ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ವರ್ಷದ ನಂತರ ತಾಯ್ನಾಡಿಗೆ...

ಭಾರತಕ್ಕೆ ಬಂದ ಗೀತಾಗೆ ಅಭೂತಪೂರ್ವ ಸ್ವಾಗತ * ಪೋಷಕರನ್ನು ಗುರುತಿಸದ ಯುವತಿ * ಡಿಎನ್‌ಎ ಪರೀಕ್ಷೆಗೆ ಮೊರೆ
Last Updated 26 ಅಕ್ಟೋಬರ್ 2015, 19:53 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹದಿನಾಲ್ಕು ವರ್ಷಗಳ ಹಿಂದೆ ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದ 23 ವರ್ಷದ ಶ್ರವಣದೋಷದ ಯುವತಿ ಗೀತಾ ಸೋಮವಾರ ತಾಯ್ನಾಡಿಗೆ ಮರಳಿದಳು.

ಬಿಳಿ ಹಾಗೂ ಕಡುಗೆಂಪು ಬಣ್ಣದ ಸಲ್ವಾರ್ ಕಮೀಜ್‌ ತೊಟ್ಟು ತಲೆಯ ಮೇಲೆ ದುಪಟ್ಟಾ ಹೊದ್ದ ಗೀತಾ ಭಾರತಕ್ಕೆ ಕಾಲಿಡುತ್ತಲೇ ಭಾವುಕಳಾದಳು. ತನ್ನ ಪೋಷಕರನ್ನು ಗುರುತಿಸುವಲ್ಲಿ ವಿಫಲವಾದಳು. ಹೀಗಾಗಿ ಈಗ ಆಕೆಯ ಕುಟುಂಬ ಸದಸ್ಯರನ್ನು ಗುರುತಿಸಲು ಡಿಎನ್‌ಎ ಪರೀಕ್ಷೆಗೆ ಮೊರೆ ಹೋಗಲಾಗಿದೆ. ಅಂದು ಸಂಜೋತಾ ಎಕ್ಸ್‌ಪ್ರೆಸ್‌ನಲ್ಲಿ ಗಡಿ ದಾಟಿ ಲಾಹೋರ್‌ ತಲುಪಿದ್ದ  ಏಳೆಂಟು ವರ್ಷದ ಬಾಲಕಿ, 14 ವರ್ಷಗಳ ಬಳಿಕ ಕರಾಚಿಯಿಂದ ವಿಮಾನದಲ್ಲಿ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಳು.

ಗೀತಾಳ ನೈಜ ಬುದುಕು ಇತ್ತೀಚೆಗೆ ತೆರೆಕಂಡ ಹಿಂದಿಚಿತ್ರ ‘ಭಜರಂಗಿ ಭಾಯಿಜಾನ್‌’ ಚಿತ್ರಕಥೆಯನ್ನೇ ಹೋಲುತ್ತದೆ.  ಗಡಿ ದಾಟಿ ಭಾರತದೊಳಗೆ ಬಂದ ಕಿವುಡ ಬಾಲಕಿ ಮುನ್ನಿಯನ್ನು ಮರಳಿ ಪಾಕಿಸ್ತಾನಕ್ಕೆ ತಲುಪಿಸಿದ ನಾಯಕ ಸಲ್ಮಾನ್‌ ಖಾನ್ ಪಾತ್ರವನ್ನು ಗೀತಾಳ ನಿಜ ಜೀವನದಲ್ಲಿ ಪಾಕಿಸ್ತಾನದ ಸ್ವಯಂ ಸೇವಾ ಸಂಸ್ಥೆ ಈದಿ ಪ್ರತಿಷ್ಠಾನ ವಹಿಸಿತ್ತು.

ಪಾಕಿಸ್ತಾನದಲ್ಲಿ ಇಷ್ಟು ವರ್ಷ ಅನ್ನ, ಆಶ್ರಯ ನೀಡಿದ ಈದಿ ಪ್ರತಿಷ್ಠಾನದ ಬಿಲ್ಕೀಸ್‌ ಈದಿ, ಮೊಮ್ಮಕ್ಕಳಾದ ಸಬಾ ಹಾಗೂ ಸಾದ್ ಈದಿ ಅವರು ಗೀತಾಳನ್ನು ಮರಳಿ ಭಾರತಕ್ಕೆ ಕರೆತಂದಿದ್ದಾರೆ. ತನಗೆ ದೊರೆತ ಅಭೂತಪೂರ್ವ ಸ್ವಾಗತದಿಂದ ಒಂದು ಕ್ಷಣ ಹೇಗೆ ಪ್ರತಿಕ್ರಿಯಿಸುವುದು ಎಂದು ತಿಳಿಯದೆ ಗೀತಾ ದಂಗಾಗಿ ನಿಂತಳು. ನಂತರ ಸಾವರಿಸಿಕೊಂಡು ಜನರತ್ತ ಕೈ ಬೀಸಿದಳು.

ಗುರುತು ಹಿಡಿಯದ  ಯುವತಿ: ಗೀತಾಳ ಪೋಷಕರು ಎಂದು ನಂಬಲಾಗಿದ್ದ ಜಾರ್ಖಂಡ್‌ನ ಮಹತೊ ಕುಟುಂಬ ಸಹ ಆಕೆಯನ್ನು ತಮ್ಮೊಂದಿಗೆ ಕರೆದೊಯ್ಯಲು ದೆಹಲಿಗೆ ಬಂದಿತ್ತು. ಪಂಜಾಬ್‌, ಉತ್ತರ ಪ್ರದೇಶದಿಂದ ಬಂದಿದ್ದ ದಂಪತಿಗಳನ್ನೂ ಆಕೆ ಗುರುತು ಹಿಡಿಯಲಿಲ್ಲ. ಇದಕ್ಕೂ ಮೊದಲು ಪಾಕಿಸ್ತಾನಕ್ಕೆ ಕಳಿಸಲಾಗಿದ್ದ ಮಹತೊ ಕುಟುಂಬದ ಹಳೆಯ ಚಿತ್ರದಲ್ಲಿದ್ದ  ಜನಾರ್ದನ್‌ ಮಹತೊ ಅವರನ್ನು ಆಕೆ ತನ್ನ ತಂದೆ ಎಂದು ಗುರುತು ಹಿಡಿದಿದ್ದಳು.

ತನ್ನನ್ನು ಕರೆದೊಯ್ಯಲು ಬಂದಿದ್ದ ಮಹತೊ ಕುಟುಂಬದ ಸದಸ್ಯರನ್ನು ಗೀತಾ ಗುರುತು ಹಿಡಿಯಲಿಲ್ಲ. ಅವರನ್ನು ಕಂಡಾಕ್ಷಣ ಆಕೆಯ ಭಾವನೆಗಳಲ್ಲಿ ಯಾವುದೇ ಬದಲಾವಣೆಗಳಾಗಲಿಲ್ಲ. ಆಕೆ ನಿರ್ಭಾವುಕಳಾಗಿ ನಿಂತಿದ್ದಳು.

ಡಿಎನ್‌ಎ ಪರೀಕ್ಷೆ: ಡಿಎನ್‌ಎ ಪರೀಕ್ಷೆಗಾಗಿ ದೆಹಲಿಯ ಏಮ್ಸ್‌ ವೈದ್ಯರು ಗೀತಾ ಹಾಗೂ ಮಹತೊ ಕುಟುಂಬದ ರಕ್ತ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಡಿಎನ್‌ಎ ಹೊಂದಾಣಿಕೆಯಾದಲ್ಲಿ ಮಾತ್ರ ಗೀತಾಳನ್ನು ಆಕೆಯ ಕುಟುಂಬದ ವಶಕ್ಕೆ ಒಪ್ಪಿಸಲಾಗುವುದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ನಂತರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಒಂದು ವೇಳೆ ಯಾವ ಕುಟುಂಬದ ಜತೆಗೂ ಆಕೆಯ ಡಿಎನ್‌ಎ ಹೋಲಿಕೆಯಾಗದಿದ್ದಲ್ಲಿ ಇಂದೋರ್‌ನ ವಿಶೇಷ ಶಾಲೆಯಲ್ಲಿ ಗೀತಾಳಿಗೆ ಸಂಜ್ಞೆ ಭಾಷೆ ಮತ್ತು ಇನ್ನಿತರ  ತರಬೇತಿ ನೀಡಲಾಗುವುದು ಎಂದರು. ಈ ನಡುವೆ ಮತ್ತೊಂದು ಬೆಳವಣಿಗೆಯಲ್ಲಿ ಗೀತಾ ತಮ್ಮ ಮಗಳು ಎಂದು ಹೇಳಿಕೊಂಡ ಉತ್ತರ ಪ್ರದೇಶದ ಪ್ರತಾಪಗಡದ ದಂಪತಿ ಡಿಎನ್‌ಎ ಪರೀಕ್ಷೆಗೆ ಒಳಗಾಗಲು  ಮುಂದೆ ಬಂದಿದ್ದಾರೆ. ಗೀತಾಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರಿ ಈ ಮೊದಲು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದ ರಾಜಾರಾಂ ಗೌತಮ್‌ ಹಾಗೂ ಅನಾರಾ ದೇವಿ ಕೂಡ ದೆಹಲಿಗೆ ಬಂದಿದ್ದಾರೆ.

ನಮ್ಮೊಂದಿಗಿರುತ್ತಾಳೆ: ಗೀತಾ ತನ್ನ ತಾಯ್ನಾಡಿಗೆ ಮರಳಿರಬಹುದು. ಆದರೆ, ಆಕೆ ಎಂದೆದಿಗೂ ನಮ್ಮಿಂದ ದೂರವಾಗುವುದಿಲ್ಲ. ಸದಾ ಆಕೆ ನಮ್ಮ ಹೃದಯದಲ್ಲಿರುತ್ತಾಳೆ. ಆಕೆ ಜತೆ ನಾವು ಸಂಪರ್ಕದಲ್ಲಿರುತ್ತೇವೆ ಎಂದು ಈದಿ ಪ್ರತಿಷ್ಠಾನದ ಸಂಸ್ಥಾಪಕ ಫೈಸಲ್‌ ಈದಿ ಕರಾಚಿಯಲ್ಲಿ ಹೇಳಿದ್ದಾರೆ. ಭಾರತದ ವಿವಿಧ ಜೈಲಿನಲ್ಲಿರುವ 459 ಕೈದಿಗಳನ್ನು ಭಾರತ ಕೂಡ ಬಿಡುಗಡೆ ಮಾಡಬೇಕು ಎಂದು ಭಾರತದಲ್ಲಿರುವ ಪಾಕಿಸ್ತಾನದ ಹೈಕಮಿಷನ್‌ ಆಶಯ ವ್ಯಕ್ತಪಡಿಸಿದೆ.

ಗೀತಾ ಮತ್ತು ಈದಿ ಪ್ರತಿಷ್ಠಾನದ ಸದಸ್ಯರ ಗೌರವಾರ್ಥ ಪಾಕಿಸ್ತಾನ ಹೈಕಮಿಷನ್‌ ಸೋಮವಾರ ಸಂಜೆ ಔತಣಕೂಟ ಏರ್ಪಡಿಸಿದೆ. ಈ ನಡುವೆ ಪಾಕಿಸ್ತಾನದ ಕರಾಚಿಯಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದ ಪುಟ್ಟ ಶಾಲಾ ಬಾಲಕ ಮೊಹಮ್ಮದ್‌ ರಂಜಾನ್ನನ್ನು ಮರಳಿ  ಕಳಿಸಲು ಭಾರತ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಮೂಲ ಹೆಸರು ಗೀತಾ ಅಲ್ಲ: ಅಂದ ಹಾಗೆ ಯುವತಿಯ ಹೆಸರು ಗೀತಾ ಅಲ್ಲ. ಶ್ರವಣದೋಷದ ಬಾಲಕಿಗೆ ಈ ಹೆಸರು ನೀಡಿದ್ದು ಈದಿ ಪ್ರತಿಷ್ಠಾನದ ಬಿಲ್ಕಿಸ್‌ ಬಾನು. ದೀಪಾವಳಿ ಹಬ್ಬಕ್ಕಾಗಿ ಖರೀದಿಸಿದ ಹೊಸ ಬಟ್ಟೆ ಹಾಗೂ ಬಳೆಗಳನ್ನು ತನ್ನೊಂದಿಗೆ ತಂದಿರುವ ಗೀತಾ ಅವನ್ನು ಎಲ್ಲರಿಗೂ ತೋರಿಸಿ ಸಂಭ್ರಮಿಸಿದಳು. ಭಾರತದಿಂದ ಕಳಿಸಲಾದ ಕುಟುಂಬದ ಚಿತ್ರವನ್ನು ತನ್ನ ಸೂಟ್‌ಕೇಸ್‌ನಲ್ಲಿ ಜೋಪಾನವಾಗಿ ಕಾಪಾಡಿಕೊಂಡಿದ್ದಾಳೆ.

ಈದಿ ಪ್ರತಿಷ್ಠಾನಕ್ಕೆ ಒಂದು ಕೋಟಿ ಧನಸಹಾಯ
ಭಾರತದ ಅನಾಥ ಮಗು ಗೀತಾಳಿಗೆ ಅನ್ನ, ಆಶ್ರಯ ನೀಡುವ ಜೊತೆಗೆ ಧಾರ್ಮಿಕ ಸ್ವಾತಂತ್ರ್ಯವನ್ನೂ ನೀಡಿದ ಕರಾಚಿ ಮೂಲದ ಸ್ವಯಂ ಸೇವಾ ಸಂಸ್ಥೆ ಈದಿ ಪ್ರತಿಷ್ಠಾನಕ್ಕೆ ಭಾರತ ಸರ್ಕಾರ ಒಂದು ಕೋಟಿ ರೂಪಾಯಿ ಧನಸಹಾಯ ಘೋಷಿಸಿದೆ. ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಹಾಗೂ ಗೀತಾಳನ್ನು ಸುರಕ್ಷಿತವಾಗಿ ಕರೆತಂದ ಬಿಲ್ಕಿಸ್‌ ಬಾನು ಈದಿ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು. ಬಿಲ್ಕಿಸ್‌ ಜನ್ಮಸ್ಥಳವಾದ ಗುಜರಾತಿನ ಜುನಾಗಡದ ಬಂಟ್ವಾ ಗ್ರಾಮಕ್ಕೆ ಕುಟುಂಬ ಸಮೇತ ಭೇಟಿ ನೀಡುವಂತೆ ಪ್ರಧಾನಿ ಬಿಲ್ಕಿಸ್‌ ಬಾನು ಅವರಿಗೆ ಆಹ್ವಾನ ನೀಡಿದರು. ಇದೇ ಸಮಯದಲ್ಲಿ  ಅವರು, ಈದಿ ಪ್ರತಿಷ್ಠಾನಕ್ಕೆ ₹1 ಕೋಟಿ ರೂಪಾಯಿ ಧನಸಹಾಯ ನೀಡುವುದಾಗಿ ಘೋಷಿಸಿದರು.

ಶ್ರೇಷ್ಠ ಕೆಲಸ
ಎರಡೂ ರಾಷ್ಟ್ರಗಳು ಯುವತಿಯನ್ನು ಆಕೆಯ ಕುಟುಂಬದೊಂದಿಗೆ ಸೇರಿಸಲು ಶ್ರಮಿಸುತ್ತಿವೆ. ಇದು ನಿಜಕ್ಕೂ ಶ್ರೇಷ್ಠ ಕೆಲಸ. ಪ್ರೀತಿ, ಮಾನವೀಯತೆಯ ನಿಜವಾದ ಶಕ್ತಿ. ಮನೆಗೆ ಮರಳುತ್ತಿರುವ ಗೀತಾ ನಿನಗೆ ಹೃದಯಪೂರ್ವಕ ಸ್ವಾಗತ
– ಸಲ್ಮಾನ್‌ ಖಾನ್
, ಬಾಲಿವುಡ್‌ ನಟ
*
ಅನೇಕ ವರ್ಷಗಳ ಅಜ್ಞಾತವಾಸದ ನಂತರ ಮರಳಿ ತಾಯ್ನಾಡು ಸೇರಿರುವುದರಿಂದ ನನ್ನ ಹೃದಯ ತುಂಬಿ ಬಂದಿದೆ. ಇಲ್ಲಿ ದೊರೆತ ಅಭೂತಪೂರ್ವ ಸ್ವಾಗತ ನನ್ನ ಮನ ಕಲುಕಿದೆ
– ಗೀತಾ

*
ಭಾರತದ ಅಮಾಯಕ ಹಾಗೂ ಮುಗ್ಧ ಮಗಳು ಮರಳಿ ಮನೆ ಸೇರಿದ್ದಾಳೆ.  ಮರಳಿ ಆಕೆಯನ್ನು ಕುಟುಂಬದೊಂದಿಗೆ ಸೇರಿಸುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು
– ಸುಷ್ಮಾ ಸ್ವರಾಜ್,

ವಿದೇಶಾಂಗ ಸಚಿವೆ
*
ಮುಖ್ಯಾಂಶಗಳು
* ಜಲಂಧರ್‌ ಸಮೀಪದ ಕರ್ತಾಪುರದಿಂದ ಕಾಣೆಯಾಗಿದ್ದ ಗೀತಾ
* ಗೀತಾ ಪೋಷಕರ ಸೇರುವವರೆಗೆ ಈದಿ ಸದಸ್ಯರು ಭಾರತದಲ್ಲಿರುವರು
* ಭಾರತದ ನೆಲಕ್ಕೆ ಕಾಲಿಡುತ್ತಲೇ ಭಾವುಕಳಾಗಿ ಕಣ್ಣೀರಿಟ್ಟ ಗೀತಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT