ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ಹಳ್ಳಿಗಳಲ್ಲಿ ನೀರಿನ ಸಮಸ್ಯೆ

Last Updated 23 ಏಪ್ರಿಲ್ 2014, 10:11 IST
ಅಕ್ಷರ ಗಾತ್ರ

ಮುಳಬಾಗಲು: ನೀರಿಗಾಗಿ ನಾವು ಎಲ್ಲ ಕೆಲಸ ಬಿಟ್ಟು ಕೊಳವೆಬಾವಿ ಮುಂದೆ ನಿಂತುಕೊಂಡಿರಬೇಕು. ಬೇರೆ ಕೆಲಸಕ್ಕೆ ಹೋಗಿ ಯಾಮಾರಿದರೆ ಆವತ್ತು ನೀರು ಸಿಗೋದಿಲ್ಲ. ದಿನವಿಡೀ ಕಾದು ನಿಂತರೂ ಸಿಗೋದು ಮೂರ್ನಾಲ್ಕು ಬಿಂದಿಗೆ ಅಷ್ಟೆ.... – ತಾಲ್ಲೂಕಿನ ವಿ.ಗುಟ್ಟಹಳ್ಳಿ ಹೊರ ವಲಯದ ರಸ್ತೆ ಪಕ್ಕ ಮಹಿಳೆಯರು, ಬಾಲಕರು ಸುಡು ಬಿಸಿಲಲ್ಲಿ ನಿಂತುಕೊಂಡೇ ಈ ಮಾತುಗಳನ್ನು ಸಂಕಟದಿಂದ ಹೇಳಿದರು.

ಕೊಳವೆಬಾವಿಯಲ್ಲಿ ನೀರು ಕಡಿಮೆ­ಯಾಗಿಬಿಟ್ಟಿದೆ. ಮೊದಲು ಒಂದೇ ಸಮನೆ ನಿಲ್ಲದೆ ಬರುತ್ತಿದ್ದ ನೀರು ಈಗ ಸರಿಯಾಗಿ ಬರುತ್ತಿಲ್ಲ. ಯಾರಿಗೆ ಎಷ್ಟು ಬಿಂದಿಗೆ ನೀರು ಸಿಗುತ್ತೆ ಅನ್ನೋ ಗ್ಯಾರಂಟಿಯೇ ಇಲ್ಲ ಎಂದು ಬಾಲಕ­ನೊಬ್ಬ ಹೇಳಿ ಮರದಡಿಗೆ ತೆರಳಿದ.

ಕೋಲಾರ ಮುಳಬಾಗಲು ರಸ್ತೆಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಉತ್ತಮ ರಸ್ತೆ ಸೌಕರ್ಯವೂ ಇಲ್ಲದ ಈ ಗ್ರಾಮದಲ್ಲಿ ಇರುವುದು ಕೇವಲ ಎರಡು ಕೊಳವೆಬಾವಿಗಳಷ್ಟೆ. ಗ್ರಾಮದ ದಕ್ಷಿಣ ದಿಕ್ಕಿನಲ್ಲಿರುವ ತಗ್ಗಿನ ಭಾಗದಲ್ಲಿ ಒಂದು ಕೊಳವೆಬಾವಿ ಇದ್ದರೆ, ಉತ್ತರ ದಿಕ್ಕಿನಲ್ಲಿ ಮತ್ತೊಂದು ಕೊಳವೆಬಾವಿ ಇದೆ. 300 ಮನೆಗಳಿರುವ ಗ್ರಾಮದಲ್ಲಿ ಸುಮಾರು ಒಂದು ಸಾವಿರ ಜನಸಂಖ್ಯೆ ಇದೆ. ಎಲ್ಲ ಮನೆಗೂ ಎರಡು ಕೊಳವೆಬಾವಿಗಳ ನೀರು ಸಾಕಾಗುವುದಿಲ್ಲ. ಹೀಗಾಗಿ ಗ್ರಾಮದ ಕೆಲವು ರೈತರ ಹೊಲಗಳಲ್ಲಿ­ರುವ ಖಾಸಗಿ ಕೊಳವೆ­ಬಾವಿಯಿಂದಲೂ ಜನ ಬೇಡಿ ನೀರನ್ನು ಪಡೆಯುವ ಸನ್ನಿವೇಶವೂ ಇಲ್ಲಿದೆ.

ವಿದ್ಯುತ್‌ ಸಮಸ್ಯೆ: ಕೊಳವೆ ಬಾವಿಗಳಲ್ಲಿರುವ ಅಲ್ಪಸ್ವಲ್ಪ ನೀರನ್ನು ಪಡೆಯಲು ಜನ ವಿದ್ಯುತ್‌ಗಾಗಿ ಕಾಯು­ವುದು ಅನಿವಾರ್ಯ. ವಿದ್ಯುತ್‌ ಇದ್ದಾಗ ಮಾತ್ರ ನೀರು ಪೂರೈಕೆಯಾಗುವುದರಿಂದ ಸದಾ ಕಾಲ ಜನ ಕೊಳವೆಬಾವಿಗಳ ಕಡೆಗೆ ಕಣ್ಣು ನೆಟ್ಟಿರಬೇಕಾಗುತ್ತದೆ. ನಡು ಮಧ್ಯಾಹ್ನದ ಬಿಸಿಲು, ಕತ್ತಲ ಸಂಜೆ, ರಾತ್ರಿ, ಮುಂಜಾನೆ, ಹೀಗೆ ಸಮಯದ ಪರಿವೆಯೇ ಇಲ್ಲದೆ ನೀರಿಗಾಗಿ ಕಾಯುವುದು ಅನಿವಾರ್ಯವಾಗಿದೆ.

ಅದೇ ರೀತಿ, ರಾಮಸಂದ್ರ ಗ್ರಾಮ­ದಲ್ಲಿ ಮಿನಿ ಟ್ಯಾಂಕ್‌ಗಳ ಮೂಲಕ ನೀರನ್ನು ಪೂರೈಸಲಾಗುತ್ತಿದೆ. ಅಲ್ಲಿಯೂ ವಿದ್ಯುತ್‌ ಸರಬರಾಜಿನ ಸಮಯ ಆಧರಿಸಿಯೇ ನೀರಿನ ಪೂರೈಕೆ ಸಮಯ ನಿಗದಿಯಾಗುತ್ತದೆ.

ಎಲ್ಲೆಡೆ ಸಮಸ್ಯೆ: ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ನಿಂತರೂ ನೀರಿನ ಸಮಸ್ಯೆಯ ಬಗ್ಗೆ ಜನರ ಗೊಣ­ಗಾಟ ಸಾಮಾನ್ಯ ಸಂಗತಿ­ಯಾಗಿದೆ. ಕಸಬಾ ಹೋಬಳಿ, ತಾಯಲೂರು, ಬೈರ­ಕೂರು, ದುಗ್ಗಸಂದ್ರ, ಆವಣಿ ಹೋಬಳಿಯ ಎಲ್ಲ ಗ್ರಾಮಗಳಲ್ಲೂ ನೀರಿನ ಸಮಸ್ಯೆ ಇದೆ.

ಪಟ್ಟಣದಲ್ಲೂ ಇದೇ ಕಥೆ: ಗ್ರಾಮಾಂತರ ಪ್ರದೇಶಗಳಷ್ಟೇ ಅಲ್ಲದೆ, ಪಟ್ಟಣ ಪ್ರದೇಶದಲ್ಲೂ ನೀರಿನ ಸಮಸ್ಯೆ ಹೆಚ್ಚಾಗಿದೆ. ಪುರಸಭೆ ವತಿಯಿಂದ ಮೂರು ದಿನಕ್ಕೊಮ್ಮೆ ಉಚಿತವಾಗಿ ನೀರನ್ನು ಪೂರೈಸಿದರೂ, ನಮಗೆ ಬೇಕಾಗುವಷ್ಟು ನೀರು ಸಿಗುತ್ತಿಲ್ಲ ಎನ್ನುತ್ತಾರೆ ನೂಗಲಬಂಡೆ ನಿವಾಸಿಗಳು.

ಭದ್ರತಾ ಯೋಜನೆ: ರಾಷ್ಟ್ರೀಯ ಪ್ರಾಯೋಗಿಕ ಕುಡಿಯುವ ನೀರಿನ ಭದ್ರತಾ ಯೋಜನೆಗಾಗಿ ಆಯ್ಕೆ­ಯಾಗಿರುವ ದೇಶದ 50 ಬ್ಲಾಕ್‌­ಗಳಲ್ಲಿ ಮುಳಬಾಗಲು ತಾಲ್ಲೂಕೂ ಸೇರಿದೆ. ನೀರಿನ ಸಮರ್ಪಕ ನಿರ್ವಹಣೆ, ಪೂರೈಕೆ ಸಲುವಾಗಿ ಹಲವು ಪ್ರಯತ್ನ– ಪ್ರಯೋಗಗಳೂ ನಡೆಯುತ್ತಿವೆ. ಆದರೆ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ ತಾಲ್ಲೂಕು ಆಡಳಿತಕ್ಕೆ ದೊಡ್ಡ ಸವಾಲಾಗಿದೆ.

ಪರಿಹಾರಕ್ಕೆ ಯತ್ನ
15 ಹಳ್ಳಿಗಳಲ್ಲಿ ಟ್ಯಾಂಕರ್‌ ಮೂಲಕ ನೀರನ್ನು ಪೂರೈಸಲಾಗುತ್ತಿದೆ. 4 ಹಳ್ಳಿಗೆ ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಎಲ್ಲ ಹೋಬಳಿಗಳಲ್ಲೂ ನೀರಿನ ಸಮಸ್ಯೆ ಕಂಡು ಬಂದಿದ್ದು, ಸಾಧ್ಯವಾದಷ್ಟೂ ಮಟ್ಟಿಗೆ ಸಮಸ್ಯೆ ಪರಿಹರಿಸಲು ಯತ್ನಿಸಲಾಗುತ್ತಿದೆ.
–ಅರುಣ್‌ಕುಮಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT