ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ರ ಬಾಲೆ ಹೆಗಲಿಗೆ 6 ಜನರ ಹೊಣೆ

ಅಜ್ಜ, ಅಜ್ಜಿ, ಕಾಯಿಲೆ ಬಿದ್ದ ತಮ್ಮ, ಇಬ್ಬರು ತಂಗಿಯರ ಜವಾಬ್ದಾರಿ
Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಹೊಳೆನರಸೀಪುರ: ಆಟ, ಪಾಠ, ಊಟದ ಬಗ್ಗೆ ತಲೆಕೆಡಿಸಿಕೊಳ್ಳದೆ ಬೇಕೆಂದಾಗ ಟಿ.ವಿ ನೋಡುತ್ತಾ, ಶಾಲೆಗೆ ಹೋಗಿ ಕಲಿಯಬೇಕಾದ 16 ವರ್ಷದ ಬಾಲಕಿಯ ವ್ಯಥೆಯ ಕಥೆ ಇದು. ನೋಡುವವರ ಕರುಳು ಚುರುಗುಟ್ಟಿದರೂ ಆ ಬಾಲೆ ಮಾತ್ರ ಎಲ್ಲ ಕಷ್ಟಗಳನ್ನು ಸಹಜವಾಗಿ ತೆಗೆದುಕೊಂಡು, ಛಲದಿಂದ ಎದುರಿಸಿ ನಿಂತಿದ್ದಾಳೆ.

ಇಬ್ಬರು ತಂಗಿಯರು, ತಮ್ಮ, ಅಜ್ಜ, ಅಜ್ಜಿಯನ್ನು ನೋಡಿಕೊಂಡು ಮನೆ ಕೆಲಸವನ್ನೆಲ್ಲಾ ತಾನೇ ಮಾಡುತ್ತಾ, ತಿಂಡಿ, ಅಡುಗೆ ಮಾಡಿಟ್ಟು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಿ 10ನೇ ತರಗತಿಯಲ್ಲಿ ಶೇ 77 ಅಂಕ ಗಳಿಸಿರುವ ಶ್ವೇತಾಳ ಬದುಕಿನ ಹೋರಾಟ ಅಚ್ಚರಿ ಮೂಡಿಸುವಂಥದ್ದು.

ತಾಲ್ಲೂಕಿನ ರಂಗನೇಹಳ್ಳಿ ಕೊಪ್ಪಲಿನ ಶ್ವೇತಾ 6ನೇ ತರಗತಿಯಲ್ಲಿರುವಾಗ ತಂದೆ– ತಾಯಿಯನ್ನು ಕಳೆದುಕೊಂಡವಳು. ಅಜ್ಜಿ, ಅಜ್ಜ, ದೊಡ್ಡಮ್ಮಂದಿರ ಸಹಾಯದಿಂದ ಬೆಳೆದು ಈಗ ಪ್ರಥಮ ಪಿಯು ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ತನ್ನನ್ನೂ ಒಳಗೊಂಡು 6 ಜನರನ್ನು ನೋಡಿಕೊಳ್ಳುತ್ತಿದ್ದಾಳೆ. ಈಕೆಯ ತಮ್ಮ ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಅವನ ಚಿಕಿತ್ಸೆಯ ಜವಾಬ್ದಾರಿಯೂ ಈಕೆಯದ್ದೆ.

ಇವರ ಮನೆಯಲ್ಲಿ 15 ಕುರಿಗಳಿದ್ದು, ಅವುಗಳೇ ಜೀವನಕ್ಕೆ ಆಧಾರ. ಅವುಗಳನ್ನು ಮೇಯಿಸುವುದು, ಮತ್ತೆ ಮನೆಗೆ ಕರೆದುಕೊಂಡು ಬರುವುದು ವಯಸ್ಸಾದ ಅಜ್ಜಿ ಹಾಗೂ ಅಜ್ಜನ ಕೆಲಸ. ಅಜ್ಜ ಹಾಗೂ ಅಜ್ಜಿಗೆ ಬರುವ ವೃದ್ಧಾಪ್ಯ ವೇತನ ಅವರ ಔಷಧಿ ಖರ್ಚಿಗೆ ಸರಿ ಹೋಗುತ್ತದೆ. ಶಾಲೆಗೆ ರಜಾ ಇರುವ 3 ತಿಂಗಳ ಅವಧಿಯಲ್ಲಿ ಊರಿನ ಕೆಲವರೊಂದಿಗೆ ಕಾಫಿತೋಟಕ್ಕೆ ಹೋಗಿ ಕೆಲಸ ಮಾಡುವ ಈಕೆ ₹ 5– 6 ಸಾವಿರ ಗಳಿಸಿ ತಮ್ಮ, ತಂಗಿಯರಿಗೆ ಬಟ್ಟೆ ಕೊಡಿಸುತ್ತಾಳೆ. ಶಾಲೆಯ ಶುಲ್ಕ ಕಟ್ಟುತ್ತಾಳೆ.

ಪ್ರಸ್ತುತ ನಗರನಹಳ್ಳಿ ಸರ್ಕಾರಿ ಕಾಲೇಜಿನಲ್ಲಿ ಪಿಯು ಓದುತ್ತಿರುವ ಶ್ವೇತಾ,  ಪ್ರೌಢಶಾಲಾ ಶಿಕ್ಷಕ ಎಲ್ಲಪ್ಪ ಅವರ ಮಾರ್ಗದರ್ಶನದಿಂದ ಬದುಕಿನ ಬಗ್ಗೆ ಭರವಸೆ ಬೆಳೆಸಿಕೊಂಡಿದ್ದಾಳೆ. ಪಿಯು ನಂತರ ಪದವಿ ಪಡೆದು ಐಎಎಸ್‌ ಮಾಡಬೇಕೆಂಬುದು ಇವಳ ಆಸೆ.

ಇಟ್ಟಿಗೆ ಗೋಡೆಯಿಂದ ನಿರ್ಮಿಸಿದ, ಶೌಚಾಲಯ ಇಲ್ಲದ ಮನೆಯಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ವಾಸವಿರುವ ಈಕೆ, ಮನೆಯೊಳಗೇ ಕುರಿಗಳನ್ನು ಕೂಡಿಹಾಕಲು ಜಾಗ ಮಾಡಿಕೊಂಡಿದ್ದಾಳೆ.

ಶ್ವೇತಾಳಿಗೆ ಸಹಾಯ ಮಾಡಲು ಬಯಸುವವರು  ಕೆನರಾ ಬ್ಯಾಂಕಿನ ಹೊಳೆನರಸೀಪುರ ಶಾಖೆಯ ಉಳಿತಾಯ ಖಾತೆ ಸಂಖ್ಯೆ: 0588108029081 ಮೂಲಕ ನೆರವಾಗಬಹುದು.‌
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT