ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ಬೇಡಿಕೆಗಳಿಗೆ ಒಪ್ಪಿಕೊಂಡ ವಿಬ್ಗಯೊರ್

28ರಿಂದ ತರಗತಿಗಳು ಪುನರಾರಂಭ
Last Updated 24 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾರತ್‌ಹಳ್ಳಿ ಮುಖ್ಯರಸ್ತೆಯ ವಿಬ್ಗಯೊರ್‌ ಶಾಲೆಯ ಪೋಷಕರ 11 ಬೇಡಿಕೆಗಳನ್ನು ಈಡೇರಿಸಲು ಶಾಲೆಯ ಆಡಳಿತ ಮಂಡಳಿಯು ಒಪ್ಪಿಗೆ ನೀಡಿದ್ದು, ಸೋಮವಾರದಿಂದ  (ಜುಲೈ 28) ತರಗತಿಗಳು ಪುನರಾರಂಭಗೊಳ್ಳಲಿವೆ.

ಒಂದನೆ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದ ನಂತರ ಮಕ್ಕಳ ಸುರಕ್ಷತೆ ವಿಷಯದಲ್ಲಿ ವಿಬ್ಗಯೊರ್ ಶಾಲೆಯು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಶಾಲಾ ಆವರಣದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದ ಪೋಷಕರು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಎಂಬ ನಿರ್ಧಾರಕ್ಕೆ ಬಂದಿದ್ದರು.  ಹೀಗಾಗಿ ಒಂದು ವಾರದಿಂದ ತರಗತಿಗಳು ಸ್ಥಗಿತಗೊಂಡಿದ್ದವು.

ಶಾಲಾ ಆಡಳಿತ ಮಂಡಳಿಯು ಗುರುವಾರ ಪೋಷಕರು ಮತ್ತು ಬೆಂಗಳೂರು ಪೂರ್ವ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಎಸ್.ರಮೇಶ್‌ ಅವರ ಜತೆ ಸಭೆ ನಡೆಸಿತು. ಮೂರು ತಾಸುಗಳ ಕಾಲ ನಡೆದ ಈ ಸಭೆಯಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಪಟ್ಟ 11 ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ಸೂಚಿಸಿತು.

‘ಪೋಷಕರು 40 ಬೇಡಿಕೆಗಳನ್ನು ಆಡಳಿತ ಮಂಡಳಿ ಮುಂದೆ ಇಟ್ಟಿದ್ದರು. ಅದರಲ್ಲಿ ಪ್ರಮುಖ 11 ಬೇಡಿಕೆಗಳನ್ನು ಇದೇ ಸೆಪ್ಟಂಬರ್‌ ತಿಂಗಳೊಳಗೆ ಈಡೇರಿಸುವುದಾಗಿ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ನಿರ್ಧರಿಸಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಹೇಳಿದರು.

‘ಶಾಲೆಯಲ್ಲಿ ಒಟ್ಟು 1,200 ವಿದ್ಯಾರ್ಥಿಗಳ ವ್ಯಾಸಂಗ ಮಾಡುತ್ತಿದ್ದು, 5 ರಿಂದ 10ನೆ ವರೆಗಿನ ತರಗತಿಗಳು ಸೋಮವಾರದಿಂದಲೇ ಆರಂಭವಾಗಲಿವೆ. ಮಂಗಳವಾರ ಸರ್ಕಾರಿ ರಜೆ ಇರುವುದರಿಂದ ನರ್ಸರಿಯಿಂದ 5ನೆ ತರಗತಿಯ ಮಕ್ಕಳಿಗೆ ಬುಧವಾರದಿಂದ ಎಂದಿನಂತೆ ತರಗತಿ­ಗಳು ಪುನರಾರಂಭಗೊಳ್ಳಲಿವೆ’ ಎಂದು ಆಡಳಿತ ಮಂಡಳಿ ತಿಳಿಸಿದೆ.

ಮುಂದುವರಿದ ವಿಚಾರಣೆ
ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳು ಗುರುವಾರವೂ ಶಾಲಾ ಸಿಬ್ಬಂದಿಯ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದರು.
‘ಸೇವೆಯಿಂದ ಅಮಾನತು­ಗೊಂಡಿರುವ ಒಬ್ಬ ಶಿಕ್ಷಕ, ಇಬ್ಬರು ಜಿಮ್‌ ತರಬೇತುದಾರರು ಮತ್ತು ಸ್ಕೇಟಿಂಗ್ ತರ­ಬೇತಿ ಶಿಕ್ಷಕನನ್ನು ವಿಚಾರಣೆ ನಡೆಸಲಾಯಿತು.

ಶಾಲೆಯ ಪ್ರಾಂಶು­­ಪಾಲ ಅಲಿಸ್ಟರ್‌ ಲ್ಯಾಪೋರ್ಟ್‌ ಅವರು ಅನಾ­ರೋಗ್ಯ­ದಿಂದ  ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರ ವಿಚಾರಣೆ ಸಾಧ್ಯವಾಗಿಲ್ಲ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

11 ಬೇಡಿಕೆಗಳು
* ತರಗತಿ ಕೊಠಡಿಗಳು ಹಾಗೂ ಶಾಲಾ ಆವರಣದಲ್ಲಿ ಒಟ್ಟು 300 ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಕೆ
* ಭದ್ರತಾ ಸಿಬ್ಬಂದಿಯ ಬದಲಾವಣೆ
* ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯ ಹಿನ್ನೆಲೆ ಪರಿಶೀಲನೆ
* ಶಾಲಾ ವಾಹನಗಳಲ್ಲಿ ಮಹಿಳಾ ಸಹಾಯಕಿ ಕಡ್ಡಾಯ
* ಆವರಣದಲ್ಲಿ ಖಾಸಗಿ ನೀರಿನ ಟ್ಯಾಂಕರ್‌ ಪ್ರವೇಶ ನಿರ್ಬಂಧ
* ಪೋಷಕರು–ಶಿಕ್ಷಕರ ಸಮಿತಿ (ಪಿಟಿಸಿ) ರಚನೆ. ಕಾಲಕಾಲಕ್ಕೆ ಸಭೆ
* ಪೋಷಕರು, ಆಡಳಿತ ಮಂಡಳಿ ಮತ್ತು ಪೊಲೀಸರನ್ನೊಳಗೊಂಡ ಕಾರ್ಯ ಪಡೆ ರಚನೆ
* ಆವರಣದಲ್ಲಿರುವ ಈಜುಕೊಳದ ಖಾಸಗೀಕರಣ ನಿಷೇಧ
* ಪೋಷಕರ ಅನುಮತಿ ಇಲ್ಲದೆ ಮಕ್ಕಳ ಭಾವಚಿತ್ರ ತೆಗೆಯುವಂತಿಲ್ಲ
* ಗುತ್ತಿಗೆ ಸಿಬ್ಬಂದಿಯ ಮೇಲೆ ಹೆಚ್ಚು ನಿಗಾ ವಹಿಸುವುದು
* ಎಲ್ಲ ಸಿಬ್ಬಂದಿಯ ಸ್ವ–ವಿವರ ಹಾಗೂ ಪ್ರಸ್ತುತ ವಾಸದ ವಿಳಾಸ ಸಂಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT