ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ತಾಲ್ಲೂಕಿನ ಶಾಲೆಗೆ ರಜೆ

ಮಲೆನಾಡು, ಕರಾವಳಿಯಲ್ಲಿ ಮಳೆ ಅಬ್ಬರ * ನದಿಗಳಲ್ಲಿ ಪ್ರವಾಹ
Last Updated 1 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮಂಗಳೂರು/ಹುಬ್ಬಳ್ಳಿ/ಶಿವಮೊಗ್ಗ/ ದಾವಣಗೆರೆ/ಮೈಸೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಶುಕ್ರವಾರ ಧಾರಾಕಾರ ಮಳೆಯಾಗಿದ್ದು, ನಾಗರ­ಪಂಚಮಿ ಹಬ್ಬದ ಸಂಭ್ರಮ ಕಳೆಗುಂದಿತು.

ಸತತ ಮಳೆಯಿಂದಾಗಿ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರಿನಲ್ಲಿ ಮನೆಯ ಗೋಡೆ ಕುಸಿದು ಪಾರವ್ವ ದೇವಪ್ಪ ನರ್ತಿ (60) ಮೃತಪಟ್ಟಿದ್ದು, ಗಾಯಗೊಂಡ ಇನ್ನಿಬ್ಬರನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇರಳದ ಕಾಸರಗೋಡು ಜಿಲ್ಲೆಯ ವೆಸ್ಟ್‌ ಎಳೇರಿಯಲ್ಲಿ ಜೋಷಿ (35) ಎಂಬವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಶಾಲಾ, ಕಾಲೇಜುಗಳಿಗೆ ರಜೆ: ಮಳೆಯ ಅಬ್ಬರ­ದಿಂದಾಗಿ ಆರು ಜಿಲ್ಲೆಗಳ 18 ತಾಲ್ಲೂಕುಗಳಲ್ಲಿ ಶಾಲಾ, ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸ­ಲಾಗಿದೆ.

ಕೊಡಗು, ಉಡುಪಿ ಜಿಲ್ಲೆಗಳಲ್ಲಿ ಶನಿವಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆಗಳಿಗೆ ಮಾತ್ರ ರಜೆ ಇದೆ.  ಚಿಕ್ಕ­ಮಗಳೂರು, ಮೂಡಿಗೆರೆ,  ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಶಾಲೆ, ಕಾಲೇಜುಗಳಿಗೆ ಶನಿವಾರವೂ ರಜೆ ಮುಂದುವರಿಸ­ಲಾಗಿದೆ. ದಾವಣ­ಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶನಿವಾರ ರಜೆ ಘೋಷಣೆ ಮಾಡಲಾಗಿದೆ.

ಉಕ್ಕೇರಿದ ನದಿಗಳು: ಶಿವಮೊಗ್ಗ ನಗರದಲ್ಲಿ ಹಲವು ಮನೆಗಳಿಗೆ ತುಂಗಾ ನದಿಯ ನೀರು ನುಗಿದ್ದು, ಜನರು ರಾತ್ರಿಯನ್ನು ಬೀದಿಯಲ್ಲೇ ಕಳೆದಿದ್ದಾರೆ.  ಕೆಲ ಗ್ರಾಮಗಳ ಸಂಪರ್ಕ ಕಡಿದುಹೋಗಿವೆ.

ಭಕ್ತಾದಿಗಳಿಗೆ ತೊಂದರೆ: ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ  ಕುಮಾರಧಾರ ನದಿ ಉಕ್ಕಿ ಹರಿದು ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಕುಮಾರಧಾರ ಸೇತು­ವೆಯು ಮುಳುಗಡೆಗೊಂಡಿತು. ಶುಕ್ರ­ವಾರ ಸಂಜೆವರೆಗೂ ಸೇತುವೆ ಮೇಲೆ ನೀರಿನ ಹರಿವು  ಕಡಿಮೆಯಾಗಲಿಲ್ಲ.  ಕ್ಷೇತ್ರಕ್ಕೆ ಬೆಂಗಳೂರು, -ಧರ್ಮಸ್ಥಳ ಮೊದಲಾದ ಕಡೆಗಳಿಂದ ಬರುವ ಭಕ್ತಾದಿಗಳು ಸಮಸ್ಯೆ ಎದುರಿಸಿದರು.
ನೇತ್ರಾವತಿ ನದಿ ಉಕ್ಕಿ ಹರಿದಿದ್ದರಿಂದ ಬಂಟ್ವಾಳ ತಾಲ್ಲೂಕಿನ ಹಲವು ಪ್ರದೇಶಗಳು ಜಲಾವೃತವಾಗಿವೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ತಾಲ್ಲೂಕು­ಗಳಲ್ಲಿ  ಹೇಮಾವತಿ, ಭದ್ರಾ ಹಾಗೂ ತುಂಗಾ ನದಿಗಳು ತುಂಬಿ ಹರಿಯುತ್ತಿವೆ. ಕೊಪ್ಪ ಹಾಗೂ ಶೃಂಗೇರಿ ತಾಲ್ಲೂಕಿನಲ್ಲಿ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿದೆ.

ತುಂಗಭದ್ರಾ ನದಿಯಲ್ಲಿ ನೀರಿನಮಟ್ಟ ಏರಿಕೆ­ಯಾಗುತ್ತಿದ್ದು, ಹರಪನಹಳ್ಳಿ ತಾಲ್ಲೂಕಿನ ಎರಡು ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ನೂರಾರು ಎಕರೆಯಲ್ಲಿ ಬೆಳೆದ ಬೆಳೆ ಜಲಾವೃತವಾಗಿದೆ.

ಹರಪನಹಳ್ಳಿಯ ಹಲುವಾಗಲು–ಗರ್ಭಗುಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಈ ಮಾರ್ಗವಾಗಿ ಸಂಪರ್ಕ ಬೆಸೆಯುವ ಕುರುವತ್ತಿ, ಮೈಲಾರ, ಗುತ್ತಲ ಹಾಗೂ ರಾಣೇಬೆನ್ನೂರು ಹಾಗೂ ಹಾವೇರಿಗೆ ಕುಂಚೂರು ಮಾರ್ಗವಾಗಿ ಸಾರಿಗೆ ಸಂಪರ್ಕಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಕೊಡಗಿನಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು,  ರಸ್ತೆ ಸಂಪರ್ಕ ಕಡಿತ, ಮನೆಗಳ ಗೋಡೆ ಕುಸಿತ, ಮರಗಳು– ವಿದ್ಯುತ್‌ ಕಂಬಗಳು ಧರೆಗುರುಳಿರುವ ಬಗ್ಗೆ ವರದಿಗಳು ಬಂದಿವೆ.

ಭಾಗಮಂಡಲ– ಅಯ್ಯಂಗೇರಿ ರಸ್ತೆ ಹಾಗೂ ಭಾಗಮಂಡಲ– ಮಡಿಕೇರಿ ಸಂಪರ್ಕ ರಸ್ತೆ ಮೇಲೆ 2 ರಿಂದ 3 ಅಡಿಗಳಷ್ಟು ನೀರು ಹರಿಯುತ್ತಿದೆ. ವಾಹನಗಳ ಸಂಚಾರವನ್ನು ತಡೆಹಿಡಿಯಲಾಗಿದೆ.

ಉತ್ತರ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕೊಂಚ ತಗ್ಗಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಮುಳುಗಡೆಯಾದ ಆರು ಸೇತುವೆಗಳು ಇನ್ನೂ ಅದೇ ಸ್ಥಿತಿಯಲ್ಲಿವೆ. ರಾಯಬಾಗ ತಾಲ್ಲೂಕಿನ ಕುಡಚಿ ಸೇತುವೆ ಶುಕ್ರವಾರ ಮುಳುಗಡೆಯಾಗಿದ್ದು ಸೇತುವೆ ಮೇಲೆ ಎರಡು ಅಡಿ ನೀರು ಹರಿಯುತ್ತಿದೆ. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಕರ್ನಾಟಕ–ಮಹಾರಾಷ್ಟ್ರ ಸಂಪರ್ಕ ಕಡಿದುಹೋಗಿದೆ.

ಮಹಾರಾಷ್ಟ್ರದ ಜಲಾಶಯಗಳಿಂದ ಸುಮಾರು 1.50 ಲಕ್ಷ ಕ್ಯೂಸೆಕ್‌ ಪ್ರಮಾಣದಲ್ಲಿ ನೀರು ಹರಿದು ರಾಜ್ಯಕ್ಕೆ ಬರುತ್ತಿದ್ದು, ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಸೇತುವೆ ಮೇಲೆ 11 ಅಡಿಯಷ್ಟು ಹಾಗೂ ಉಳಿದ 5 ಸೇತುವೆಗಳ ಮೇಲೆ 3 ಅಡಿಯಷ್ಟು ನೀರು ಹರಿ­ಯು­ತ್ತಿದೆ. ಹಾವೇರಿ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿ­ಯುತ್ತಿ­ರುವ ಮಳೆಗೆ ಸಿಲುಕಿ 185 ಮನೆಗಳು ಭಾಗಶಃ ಕುಸಿದಿದ್ದು ತುಂಗಭದ್ರಾ, ವರದಾ, ಕುಮುದ್ವತಿ ಹಾಗೂ ಧರ್ಮಾ ತುಂಬಿ ಹರಿಯುತ್ತಿದ್ದು, ಒಟ್ಟು 280 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT