ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

108 ವರ್ಷಕ್ಕೆ ಕಾಲಿಟ್ಟ ಶಿವಕುಮಾರ ಸ್ವಾಮೀಜಿ

ಭಕ್ತ ಸಾಗರದ ನಡುವೆ ಜನ್ಮದಿನಾಚರಣೆ
Last Updated 1 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ತುಮಕೂರು: ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಬುಧವಾರ 108ನೇ ವಸಂತಕ್ಕೆ ಕಾಲಿಟ್ಟರು. ಮಠ ಮಾತ್ರವಲ್ಲದೆ ನಗರದೆಲ್ಲಡೆ ಸ್ವಾಮೀಜಿ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆಯಿತು.

ನಗರದ ಬಿ.ಎಚ್‌.ರಸ್ತೆಯ ಕಾಲೇಜು ಮೈದಾನದಲ್ಲಿ ಸಂಜೆ ನಡೆದ ಸಮಾರಂಭದಲ್ಲಿ ಸ್ವಾಮೀಜಿಗೆ ಜನರಿಂದ ಅಭಿನಂದನೆ ಸಲ್ಲಿಸಿದ್ದು ಈ ಸಲದ ವಿಶೇಷ.

ಬೆಳಗಿನ ಜಾವ 3 ಗಂಟೆಯಿಂದಲೇ ಪೂಜೆಯಲ್ಲಿ ತೊಡಗಿಕೊಂಡ ಸ್ವಾಮೀಜಿ ಅವರನ್ನು 6 ಗಂಟೆ ಸುಮಾರಿಗೆ ಜನ್ಮ ದಿನಾಚರಣೆಗೆಂದೇ ಸಿಂಗರಿಸಿದ್ದ  ವೇದಿಕೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಭಕ್ತರು ಸ್ವಾಮೀಜಿಗೆ ಫಲ, ಕಾಣಿಕೆ ಅರ್ಪಿಸಿ ಹುಟ್ಟು ಹಬ್ಬದ ಶುಭ ಕೋರಿ, ಆಶೀರ್ವಾದ ಪಡೆದರು. ಸರ್ಕಾರದ ಪರವಾಗಿ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರು ಸ್ವಾಮೀಜಿಗೆ ಫಲಪುಷ್ಪ ನೀಡಿ ಶುಭ ಕೋರಿದರು. ಮಠದ ಜನಪರ ಕೆಲಸಗಳಿಗೆ ಸರ್ಕಾರ ಸದಾ ಬೆಂಬಲ ನೀಡಲಿದೆ ಎಂದು ಹೇಳಿದರು.

ಸಹಕಾರ ಸಚಿವ ಎಚ್‌.ಎಸ್.ಮಹದೇವ ಪ್ರಸಾದ್‌,  ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಇನ್ನಿತರರು ಶುಭ ಕೋರಿದರು.

ಸ್ವಾಮೀಜಿಯವರನ್ನು ನೋಡಲು ಮಂಗಳವಾರದಿಂದಲೇ ಭಕ್ತ ಸಮೂಹ ಮಠಕ್ಕೆ ಬಂದಿತ್ತು. ಬುಧವಾರ ಬೆಳಿಗ್ಗೆಯೇ ಸಾವಿರಾರು ಭಕ್ತರಿಂದ ಮಠದ ಆವರಣ ತುಂಬಿ ತುಳುಕಿತು. ಸರದಿಯಲ್ಲಿ ನಿಂತು ಭಕ್ತರು ಆಶೀರ್ವಾದ ಪಡೆದರು. ಜನ್ಮಜಯಂತಿ ಜನಮಾನಸದಲ್ಲಿ ಉಳಿಯಲೆಂಬ ಕಾರಣಕ್ಕೆ ಹಲವು ಸಂಘ, ಸಂಸ್ಥೆಗಳು ನಗರದ ಬೀದಿ ಬೀದಿಗಳಲ್ಲಿ ಪೆಂಡಾಲ್‌ ಹಾಕಿ ದಾರಿ ಹೋಕರಿಗೆ ಮಜ್ಜಿಗೆ, ಪಾನಕ ವಿತರಿಸಿದರು. ಅನ್ನಪ್ರಸಾದ ನಡೆಯಿತು. ಬಿ.ಎಚ್‌.ರಸ್ತೆ ಉದ್ದಕ್ಕೂ ಸ್ವಾಮೀಜಿ ಭಾವಚಿತ್ರಗಳನ್ನು ಹಾಕಿ ಶುಭಕೋರಲಾಗಿತ್ತು.

ನಗರದ ಅಷ್ಟ ದಿಕ್ಕುಗಳಿಂದ ಮೆರವಣಿಗೆ ನಡೆಯಿತು. ಬೈಕ್‌, ಕಾರು, ಟ್ಯ್ರಾಕ್ಟರ್‌ಗಳಲ್ಲಿ ಬಂದ ಜನರು ಬಿ.ಎಚ್‌.ರಸ್ತೆಯ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಕಾಲೇಜು ಮೈದಾನದವರೆಗೂ ಮೆರವಣಿಗೆ ನಡೆಸಿದರು.

ಸಂಜೆ ನಡೆದ ಸಮಾರಂಭದಲ್ಲಿ ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಜನಾಭಿವಂದನೆ ಸಲ್ಲಿಸಿ ಮಾತನಾಡಿ, ಸಿದ್ದಗಂಗಾ ಮಠದ ಕೆಲಸಗಳು ಎಲ್ಲ ಮಠಗಳಿಗೂ ಆದರ್ಶ, ಮಾದರಿ ಎಂದು ಕೊಂಡಾಡಿದರು. ಸಿದ್ದಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ತರಳಬಾಳು ಸ್ವಾಮೀಜಿ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT