ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

110 ಹಳ್ಳಿಗಳಿಗೆ ‘ಸುವರ್ಣ ಜಲ’

ಮೂರು ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧ
Last Updated 26 ನವೆಂಬರ್ 2014, 19:55 IST
ಅಕ್ಷರ ಗಾತ್ರ

ಬೆಂಗಳೂರು: ಕುಡಿಯುವ ನೀರಿಗಾಗಿ ಕೊಳವೆಬಾವಿಯ ನೀರನ್ನೇ ಆಶ್ರಯಿಸಿದ್ದ ಬಿಬಿಎಂಪಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳ ಜನರಿಗೆ ‘ಕಾವೇರಿ’ ನೀರು ಪೂರೈಸಲು ಜಲಮಂಡಳಿ ಯೋಜನೆ ರೂಪಿಸಿದೆ. ಎಲ್ಲ ಅಂದು­ಕೊಂಡಂತೆ ಸಾಗಿದರೆ 2–3 ವರ್ಷಗಳಲ್ಲಿ ಇಲ್ಲಿನ ಜನರಿಗೆ ಕಾವೇರಿ ನೀರು ಲಭ್ಯವಾಗಲಿದೆ.

ಕಾವೇರಿ ಐದನೇ ಹಂತದ ಯೋಜನೆ ಮೂಲಕ ಈ ಗ್ರಾಮಗಳಿಗೆ ನೀರು ಪೂರೈಸಲು ಯೋಜಿಸಲಾಗಿದೆ. ಕಾವೇರಿ ಯೋಜನೆ ಎಂದು ಹೆಸರಿಟ್ಟರೆ ತಮಿಳುನಾಡಿ­ನಿಂದ ಆಕ್ಷೇಪ ವ್ಯಕ್ತವಾಗಬಹುದು ಎಂಬ ಆತಂಕದಿಂದ ಈ ಯೋಜನೆಗೆ ‘ಸುವರ್ಣ ಜಲ ಯೋಜನೆ’ ಎಂಬ ಹೆಸರು ಇಡಲು ಮಂಡಳಿ ಉದ್ದೇಶಿಸಿದೆ. ಯೋಜನೆಯ ವಿಸ್ತೃತಾ ಯೋಜನಾ ವರದಿಯನ್ನು ಸಿದ್ಧಪಡಿಸುವಂತೆ ಟಾಟಾ ಕನ್ಸಲ್ಟೆನ್ಸಿ ಹಾಗೂ ಡಿಎಚ್‌ವಿ ಎಂಜಿನಿಯರಿಂಗ್‌ ಸಂಸ್ಥೆಗೆ ಮಂಡಳಿ ಸೂಚಿಸಿದೆ. ಮೂರು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ಗಡುವು ವಿಧಿಸಲಾಗಿದೆ. 110 ಹಳ್ಳಿಗಳ 2041ರ ಜನಸಂಖ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಯೋಜನೆ ಅನುಷ್ಠಾನ ಮಾಡಲಾಗು­ವುದು ಎಂದು ಮಂಡಳಿ ಮೂಲಗಳು ತಿಳಿಸಿವೆ.

ಕಾವೇರಿ ಹಾದಿ: ಈ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆಯ ವಿಸ್ತೀರ್ಣ 226 ಚದರ ಕಿ.ಮೀ ಆಗಿತ್ತು. 2007ರಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ರೂಪುಗೊಂಡಿತ್ತು. ಆರು ನಗರಸಭೆಗಳು, ಒಂದು ಪುರಸಭೆ ಹಾಗೂ 110 ಗ್ರಾಮಗಳು ಸೇರ್ಪಡೆಯಾಗಿ ಬಿಬಿಎಂಪಿಯ ವಿಸ್ತೀರ್ಣ 800 ಚದರ ಕಿ.ಮೀ.ಗೆ ಹೆಚ್ಚಿದೆ. ಕಾವೇರಿ ನಾಲ್ಕನೇ ಹಂತ ಹಾಗೂ ಎರಡನೇ ಘಟ್ಟದ ಯೋಜನೆಯ ಮೂಲಕ ಆರು ನಗರಸಭೆಗಳು ಹಾಗೂ ಒಂದು ಪುರಸಭೆಗೆ 500 ದಶಲಕ್ಷ ಲೀಟರ್‌ ಪೂರೈಕೆ ಮಾಡಲಾಗುತ್ತಿದೆ.

110 ಹಳ್ಳಿಗಳಿಗೆ ಕೊಳವೆಬಾವಿಗಳು ನೀರಿನ ಮೂಲ­ಗಳಾಗಿದ್ದವು. ಈ ಭಾಗಗಳಲ್ಲಿ ಈಚಿನ ವರ್ಷಗಳಲ್ಲಿ ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿರಲಿಲ್ಲ. ಅಲ್ಲದೆ ಕೊಳವೆಬಾವಿಗಳ ನೀರು ಕಲುಷಿತಗೊಂಡಿದೆ ಎಂದು ಗಣಿ ಹಾಗೂ ಭೂವಿಜ್ಞಾನ ಇಲಾಖೆ ವರದಿ ಸಲ್ಲಿಸಿತ್ತು. ಈ ಗ್ರಾಮ­ಗಳ ಜನರು ಕಾವೇರಿ ನದಿಯಿಂದ ಕುಡಿಯುವ ನೀರು ಒದಗಿಸಬೇಕು ಎಂದು ಆಗ್ರಹಿಸಿದ್ದರು. 

ಈ ಹಳ್ಳಿಗಳಿಗೆ ಕಾವೇರಿ ನೀರು ಒದಗಿಸಲು ರಾಜ್ಯ ಸರ್ಕಾರ 2010ರ ಡಿಸೆಂಬರ್‌ನಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಿತ್ತು. ಜಲಮೂಲದ ಬಗ್ಗೆ ಗೊಂದಲ ಉಂಟಾಗಿತ್ತು. ಲಿಂಗನಮಕ್ಕಿ, ಮೇಕೆದಾಟು ಸೇರಿದಂತೆ ಬೇರೆ ಬೇರೆ ಮೂಲಗಳಿಂದ ನೀರು ಪೂರೈಕೆ ಮಾಡಲು ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಈ ಯೋಜನೆಗೆ ಮಂಜೂರಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ 2011­ರಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. ನಿಶ್ಚಿತ ಜಲಮೂಲ ಗುರುತಿಸಿ ಮತ್ತೆ ಪ್ರಸ್ತಾವ ಸಲ್ಲಿಸಿ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಹೀಗಾಗಿ ಸ್ವಲ್ಪ ಕಾಲ ಈ ಯೋಜನೆ ನನೆಗುದಿಗೆ ಬಿದ್ದಿತ್ತು.

ಕಾವೇರಿ ಯೋಜನೆಯಿಂದ ನಗರಕ್ಕೆ ಹೆಚ್ಚುವರಿಯಾಗಿ 10 ಟಿಎಂಸಿ ನೀರು ಒದಗಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಜಲಮಂಡಳಿ ಹಾಗೂ ಬಿಬಿಎಂಪಿ ಅಧಿಕಾರಿ­ಗಳೊಂದಿಗೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಸಭೆ ನಡೆಸಿ ತ್ವರಿತಗತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ಯೋಜನೆಯ ಸ್ವರೂಪ: ನಗರಕ್ಕೆ 110 ಕಿ.ಮೀ. ದೂರದಲ್ಲಿರುವ ಶಿವ ಸಮತೋಲನ ಜಲಾಶಯದಿಂದ ಕಾವೇರಿ ನೀರು ಪೂರೈಕೆ ಮಾಡಲಾಗುತ್ತಿದೆ. ಐದನೇ ಹಂತದ ಯೋಜನೆಯೂ ನಾಲ್ಕನೇ ಹಂತ ಎರಡನೇ ಘಟ್ಟದ ಯೋಜನೆಯ ಸ್ವರೂಪದಲ್ಲೇ ಇರಲಿದೆ. ಶಿವ ಸಮತೋಲನ ಜಲಾಶಯದಿಂದ ಟಿ.ಕೆ.ಹಳ್ಳಿ ವರೆಗೆ ಗುರುತ್ವಾಕರ್ಷಣೆಯ ನೆರವಿನಿಂದ ನೀರು ಪೂರೈಸ­ಲಾ­ಗುವುದು.  ಶಿವ ಸಮತೋಲನ ಜಲಾಶಯದಿಂದ ನೆಟ್ಕಲ್‌ ಸಮತೋಲನ ಜಲಾಶಯದ ವರೆಗೆ ಈಗಾಗಲೇ ಪೈಪ್‌ಪೈನ್‌ ಹಾಕಲಾಗಿದೆ. ನೆಟ್ಕಲ್‌ನಿಂದ ಟಿ.ಕೆ.ಹಳ್ಳಿ ವರೆಗೆ ಪೈಪ್‌ಲೈನ್‌ ಹಾಕುವ ಕಾಮಗಾರಿ ನಡೆಯಬೇಕಿದೆ. 800 ದಶಲಕ್ಷ ಲೀಟರ್‌ ನೀರು ಪೂರೈಕೆಯ ಸಾಮರ್ಥ್ಯದ ಪೈಪ್‌ಲೈನ್‌ ಹಾಕಲಾಗುವುದು.

ಟಿ.ಕೆ.ಹಳ್ಳಿಯಲ್ಲಿ 500 ದಶಲಕ್ಷ ಲೀಟರ್‌ ಸಾಮರ್ಥ್ಯದ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲಾಗು­ವುದು. ಶುದ್ಧೀಕರಿಸಿದ ನೀರನ್ನು ಹಾರೋಹಳ್ಳಿ, ತಾತಗುಣಿಯ ಪಂಪಿಂಗ್‌ ಸ್ಟೇಷನ್‌ಗಳಿಗೆ ಪೂರೈಕೆ ಮಾಡಲಾಗುವುದು. ಅಲ್ಲಿಂದ 110 ಗ್ರಾಮಗಳಿಗೆ ಪೂರೈಕೆ ಮಾಡಲಾಗುವುದು.

‘ಈಗ ಕಾವೇರಿ ನಾಲ್ಕನೇ ಹಂತದಿಂದಲೇ ಸುಮಾರು 300 ದಶಲಕ್ಷ ಲೀಟರ್‌ನಷ್ಟು ನೀರು ಉಳಿಕೆ ಆಗುತ್ತಿದೆ. ಆರಂಭಿಕ ಹಂತದಲ್ಲಿ 110 ಗ್ರಾಮಗಳ ಜನಸಂಖ್ಯೆಗೆ ಯಾವುದೇ ಸಮಸ್ಯೆ ಇಲ್ಲದೇ ಈ ನೀರನ್ನು ಪೂರೈಕೆ ಮಾಡಬಹುದು. ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 10 ಟಿಎಂಸಿ ನೀರನ್ನು ನೀಡಲು ಒಪ್ಪಿದೆ ಅದನ್ನು ಬಳಸಿ­ಕೊಳ್ಳಲು ಅಗತ್ಯ ಮೂಲಸೌಕರ್ಯದ ವ್ಯವಸ್ಥೆ ಮಾಡಲಾ­ಗುವುದು’ ಎಂದು ಮಂಡಳಿಯ ಹಿರಿಯ ಅಧಿಕಾರಿ­ಯೊಬ್ಬರು ಮಾಹಿತಿ ನೀಡಿದರು.

‘ಈ ಯೋಜನೆ ಅನುಷ್ಠಾನಕ್ಕೆ ₨5 ಸಾವಿರ ಕೋಟಿ ಬೇಕಿದೆ. ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ­ಯಿಂದ (ಜೈಕಾ) ₨2 ಸಾವಿರ ಕೋಟಿ ಸಾಲ ಕೇಳಲಾಗಿದೆ. ₨600 ಕೋಟಿ ಸಾಲ ನೀಡಲು ಒಪ್ಪಿದೆ. ವಿಶ್ವ ಬ್ಯಾಂಕ್‌, ಎಡಿಬಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಣಕಾಸು ಸಹಾಯ ಪಡೆಯಲು ಚಿಂತಿಸಲಾಗಿದೆ’ ಎಂದು ಅವರು ತಿಳಿಸಿದರು.

ನೀರು ಪೂರೈಕೆ ಹೊಣೆ ಖಾಸಗಿಗೆ!
ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆಯ ಅನುಷ್ಠಾನ ಮಾಡಲು ಮಂಡಳಿ ಚಿಂತನೆ ನಡೆಸಿದೆ. ಇದು ಸೇರಿದಂತೆ ಮಂಡಳಿ ಎರಡು ಪ್ರಸ್ತಾವಗಳನ್ನು ಸಿದ್ಧಪಡಿಸಿದೆ. ಈ ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಒಳ ಚರಂಡಿಯ ಕೊಳವೆಮಾರ್ಗ ಅಳವಡಿಕೆ, ಕಾರ್ಯಾ ಚರಣೆ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿ­ಯವರಿಗೆ ವಹಿಸಲು ಉದ್ದೇಶಿಸಲಾಗಿದೆ. ಗುತ್ತಿಗೆ ಅವಧಿ 10 ವರ್ಷ. ಮೂರು ವರ್ಷಗಳಲ್ಲಿ ಕಾಮಗಾರಿ ಮುಗಿಸಬೇಕು. ಉಳಿದ ಏಳು ವರ್ಷಗಳಲ್ಲಿ ಕಾರ್ಯಾಚರಣೆ ಹಾಗೂ ನಿರ್ವಹಣೆ ಮಾಡಬೇಕು.

ಮಂಡಳಿಯು ಜಲಾಶಯದಿಂದ ವಲಯಗಳ ಎಂಟ್ರಿ ಪಾಯಿಂಟ್‌ ವರೆಗೆ ನೀರು ಪೂರೈಕೆ ಮಾಡಲಿದೆ. ಅಲ್ಲಿ ಇಎಂಎಫ್‌ ಮೀಟರ್‌ಗಳ ನೆರವಿನಿಂದ ನೀರಿನ ಪೂರೈಕೆ ಪ್ರಮಾಣವನ್ನು ಅಂದಾಜು ಮಾಡಲಾಗುವುದು. ಅಂತರ­ರಾಷ್ಟ್ರೀಯ ಮಾನದಂಡದ ಪ್ರಕಾರ ಯಾವುದೇ ನೀರಿನ ಯೋಜನೆಗಳಲ್ಲಿ ಶೇ 16ರಷ್ಟು ನೀರು ಲೆಕ್ಕಕ್ಕೆ ಸಿಗುವುದಿಲ್ಲ. ಇಲ್ಲಿಯೂ ಶೇ 16ರಷ್ಟು ‘ಲೆಕ್ಕಕ್ಕೆ ಸಿಗದ’ ನೀರಿಗೆ ಅವಕಾಶ ಕಲ್ಪಿಸಲಾಗುವುದು. ಇದಕ್ಕೆ ಗುತ್ತಿಗೆದಾರರು ಲೆಕ್ಕ ಕೊಡಬೇಕಿಲ್ಲ.

ಗುತ್ತಿಗೆದಾರ ನೀರು ಪೂರೈಕೆ, ಕಾರ್ಯಾಚರಣೆ ಹಾಗೂ ನಿರ್ವಹಣೆಯ ಜವಾಬ್ದಾರಿ ಹೊತ್ತು ನೀರಿನ ಬಿಲ್‌ ಸಂಗ್ರಹ ಮಾಡಬೇಕು. ಈ ಆದಾಯವನ್ನು ಮಂಡಳಿಯ ಖಾತೆಗೆ ಪಾವತಿ ಮಾಡಬೇಕು. ಗುತ್ತಿಗೆ ಒಪ್ಪಂದದ ಪ್ರಕಾರ ಮಂಡಳಿಯು ಗುತ್ತಿಗೆದಾರರಿಗೆ ಪಾಲನ್ನು ನೀಡಲಿದೆ. ಗುತ್ತಿಗೆದಾರರು ಅನಧಿಕೃತ ಸಂಪರ್ಕಗಳ ಬಗ್ಗೆ ಮಂಡಳಿಗೆ ಮಾಹಿತಿ ನೀಡಬೇಕು. ಅಂತಹ ಸಂಪರ್ಕಗಳನ್ನು ಕಡಿತಗೊಳಿಸಲು ಮಂಡಳಿ ಕ್ರಮ ಕೈಗೊಳ್ಳಲಿದೆ. ಆಯ್ಕೆಯಾದ ಗುತ್ತಿಗೆದಾರರು ನೀರು ಪೂರೈಕೆಗೆ ಮಂಡಳಿಯ ಮೂಲಸೌಕರ್ಯವನ್ನು ಬಳಸಿ­ಕೊಳ್ಳಬಹುದು. ಆದರೆ, ಗುತ್ತಿಗೆದಾರರು ಕಾರ್ಯಾಚರಣೆಗೆ ತಮ್ಮದೇ ಸ್ವಂತ ಕಚೇರಿಯನ್ನು ನಿರ್ಮಾಣ ಮಾಡಿಕೊಳ್ಳಬೇಕು ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.

‘ಕಾವೇರಿ ನಾಲ್ಕನೇ ಹಂತ ಎರಡನೇ ಘಟ್ಟದ ಯೋಜನೆಯಲ್ಲಿ ಮಂಡಳಿಗೆ ಶೇ 40ರಷ್ಟು ಆದಾಯ ಮಾತ್ರ ಬರುತ್ತಿದೆ. ಉಳಿದ ಆದಾಯ ಸೋರಿ ಹೋಗುತ್ತಿದೆ. ಇದರಿಂದ ಮಂಡಳಿ ಭಾರಿ ನಷ್ಟ ಅನುಭವಿಸುತ್ತಿದೆ. ಇದಕ್ಕಾಗಿ ಐದನೇ ಹಂತದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಯೋಜಿಸಲಾಗಿದೆ. ಇದು ಒಂದು ಪ್ರಸ್ತಾವ. ಮತ್ತೊಂದು ಪ್ರಸ್ತಾವದ ಪ್ರಕಾರ ಮಂಡಳಿಯೇ ಪೂರೈಕೆಯ ಜವಾಬ್ದಾರಿ ಹೊರಲಿದೆ’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

‘ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನ ಮಾಡುವ ಪ್ರಸ್ತಾವ ಇಲ್ಲ. ಮಂಡಳಿಯೇ ನೀರು ಪೂರೈಕೆಯ ಜವಾಬ್ದಾರಿ ಹೊರಲಿದೆ. ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ’ ಎಂದು ಮಂಡಳಿಯ ಅಧ್ಯಕ್ಷ ಅಂಜುಮ್‌ ಪರ್ವೇಜ್‌ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT