ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ತಿಂಗಳಲ್ಲಿ 737 ಸಾವು...!

ವಿಕ್ಟೋರಿಯಾ ಆಸ್ಪತ್ರೆ: ಸುಟ್ಟ ಗಾಯ ವಾರ್ಡ್‌-– 1273 ಮಹಿಳೆಯರು ದಾಖಲು
Last Updated 28 ಆಗಸ್ಟ್ 2014, 19:57 IST
ಅಕ್ಷರ ಗಾತ್ರ

ಬೆಂಗಳೂರು: ಸುಟ್ಟ ಗಾಯಗಳಿಂದ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವವರ ಹಾಗೂ ಆ ಪ್ರಕರಣಗಳಲ್ಲಿ ದಾಖಲಾಗುತ್ತಿರುವ ಸಾವಿನ ಪ್ರಮಾಣ­ದಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕ­ವಾಗಿದೆ. ಕಳೆದ 18 ತಿಂಗಳಲ್ಲಿ ದಾಖ­ಲಾದ ಅಂಕಿ–ಅಂಶಗಳಿಂದ ಈ ಆಘಾತ­ಕಾರಿ ಅಂಶ ಬಯಲಾಗಿದೆ. ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಒಂದೂವರೆ ವರ್ಷದ ಅವಧಿಯಲ್ಲಿ 1273 ಮಹಿಳೆಯರು ಈ ಆಸ್ಪತ್ರೆಯ ಸುಟ್ಟ ಗಾಯ ವಾರ್ಡ್‌ಗೆ ದಾಖಲಾಗಿ­ದ್ದಾರೆ. ಇವರಲ್ಲಿ ಸಾವನ್ನಪ್ಪಿದವರ ಸಂಖ್ಯೆ 737.

ಆಕಸ್ಮಿಕ ಅಗ್ನಿ ದುರಂತದಿಂದ ಸಾವು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿ­ಕೊಂಡವರು ಹಾಗೂ ಕೌಟುಂಬಿಕ ಹಿಂಸೆಗೆ ಬಲಿಯಾದವರ ಪ್ರಕರಣಗಳೂ ಇದರಲ್ಲಿ ಸೇರಿವೆ. ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದ ಬೆನ್ನಲ್ಲೇ ಲಭ್ಯವಾಗಿರುವ ಈ ಅಂಕಿ–ಅಂಶಗಳು   ಆತಂಕ ಹುಟ್ಟಿಸುವಂಥವು.
2013ರಲ್ಲಿ ಒಟ್ಟು 1789 ಜನ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾ­ಗಿದ್ದು, ಇವರಲ್ಲಿ 853 ಮಹಿಳೆಯರಿ­ದ್ದಾರೆ. ಅವರಲ್ಲಿ ಚಿಕಿತ್ಸೆಗೆ ಸ್ಪಂದಿಸದೆ 474 ಮಹಿಳೆಯರು ಮೃತಪಟ್ಟಿದ್ದಾರೆ. ಆಕಸ್ಮಿಕ ಅಗ್ನಿ ದುರಂತದಿಂದ 340, ಆತ್ಮಹತ್ಯೆ­ಯಿಂದ 128,  ಕೌಟುಂಬಿಕ ಹಿಂಸೆ­ಯಿಂದ 6 ಮಹಿಳೆಯರು ಮೃತ­ಪಟ್ಟ ಪ್ರಕರಣಗಳಿವೆ.

‘ಪ್ರತಿ ದಿನ 5ರಿಂದ 10 ಪ್ರಕರಣಗಳು ದಾಖಲಾಗುತ್ತವೆ. ಇವರಲ್ಲಿ ಮಹಿಳೆ­ಯರ ಸಂಖ್ಯೆಯೇ ಅಧಿಕ. ಹೆಚ್ಚಿನವರು ಹಲವು ಕಾರಣಗಳಿಂದ ಬೆಂಕಿ ಹಚ್ಚಿ­ಕೊಂಡು ಆತ್ಮಹತ್ಯೆ ಮಾಡಿಕೊಂಡಿರು­ತ್ತಾರೆ. ಆದರೆ, ಸ್ಟೌ  ಸಿಡಿದು ಅನಾಹುತ­ವಾಗಿದೆ ಎಂದು ದೂರು ನೀಡುತ್ತಾರೆ’ ಎಂದು ವಿಕ್ಟೋರಿಯಾ ಆಸ್ಪತ್ರೆ ಸುಟ್ಟ ಗಾಯಗಳ ವಿಭಾಗದ ಮುಖ್ಯಸ್ಥ ಕೆ.ಟಿ.­ರಮೇಶ್‌ ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ‘ಸುಟ್ಟ ಗಾಯದ ಚಿಕಿತ್ಸೆಗಾಗಿ ದೂರದ ಊರುಗಳಿಂದ ಇಲ್ಲಿಗೆ ಬರು­ತ್ತಾರೆ. ಗಾಯದ ಸ್ವರೂಪ ಗಂಭೀರ­ವಾಗಿ­ದ್ದಾಗ ಬೇರೆ ಆಸ್ಪತ್ರೆ ವೈದ್ಯರು ವಿಕ್ಟೋ­ರಿಯಾ ಆಸ್ಪತ್ರೆಗೆ ದಾಖಲಾಗು­ವಂತೆ ಸೂಚಿಸುತ್ತಾರೆ’ ಎಂದು  ಅವರು ತಿಳಿಸಿದರು.

18ರಿಂದ 23 ವಯಸ್ಸಿನವರೇ ಹೆಚ್ಚು:
‘ಸುಟ್ಟ ಗಾಯಗಳಿಂದ ಸಾವನ್ನಪ್ಪುತ್ತಿ­ರು­ವವರಲ್ಲಿ 18ರಿಂದ 23 ವರ್ಷ ವಯ­ಸ್ಸಿನ ಮಹಿಳೆಯರ ಸಂಖ್ಯೆಯೇ ಅಧಿಕ. ಸ್ಟೌ  ಸಿಡಿದು ಘಟನೆ ನಡೆದಿದೆ ಎನ್ನು­ತ್ತಾರೆ. ಆದರೆ ಇಲ್ಲಿ ಗಂಡ, ಅತ್ತೆಯೇ ಸ್ಟೌ­­ಗಳು. ಬಟ್ಟೆಗೆ ಬೆಂಕಿ ಬಿದ್ದು ಹೀಗಾ­ಯಿತು ಎಂದು ಸುಳ್ಳು ಹೇಳು­ತ್ತಾರೆ. ಗಾಯಗಳಿಂದ ಸತ್ತ ಮಹಿಳೆಯರ ಅಂಕಿ ಅಂಶ ಸರಿಯಾಗಿದೆ ಎಂದು ಹೇಳು­ವಂತಿಲ್ಲ. ಏಕೆಂದರೆ ಚಿಕಿತ್ಸೆಗಾಗಿ ದಾಖ­ಲಾ­­ದ­ವರು ಪೂರ್ಣ ಗುಣ­ವಾಗುವ ಮುನ್ನವೇ ಒತ್ತಾಯ-­ಪೂರ್ವಕ­ವಾಗಿ ಆಸ್ಪತ್ರೆ­­ಯಿಂದ ಮನೆಗೆ ಹೋಗು­ತ್ತಾರೆ. ಸೋಂಕಿನಿಂದಾಗಿ ಮನೆ­ಯಲ್ಲೇ ಸಾವನ್ನ­ಪ್ಪಿದ ಘಟನೆಗಳಿವೆ’ ಎಂದು ವಿಮೋ­ಚನಾ ಮಹಿಳಾ ಸಂಘಟನೆ ಹೋರಾಟಗಾರ್ತಿ ಡೋನಾ ಫರ್ನಾಂಡಿಸ್‌ ಅವರು ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ದೌರ್ಜನ್ಯದ ಸಂಖ್ಯೆ ಹೆಚ್ಚಾಗುತ್ತಿದೆ. ಸುಟ್ಟ ಗಾಯ­ಗಳಿಂದ ಮಾತ್ರವಲ್ಲ; ಹಿಂಸೆಯನ್ನು ಸಹಿಸಿ­ಕೊಳ್ಳಲಾಗದೆ ವಿಷ ಕುಡಿದು ಸಾವನ್ನಪ್ಪು­ತ್ತಿರುವ  ಮಹಿಳೆಯರ ಸಂಖ್ಯೆಯೂ ಅಧಿಕ­­­ವಾಗಿದೆ. ಆದರೆ, ಎಫ್‌ಐಆರ್‌ ದಾಖಲಾಗುತ್ತಿರುವ ಸಂಖ್ಯೆ ತೀರಾ ಕಡಿಮೆ. ಹೆಣ್ಣು ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ? ಸರ್ಕಾರ ಏಕೆ ಈ ಬಗ್ಗೆ ತಲೆ­ಕೆಡಿಸಿ­ಕೊಳ್ಳುತ್ತಿಲ್ಲ?’ ಎಂದು ಪ್ರಶ್ನಿಸಿದರು. ಈ ವರ್ಷದ ಜೂನ್‌ವರೆಗೆ ಲಭ್ಯ­ವಾಗಿ­­ರುವ ಅಂಕಿ–ಅಂಶಗಳ ಪ್ರಕಾರ ಚಿಕಿತ್ಸೆಗಾಗಿ ದಾಖಲಾದ ಮಹಿಳೆಯರ ಸಂಖ್ಯೆ 420. ಅವರಲ್ಲಿ 263 ಮಂದಿ ಮೃತಪಟ್ಟಿದ್ದಾರೆ.

‘ವರದಕ್ಷಿಣೆ ಪ್ರಕರಣ, ಅನುಮಾನ, ಪರಸ್ತ್ರೀ ವ್ಯಾಮೋಹದಿಂದ ಮನೆಗಳಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಸ್ಟೌ  ಸಿಡಿದು ಗಾಯವಾಗಿದೆ ಎಂದು ಕುಟುಂಬ­­­ದವರ ಒತ್ತಡದಿಂದ ಕೆಲ ಪ್ರಕರಣ­ಗಳು ದಾಖಲಾಗುತ್ತಿವೆ. ಈ ಬಗ್ಗೆ ತನಿಖೆ ನಡೆಸಬೇಕು. ಈಗ ಸೀಮೆ­ಎಣ್ಣೆ ಸ್ಟೌ ಬಳಸುವವರ ಸಂಖ್ಯೆಯೂ ಕಡಿಮೆ. ಗ್ಯಾಸ್‌ ಸಿಲಿಂಡರ್‌ ಸಿಡಿದರೆ ಅದರ ಭೀಕರತೆ ಎಲ್ಲರಿಗೂ ಗೊತ್ತಾಗು­ತ್ತದೆ’ ಎಂದು ಹೋರಾಟಗಾರ್ತಿ ಮಮತಾ ನುಡಿದರು. ‘ಈ ಅಂಕಿ–ಅಂಶ­ಗಳು ವಿಕ್ಟೋರಿಯಾ ಆಸ್ಪತ್ರೆಗೆ ಸಂಬಂಧಿಸಿ­ದವು ಮಾತ್ರ. ರಾಜ್ಯದ ಇನ್ನುಳಿದ ಆಸ್ಪತ್ರೆ­ಗಳಲ್ಲಿ ದಾಖ­ಲಾಗಿ ಮೃತಪಟ್ಟವರು ಹಾಗೂ ಮನೆ­ಯಲ್ಲಿಯೇ ಸಾವನ್ನಪ್ಪಿ­ದವರೂ ಇದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT