ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

183 ಭಾರತೀಯರು ವಾಪಸ್‌

ಕೊಚ್ಚಿಗೆ ಬಂದಿಳಿದ 46 ದಾದಿಯರು
Last Updated 5 ಜುಲೈ 2014, 19:30 IST
ಅಕ್ಷರ ಗಾತ್ರ

ಕೊಚ್ಚಿ (ಪಿಟಿಐ, ಐಎಎನ್‌ಎಸ್‌): ಸಂಘರ್ಷ ಪೀಡಿತ ಇರಾಕ್‌ನಲ್ಲಿ ಸುನ್ನಿ ಉಗ್ರರ ವಶದಲ್ಲಿದ್ದ 46 ದಾದಿಯರು ಸೇರಿ ಒಟ್ಟು 183 ಭಾರತೀ­ಯರು ಶನಿವಾರ ತಾಯ್ನಾಡಿಗೆ ಬಂದಿಳಿದರು. ಇದರೊಂದಿಗೆ ಸುಮಾರು 25 ದಿನಗಳ ಉದ್ವೇಗ, ಅನಿಶ್ಚಿತತೆಗೆ ತೆರೆಬಿತ್ತು.

ಇರಾಕ್‌ನ ಖುರ್ದಿಸ್ತಾನ ಪ್ರಾಂತ್ಯದ ರಾಜಧಾನಿ ಎರ್ಬಿಲ್‌ನಿಂದ ಹೊರಟ ಏರ್‌ ಇಂಡಿಯಾ ವಿಶೇಷ ವಿಮಾನ ಶನಿವಾರ ಬೆಳಿಗ್ಗೆ 11.57ಕ್ಕೆ ಇಲ್ಲಿನ ನಿಲ್ದಾಣದಲ್ಲಿ ಇಳಿಯಿತು. ದಾದಿಯರ ಬಿಡುಗಡೆಗಾಗಿ ಎರಡು ದಿನಗಳ ಕಾಲ ದೆಹಲಿಯಲ್ಲೇ ಮೊಕ್ಕಾಂ ಹೋಡಿದ್ದ ಕೇರಳ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ, ಸಂಪುಟ ಸಹೋದ್ಯೋಗಿಗಳು, ಶಾಸಕರು, ಸಂಸದರು ಮತ್ತು ಸರ್ಕಾರಿ ಅಧಿಕಾರಿಗಳು ದಾದಿಯರನ್ನು ಬರಮಾಡಿ­ಕೊಂಡರು.

ದಾದಿಯರ ಪ್ರತಿ ಕುಟುಂಬದ ತಲಾ ಮೂವರಿಗೆ ವಿಮಾನ ನಿಲ್ದಾಣದೊಳಕ್ಕೆ ಹೋಗಲು ಅವಕಾಶ ಕೊಡಲಾಗಿತ್ತು. ವಿಶೇಷ ವಲಸೆ ಕೌಂಟರ್‌ನ್ನು ತೆರೆಯ­ಲಾಗಿತ್ತು. ದಾದಿಯರು ಬಂದಿಳಿಯು­ತ್ತಿದ್ದಂತೆ ಕುಟುಂಬ ಸದಸ್ಯರು ಅಪ್ಪಿ­--– ಚುಂಬಿಸಿ ಸಮಾಧಾನದ ನಿಟ್ಟುಸಿರು­ಬಿಟ್ಟರು. ಕೆಲವರಿಗೆ ಸಂತಸ­ದಲ್ಲಿ ಕಣ್ಣುಗಳು ಹನಿಗೂಡಿದವು. ಎಷ್ಟೋ ದಿನಗಳ ನಂತರ ಮಕ್ಕಳನ್ನು ಕಂಡ ದಾದಿಯರು ತಮ್ಮ ಕಂದಮ್ಮಗಳನ್ನು ತೋಳ್ತೆಕ್ಕೆಗೆ ತೆಗೆದು­ಕೊಂಡು ಮೈದಡವಿ ಮುತ್ತಿನ ಮಳೆಗರೆದರು.

‘ಎರ್ಬಿಲ್‌ನಲ್ಲಿ ಜೋರು ಗಾಳಿ ಬೀಸುತ್ತಿದೆ ಎಂದು ಒಂದು ಹಂತದಲ್ಲಿ ವಿಮಾನ ಇಳಿಯಲು ಅವಕಾಶ ನೀಡ­ಲಾಗದು ಎನ್ನಲಾಗಿತ್ತು. ಆಗ ನಮಗೆ ಎಲ್ಲ ಆಶಾಭಾವನೆಯೂ ಹೊರಟು ಹೋಗಿತ್ತು’ ಎಂದು ಉಮ್ಮನ್‌ ಚಾಂಡಿ ಈ ಸಂದರ್ಭದಲ್ಲಿ ತಿಳಿಸಿದರು.ದಾದಿಯರಿಗೆ ಅವರವರ ಊರಿಗೆ ತೆರಳಲು ಕೇರಳ ಸರ್ಕಾರವು ಪ್ರತ್ಯೇಕ ವ್ಯವಸ್ಥೆ ಮಾಡಿತ್ತು.

ಎರ್ಬಿಲ್‌ನಿಂದ ಶನಿವಾರ ಬೆಳಗಿನ ಜಾವ ಹೊರಟ ವಿಮಾನ ಇಲ್ಲಿಗೆ ಬರುವ ಮುನ್ನ ಇಂಧನ ತುಂಬಿಸಿ­ಕೊ­ಳ್ಳಲು ಹಾಗೂ ಪ್ರಯಾಣಿಕರ ಆಹಾರ­ಕ್ಕಾಗಿ ಕೆಲ ಹೊತ್ತು ಮುಂಬೈ­ನಲ್ಲಿ ಕೆಲ ಹೊತ್ತು ನಿಲುಗಡೆಯಾಗಿತ್ತು.ನಂತರ ವಿಮಾನವು ಹೈದರಾ­ಬಾದ್‌ಗೆ ತೆರಳಿತು. ಅಲ್ಲಿ ತೆಲಂಗಾ­ಣದ 76 ಜನ ಮತ್ತು ಚೆನ್ನೈನ ನಾಲ್ವರು ಇಳಿದರು.

ದಾದಿಯರಿಗೆ ಕಾದಿರುವ ಉದ್ಯೋಗ
ಕೊಚ್ಚಿ (ಪಿಟಿಐ): ಅರಬ್‌ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) ನೆಲೆಸಿರುವ ಭಾರತದ ಉದ್ಯಮಿ ಬಿ.ಆರ್‌.ಶೆಟ್ಟಿ ಅವರು ತಮ್ಮ ಖಾಸಗಿ ಆಸ್ಪತ್ರೆಗಳಲ್ಲಿ ಉದ್ಯೋಗ ನೀಡುವುದಾಗಿ ಪ್ರಕಟಿಸಿದ್ದಾರೆ. ಈ ಕುರಿತು ಕೇರಳದ ದಿನಪತ್ರಿಕೆ­ಗಳಲ್ಲಿ ಅವರು ಜಾಹೀರಾತುಗಳನ್ನು ನೀಡಿದ್ದಾರೆ. ಶೆಟ್ಟಿ ಅವರು ಬಹು­ರಾಷ್ಟ್ರೀಯ ಕಂಪೆನಿಯು ಯುಎಇ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳನ್ನು ನಡೆಸುತ್ತಿದೆ.

ಇಂದು 200 ಜನ ವಾಪಸ್‌...
ನವದೆಹಲಿ (ಪಿಟಿಐ): ಇರಾಕ್‌ನ ಸಂಘರ್ಷ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಇನ್ನೂ 600 ಭಾರತೀಯರು ಮುಂದಿನ ಎರಡು ದಿನಗಳೊಳಗೆ ವಾಪಸ್‌ ಆಗಲಿದ್ದಾರೆ. ಅವರಲ್ಲಿ 200 ಜನರು ಇರಾಕಿ ಏರ್‌ವೇಸ್‌ನ ವಿಶೇಷ ವಿಮಾನದಲ್ಲಿ ನಜಾಫ್‌ನಿಂದ ಶನಿವಾರ ರಾತ್ರಿಯೇ ದೆಹಲಿಗೆ ಹೊರಟಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT