ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ತಾಸಿನಲ್ಲಿ 5,172 ಚಾಲಕರ ವಿರುದ್ಧ ಪ್ರಕರಣ

ಮಫ್ತಿಯಲ್ಲಿ 700 ಪೊಲೀಸರ ಕಾರ್ಯಾಚರಣೆ; 934 ಆಟೊ ಜಪ್ತಿ
Last Updated 22 ಡಿಸೆಂಬರ್ 2014, 20:06 IST
ಅಕ್ಷರ ಗಾತ್ರ

ಬೆಂಗಳೂರು: ನಿಗದಿತ ಪ್ರಯಾಣ ದರಕ್ಕಿಂತ ಹೆಚ್ಚಿನ ಬಾಡಿಗೆ ವಸೂಲಿ ಮಾಡುವ ಆಟೊ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲು ಸೋಮವಾರ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, 5,172 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, 934 ಆಟೊಗಳನ್ನು ಜಪ್ತಿ ಮಾಡಿದ್ದಾರೆ.

‘ಆಟೊ ಚಾಲಕರು ಕರೆದ ಕಡೆ ಬರುವುದಿಲ್ಲ, ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಾರೆ, ಕೇಳಿದಷ್ಟು ಬಾಡಿಗೆ ಕೊಡದಿದ್ದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂಬ ಸಾಕಷ್ಟು ದೂರು­ಗಳು ಸಾರ್ವಜನಿಕರಿಂದ ಕೇಳಿ ಬಂದಿ­ದ್ದವು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಬೆಳಿಗ್ಗೆ 5ರಿಂದ ಸಂಜೆ 5ರವರೆಗೆ   ವಿಶೇಷ ಕಾರ್ಯಾಚರಣೆ ನಡೆಸ­ಲಾಯಿತು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

‘ಸಾರ್ವಜನಿಕರ ದೂರು­ಗಳಿಗೆ ಸ್ಪಂದಿಸುವುದರ ಜತೆಗೆ ಸಂಚಾರ ನಿಯಮ­ಗಳನ್ನು ಉಲ್ಲಂಘಿಸುವ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವುದು ಕಾರ್ಯಾಚರಣೆಯ ಉದ್ದೇಶವಾಗಿತ್ತು. ಹೀಗಾಗಿ 700 ಮಂದಿ ಸಿಬ್ಬಂದಿಯನ್ನು ಮಫ್ತಿಯಲ್ಲಿ ಕಾರ್ಯಾಚರಣೆಗೆ ಇಳಿಸ­ಲಾ­ಯಿತು. ಪ್ರಯಾಣಿಕರ ಸೋಗಿನಲ್ಲಿ ಆಟೊದಲ್ಲಿ ತೆರಳಿದ ಸಿಬ್ಬಂದಿ, ಚಾಲಕರ ವರ್ತನೆಯನ್ನು ಗಮನಿಸಿ ಕ್ರಮ ತೆಗೆದು­ಕೊಂಡಿದ್ದಾರೆ’ ಎಂದರು.

‘ಕೆಲ ಚಾಲಕರು ಸಮವಸ್ತ್ರ ಧರಿಸದೆ ಆಟೊ ಓಡಿಸಿದ್ದಾರೆ. ಮತ್ತೆ ಕೆಲವರು ಏಕಮುಖ ಸಂಚಾರ ರಸ್ತೆಯಲ್ಲೇ ವಾಹನ ನುಗ್ಗಿಸಿದ್ದಾರೆ. ಬಹುತೇಕ ಚಾಲಕರು ಹಸಿರು ಸಿಗ್ನಲ್‌ ಬರುವವರೆಗೆ ಕಾಯುವುದೇ ಇಲ್ಲ. ಕನಿಷ್ಠ ಪ್ರಯಾಣ ದರ ₨ 25 ಇದ್ದರೂ, ದುಪ್ಪಟ್ಟು ವಸೂಲಿ ಮಾಡುತ್ತಿದ್ದಾರೆ ಎಂಬ ಅಂಶ­ಗಳು ಕಾರ್ಯಾಚರಣೆಯಿಂದ ಗೊತ್ತಾ-­ಗಿದೆ’ ಎಂದು ಹಿರಿಯ ಅಧಿಕಾರಿಗಳು ವಿವರಿಸಿದರು.

‘ಬೆಳಿಗ್ಗೆ 5.30ಕ್ಕೆ ನಗರ ರೈಲು ನಿಲ್ದಾಣದಿಂದ ಪ್ರಯಾಣಿಕನ ಸೋಗಿನಲ್ಲಿ ಹೊರಬಂದೆ. ಆಗ ಅಲ್ಲಿಗೆ ಬಂದ ಆಟೊ ಚಾಲಕ ರಮೇಶ್‌ಗೌಡ,  ಮಲ್ಲೇಶ್ವರಕ್ಕೆ ಹೋಗಲು ₨ 400 ಬಾಡಿಗೆ ಕೇಳಿದ. ಅಷ್ಟು ಹಣ ಕೊಡಲು ಒಪ್ಪದಿದ್ದಾಗ, ₨ 15 ಕೊಟ್ಟು ಬಿಎಂಟಿಸಿಯಲ್ಲಿ ಹೋಗಿ ಎಂದು ನಿಂದಿಸಿದ. ಬಳಿಕ ಆತನ ವಿರುದ್ಧ ಪ್ರಕರಣ ದಾಖಲಿಸಿ, ಆಟೊ ಜಪ್ತಿ ಮಾಡಲಾಯಿತು’ ಎಂದು ಸಿಬ್ಬಂದಿ ನಾಗೇಶ್ ತಿಳಿಸಿದರು.

ಠಾಣೆ ಸೇರಿದ ಆಟೊಗಳು
‘ಕಾರ್ಯಾಚರಣೆ ವೇಳೆ ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸಿದ ಹಾಗೂ ಸಂಚಾರ ನಿಯಮ ಉಲ್ಲಂಘಿಸಿದ 934 ಆಟೊಗಳನ್ನು ಜಪ್ತಿ ಮಾಡಿ ಸಮೀಪದ ಠಾಣೆಗಳಲ್ಲಿ ಇರಿಸಲಾಗಿದೆ. ಚಾಲಕರು, ನ್ಯಾಯಾಲಯಕ್ಕೆ ಹಾಜರಾಗಿ ₨ 3 ಸಾವಿರ­ದ­ವರೆಗೆ ದಂಡ ಕಟ್ಟಿ ವಾಹನ ಬಿಡಿಸಿ­ಕೊಳ್ಳಬೇಕು. ಜತೆಗೆ ಮುಂದಿನ ದಿನಗಳಲ್ಲಿ ಸನ್ನಡತೆ­ಯಿಂದ ನಡೆದು­ಕೊಳ್ಳುತ್ತೇವೆ ಎಂದು ಆ ಚಾಲಕರಿಂದ ಮುಚ್ಚಳಿಕೆ ಬರೆಸಿ­ಕೊಳ್ಳಲಾಗುತ್ತಿದೆ’
–ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ)

ಚಾಲಕರ ಪ್ರತಿಭಟನೆ
ಬೆಂಗಳೂರು: ಸಂಚಾರ ಪೊಲೀಸರು ನಗರದಲ್ಲಿ ಸೋಮ­ವಾರ 936 ಆಟೊಗಳನ್ನು ಜಪ್ತಿ ಮಾಡಿದ ಕ್ರಮವನ್ನು ಖಂಡಿಸಿ ಸಿಐಟಿಯು ಆಟೊ ಚಾಲಕರ ಸಂಘದ ಸದಸ್ಯರು ಜಯ­ನಗರ ಸಂಚಾರ ಠಾಣೆ ಎದುರು ಪ್ರತಿಭಟನೆ ಮಾಡಿದರು. ಚಾಲಕರು ಯಾವುದೇ ತಪ್ಪು ಮಾಡದಿ­ದ್ದರೂ ಪೊಲೀಸರು ವಿನಾಕಾರಣ ಆಟೊಗಳನ್ನು ಜಪ್ತಿ ಮಾಡಿದ್ದಾರೆ ಮತ್ತು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ನ್ಯಾಯಾಲಯದಲ್ಲಿ ದಂಡ ಕಟ್ಟುವುದಾಗಿ ಹೇಳಿದರೂ ಪೊಲೀಸರು ವಾಹನಗಳನ್ನು ಬಿಡು­ತ್ತಿಲ್ಲ. ಆಟೊಗಳನ್ನೇ ನಂಬಿ ಬದುಕು ಸಾಗಿ­ಸು­ತ್ತಿ­ರುವ ಚಾಲಕರು, ಪೊಲೀಸರ ಕ್ರಮ­ದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಸಂಘದ ಉಪಾಧ್ಯಕ್ಷ ರಾಘವೇಂದ್ರ ದೂರಿದರು.
‘ನಗರದೆಲ್ಲೆಡೆ ಸಂಚಾರ ಪೊಲೀಸರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ.

ಲಂಚ ಕೊಡದಿದ್ದರೆ ದೂರು ದಾಖಲಿಸುವುದಾಗಿ ಬೆದರಿಸುತ್ತಾರೆ. ಹಿರಿಯ ಅಧಿಕಾರಿಗಳು ಲಂಚದ ಹಾವಳಿ ತಡೆಗೆ ಕ್ರಮ ಕೈಗೊಳ್ಳದೆ ಚಾಲಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‌ ಪೊಲೀಸರ ದೌರ್ಜನ್ಯ ಖಂಡಿಸಿ ಡಿ.30ರಂದು ಪುರಭವನದ ಎದುರು ಬೃಹತ್‌ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT