ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ಕಟ್ಟಡಗಳಿಂದ ₹231 ಕೋಟಿ ವಸೂಲಿಗೆ ನೋಟಿಸ್‌

ಸ್ವಯಂಘೋಷಿತ ಆಸ್ತಿ ತೆರಿಗೆ ಘೋಷಣೆಯಲ್ಲಿ ಕಟ್ಟಡಗಳ ವಿಸ್ತೀರ್ಣದ ತಪ್ಪು ಮಾಹಿತಿ
Last Updated 25 ಜೂನ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ 10 ಬೃಹತ್‌ ಕಟ್ಟಡಗಳ ಮಾಲೀಕರು ಸ್ವಯಂಘೋಷಿತ ಆಸ್ತಿ ತೆರಿಗೆ  (ಎಸ್‌ಎಎಸ್‌) ಘೋಷಣೆಯ ಸಂದರ್ಭದಲ್ಲಿ ತಮ್ಮ ಕಟ್ಟಡಗಳ ಅಳತೆಯನ್ನು ತಪ್ಪಾಗಿ ಘೋಷಿಸಿಕೊಂಡಿದ್ದಾರೆ.

ಅವರಿಂದ ₹231.66 ಕೋಟಿ  (ಬಡ್ಡಿ, ದಂಡ ಒಳಗೊಂಡಂತೆ) ವಸೂಲಿ ಮಾಡಲು ನೋಟಿಸ್‌ ನೀಡಲಾಗಿದೆ’ ಎಂದು ಬಿಬಿಎಂಪಿಯ ತೆರಿಗೆ ಹಾಗೂ ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ. ಶಿವರಾಜ್‌ ತಿಳಿಸಿದರು.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಥೆಮಾಟಿಕ್ಸ್‌ ಇನ್ಫೋಟೆಕ್‌ ಸಂಸ್ಥೆ ಹಾಗೂ ಅಲ್ಕಾನ್‌ ಸಂಸ್ಥೆಗಳ ಮೂಲಕ 10 ಕಟ್ಟಡಗಳ ಟೋಟಲ್‌ ಸರ್ವೆ ಮಾಡಿಸಲಾಗಿತ್ತು. ವಾಸದ ಪ್ರಮಾಣಪತ್ರ (ಒ.ಸಿ.) ಪಡೆದ ದಿನದಿಂದ ಇಲ್ಲಿಯ ವರೆಗಿನ ವ್ಯತ್ಯಾಸದ ಮೊತ್ತ, ಬಡ್ಡಿಯನ್ನು  ಮಾಲೀಕರಿಂದ ವಸೂಲಿ ಮಾಡುತ್ತೇವೆ’ ಎಂದರು.

‘ಕೆಎಂಸಿ ಕಾಯ್ದೆಯ ಸೆಕ್ಷನ್‌ 14, ನಿಯಮ 26 ಹಾಗೂ 27ರ ಪ್ರಕಾರ ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ನೀಡಲಾಗುತ್ತಿದೆ. ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಆರಂಭಿಕ ಹಂತದಲ್ಲಿ 10 ಕಟ್ಟಡಗಳ ಸಮೀಕ್ಷೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಎಲ್ಲ ಬೃಹತ್‌ ಕಟ್ಟಡಗಳ ಸಮೀಕ್ಷೆ  ಮಾಡುತ್ತೇವೆ’ ಎಂದು ಅವರು ತಿಳಿಸಿದರು.

ರಿಯಾಯಿತಿ ಅವಧಿ ಐದು ದಿನ ಮಾತ್ರ: ‘ಪ್ರಸಕ್ತ ಸಾಲಿನಲ್ಲಿ ಕಂದಾಯ ವಿಭಾಗದಿಂದ ₹2,300 ಕೋಟಿ ಆಸ್ತಿ ತೆರಿಗೆ ಸೇರಿದಂತೆ ₹3,100 ಕೋಟಿ ಆದಾಯ ಸಂಗ್ರಹಿಸುವ ಗುರಿ ಇದೆ.

ಕಳೆದ ವರ್ಷ ಜೂನ್‌ ಅಂತ್ಯದ ವರೆಗೆ ₹1,100 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿತ್ತು. ಈ ವರ್ಷ ಶುಕ್ರವಾರದ ವರೆಗೆ ₹ 1,037 ಕೋಟಿ ಸಂಗ್ರಹಿಸಲಾಗಿದೆ. ಇನ್ನೂ ಐದು ದಿನಗಳಲ್ಲಿ ₹ 70 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

‘ಆಸ್ತಿ ತೆರಿಗೆ ಪಾವತಿ ಮೇಲೆ ನೀಡುವ ಶೇ 5 ರಿಯಾಯಿತಿ ಅವಧಿ ಐದು ದಿನಗಳು ಮಾತ್ರ ಇವೆ. ತೆರಿಗೆದಾರರು ಈ ಅವಧಿಯೊಳಗೆ ತೆರಿಗೆ ಕಟ್ಟಿ ಲಾಭ ಪಡೆಯಬೇಕು’ ಎಂದು ಅವರು ವಿನಂತಿಸಿದರು.

ಮತ್ತೆ ಎರಡು ಕಟ್ಟಡ ಋಣಮುಕ್ತ
ಬಿಬಿಎಂಪಿ ಈ ಹಿಂದೆ ಸಾಲ ಪಡೆಯಲು ಅಡಮಾನ ಇಟ್ಟಿದ್ದ 11 ಕಟ್ಟಡಗಳ ಪೈಕಿ ಮತ್ತೆ ಎರಡು ಕಟ್ಟಡಗಳನ್ನು ಋಣಮುಕ್ತ ಮಾಡಲಾಗುತ್ತಿದೆ. ‘ಮೇ 27ರಂದು ₹143 ಕೋಟಿಯನ್ನು ಹುಡ್ಕೊಗೆ ಸಾಲ ಕಟ್ಟಲಾಗಿದೆ. ಮಲ್ಲೇಶ್ವರ ಮಾರುಕಟ್ಟೆ ಹಾಗೂ ರಾಜಾಜಿನಗರ ಕಟ್ಟಡಗಳನ್ನು ಮರಳಿಸಲು ಹುಡ್ಕೊ ಒಪ್ಪಿದೆ. ಇನ್ನೂ ₹40 ಕೋಟಿ ಕಟ್ಟಿದರೆ ಜಾನ್ಸನ್‌ ಮಾರುಕಟ್ಟೆಯೂ ಸ್ವಾಧೀನಕ್ಕೆ ಬರಲಿದೆ’ ಎಂದು ಎಂ.ಶಿವರಾಜು ತಿಳಿಸಿದರು.

ಬಿಬಿಎಂಪಿ ತಾನು ಪಡೆದಿದ್ದ ₹ 1676. 85 ಕೋಟಿ ಸಾಲಕ್ಕೆ ಪ್ರತಿಯಾಗಿ 2011–12 ಮತ್ತು 2012–13ನೇ ಸಾಲಿನಲ್ಲಿ ತನ್ನ 11 ಕಟ್ಟಡಗಳನ್ನು ಅಡಮಾನ ಇಟ್ಟಿತ್ತು.ಪಾರಂಪರಿಕ ಕಟ್ಟಡಗಳಾದ ಮೇಯೊ ಹಾಲ್‌ ಮತ್ತು ಕೆಂಪೇಗೌಡ ಮ್ಯೂಸಿಯಂಗಳನ್ನು  ತಿಂಗಳ ಹಿಂದೆ ಪಾಲಿಕೆ ಸ್ವಾಧೀನಕ್ಕೆ ಪಡೆಯಲಾಗಿತ್ತು.

ಕೆ.ಆರ್‌. ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ದಾಸಪ್ಪ ಆಸ್ಪತ್ರೆ, ಜಾನ್ಸನ್‌ ಮಾರುಕಟ್ಟೆ, ಪಬ್ಲಿಕ್‌ ಯುಟಿಲಿಟಿ ಬಿಲ್ಡಿಂಗ್‌, ಮೇಯೊ ಹಾಲ್‌, ಕೆಂಪೇಗೌಡ ಮ್ಯೂಸಿಯಂ, ವೆಸ್ಟರ್ನ್ ರೇಜರ್‌್ಸ ಆಫೀಸ್‌, ಕಲಾಸಿಪಾಳ್ಯ ಮಾರುಕಟ್ಟೆ, ರಾಜಾಜಿನಗರ ಆರ್‌ಟಿಒ ಕಟ್ಟಡ ಹಾಗೂ ಟ್ಯಾನರಿ ರಸ್ತೆ ವಧಾಗಾರ ಅಡಮಾನ ಇಟ್ಟು ಸಾಲ ಪಡೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT