ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,200 ಸಸಿ ನೆಟ್ಟು ಪ್ರತಿಭಟನೆ

ಕೆರೆ ಉಳಿವಿಗೆ ವಿನೂತನ ಜಾಗೃತಿ ಅಭಿಯಾನ
Last Updated 24 ಜುಲೈ 2016, 19:39 IST
ಅಕ್ಷರ ಗಾತ್ರ

ಬೆಂಗಳೂರು:  ನೂರಾರು ಜನರು   ಅಲ್ಲಿ ಸೇರಿದ್ದರು. ಸಿಲ್ವರ್‌ ಓಕ್‌, ನೇರಳೆ, ಬೇವು, ಹೊಂಗೆ.. ಹೀಗೆ ಬಗೆಬಗೆಯ ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು   ಪ್ರತಿಭಟಿಸಿದರು!

ಇದೆಲ್ಲವೂ ನಡೆದಿದ್ದು, ಎಚ್‌ಎಎಲ್‌ ಸಮೀಪದ ವಿಭೂತಿಪುರ ಕೆರೆ ಉಳಿವಿಗಾಗಿ. ಹೌದು, ಕೆರೆ ಕಟ್ಟೆಯಲ್ಲಿ ಸುರಿಯುತ್ತಿದ್ದ ಕಟ್ಟಡದ ಅವಶೇಷಗಳು ಹಾಗೂ ತ್ಯಾಜ್ಯ ವಿಂಗಡಣಾ ಘಟಕ ಸ್ಥಾಪನೆಗೆ ಮುಂದಾಗಿದ್ದ  ಬಿಬಿಎಂಪಿ ಕ್ರಮದ ವಿರುದ್ಧ ‘ವಿಕಾಸ್‌’ ತಂಡದ ನೇತೃತ್ವದಲ್ಲಿ ಸುತ್ತಲಿನ ನಾಗರಿಕರು ಭಾನುವಾರ ವಿನೂತನ ಸ್ವರೂಪದ ಹೋರಾಟ ನಡೆಸಿದರು.

‘ಕೆರೆಗಾಗಿ ಸಾವಿರ ಸಸಿಗಳು’ ಅಭಿಯಾನದಡಿ, ವಿಭೂತಿಪುರ, ಎಲ್‌.ಬಿ. ಶಾಸ್ತ್ರೀ ನಗರ, ಇಸ್ಲಾಂಪುರ, ಬಸವನಗರ, ವೀರಭದ್ರನಗರ ಸೇರಿದಂತೆ ಸುತ್ತಲಿನ ನಾಗರಿಕರು, 1,200 ಸಸಿಗಳನ್ನು ನೆಟ್ಟು ಗಮನ ಸೆಳೆದರು.

ಈ ಕಾರ್ಯಕ್ರಮಕ್ಕೆ  ಆಹ್ವಾನಿಸಿದ್ದ ಜನಪ್ರತಿನಿಧಿಗಳು, ಬಿಬಿಎಂಪಿ ಅಧಿಕಾರಿಗಳ ಎದುರು, ಕೆರೆಯಲ್ಲಿ ತ್ಯಾಜ್ಯ ವಿಂಗಡಣಾ ಘಟಕ ಸ್ಥಾಪಿಸದಂತೆ ಒಂದೇ ದನಿಯಲ್ಲಿ ಸೇರಿದ್ದವರೆಲ್ಲ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜ್,   ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕೆರೆ ಹೂಳೆತ್ತಿ, ಅದಕ್ಕೆ ತಂತಿಬೇಲಿ ಹಾಕಿ, ಸಂಸ್ಕರಣೆ ಇಲ್ಲದೇ ಕೆರೆ ಸೇರುತ್ತಿರುವ ಚರಂಡಿ ನೀರನ್ನು ತಡೆಯಿರಿ  – ಹೀಗೆ ವಿವಿಧ ಸಮಸ್ಯೆಗಳ ಕುರಿತು 60ಕ್ಕೂ ಅಧಿಕ ಮನವಿ ಪತ್ರಗಳನ್ನು ಸಾರ್ವಜನಿಕರು ನೀಡಿದರು.

ತಿಂಗಳಿಂದ ಸಿದ್ಧತೆ: ‘ಕೆರೆಯಲ್ಲಿ  ತ್ಯಾಜ್ಯ ವಿಂಗಡಣೆ ಘಟಕ ಸ್ಥಾಪನೆಗೆ ಮುಂದಾಗಿರುವ ಬಿಬಿಎಂಪಿ ವಿರುದ್ಧ ಪ್ರತಿಭಟನೆಗೆ ತಿಂಗಳ ಹಿಂದೆಯೇ ನಿರ್ಧರಿಸಲಾಗಿತ್ತು. ಅದಕ್ಕಾಗಿ ಈ ಸಸಿ ನೆಡುವ ಮಾರ್ಗ ಆಯ್ದುಕೊಂಡೆವು’ ಎಂದು ವಿಕಾಸ್‍ ತಂಡದ ಸದಸ್ಯ ವೆಂಕಟ್‍ ತಿಳಿಸಿದರು.

‘ಒಟ್ಟು 1,200 ಸಸಿಗಳನ್ನು ನೆಡಲಾಗಿದೆ. 550 ಸಸಿಗಳನ್ನು ಅರಣ್ಯ ಇಲಾಖೆಯಿಂದ ಸಿಕ್ಕಿವೆ. ಇನ್ನುಳಿದ ಸಸಿಗಳನ್ನು ಸಾರ್ವಜನಿಕರು ನೀಡಿದ್ದಾರೆ. ವಿಭೂತಿಪುರ ಕೆರೆಯನ್ನು ಉಳಿಸುವುದು ನಮ್ಮ ಏಕಮಾತ್ರ ಉದ್ದೇಶ. ಕಳೆದ ಕೆಲ ತಿಂಗಳ ಹಿಂದೆ ಕೆರೆ ಉಳಿವಿಗಾಗಿ ‘ರನ್‍ ಫಾರ್ ಲೇಕ್‍’ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು’ ಎಂದು ಅವರು ವಿವರಿಸಿದರು.

ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ, ಬಿಬಿಎಂಪಿ ಜಂಟಿ ಆಯುಕ್ತ (ಮಹಾದೇವಪುರ) ಮುನಿವೀರಪ್ಪ, ಕಾರ್ಪೊರೇಟರ್‌ಗಳಾದ ನಾಗರಾಜ್‌ ಮತ್ತು ಮಂಜುನಾಥ್ ಪಾಲ್ಗೊಂಡಿದ್ದರು.

ಅಳಿದಿಲ್ಲ ಅನುಮಾನ...!
‘ಜನಪ್ರತಿನಿಧಿಗಳು ಕೆರೆಯಲ್ಲಿ ತ್ಯಾಜ್ಯ ವಿಂಗಡಣಾ ಘಟಕ ಸ್ಥಾಪಿಸದಂತೆ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ. ಆದರೂ ನಮಗೆ ನೂರಕ್ಕೆ ನೂರರಷ್ಟು ಭರವಸೆ ಇಲ್ಲ’ ಎಂದು ವಿಕಾಸ್‌ ತಂಡದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT