ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13ರಿಂದ‘ಪ್ರವಾಸಿ ಜಾನಪದ ಲೋಕೋತ್ಸವ’

ರಾಮನಗರದ ಜಾನಪದ ಲೋಕದಲ್ಲಿ ಕಲಾ ವೈಭವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ
Last Updated 12 ಫೆಬ್ರುವರಿ 2016, 9:31 IST
ಅಕ್ಷರ ಗಾತ್ರ

ರಾಮನಗರ :  ಜಾನಪದ ಲೋಕದಲ್ಲಿ ಇದೆ 13, 14ರಂದು ಎರಡು ದಿನಗಳ ಕಾಲ ಪ್ರವಾಸಿ ಜಾನಪದ ಲೋಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ತಿಳಿಸಿದರು.

ಜಾನಪದ ಲೋಕದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದೆ 13ರ ಶನಿವಾರ ಬೆಳಿಗ್ಗೆ 10.30ಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್. ಹನುಮಂತಯ್ಯ ಉದ್ಘಾಟಿಸಲಿದ್ದಾರೆ. ರಾಜ್ಯ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಬಾಲಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಲ್ದಿದ್ದಾರೆ, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ  ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ಹಾಗೂ ಪಾರಂಪರಿಕ ಕುಟೀರಗಳನ್ನು ಉದ್ಘಾಟಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಹಾವೇರಿಯ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ. ಚಿನ್ನಪ್ಪಗೌಡ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಜಿ. ಸತ್ಯವತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ. ದಯಾನಂದ ಭಾಗವಹಿಸಲಿದ್ದಾರೆ. ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಬೆಳಗಲ್ಲು ವೀರಣ್ಣ, ಜಾನಪದ ಗಾಯಕರಾದ ಟಿ. ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

13ರ ಸಂಜೆ ಬಯಲು ರಂಗ ಮಂದಿರದಲ್ಲಿ ಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಆರ್. ರಮೇಶ್ ಮತ್ತು ತಂಡದವರು ಉರುಮೆ ವಾದನವನ್ನು, ಚಿಕ್ಕಮಗಳೂರು ಜಿಲ್ಲೆಯ ಎಂ.ಆರ್. ಬಸಪ್ಪ ಮತ್ತು ತಂಡದವರು ವೀರಗಾಸೆ ನೃತ್ಯವನ್ನು, ಬೆಂಗಳೂರಿನ ವೈಜಯಂತಿ ಕಾಶಿ ಮತ್ತು ತಂಡದವರು ತಲಕಾಡು ನೃತ್ಯ ರೂಪಕವನ್ನು, ಹಾಸನ ಜಿಲ್ಲೆಯ ನಿಂಗಪ್ಪ ಮತ್ತು ತಂಡದವರು ಕೋಲಾಟವನ್ನು, ಉತ್ತರ ಕನ್ನಡ ಜಿಲ್ಲೆಯ ನಾಗರಾಜ ಸಿದ್ದಿ ಮತ್ತು ತಂಡದವರು ಡಮಾಮಿ ನೃತ್ಯವನ್ನು, ಧಾರವಾಡ ಜಿಲ್ಲೆಯ ಶಿವಾನಂದ ಮತ್ತು ತಂಡದವರು ಜಗ್ಗಲಿಗೆ ಮೇಳವನ್ನು, ಮಂಡ್ಯ ಜಿಲ್ಲೆಯ ಯರಹಳ್ಳಿ ಪುಟ್ಟಸ್ವಾಮಿ ತಂಡದವರು ಜಾನಪದ ಗೀತೆಗಳನ್ನು, ಕಾಸರಗೋಡು ಜಿಲ್ಲೆಯ ವಸಂತ ಮತ್ತು ತಂಡದವರು ಭೂತ ನರ್ತನವನ್ನು, ಮಂಡ್ಯ ಜಿಲ್ಲೆಯ ಸುಕನ್ಯ ಮತ್ತು ತಂಡದವರು ಪಟ ಮತ್ತು ರಂಗದ ಕುಣಿತವನ್ನು ಪ್ರದರ್ಶಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಶಸ್ತಿ ಪ್ರಧಾನ ಸಮಾರಂಭ :  ಇದೆ 14ರ ಭಾನುವಾರ ಸಂಜೆ 5.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಾಗಿದೆ. ಸುಪ್ರಿಂ ಕೋರ್ಟ್ ನ ನ್ಯಾಯಾಧೀಶರಾದ ಗೋಪಾಲಗೌಡ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕವಿ ಪ್ರೊ. ಸಿದ್ದಲಿಂಗಯ್ಯ ಅವರಿಗೆ ಜಾನಪದ ಲೋಕಶ್ರೀ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಪರಿಷತ್ತಿನ ಮೇನೆಜಿಂಗ್ ಟ್ರಸ್ಟಿ ಇಂದಿರಾ ಬಾಲಕೃಷ್ಣ ತಿಳಿಸಿದರು.

ಕಲಾ ಪ್ರದರ್ಶನ :  ಸಂಜೆ 6.30ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ನವೀನ್ ಮತ್ತು ತಂಡದವರು ಹುಲಿವೇಷ, ಮೈಸೂರು ಜಿಲ್ಲೆಯ ಎಂ. ಕೃಷ್ಣ ಮತ್ತು ತಂಡದರು ನಗಾರಿ ಮೇಳ, ತುಮಕೂರು ಜಿಲ್ಲೆಯ ಎ.ಜಿ ಕುಮಾರಸ್ವಾಮಿ ಮತ್ತು ತಂಡದವರು ಸೋಮನ ಕುಣಿತ, ಗದಗ ಜಿಲ್ಲೆಯ ರಾಮಚಂದ್ರಪ್ಪ ಮರಿಯಪ್ಪ ಮಾನೆ ಮತ್ತು ತಂಡದವರು ಕರಡಿ ಮಜಲು, ಬಾಗಲಕೋಟೆ ಜಿಲ್ಲೆಯ ರೇಣುಕಾ ಬಾಯಿ ಮಾದರ ಮತ್ತು ತಂಡದವರು ಚೌಡಿಕೆ ಮೇಳವನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

2016ರ ಸಾಲಿನ ಪ್ರಶಸ್ತಿ ಪುರಸ್ಕೃತರು :  ನಾಡೋಜ ಎಚ್.ಎಲ್. ನಾಗೇಗೌಡ ಜಾನಪದ ಲೋಕ ಪ್ರಶಸ್ತಿಯನ್ನು ತುಮಕೂರು ಜಿಲ್ಲೆಯ ಜುಂಜಪ್ಪ ಕಲಾವಿದ ಗಣಿ ದಾಸಪ್ಪ, ನಾಡೋಜ ಡಾ. ಜಿ. ನಾರಾಯಣ ಜಾನಪದ ಲೋಕಶ್ರೀ ಪ್ರಶಸ್ತಿಯನ್ನು ಕವಿ ಪ್ರೊ. ಸಿದ್ದಲಿಂಗಯ್ಯ, ಲಕ್ಷ್ಮಮ್ಮನಾಗೇಗೌಡ ಪ್ರಶಸ್ತಿಯನ್ನು ತುಮಕೂರು ಜಿಲ್ಲೆಯ ಕಾಡುಗೊಲ್ಲರ ಜನಪದ ಕಾವ್ಯ ಗಾಯಕಿ ಕೆಂಗಮ್ಮ ಅವರಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಸೋಬಾನೆ ಚಿಕ್ಕಮ್ಮ ಪ್ರಶಸ್ತಿಯನ್ನು ಬಾಗಲಕೋಟೆ ಜಿಲ್ಲೆಯ ಜಾನಪದ ಹಾಡುಗಾರ್ತಿ ರುದ್ರವ್ವ ಭೂಮರತಿ, ಡೊಡ್ಡಮನೆ ಪ್ರಶಸ್ತಿಯನ್ನು ಹಾಸನ ಜಿಲ್ಲೆಯ ಕರಪಾಲ ಕಲಾವಿದ ಸಿ. ಚನ್ನಪ್ಪ, ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಂಗಭೂಮಿ ಕಲಾವಿದ ನರಸಿಂಹಯ್ಯ ಅವರಿಗೆ ನೀಡಲಾಗುವುದು ಎಂದರು.

ಜಾನಪದ ಲೋಕ ಪ್ರಶಸ್ತಿ :  ಕೊಪ್ಪಳ ಜಿಲ್ಲೆಯ ಡೊಳ್ಳು ಹಾಡು ಕಲಾವಿದೆ ನಾಗಮ್ಮ, ಬಳ್ಳಾರಿ ಜಿಲ್ಲೆಯ ಜೋಗಿನ ಜಾನಪದ ಹಾಡುಗಾರ್ತಿ ಬಾಳಮ್ಮ, ರಾಯಚೂರು ಜಿಲ್ಲೆಯ ಜಾನಪದ ಗಾಯಕ ಶರಣಪ್ಪ ಗೋನಾಳ, ಗದಗ ಜಿಲ್ಲೆಯ ಚರ್ಮವಾದ್ಯ ಕಲಾವಿದ ರಾಮಚಂದ್ರಪ್ಪ ಮರಿಯಪ್ಪ ಮಾನೆ, ಮೈಸೂರು ಜಿಲ್ಲೆಯ ಸೋಬಾನೆ ಹಾಡುಗಾರ್ತಿ ಸಿದ್ದಮ್ಮ, ಮೈಸೂರು ಜಿಲ್ಲೆಯ ನಗಾರಿ ಕಲಾವಿದ ಎಂ. ಕೃಷ್ಣ, ಮೈಸೂರು ಜಿಲ್ಲೆಯ ಯಕ್ಷಗಾನ ಭಾಗವತ ಕಲಾವಿದ ಟಿ.ಎಸ್. ರವೀಂದ್ರ, ಬೀದರ್ ಜಿಲ್ಲೆಯ ಸಂಪ್ರದಾಯದ ಹಾಡುಗಳ ಕಲಾವಿದೆ ಬಕ್ಕಮ್ಮ ವೀರಯ್ಯಸ್ವಾಮಿ, ಕಲಬುರಗಿ ಜಾನಪದ ಗಾಯಕ ತಾರಾಬಾಯಿ ಶಿವಶರಣಪ್ಪ ದೊಡ್ಡಿ ಅವರಿಗೆ ಜಾನಪದ ಲೋಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ದೈವರಾಧನೆ ಕಲಾವಿದ ಲೋಕಯ್ಯ ಸೇರ, ಮಂಡ್ಯ ಜಿಲ್ಲೆಯ ಸೋಬಾನೆ ಹಾಡುಗಾರ್ತಿ ಸೋಬಾನೆ ಚಿಕ್ಕಮ್ಮ, ಕಾಸರಗೋಡು ಜಿಲ್ಲೆಯ ಯಕ್ಷಗಾನ ಕಲಾವಿದ ಕೃಷ್ಣಪ್ರಕಾಶ್, ಚಿಕ್ಕಮಗಳೂರು ಜಿಲ್ಲೆಯ ಸೋಬಾನೆ ಗಾಯಕಿ ತಾಯಮ್ಮ, ರಾಮನಗರ ಜಿಲ್ಲೆಯ ನೀಲಗಾರ ಕಲಾವಿದ ಮಂಟೆಪ್ಪ, ಉತ್ತರ ಕನ್ನಡ ಜಿಲ್ಲೆಯ ಗಮಟೆ ಕಲಾವಿದ ಸೋಮರಾಮೇಗೌಡ, ಮೈಸೂರು ಜಿಲ್ಲೆಯ ಕಂಸಾಳೆ ಕಲಾವಿದ ಪುಟ್ಟಸ್ವಾಮಿ ಅವರಿಗೆ ಜಾನಪದ ಲೋಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಮಹಾರಾಷ್ಟ್ರದ ಯಕ್ಷಗಾನ ಕಲಾವಿದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಧಾರವಾಡ ಜಿಲ್ಲೆಯ ಸಣ್ಣಾಟದ ಕಲಾವಿದ ಬಸವರಾಜ ತೆಗೂರ, ಹಾಸನ ಜಿಲ್ಲೆಯ ಬಯಲಳ್ಳಿ ಮಂದಲಿಕೆ ಕಲಾವಿದ ಸರ್ವರ್ ಪಾಷಾ, ಹಾಸನ ಜಿಲ್ಲೆಯ ಸೋಬಾನೆ ಗಾಯಕಿ ಮಾಳಮ್ಮ, ಬೆಳಗಾವಿ ಜಿಲ್ಲೆಯ ಶ್ರೀ ಕೃಷ್ಣ ಪಾರಿಜಾತ ಭಾಗವತ ಕಲಾವಿದ ಮಹಾದೇವ ಪವಾಡೆಪ್ಪ ಹತಪಾಕಿ, ಚಿಕ್ಕಮಗಳೂರು ಜಿಲ್ಲೆಯ ಅಂಟಿಗೆ-ಪಂಟಿಗೆ ಕಲಾವಿದ ಕೆ.ಬಿ. ಕೃಷ್ಣಪ್ಪಗೌಡ, ಮಡಿಕೇರಿ ಕೊಡವ ಜಾನಪದ ಕಲಾವಿದ ಬೊತ್ತೊಲಂದಾ ಕಾಶಿ ಅಚ್ಚಯ, ತುಮಕೂರು ಜಿಲ್ಲೆಯ ಗಣಿ ಕಲಾವಿದ ವಿಭೂತಿ ತಿಮ್ಮಯ್ಯ ಜುಂಜಪ್ಪ, ವಿಜಯಪುರ  ಜಿಲ್ಲೆಯ ಬಯಲಾಟದ ಕಲಾವಿದ ಚನ್ನಪ್ಪಾ ರಾ ಹೆಗಡಿ, ಚಿತ್ರದುರ್ಗ ಜಿಲ್ಲೆಯ ಬಯಲಾಟದ ಕಲಾವಿದ ಮದ್ಲಿ ಬೋರಯ್ಯ ಅವರುಗಳಿಗೆ ಜಾನಪದ ಲೋಕದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಅವರು ವಿವರಿಸಿದರು. ಜಾನಪದ ಲೋಕದ ಆಡಳಿತಾಧಿಕಾರಿ ಡಾ. ಕುರುವ ಬಸವರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT