ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ಮಸೂದೆಗಳಿಗೆ ಅಂಗೀಕಾರ

ಸಂಸತ್‌ನ ಚಳಿಗಾಲದ ಕಲಾಪಕ್ಕೆ ತೆರೆ
Last Updated 23 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ‘ದಾಖಲೆ’ ಸಂಖ್ಯೆಯ 18 ಮಸೂದೆಗಳಿಗೆ ಅಂಗೀ­ಕಾರ ನೀಡಿದ ಲೋಕಸಭೆಯ ಅಧಿ­ವೇಶನ­ವನ್ನು ಮಂಗಳವಾರ ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು. 22 ದಿನ ನಡೆದ ಚಳಿಗಾಲದ ಅಧಿವೇಶನದ ಕಲಾಪದಲ್ಲಿ ಅಂಗೀಕಾರಗೊಂಡ ಮಸೂದೆ-­ಗಳಲ್ಲಿ ಕಲ್ಲಿದ್ದಲು ಗಣಿ ಮಂಜೂರಾತಿ, ಕಾರ್ಮಿಕ ಕಾಯಿದೆ ತಿದ್ದುಪಡಿ ಮಸೂದೆಗಳೂ ಸೇರಿವೆ.

ಕೊನೆಯ ದಿನ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ­ಗಳು ಮತಾಂತರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಬೇಕು ಎಂದು ಒಕ್ಕೊರಲಿನಿಂದ ಒತ್ತಾ­ಯಿಸಿದವು. ಆಗ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಕಲಾ­ಪ­ವನ್ನು ಮುಂದೂಡಿದರು. ಮಧ್ಯಾ­ಹ್ನದ ನಂತರ ಮತ್ತೆ ಕಲಾಪ ಸೇರು­ತ್ತಿ­ದ್ದಂ­ತೆಯೇ ಸ್ಪೀಕರ್‌ ಅವರು ಲೋಕ­ಸಭೆಯ ಅಧಿವೇಶನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿರುವುದಾಗಿ ಪ್ರಕಟಿಸಿದರು.

ಇದೇ ವೇಳೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ, ಮತಾಂ­ತರ ಕುರಿತು ಪ್ರಧಾನಿಯವರ ಹೇಳಿಕೆಗೆ ಒತ್ತಾಯಿಸುವ ಯತ್ನ ಫಲ ನೀಡಲಿಲ್ಲ. ಖರ್ಗೆ ಅವರು ಮಾತನಾಡಲು ಮುಂದಾಗುತ್ತಿದ್ದಂ­ತೆಯೇ ಸ್ಪೀಕರ್‌ ಅವರು, ‘ಯಾರೊಬ್ಬ­ರಿಗೂ ಮಾತ­ನಾಡಲು ಅವಕಾಶ ಕೊಡುವುದಿಲ್ಲ. ಪ್ರಧಾನ ಮಂತ್ರಿ ಅವರಿಗೂ ಅನುಮತಿ ನೀಡುವುದಿಲ್ಲ’ ಎಂದು ಖಡಕ್ಕಾಗಿ ಹೇಳಿದರು.

ಸ್ಪೀಕರ್‌ ಅವರು ಖರ್ಗೆ ಅವರನ್ನು ಕುರಿತು, ‘ನೀವು ಯಾವೊಂದೂ ಒಳ್ಳೆಯ ಮಾತುಗಳನ್ನು ಆಡುವುದಿಲ್ಲ’ ಎಂದು ತಮಾಷೆಯಾಗಿ ಹೇಳಿದರು. ಆಗ ಖರ್ಗೆ ಅವರು ‘ಹಾಗೇನಿಲ್ಲ. ನಾನು ಒಂದು ಒಳ್ಳೆಯ ವಿಷಯದ ಬಗ್ಗೆಯೇ ಮಾತ­ನಾಡುತ್ತೇನೆ’ ಎಂದು ಹೇಳಿ, ಪ್ರಧಾನಿ­ಯವರು ಹೇಳಿಕೆ ನೀಡಬೇಕು ಎಂಬುದೇ ತಮ್ಮ ಒತ್ತಾಯ ಎಂದರು. ಆಗಲೂ ಸ್ಪೀಕರ್‌ ಅವರು ಅನುಮತಿ ನೀಡಲಿಲ್ಲ.

ನರೇಂದ್ರ ಮೋದಿ ಅವರು ಆಕಾಶ­ವಾಣಿಯಲ್ಲಿ ನೀಡುವ ‘ಮನ್‌ ಕಿ ಬಾತ್‌’ ಕಾರ್ಯಕ್ರಮದ ಬಗ್ಗೆ ಚುಚ್ಚು ಮಾತು­ಗಳನ್ನಾಡಿದ ಕಾಂಗ್ರೆಸ್‌ ಸದಸ್ಯರು, ‘ಪ್ರಧಾನಿ­ಯವರು ಸದನ­ದಲ್ಲಿ ಹೃದಯ­ಪೂರ್ವಕವಾಗಿ ಮಾತನಾಡ­ಬೇಕು’ ಎಂದರು. ಆಗ ಸ್ಪೀಕರ್‌ ಅವರು, ಮಾತ­ನಾಡಲು ಯಾರಿಗೂ ಅನುಮತಿ ನೀಡು­ವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿ­ದರು. ‘ಈ ಅಧಿವೇಶವನದಲ್ಲಿ 18 ಮಸೂದೆಗಳಿಗೆ ಅಂಗೀಕಾರ ನೀಡ­ಲಾಗಿದೆ ಎಂಬುದನ್ನು ತಿಳಿಸಲು ಖುಷಿ­ಯಾಗುತ್ತಿದೆ. ಇಷ್ಟು ಸಂಖ್ಯೆಯ ಮಸೂದೆಗಳಿಗೆ ಅಂಗೀಕಾರ ನೀಡಿ­ರು­ವುದು ಇತ್ತೀಚಿನ ಕೆಲ ವರ್ಷಗಳಲ್ಲಿಯೇ ಮೊದಲು’ ಎಂದರು.

ರಾಜ್ಯಸಭೆ ಕಲಾಪ ಭಂಗ
ನವದೆಹಲಿ (ಐಎಎನ್‌ಎಸ್‌):  ಮರು­ಮತಾಂತರ ಮತ್ತಿತರ ವಿವಾದಗಳ ಕಾರಣಕ್ಕೆ ಸರಿಯಾಗಿ ಕಲಾಪವನ್ನೇ ಕಾಣದ ಹಾಗೂ ಪ್ರಮುಖ ಮಸೂದೆಗಳ ಬಗ್ಗೆ ಚರ್ಚೆಯನ್ನೇ ನಡೆಸದ ರಾಜ್ಯಸಭೆಯ ಅಧಿವೇಶನವನ್ನು ಕೂಡ ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು.
ಕೊನೆಯ ದಿನ ಕೂಡ ಮರುಮತಾಂತರದ ಬಗ್ಗೆ ಪ್ರಧಾನಿಯವರ ಹೇಳಿಕೆಗಾಗಿ ಪ್ರತಿಪಕ್ಷಗಳು ಒಕ್ಕೊರಲಿನಿಂದ ಒತ್ತಾಯಿಸಿ ಪ್ರತಿಭಟನೆ ವ್ಯಕ್ತ­ಪಡಿಸಿ­ದರು. ಹೀಗಾಗಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂಚೆ ಎರಡು ಬಾರಿ ಮುಂದೂಡಲಾಗಿತ್ತು.
‘ಮರುಮತಾಂತರ ವಿಷಯವು ಗಡಿಯಾಚೆಗೂ ಸುದ್ದಿಯಾಗಿದೆ. ಭಾರತ­ದಲ್ಲಿ ಏನು ನಡೆಯುತ್ತಿದೆ ಎಂದು ವಿದೇಶಗಳಲ್ಲಿ ಕೀಳು ದೃಷ್ಟಿಯಲ್ಲಿ ಮಾತ­ನಾಡಲಾಗುತ್ತಿದೆ’ ಎಂದು ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT