ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ಶಂಕಿತ ಐಎಸ್ ಉಗ್ರರು ವಶಕ್ಕೆ

ಹೈದರಾಬಾದ್‌ನ ವಿವಿಧೆಡೆ ದಾಳಿಗೆ ಸಂಚು: ತೀವ್ರ ವಿಚಾರಣೆ
Last Updated 29 ಜೂನ್ 2016, 20:19 IST
ಅಕ್ಷರ ಗಾತ್ರ

ಹೈದರಾಬಾದ್: ಹೈದರಾಬಾದ್‌ನ ವಿವಿಧೆಡೆ ದಾಳಿ ನಡೆಸಲು ಯೋಜಿಸಿದ್ದ  11 ಮಂದಿ ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಸಿಬ್ಬಂದಿ ಬುಧವಾರ ವಶಕ್ಕೆ ಪಡೆದಿದ್ದಾರೆ.

ಶಂಕಿತರೆಲ್ಲರೂ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆ ಬಗ್ಗೆ ಸಹಾನುಭೂತಿ ಹೊಂದಿದ್ದರು ಎಂದು ಮೂಲಗಳು ಸ್ಪಷ್ಟಪಡಿಸಿವೆ.
‘ಎನ್‌ಐಎ, ತೆಲಂಗಾಣ ಪೊಲೀಸರು ಮತ್ತು ತೆಲಂಗಾಣ ಗುಪ್ತಚರ ಇಲಾಖೆ ಸಿಬ್ಬಂದಿ ಹೈದರಾಬಾದ್‌ನ ವಿವಿಧೆಡೆ ಜಂಟಿಯಾಗಿ ದಾಳಿ ನಡೆಸಿ, ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಅವರಿಂದ ಭಾರಿ ಪ್ರಮಾಣದ ಸ್ಫೋಟಕ, ಶಸ್ತ್ರಾಸ್ತ್ರ ಮತ್ತು ನಗದನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ’ ಎಂದು  ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಂಕಿತರಲ್ಲಿ ಆರು ಜನರ ಹೆಸರನ್ನು ಮಾತ್ರ ಬಹಿರಂಗಪಡಿಸಲಾಗಿದ್ದು, ಐವರ ಗುರುತನ್ನು ಬಹಿರಂಗಪಡಿಸಿಲ್ಲ. ಅವರನ್ನು ಹಬೀಬ್ ಮಹಮ್ಮದ್,  ಮಹಮ್ಮದ್ ಇಲಿಯಾಸ್ ಯಾಜ್ದಿನ್,  ಮಹಮ್ಮದ್ ಇರ್ಫಾನ್, ಮುಜಾಫರ್ ಹುಸೇನ್, ಮಹಮ್ದ್ ಇಬ್ರಾಹಿಂ ಮತ್ತು ಅಬ್ದುಲ್ಲಾ ಬಿನ್ ಅಹ್ಮದ್ ಎಂದು ಗುರುತಿಸಲಾಗಿದೆ.

ಇಷ್ಟೂ ಜನರ ಚಲನವಲನಗಳ ಮೇಲೆ ಹಲವು ತಿಂಗಳಿನಿಂದ ನಿಗಾ ಇಡಲಾಗಿತ್ತು. ಅವರ ಮೇಲೆ ಜೂನ್‌ 22 ರಂದೇ ಎಫ್‌ಐಆರ್‌ ದಾಖಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹನ್ನೊಂದೂ ಮಂದಿಯನ್ನೂ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಜತೆಗೆ ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಜತೆಗೆ ನಗರದಲ್ಲಿ ಭದ್ರತೆಗಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಹಾಗೂ ಕ್ಷಿಪ್ರ ಕಾರ್ಯಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ತೆಲಂಗಾಣ ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಖ್ಯಾಂಶಗಳು

- ಎನ್‌ಐಎ, ತೆಲಂಗಾಣ ಪೊಲೀಸರಿಂದ ಜಂಟಿ ಕಾರ್ಯಾಚರಣೆ
-ಐಎಸ್‌ ಉಗ್ರರ ಜತೆ ನೇರ ಸಂಪರ್ಕ ಹೊಂದಿದ್ದ ಶಂಕಿತರು
- ಹೈದರಾಬಾದ್‌ನಲ್ಲಿ ಕಟ್ಟೆಚ್ಚರ

ಭಾರಿ ಶಸ್ತ್ರಾಸ್ತ್ರ ವಶಕ್ಕೆ...
ಶಂಕಿತರಿಂದ ಭಾರಿ ಪ್ರಮಾಣದಲ್ಲಿ ರಾಸಾಯನಿಕಗಳು, ಸ್ಫೋಟಕಗಳು, 9 ಎಂಎಂನ ಎರಡು ಪಿಸ್ತೂಲುಗಳು, ಒಂದು ಏರ್‌ಗನ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅವರ ಸಂಗ್ರಹದಲ್ಲಿ 25 ಮೊಬೈಲ್‌ ಪೋನ್‌ಗಳು, ಮುಸುಕುಗಳು, ಕೈಗವಸುಗಳು, ಟೈಮರ್‌ಗಳು ಮತ್ತು ಒಂದು ಲ್ಯಾಪ್‌ಟಾಪ್‌ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜತೆಗೆ ಅವರ ಬಳಿ ಇದ್ದ ₹ 15 ಲಕ್ಷ ನಗದನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೇರ ಸಂಪರ್ಕ ಸಾಧಿಸಿದ ಗುಂಪು
ಇದು ಸಿರಿಯಾದಲ್ಲಿರುವ ಐಎಸ್‌ ಉಗ್ರರ ಜತೆ ಭಾರತದಿಂದ ನೇರವಾಗಿ ಸಂಪರ್ಕ ಸಾಧಿಸಿದ ಮೊದಲ ಗುಂಪು. ಬಂಧಿತರು ಸಿರಿಯಾದಲ್ಲಿರುವ ಕೆಲವರ ಜತೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿದಿನ ಚರ್ಚಿಸುತ್ತಿದ್ದರು.

ಐಎಸ್‌ ಬಗ್ಗೆ ಒಲವಿದ್ದವರ ಬಳಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳು ಪತ್ತೆಯಾಗಿರುವುದೂ ಇದೇ ಮೊದಲು. ಇವರ ಬಳಿ  ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸುಧಾರಿಕ ಸ್ಫೋಟಕ ಸಾಧನಗಳೂ (ಐಇಡಿ) ಇದ್ದವು. ಬಹುಶಃ ಇವರು ಬೇರೆ ಭಯೋತ್ಪಾದಕ ಸಂಘಟನೆಗಳ ಜತೆಯೂ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಸಾಧಿಸಿರುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಬಂಧಿತರು ಹೈದರಾಬಾದ್‌ನ ಹೊರವಲಯದಲ್ಲಿ ನಿಯಮಿತವಾಗಿ ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಿದ್ದರು. ಜತೆಗೆ ನಗರದಲ್ಲಿ ಕೋಮುಗಲಭೆ ನಡೆಸಲೂ ಯೋಜಿಸಿದ್ದರು ಎಂದು ತೆಲಂಗಾಣ ಪೊಲೀಸರು ದೃಢಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT