ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1965ರ ಯುದ್ಧದ ಸುವರ್ಣ ಮಹೋತ್ಸವ

ಸುದ್ದಿ ಹಿನ್ನೆಲೆ
Last Updated 30 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಪಾಕಿಸ್ತಾನ ಜತೆಗೆ 1965ರಲ್ಲಿ ನಡೆದಿದ್ದ ಯುದ್ಧದ ವಿಜಯೋತ್ಸವ ಆಚರಣೆಗೆ ಭಾರತ ಚಾಲನೆ ನೀಡಿದೆ. ಪಾಕಿಸ್ತಾನದ ಹಾಜಿಪೀರ್ ಪಾಸ್ ಪ್ರದೇಶವನ್ನು ವಶಪಡಿಸಿಕೊಂಡ ದಿನವಾದ ಆಗಸ್ಟ್ 28ರಂದು ‘ವಿಜಯ ದಿವಸ್’ ಆಚರಣೆಗೆ ಚಾಲನೆ ನೀಡಲಾಗಿದೆ.

ಸೆಪ್ಟೆಂಬರ್ 20ರಂದು ದೆಹಲಿಯ ರಾಜಪಥ್‌ದಲ್ಲಿ ವಿಜಯೋತ್ಸವ  ಆಚರಿಸಲು ನಿರ್ಧರಿಸಲಾಗಿದೆ.  ಸೇನೆಯು ತನ್ನ ಶಕ್ತಿ ಸಾಮರ್ಥ್ಯವನ್ನೆಲ್ಲ ಪ್ರದರ್ಶಿಸಲಿದೆ. ವಿಜಯೋತ್ಸವ ಆಚರಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಅನೇಕರು ಬೆಂಬಲಿಸಿದ್ದರೂ, ಇದೊಂದು ಕೆಟ್ಟ ಅಭಿರುಚಿಯ ನಿರ್ಧಾರ ಎಂದೂ ಕೆಲವರು ಟೀಕಿಸಿದ್ದಾರೆ.

17 ದಿನಗಳ ಯುದ್ಧ: ಸೆಪ್ಟೆಂಬರ್ 6ರಿಂದ 23ರ ವರೆಗೆ ಒಟ್ಟು 17 ದಿನಗಳ ಕಾಲ  ಈ ಯುದ್ಧ ನಡೆದಿತ್ತು.  ಭಾರತ ಮತ್ತು ಪಾಕಿಸ್ತಾನದ  8 ಸಾವಿರಕ್ಕೂ ಹೆಚ್ಚು ಸೈನಿಕರು   ಹತರಾಗಿದ್ದರು. ಭಾರತದ ಸೈನಿಕರ ಸಾವಿನ ಸಂಖ್ಯೆ  3 ಸಾವಿರದಷ್ಟಿತ್ತು. ಜಾಗತಿಕ ದ್ವಿತೀಯ ಮಹಾಯುದ್ಧದ ನಂತರ ನಡೆದ ಸೇನಾ ಟ್ಯಾಂಕ್‌ಗಳ ಅತಿದೊಡ್ಡ ಕದನವೂ ಇದಾಗಿತ್ತು. ಅಮೆರಿಕ ಮತ್ತು ಅಂದಿನ ಸೋವಿಯತ್ ಒಕ್ಕೂಟದ ಮಧ್ಯ ಪ್ರವೇಶದ ಫಲವಾಗಿ ಕದನ ವಿರಾಮ ಘೋಷಿಸಲಾಗಿತ್ತು.

‘ಡ್ರಾ’ದಲ್ಲಿ ಅಂತ್ಯ: ಈ ಯುದ್ಧದಲ್ಲಿ ಜಯ ತಮ್ಮದೇ ಎಂದು ಭಾರತ ಮತ್ತು ಪಾಕಿಸ್ತಾನಗಳು ಘೋಷಿಸಿಕೊಂಡಿದ್ದವು. ಆದರೆ, ಅದೊಂದು ಸೋಲು - ಗೆಲುವಿನಲ್ಲಿ ಕೊನೆಗೊಳ್ಳದ ‘ಡ್ರಾ ಸಮರ’ವಾಗಿತ್ತು ಎಂದು ಯುದ್ಧದ ಸಮಯದಲ್ಲಿ ಪಾಕಿಸ್ತಾನದಲ್ಲಿ ಭಾರತದ ಹೈಕಮಿಷನರ್ ಆಗಿದ್ದ ಕೆ. ಎಸ್. ಬಾಜಪೈ ಅವರು ವಿಶ್ಲೇಷಿಸಿದ್ದಾರೆ.

ವಿಜಯೋತ್ಸವ ಆಚರಣೆಗಿಂತ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಯುದ್ಧದ ನಂತರ ಪಾಕಿಸ್ತಾನವು ಪ್ರತಿ ವರ್ಷ ಸೆಪ್ಟೆಂಬರ್ 6ರಂದು `‘ಪಾಕಿಸ್ತಾನದ ರಕ್ಷಣಾ ದಿನಾಚರಣೆ' ಎಂದು ಆಚರಿಸುತ್ತ ಬಂದಿದೆ.  ಈಗ ಕೇಂದ್ರ ಸರ್ಕಾರವೂ ಈ ಸಮರದ ಸುವರ್ಣ ಮಹೋತ್ಸವ ಆಚರಣೆಗೆ ಚಾಲನೆ ನೀಡಿದೆ.

ಚಾಲನೆ: ಪಾಕಿಸ್ತಾನವು ತನ್ನ 30 ಸಾವಿರದಷ್ಟು ಸೈನಿಕರನ್ನು ಜಮ್ಮು - ಕಾಶ್ಮೀರಕ್ಕೆ ನುಗ್ಗಿಸಲು ಯತ್ನಿಸಿದಾಗ ಈ ಯುದ್ಧಕ್ಕೆ ಚಾಲನೆ ದೊರೆಯಿತು.  ಇದಕ್ಕೆ ಪ್ರತೀಕಾರಾರ್ಥವಾಗಿ ಭಾರತವೂ ಪಾಕಿಸ್ತಾನದ ಗಡಿ ಪ್ರದೇಶದೊಳಗೆ  ತನ್ನ ಸೇನೆಯನ್ನು ನುಗ್ಗಿಸಿ ಮುತ್ತಿಗೆ ಹಾಕಿತು. ವೆಸ್ಟರ್ನ್ ಫ್ರಂಟ್ ಪ್ರದೇಶದಲ್ಲಿ ಈ ಸಮರ ನಡೆದಿತ್ತು.  ಭಾರತದ ಒಂದು ಲಕ್ಷಕ್ಕೂ ಹೆಚ್ಚು ಸೈನಿಕರು, ಪಾಕಿಸ್ತಾನದ 60 ಸಾವಿರದಷ್ಟು ಸೈನಿಕರ ವಿರುದ್ಧ ಮುಗಿ ಬಿದ್ದಿದ್ದರು.

ಬ್ರಿಟಿಷರು ದೇಶವನ್ನು ವಿಭಜಿಸಿದಾಗ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪೂರ್ವ ಪಾಕಿಸ್ತಾನ (ಸದ್ಯದ ಬಾಂಗ್ಲಾದೇಶ) ಮತ್ತು ಪಶ್ಚಿಮ ಪಾಕಿಸ್ತಾನ, ಇವುಗಳ  ಮಧ್ಯೆ ಭಾರತ ದೇಶ ಅಸ್ತಿತ್ವಕ್ಕೆ ಬಂದಿದ್ದವು. ಮುಸ್ಲಿಮರು ಬಹುಸಂಖ್ಯಾತರಾಗಿರುವ ಕಾಶ್ಮೀರದ ಭೂಭಾಗವೂ ತನಗೇ ಸೇರಬೇಕು ಎಂದು ಪಾಕಿಸ್ತಾನವು ಆರಂಭದಿಂದಲೂ ತಗಾದೆ ಆರಂಭಿಸಿತ್ತು. ಈ ಯುದ್ಧದಲ್ಲಿ ಭಾರತ ಅಥವಾ ಪಾಕಿಸ್ತಾನಕ್ಕೆ ಗೆಲುವು ಸಿಕ್ಕಿರಲಿಲ್ಲ. ವಿಶ್ವಸಂಸ್ಥೆಯ ಮಧ್ಯಸ್ಥಿಕೆಯ ಕಾರಣಕ್ಕೆ ಕದನ ವಿರಾಮ ಘೋಷಿಸಲಾಗಿತ್ತು.

ಯುದ್ಧದ ವಿವರ: ಪಾಕಿಸ್ತಾನವು 1965 ಜನವರಿ - ಏಪ್ರಿಲ್ ಅವಧಿಯಲ್ಲಿ ಭಾರತದ ಸೇನೆಯ ಸಾಮರ್ಥ್ಯ ಪರೀಕ್ಷಿಸಲು ರಣ್ ಆಫ್ ಕಛ್ ಪ್ರದೇಶದಲ್ಲಿ `‘ಆಪರೇಷನ್ ಡೆಸರ್ಟ್ ಹಾವ್ಕ್‌’ ಹೆಸರಿನ ಸೇನಾ ಕಾರ್ಯಾಚರಣೆ ನಡೆಸಿತು. ಇದಕ್ಕೆ ಭಾರತದ ಭೂಸೇನೆ ಪ್ರತ್ಯುತ್ತರ ನೀಡಿದರೂ ವಾಯುಪಡೆಯ ನೆರವು ಪಡೆದಿರಲಿಲ್ಲ.

ಆಗಸ್ಟ 5ರಂದು ಪಾಕಿಸ್ತಾನವು ತನ್ನ ಸೈನಿಕರಿಂದ ತರಬೇತಿ ಪಡೆದ ಅರೆ ಸೇನಾಪಡೆ (ರಜಾಕಾರರು)  ಮತ್ತು ಧರ್ಮಯುದ್ಧದಲ್ಲಿ ತೊಡಗಿಕೊಳ್ಳುವ ಮುಜಾಹಿದೀನರು  ಸೇರಿದಂತೆ 33 ಸಾವಿರದಷ್ಟು ಸೈನಿಕರನ್ನು ಒಳನುಗ್ಗಿಸಿತು. ಇದಕ್ಕೆ ‘ಆಪರೇಷನ್ ಗಿಬ್ರಾಲ್ಟರ್’ ಎಂದು ಹೆಸರಿಡಲಾಗಿತ್ತು.

ಕಾಶ್ಮೀರದ ಜನರು ಬಂಡು ಏಳುವುದರಿಂದ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ತನ್ನ ಕೆಲಸ ಸುಲಭವಾಗಲಿದೆ ಎಂದು ಪಾಕಿಸ್ತಾನ ಎಣಿಕೆ ಹಾಕಿತ್ತು. ಕಾಶ್ಮೀರದ ಜನರು ಬಂಡೇಳದೆ ಹೋದಾಗ ಪಾಕಿಸ್ತಾನಕ್ಕೆ ತೀವ್ರ  ಹಿನ್ನಡೆಯಾಗಿತ್ತು. ಭಾರತದ ಸೇನೆ ಗಡಿಯಲ್ಲಿನ ನಿಯಂತ್ರಣ ರೇಖೆಗುಂಟ ಪ್ರತಿ ದಾಳಿ ಆರಂಭಿಸಿತು. ಸೆಪ್ಟೆಂಬರ್ 1ರಂದು ಪೂರ್ಣ ಪ್ರಮಾಣದ ಯುದ್ಧ ಆರಂಭಗೊಂಡಿತ್ತು. 

ಸೆಪ್ಟೆಂಬರ್ 6: ಭಾರತವು ತನ್ನ ಪ್ರತಿ ದಾಳಿ ತೀವ್ರಗೊಳಿಸಿತು. ಅಖ್ನೂರ್ ಮೇಲಿನ ಪಾಕ್ ಒತ್ತಡದ ತೀವ್ರತೆ ತಗ್ಗಿಸಲು ಭಾರತದ ಸೇನೆ ಲಾಹೋರ್ ಮತ್ತು ಸಿಯಾಲಕೋಟ್ ವಲಯದಲ್ಲಿ ದಾಳಿ ಕೇಂದ್ರೀಕರಿಸಿತು. ನಂತರದ ದಿನಗಳಲ್ಲಿ ಪಾಕಿಸ್ತಾನವು ಖೇಮ್ ಕರಣ್ ಪ್ರದೇಶದಲ್ಲಿ ತನ್ನ ದಾಳಿ ಕೇಂದ್ರೀಕರಿಸಿತ್ತು. ಭಾರತದ ಸೇನೆಯು ಪಾಕ್ ಸೈನಿಕರ ಮುನ್ನಡೆಯನ್ನು ತಡೆಯಲು ಶ್ರಮಿಸಿತು. ಅಸಲ್ ಅಟ್ಟರ್ ಪ್ರದೇಶದಲ್ಲಿ ಭಾರತವು ಪಾಕಿಸ್ತಾನದ ಶಸ್ತ್ರಾಸ್ತ್ರ ವಿಭಾಗವನ್ನು ನಾಶಪಡಿಸಿತು. ಎರಡೂ ದೇಶಗಳು ಕೆಲ ವಲಯಗಳನ್ನು ವಶಪಡಿಸಿಕೊಂಡರೆ, ಇತರೆಡೆ ವೈರಿ ಪಡೆಗಳಿಗೆ ಬಿಟ್ಟು ಕೊಡಬೇಕಾಯಿತು.

ಸೆಪ್ಟೆಂಬರ್ 22-23: ಬೇಷರತ್ತಾಗಿ ಎರಡೂ ದೇಶಗಳು ಕದನ ವಿರಾಮ ಘೋಷಿಸಬೇಕು ಎಂದು ವಿಶ್ವಸಂಸ್ಥೆಯು ಅವಿರೋಧವಾಗಿ ನಿರ್ಣಯ ಅಂಗೀಕರಿಸಿತು. 

ಜನವರಿ 10, 1966: ತಾಷ್ಮೆಂಟ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಮಧ್ಯೆ ಒಪ್ಪಂದ ಏರ್ಪಟ್ಟಿತು.

ಯುದ್ಧದ ಮುಂಚಿನ ಸ್ಥಳಗಳಿಗೆ ಸೇನಾಪಡೆಗಳು ಹಿಂದಿರುಗಬೇಕು, ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಳ್ಳಬೇಕು, ಆರ್ಥಿಕ ಸಂಬಂಧ ಪುನರ್ ಸ್ಥಾಪಿಸಬೇಕು ಎನ್ನುವುದು ಈ ಒಪ್ಪಂದದ ಪ್ರಮುಖ ತಿರುಳಾಗಿತ್ತು. ಒಪ್ಪಂದಕ್ಕೆ ಸಹಿ ಹಾಕಿದ ಒಂದು ದಿನದ ನಂತರ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ತಾಷ್ಮೆಂಟ್ ನಲ್ಲಿಯೇ ಹೃದಯಾಘಾತದಿಂದ ಮೃತಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT