ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ಪ್ರಕರಣಗಳ ಎಫ್‌ಐಆರ್‌ ರದ್ದುಪಡಿಸಿದ ಹೈಕೋರ್ಟ್‌

ಅಂದರ್‌ ಬಾಹರ್‌: ಬಂಧನಕ್ಕೆ ಪೂರ್ವಾನುಮತಿ ಕಡ್ಡಾಯ
Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಖಾಸಗಿ ಸ್ಥಳಗಳಲ್ಲಿ ಅಂದರ್–ಬಾಹರ್‌ ಇಸ್ಪೀಟ್‌ ಆಡಿದವರನ್ನು ಬಂಧಿಸುವ ಮುನ್ನ  ಪೊಲೀಸರು ಸ್ಥಳೀಯ ಮ್ಯಾಜಿಸ್ಟ್ರೇಟ್‌ ಅವರ ಪೂರ್ವಾನುಮತಿ ಪಡೆಯುವುದು ಕಡ್ಡಾಯ’ ಎಂದು ಹೈಕೋರ್ಟ್‌ ಹೇಳಿದೆ.

ಈ ಸಂಬಂಧ ಪೊಲೀಸರು ದಾಖಲಿಸಿದ್ದ  16 ಪ್ರಥಮ ವರ್ತಮಾನ ವರದಿಳನ್ನು (ಎಫ್‌ಐಆರ್‌)  ನ್ಯಾಯಮೂರ್ತಿ ಎ.ಎನ್‌.ವೇಣುಗೋಪಾಲ ಗೌಡ ಅವರಿದ್ದ ಏಕಸದಸ್ಯ ಪೀಠವು ಬುಧವಾರ ವಜಾ ಮಾಡಿತು.

ಅರ್ಜಿದಾರರ ಪರ ಹಾಜರಾಗಿದ್ದ ವಕೀಲರಾದ ಅರುಣ್‌ ಶ್ಯಾಮ್‌ ಮತ್ತು ಪಿ.ಎನ್‌. ಹೆಗಡೆ ಅವರು ವಾದ ಮಂಡಿಸಿ, ‘ಕರ್ನಾಟಕ ಪೊಲೀಸ್‌ ಕಾಯ್ದೆಯ ಕಲಂ 79 ಮತ್ತು 80ರ ಅನುಸಾರ,  ಜೂಜು ಮತ್ತು ಹಣವನ್ನು ಪಣಕ್ಕೊಡ್ಡಿ ಆಡುವ ಆಟಗಳನ್ನು ನಿಯಂತ್ರಿಸಲು ಪೊಲೀಸರಿಗೆ ಕಾನೂನು ಪ್ರಕಾರ ಅಧಿಕಾರವೇನೋ ಇದೆ. ಆದರೆ ಈ ಸಂಬಂಧ ಪ್ರಥಮ ವರ್ತಮಾನ ವರದಿ (ಎಫ್‌ಐಆರ್‌) ದಾಖಲಿಸುವುದು ಮಾತ್ರ ಕಾನೂನು ಬಾಹಿರ’ ಎಂದರು.

‘ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ  155ರ ಅನುಸಾರ ಇಂತಹ ಪ್ರಕರಣಗಳಲ್ಲಿ ಸ್ಥಳೀಯ ಮ್ಯಾಜಿಸ್ಟ್ರೇಟ್‌ ಅವರ ಪೂರ್ವಾನುಮತಿ ಇಲ್ಲದೆ ಪೊಲೀಸರು ಎಫ್‌ಐಆರ್‌ ದಾಖಲಿಸುವುದು, ತನಿಖೆ ಕೈಗೊಳ್ಳುವುದು, ದೋಷಾರೋಪ ಪಟ್ಟಿ ಸಿದ್ಧಪಡಿಸುವುದು  ತಪ್ಪು’ ಎಂದು ಪ್ರತಿಪಾದಿಸಿದರು.

‘ಈ ಪ್ರಕರಣಗಳಲ್ಲಿನ ಎಲ್ಲ ಆರೋಪಿಗಳೂ ಖಾಸಗಿ ಸ್ಥಳವೆನಿಸಿದ ಫ್ಲ್ಯಾಟ್‌ ಒಂದರಲ್ಲಿ ಇಸ್ಪೀಟ್‌ ಆಡಿದ್ದಾರೆ. ಇವರ ಆಟದಿಂದ ನಮಗೆ ತೊಂದರೆ ಆಗಿದೆ ಎಂದು ಯಾವೊಬ್ಬ ಸಾರ್ವಜನಿಕರೂ ಪೊಲೀಸರಿಗೆ ದೂರು ನೀಡಿಲ್ಲ. ಬದಲಿಗೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ಎಂಬ ನೆಪದಲ್ಲಿ ಕಾರ್ಯಾಚರಣೆ ನಡೆಸಿ ಆಟಗಾರರನ್ನು  ಬಂಧಿಸಿ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿದ್ದಾರೆ.

ವಾಸ್ತವದಲ್ಲಿ ಇಂತಹ ಪ್ರಕರಣದಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡುವುದಕ್ಕೆ ಪೊಲೀಸ್‌ ಕಾಯ್ದೆ 79 ಮತ್ತು 80ರ ಅಡಿ ಅವಕಾಶವೇ ಇಲ್ಲ. ಸಿಆರ್‌ಪಿಸಿ ಕಾಯ್ದೆ 155ರ ಅನುಸಾರ ಪೊಲೀಸ್‌ ಕಾಯ್ದೆಯ ಕಲಂ 79 ಮತ್ತು 80 ಇಲ್ಲಿ ತನ್ನಿಂತಾನೆ ಅನೂರ್ಜಿತ ಎನಿಸಿಕೊಳ್ಳುತ್ತದೆ.  ಆದ್ದರಿಂದ ಆರೋಪಿಗಳ ವಿರುದ್ಧ ದಾಖಲಾಗಿರುವ ಎಲ್ಲ ಎಫ್‌ಐಆರ್‌ಗಳನ್ನು ರದ್ದುಪಡಿಸಬೇಕು’ ಎಂದು ಕೋರಿದರು.
ಅರ್ಜಿದಾರರ ಪರ ವಕೀಲರ ವಾದವನ್ನು ನ್ಯಾಯಪೀಠ ಪುರಸ್ಕರಿಸಿತು.

ಅಬ್ದುಲ್‌ ಲತೀಫ್‌ ಹಾಗೂ ಜಿ.ಟಿ. ರಾಘವೇಂದ್ರ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಒಟ್ಟು 16 ಜನರು ಈ ಅರ್ಜಿಗಳನ್ನು ದಾಖಲಿಸಿದ್ದರು.

ಮಂಗಳಾ ಅಮಾನತು: ಮಾಹಿತಿ ನೀಡಲು ಸೂಚನೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಸದಸ್ಯೆ ಮಂಗಳಾ ಶ್ರೀಧರ್ ಅವರ ಅಮಾನತು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಸೂಚನೆ ನೀಡಿರುವ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದನ್ನು ತಿಳಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

2011ರ ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರಿ ಎ ಮತ್ತು ಬಿ ವೃಂದದ ನೇಮಕ ಪ್ರಕ್ರಿಯೆ ನಡೆಯುವಾಗ ಆಯೋಗದ ಸದಸ್ಯೆಯಾಗಿದ್ದ ಮಂಗಳಾ ಶ್ರೀಧರ್  ಅಕ್ರಮ ಎಸಗಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು. ಈ ದೂರಿಗೆ ಸಂಬಂಧಿಸಿದಂತೆ ಮಂಗಳಾ ಅವರನ್ನು ರಾಜ್ಯಪಾಲರು ಅಮಾನತುಗೊಳಿಸಿದ್ದರು.

ರಾಜ್ಯಪಾಲರ ಈ ಕ್ರಮ ಪ್ರಶ್ನಿಸಿ ಮಂಗಳಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಏಕಸದಸ್ಯ ಪೀಠವು ಅರ್ಜಿದಾರರ ಮನವಿ ತಿರಸ್ಕರಿಸಿತ್ತು. ಇದನ್ನು  ಪ್ರಶ್ನಿಸಿ ಅವರು ಮೇಲ್ಮನವಿ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT