಪಸಂದ್ರ  ನಿವಾಸಿಯಾದ ಜೈ­ಶಂಕರ್, 2 ವರ್ಷದಿಂದ ಈ ಶಾಲೆ­ಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಮಗ ಕೂಡ ಇದೇ ಶಾಲೆಯಲ್ಲಿ ಓದುತ್ತಿ­ದ್ದಾನೆ. ಕೆಲ ತಿಂಗಳ ಹಿಂದೆ ಹಿಂದಿ ಕಲಿಕೆ­ಗಾಗಿ ಬಾಲಕಿ ಜೈಶಂಕರ್ ಮನೆಗೆ ಟ್ಯೂಷನ್‌ಗೆ ಹೋಗುತ್ತಿದ್ದಳು. ಆಗ, ಶಿಕ್ಷಕ ಅಸಭ್ಯವಾಗಿ ವರ್ತಿಸುವುದಾಗಿ ಬಾಲಕಿ ಹೇಳಿದ್ದರಿಂದ ಪೋಷಕರು ಟ್ಯೂಷನ್ ಬಿಡಿಸಿದ್ದರು.

‘ಬಾಲಕಿಯ ತಂದೆ ಕ್ಯಾಬ್‌ ಚಾಲಕ­ರಾಗಿದ್ದು, ತಾಯಿ ಗೃಹಿಣಿಯಾ­ಗಿ­ದ್ದಾರೆ. ಅವರು ನೀಡಿದ ದೂರಿನ ಅನ್ವಯ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2012 (ಪೋಕ್ಸೊ) ಮತ್ತು ಅತ್ಯಾಚಾರ (ಐಪಿಸಿ 376) ಆರೋಪ­ದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಹಾಗೂ ಬಾಲಕಿ­ಯನ್ನು ಬೌರಿಂಗ್ ಆಸ್ಪತ್ರೆ­ಯಲ್ಲಿ ವೈದ್ಯ­ಕೀಯ ಪರೀಕ್ಷೆಗೆ ಒಳಪಡಿಸಲಾಗು­ವುದು’ ಎಂದು ಪೂರ್ವ ವಿಭಾಗದ ಡಿಸಿಪಿ ಸತೀಶ್ ಕುಮಾರ್ ತಿಳಿಸಿದರು.

‘ಶಿಕ್ಷಕ ಜೈಶಂಕರ್‌ ಈ ಕೃತ್ಯ ಎಸಗಿ­ರುವುದಕ್ಕೆ ಬಲವಾದ ಸಾಕ್ಷ್ಯಗಳು ಲಭ್ಯ­ವಾ­ಗಿವೆ. ಅಲ್ಲದೆ, ವಿದ್ಯಾರ್ಥಿನಿ ಕೂಡ ಈತನನ್ನೇ ಗುರುತಿಸಿದ್ದಾಳೆ. ಮಕ್ಕಳ ಸುರಕ್ಷತೆ ದೃಷ್ಟಿಯಲ್ಲಿ ಪೊಲೀಸ್ ಇಲಾಖೆ ಗೊತ್ತುಪಡಿಸಿದ್ದ ಮಾರ್ಗ­ಸೂಚಿಗಳನ್ನು ಶಾಲಾ ಆಡಳಿತ ಮಂಡಳಿ ಪಾಲಿಸಿಲ್ಲ. ಇಡೀ ಶಾಲೆಯಲ್ಲಿ ಕೇವಲ ಒಂದೇ ಒಂದು ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ. ಹೀಗಾಗಿ ಶಾಲೆ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಹಿರಿಯ ಅಧಿಕಾರಿಗಳು ಹೇಳಿದರು.

ಪೋಷಕರ ಆಕ್ರೋಶ: ವಿಷಯ ತಿಳಿದು ರಾತ್ರಿಯೇ ಶಾಲೆ ಬಳಿ ಜಮಾಯಿಸಿದ ಕೆಲ ಪೋಷಕರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ­ವರೆಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳು­ಹಿ­ಸುವುದಿಲ್ಲ ಎಂದು ಎಚ್ಚರಿಕೆ ನೀಡಿ­ದರು. ಈ ವೇಳೆ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್, ಡಿಸಿಪಿ ಸತೀಶ್‌ ಕುಮಾರ್ ಅವರು ಪೋಷಕರ ಮನವೊಲಿಸಿದರು.

ಹಿಂದಿನ ಪ್ರಕರಣಗಳು
* ಜುಲೈ 3: ವಿಬ್ಗಯೊರ್‌ ಶಾಲೆಯಲ್ಲಿ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
* ಆಗಸ್ಟ್ 4: ಕನಕಪುರ ರಸ್ತೆಯ ಮಾರುತಿ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿಗೆ ಅತಿಥಿ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ
* ಅಕ್ಟೋಬರ್ 22: ಜಾಲಹಳ್ಳಿಯ ಆರ್ಕಿಡ್ ಶಾಲೆಯಲ್ಲಿ ಕಚೇರಿ ಸಹಾಯಕನಿಂದ 3 ವರ್ಷದ ನರ್ಸರಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT