ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಶಾಸಕರಿಂದ ಕಾಂಗ್ರೆಸ್‌ಗೆ ಬೆಂಬಲ?

ಡಿ.ಕೆ. ಶಿವಕುಮಾರ್‌ ಮನೆಯಲ್ಲಿ ಪಕ್ಷೇತರ ಶಾಸಕರ ಸಭೆ
Last Updated 28 ಮೇ 2016, 19:37 IST
ಅಕ್ಷರ ಗಾತ್ರ

ಬೆಂಗಳೂರು:  ಕೆಜೆಪಿ, ಬಿಎಸ್‌ಆರ್‌ ಕಾಂಗ್ರೆಸ್‌ ಮತ್ತು ಕರ್ನಾಟಕ ಮಕ್ಕಳ ಪಕ್ಷದ ಶಾಸಕರು  ಹಾಗೂ ಕೆಲವು ಪಕ್ಷೇತರ ಶಾಸಕರು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರ ಮನೆಯಲ್ಲಿ ಶನಿವಾರ ದಿಢೀರ್‌ ಸಭೆ ನಡೆಸಿದರು.

ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ಹಾಗೂ ವಿಧಾನ ಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಕಣಕ್ಕಿಳಿಸುವ ಅಭ್ಯರ್ಥಿಗಳನ್ನು ಬೆಂಬಲಿಸಲು ಅವರು ತೀರ್ಮಾನಿಸಿದ್ದಾರೆ  ಎಂದು ಗೊತ್ತಾಗಿದೆ.

ಬಿಎಸ್‌ಆರ್‌ ಕಾಂಗ್ರೆಸ್‌ ಶಾಸಕ  ಪಿ.ರಾಜೀವ, ಕೆಜೆಪಿ ಶಾಸಕರಾದ ಬಿ.ಆರ್‌.ಪಾಟೀಲ, ಗುರು ಪಾಟೀಲ, ಕರ್ನಾಟಕ ಮಕ್ಕಳ ಪಕ್ಷದ ಅಶೋಕ್‌ ಖೇಣಿ, ಪಕ್ಷೇತರ ಶಾಸಕರಾದ ಸತೀಶ ಸೈಲ್‌, ಮಂಕಾಳ ಸುಬ್ಬ ವೈದ್ಯ, ಅರವಿಂದ ಚಂದ್ರಕಾಂತ ಪಾಟೀಲ, ನಾಗೇಂದ್ರ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಭೆಯಲ್ಲಿ ಹಾಜರಿದ್ದು ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

‘ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು 12  ಶಾಸಕರು ತೀರ್ಮಾನಿಸಿದ್ದಾರೆ’ ಎಂದು ಸಭೆಯ ಬಳಿಕ ಸಚಿವ ಡಿ.ಕೆ.ಶಿವಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ವಿಶೇಷ ಅನುದಾನ: ‘ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಅವರು ನಮ್ಮ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ. ಅವರನ್ನು ನಮ್ಮ ಪಕ್ಷದ ಸದಸ್ಯರಂತೆಯೇ ಪರಿಗಣಿಸಿ, ಅವರ ಕ್ಷೇತ್ರ ಅಭಿವೃದ್ಧಿ ಕಾರ್ಯಗಳಿಗೆ ನೆರವುನೀಡಲಾಗುವುದು. ಅವರ ಕ್ಷೇತ್ರಗಳಿಗೆ ವಿಶೇಷ ಅನುದಾನ ನೀಡಲು  ಸಿ.ಎಂ. ಒಪ್ಪಿದ್ದಾರೆ’ ಎಂದು ಶಿವಕುಮಾರ್‌ ತಿಳಿಸಿದರು.

‘ಜೆಡಿಎಸ್‌ ಬಿಡುಗಡೆ ಮಾಡಿರುವ ಅಭ್ಯರ್ಥಿಯ ಸೂಚಕರ ಪಟ್ಟಿ ಹಳೆಯದು’ ಎಂದರು.

ಜೆಡಿಎಸ್‌ ಪಟ್ಟಿಗೆ ಸಹಿ ಮಾಡಿದ್ದು ನಿಜ: ‘ಜೆಡಿಎಸ್‌ ಬಿಡುಗಡೆ ಮಾಡಿರುವ  ಅಭ್ಯರ್ಥಿಯ ಸೂಚಕರ ಪತ್ರಕ್ಕೆ  ಸಹಿ ಮಾಡಿದ್ದು ನಿಜ. ಆದರೆ, ಅದು ಹಳೆಯದು’ ಎಂದು ಶಾಸಕ ಪಿ.ರಾಜೀವ ಸುದ್ದಿಗಾರರಿಗೆ ತಿಳಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವುದಕ್ಕೆ  12 ಶಾಸಕರು ತೀರ್ಮಾನಿಸಿದ್ದೇವೆ. ಕ್ಷೇತ್ರದ ಅಭಿವೃದ್ಧಿ ಸಲುವಾಗಿ ನಾವೆಲ್ಲ  ಒಗ್ಗಟ್ಟಾಗಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತದೆ ಎಂಬ ವಿಶ್ವಾಸ ಇದೆ’ ಎಂದರು.

ವಿಧಾನಸಭೆಯಿಂದ ರಾಜ್ಯಸಭೆಗೆ ಸ್ಪರ್ಧಿಸಲು ಬಯಸಿರುವ ಕೆ.ಸಿ.ರಾಮಮೂರ್ತಿ ಅವರೂ ಸಭೆಯಲ್ಲಿ ಹಾಜರಿದ್ದರು.

ಮೂರನೇ ಅಭ್ಯರ್ಥಿಯಾಗಿ ಕೆ.ಸಿ.ರಾಮಮೂರ್ತಿ ಕಣಕ್ಕೆ?
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮೂರನೆಯ ಅಭ್ಯರ್ಥಿಯಾಗಿ ಕೆ.ಸಿ. ರಾಮಮೂರ್ತಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದ್ದು, ಅವರನ್ನು ಗೆಲ್ಲಿಸಿಕೊಡುವ ಜವಾಬ್ದಾರಿಯನ್ನು ಪಕ್ಷದ ವರಿಷ್ಠರು ಡಿ.ಕೆ.ಶಿವಕುಮಾರ್‌ ಅವರಿಗೆ ವಹಿಸಿದ್ದಾರೆ. ಹಾಗಾಗಿಯೇ ಅವರು ಕೆಜೆಪಿ, ಕರ್ನಾಟಕ ಮಕ್ಕಳ ಪಕ್ಷ, ಬಿಎಸ್‌ಆರ್‌ ಕಾಂಗ್ರೆಸ್‌ ಶಾಸಕರನ್ನು ಹಾಗೂ ಪಕ್ಷೇತರ ಶಾಸಕರನ್ನು ಒಗ್ಗೂಡಿಸಿ ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT