ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ವರ್ಷ ಕಾದರೂ ಕಾಯಂ ಆಗದ ಹತಾಶೆ

ಕೆಎಸ್‌ಆರ್‌ಟಿಸಿ ಕಚೇರಿ ಎದುರು ಆತ್ಮಹತ್ಯೆಗೆ ಯತ್ನಿಸಿದ ಬಸ್‌ ಚಾಲಕ
Last Updated 30 ನವೆಂಬರ್ 2015, 19:36 IST
ಅಕ್ಷರ ಗಾತ್ರ

ಬೆಂಗಳೂರು: ಕೆಲಸ ಕಾಯಂಗೆ ಆಗ್ರಹಿಸಿ ಬಸ್ ಚಾಲಕರೊಬ್ಬರು, ಶಾಂತಿನಗರದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಕೇಂದ್ರ ಕಚೇರಿ ಎದುರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆಯಿತು.

ಶ್ರೀರಾಮ (51) ಆತ್ಮಹತ್ಯೆಗೆ ಯತ್ನಿಸಿದವರು. ಮಂಡ್ಯ ಜಿಲ್ಲೆ ಮಳವಳ್ಳಿಯವರಾದ ಅವರು, ಮೈಸೂರಿನ ಬಿನ್ನಿಮಂಟಪ ಡಿಪೊದಲ್ಲಿ 19 ವರ್ಷದಿಂದ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಆದರೆ ಕೆಲಸ ಮಾತ್ರ ಕಾಯಂ ಆಗಿರಲಿಲ್ಲ.

ಬೆಳಿಗ್ಗೆ 11 ಗಂಟೆ ಸುಮಾರಿಗೆ ಕೆಎಸ್‌ಆರ್‌ಟಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು ನಂತರ, ಕ್ಯಾನ್‌ನಲ್ಲಿ ತಂದಿದ್ದ ಸೀಮೆಎಣ್ಣೆಯನ್ನು ಏಕಾಏಕಿ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾದರು. ಆಗ ಸ್ಥಳದಲ್ಲಿದ್ದ ಕೆಎಸ್‌ಆರ್‌ಟಿಸಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಕೂಡಲೇ ಅವರನ್ನು ತಡೆದರು.

‘ಶ್ರೀರಾಮ ಅವರನ್ನು ಆತ್ಮಹತ್ಯೆ ಯತ್ನ (ಐಪಿಸಿ 309) ಆರೋಪದಡಿ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು’ ಎಂದು ವಿಲ್ಸನ್‌ ಗಾರ್ಡನ್ ಪೊಲೀಸರು ತಿಳಿಸಿದರು.

ಆತ್ಮಹತ್ಯೆ ಕುರಿತು ಪತ್ರ: ‘ಕೆಲಸ ಕಾಯಂಗೊಳಿಸಿಲ್ಲ ಎಂಬ ಕಾರಣಕ್ಕಾಗಿ, ಕೆಎಸ್‌ಆರ್‌ಟಿಸಿ ಕಚೇರಿ ಎದುರು  ನ. 30ರಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ರ ಬರೆದಿಟ್ಟು ಪತಿ ನಾಪತ್ತೆಯಾಗಿದ್ದಾರೆ. ಮೂರು ದಿನದಿಂದ ಮನೆಗೆ ಬಂದಿಲ್ಲ. ಮೊಬೈಲ್‌ ಸ್ವಿಚ್ ಆಫ್ ಆಗಿದ್ದು, ಕೆಲಸಕ್ಕೂ ಹೋಗಿಲ್ಲ. ಅವರನ್ನು ಹುಡುಕಿಕೊಡಿ’ ಎಂದು ಶ್ರೀರಾಮ್‌ ಅವರ ಪತ್ನಿ ಜಯಲಕ್ಷ್ಮಿ, ನಗರ ಪೊಲೀಸ್
ಕಮಿಷನರ್‌ಗೆ ನ.25ರಂದು ದೂರು ನೀಡಿದ್ದರು.

‘1995ರಲ್ಲಿ ಕೆಎಸ್ಆರ್‌ಟಿಸಿ ಮೈಸೂರು ನಗರ ವಿಭಾಗದಲ್ಲಿ ತಾತ್ಕಾಲಿಕ ಚಾಲಕ ಹುದ್ದೆಗೆ ಪತಿ ಸೇರಿದ್ದರು. 2003ರಲ್ಲಿ ಅವರೊಂದಿಗೆ 40ಕ್ಕೂ ಹೆಚ್ಚು ಚಾಲಕರು ಹುದ್ದೆ ಕಾಯಂಗೆ ಅರ್ಜಿ ಸಲ್ಲಿಸಿದ್ದರು. ಆಗ ಸಾರಿಗೆ ಅಧಿಕಾರಿಗಳು  ₹ 20 ಸಾವಿರ ಲಂಚ ಕೇಳಿದ್ದರು’ ಎಂದು ದೂರಿದ್ದರು.

‘ಲಂಚ ಕೊಡಲು ನಿರಾಕರಿಸಿದೆವು. ಆಗ, ಕೆಲಸಕ್ಕೆ ಸೇರಿಕೊಳ್ಳುವಾಗ ನೀವು ಸಲ್ಲಿಸಿರುವ ಶಾಲಾ ವರ್ಗಾವಣೆ ಪತ್ರದಲ್ಲಿ ಲೋಪವಿದೆ ಎಂದು ಹೇಳಿ, ಪತಿಯನ್ನು ಹೊರತುಪಡಿಸಿ ಉಳಿದವರನ್ನು ಕಾಯಂಗೊಳಿಸಿದರು’ ಎಂದು ಹೇಳಿದ್ದರು.

‘ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಿ ವರ್ಗಾವಣೆ ಪತ್ರದ ಲೋಪ ಸರಿಪಡಿಸಿ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ. ಅಲ್ಲದೆ, ಈ ಕುರಿತು ಇಲಾಖೆ ವ್ಯವಸ್ಥಾಪಕ ನಿರ್ದೇಶಕರಿಗೂ ಪತ್ರ ಬರೆದೆವು. ಅವರಿಂದಲೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ’ ಎಂದು ದೂರಿನಲ್ಲಿ ತಿಳಿಸಿದ್ದರು.

‘ಇದು ಒತ್ತಡ ತಂತ್ರವಷ್ಟೇ’
‘ಶ್ರೀರಾಮ ಅವರು ಸಲ್ಲಿಸಿದ್ದ ವರ್ಗಾವಣೆ ಪತ್ರ ನಕಲಿಯಾಗಿತ್ತು. ಈ ಕುರಿತು ಅವರಿಗೆ ನೋಟಿಸ್ ನೀಡಿದಾಗ ಮತ್ತೊಂದು ವರ್ಗಾವಣೆ ಪತ್ರ ಸಲ್ಲಿಸಿದ್ದರು. ಆದರೆ, ಆ ಪತ್ರವೂ ನಕಲಿ ಎಂದು ದೂರು ಬಂದಿತ್ತು. ಈ ಕುರಿತು ಇಲಾಖಾ ಮಟ್ಟದಲ್ಲಿ ವಿಚಾರಣಾ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ.

‘ಈ ಮಧ್ಯೆ  ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದರು. ಈಗ ಅದನ್ನು ನಿಜ ಮಾಡಲು ಯತ್ನಿಸುವ ಮೂಲಕ ಒತ್ತಡ ಹೇರಲು ಮುಂದಾಗಿದ್ದಾರಲ್ಲದೆ, ಅಧಿಕಾರಿಗಳು ಲಂಚ ಕೇಳಿರುವ ಕುರಿತು ಆರೋಪಿಸಿದ್ದಾರೆ. ಆ ಕುರಿತು ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದೆ.

‘ವರ್ಗಾವಣೆ ಪತ್ರ ನಕಲಿಯಲ್ಲ; ಲಂಚ ನೀಡದ್ದಕ್ಕೆ ಹೀಗಾಗಿದೆ’
‘ಲಂಚ ನೀಡದ ಕಾರಣಕ್ಕೆ ಶ್ರೀರಾಮನಿಗೆ ಹೀಗಾಗಿದೆ. ಆತ ಸಲ್ಲಿಸಿದ್ದ ವರ್ಗಾವಣೆ ಪತ್ರ ನಕಲಿಯಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಡಿಡಿಪಿಐ) 2004ರಲ್ಲಿ  ವರದಿ ನೀಡಿದ್ದರು. ಆದರೂ ಅವರನ್ನು ಕಾಯಂಗೊಳಿಸಲಿಲ್ಲ’ ಎಂದು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಯುನೈಟೆಡ್ ಎಂಪ್ಲಾಯಿಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಜಾನ್‌ ಡಿಸೋಜಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ತರಬೇತಿ ಚಾಲಕನಾಗೇ ಇದ್ದ ಶ್ರೀರಾಮನನ್ನು ಕಾಯಂಗೊಳಿಸಿದರೆ ಒಮ್ಮೆಲೆ ಒಂಬತ್ತು ವರ್ಷದಷ್ಟು ಸಂಬಳ ನೀಡಬೇಕಾಗುತ್ತದೆ ಎಂದು ಹೀಗೆ ಮಾಡಲಾಗಿದೆ. ಪ್ರಕರಣದಲ್ಲಿ ಅಧಿಕಾರಿಗಳ ಲೋಪ ಎದ್ದು ಕಾಣುತ್ತದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT