ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರೊಳಗೆ ಪಡಿತರ ಚೀಟಿದಾರರ ಸಮಸ್ಯೆ ಇತ್ಯರ್ಥಕ್ಕೆ ಸೂಚನೆ

Last Updated 24 ಅಕ್ಟೋಬರ್ 2014, 7:40 IST
ಅಕ್ಷರ ಗಾತ್ರ

ಮೈಸೂರು: ನ. ೧೫ರೊಳಗೆ ಪಡಿತರ ಚೀಟಿದಾರರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಬಿಪಿಎಲ್ ಕಾರ್ಡು ಅಥವಾ ಇತರೆ ಪಡಿತರ ಚೀಟಿಗೆ ಸಲ್ಲಿಕೆಯಾದ ಅರ್ಜಿಗಳನ್ನು ಸಕಾಲದಲ್ಲಿ ಇತ್ಯರ್ಥಪಡಿಸಬೇಕು. ಆಹಾರ ನಿರೀಕ್ಷಕರು, ಶಿರಸ್ತೇದಾರರು, ತಹಶೀಲ್ದಾರರು, ಸಹಾಯಕ ನಿರ್ದೇಶಕರು  ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಎಪಿಎಲ್ ಕಾರ್ಡ್‌ದಾರರಿಗೆ ಸೀಮೆಎಣ್ಣೆ ದೊರೆಯದೆ ತೊಂದರೆಯಾಗಿದೆ. ಜತೆಗೆ ಹೆಚ್ಚಿನ ದರದಲ್ಲಿ ಪಡಿತರ ಪದಾರ್ಥ ಕೊಡಲು ಸರ್ಕಾರ ನಿರ್ಧರಿಸಿದೆ. ಶೀಘ್ರದಲ್ಲಿ ಬೆಲೆ ನಿಗದಿಪಡಿಸಲಾಗುವುದು. ಅದುವರೆಗೆ ಬಿಪಿಎಲ್ ಕಾರ್ಡುದಾರರ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಉಪ ನಿರ್ದೇಶಕ ಕಾ. ರಾಮೇಶ್ವರಪ್ಪ ಮಾತನಾಡಿ, ಜಿಲ್ಲೆಯಲ್ಲಿ ೭.೩೩ ಲಕ್ಷ ಪಡಿತರ ಚೀಟಿಗಳಿದ್ದು, ಈ ಪಡಿತರ ಚೀಟಿಗಳ ಸಿಂಧುತ್ವ ಪರಿಶೀಲನೆಗಾಗಿ ಎಲ್ಲ ಪಡಿತರ ಚೀಟಿದಾರರಿಂದ ‘ಎಪಿಕ್’ ಹಾಗೂ ‘ಆಧಾರ್’ ವಿವರ ಪಡೆಯಲಾಗುತ್ತಿದೆ. ಎಸ್‌ಎಂಎಸ್ ಕಳುಹಿಸದ ೯೭,೩೩೬ ಪಡಿತರ ಚೀಟಿದಾರರಿಗೆ ಏಪ್ರಿಲ್‌ನಿಂದ ಅಕ್ಟೋಬರ್ ತನಕ ಹಂತ ಹಂತವಾಗಿ ಹಂಚಿಕೆ ಸ್ಥಗಿತಗೊಳಿಸಲಾಗಿದೆ. ಇವರು ಎಸ್‌ಎಂಎಸ್ ಮೂಲಕ ಮಾಹಿತಿ ನೀಡಿದರೆ, ತಿಂಗಳ ನಂತರ ಪಡಿತರ ಕೊಡಬಹುದು ಎಂದು ಹೇಳಿದರು.

ರದ್ದುಪಡಿಸಿದ ಪಡಿತರ ಚೀಟಿದಾರರ ಹೆಸರನ್ನು ಗ್ರಾಮ ಪಂಚಾಯಿತಿ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಪಿ.ಎ. ಗೋಪಾಲ್‌  ಇದ್ದರು.

ಸ್ವಯಂ ಉದ್ಯೋಗಕ್ಕೆ ನೆರವು: ಅರ್ಜಿ ಆಹ್ವಾನ
ಮೈಸೂರು:
ಕರ್ನಾಟಕ ಸ್ವಯಂ ಉದ್ಯೋಗ ಯೋಜನೆಯಡಿ ಗ್ರಾಮೀಣ ಪ್ರದೇಶದ ಯುವಜನರಿಗೆ ತಯಾರಿಕೆ ಅಥವಾ ಸೇವಾ ಘಟಕ ಸ್ಥಾಪಿಸಲು ನೆರವು ನೀಡಲು ಜಿಲ್ಲಾ ಕೈಗಾರಿಕಾ ಕೇಂದ್ರವು ಅರ್ಜಿ ಆಹ್ವಾನಿಸಿದೆ.

ಗರಿಷ್ಠ 10 ಲಕ್ಷ ರೂಪಾಯಿ ಬಂಡವಾಳದಲ್ಲಿ ಘಟಕ ಸ್ಥಾಪಿಸಲು ಅವಕಾಶ ಇದ್ದು ಬ್ಯಾಂಕ್‌ ಮೂಲಕ ಹಣಕಾಸಿನ ನೆರವು ಒದಗಿಸಲಾಗುವುದು. ಅಲ್ಲದೇ, ಶೇ 25ರಿಂದ 35ರವರೆಗೆ ಸಹಾಯಧನ ನೀಡಲಾಗುವುದು. ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರುವ, 21ರಿಂದ 35 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅ. 31 ಕಡೇದಿನ. ಮಾಹಿತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ, ಸಿಟಿಐ ಕಟ್ಟಡ, ಸಯ್ಯಾಜಿರಾವ್‌ ರಸ್ತೆ, ಮೈಸೂರು ಹಾಗೂ ತಾಲ್ಲೂಕು ಕೇಂದ್ರಗಳ ವಿಸ್ತರಣಾಧಿಕಾರಿ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT