ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1983ರ ವಿಶ್ವಕಪ್‌ ಜಯಿಸಿದ ‘ಕಪಿಲ್ಸ್‌ ಡೆವಿಲ್ಸ್‌’

Last Updated 1 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

1983ರ ಜೂನ್‌ 25 ಭಾರತದ ಕ್ರಿಕೆಟ್‌ನ ಪಾಲಿಗೆ ಮರೆಯಲಾಗದ ದಿನ.  ಕಪಿಲ್‌ ದೇವ್‌ ನೇತೃತ್ವದ ಭಾರತ ತಂಡ ಅಂದು ವಿಶ್ವಕಪ್‌ ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿತ್ತು. ಮೂರನೇ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಗೆಲ್ಲಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಕಪಿಲ್‌ ಬಳಗ ಟ್ರೋಫಿ ಜಯಿಸಿ ಕ್ರಿಕೆಟ್‌ ಜಗತ್ತನ್ನು ನಿಬ್ಬೆರಗಾಗಿಸಿತ್ತು. ಈ ಗೆಲುವು ಭಾರತದಲ್ಲಿ ಕ್ರಿಕೆಟ್‌ ಕ್ರೀಡೆಯ ದಿಕ್ಕನ್ನೇ ಬದಲಿಸಿತು ಎನ್ನಬಹುದು.

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಭಾರತ ತಂಡ ವೆಸ್ಟ್‌ ಇಂಡೀಸ್‌ ತಂಡವನ್ನು 43 ರನ್‌ಗಳಿಂದ ಮಣಿಸಿ ಟ್ರೋಫಿ ಎತ್ತಿಹಿಡಿದಿತ್ತು.  ವಿಂಡೀಸ್‌ ತಂಡ ಸತತ ಮೂರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿತ್ತು. ಆದರೆ ಭಾರತ ಅದಕ್ಕೆ ಅವಕಾಶ ನೀಡಲಿಲ್ಲ.

ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ  54.4 ಓವರ್‌ಗಳಲ್ಲಿ 183 ರನ್‌ ಗಳಿಗೆ ಅಲೌಟಾಗಿತ್ತು. ಆ ಬಳಿಕ ಚುರುಕಿನ ಬೌಲಿಂಗ್‌ ಮೂಲಕ ವಿಂಡೀಸ್‌ ತಂಡವನ್ನು 52 ಓವರ್‌ಗಳಲ್ಲಿ 140 ರನ್‌ಗಳಿಗೆ ಆಲೌಟ್‌ ಮಾಡಿತ್ತು. ಆಲ್‌ರೌಂಡ್‌ ಪ್ರದರ್ಶನ ನೀಡಿದ್ದ ಮೊಹಿಂದರ್‌ ಅಮರ್‌ನಾಥ್‌ (26 ರನ್‌ ಹಾಗೂ 12ಕ್ಕೆ3) ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

1983ರ ವಿಶ್ವಕಪ್‌ನ ಪ್ರಮುಖ ಮಾಹಿತಿ:
* ಜಿಂಬಾಬ್ವೆ ತಂಡ ಈ ಟೂರ್ನಿಯ ಮೂಲಕ ಮೊದಲ ವಿಶ್ವಕಪ್‌ ಆಡಿತು. ಆಸ್ಟ್ರೇಲಿಯಾ ವಿರುದ್ಧ ನಾಟಿಂಗ್‌ಹ್ಯಾಂನಲ್ಲಿ ನಡೆದ ಪಂದ್ಯದಲ್ಲಿ ಈ ತಂಡ 13 ರನ್‌ಗಳ ಜಯ ಸಾಧಿಸಿತ್ತು.

* ವೆಸ್ಟ್‌ ಇಂಡೀಸ್‌ ತಂಡದ ವಿನ್‌ಸ್ಟನ್‌ ಡೇವಿಸ್‌ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 51 ರನ್‌ಗಳಿಗೆ 7 ವಿಕೆಟ್‌ ಪಡೆದಿದ್ದರು. ಈ ಮೂಲಕ ವಿಶ್ವಕಪ್‌ ಟೂರ್ನಿಯ ಪಂದ್ಯವೊಂದರಲ್ಲಿ ಏಳು ವಿಕೆಟ್‌ ಪಡೆದ ಮೊದಲ ಬೌಲರ್‌ ಎನಿಸಿಕೊಂಡಿದ್ದರು.

* ಜೂನ್‌ 18 ರಂದು ನಡೆದ ಭಾರತ– ಜಿಂಬಾಬ್ವೆ ನಡುವಿನ ಪಂದ್ಯವನ್ನು ಮರೆಯಲು ಸಾಧ್ಯವಿಲ್ಲ. ಮೊದಲು ಬ್ಯಾಟ್‌ ಮಾಡಿದ ಭಾರತ 17 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಕಪಿಲ್‌ ದೇವ್‌ ಅಮೋಘ 175 ರನ್‌ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರುಮಾಡಿದ್ದರು. ಕಪಿಲ್‌ ಮತ್ತು ಸೈಯದ್‌ ಕಿರ್ಮಾನಿ 9ನೇ ವಿಕೆಟ್‌ಗೆ 126 ರನ್‌ಗಳ ಜತೆಯಾಟ ನೀಡಿದ್ದರು.

* ಪಾಕಿಸ್ತಾನ– ಶ್ರೀಲಂಕಾ ನಡುವೆ ಲೀಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಇಮ್ರಾನ್‌ ಖಾನ್‌ 102 ರನ್‌ ಗಳಿಸಿದ್ದರು. ಈ ಮೂಲಕ ವಿಶ್ವಕಪ್‌ನಲ್ಲಿ ಶತಕ ಗಳಿಸಿದ ಪಾಕಿಸ್ತಾನದ ಮೊದಲ ಬ್ಯಾಟ್ಸ್‌ಮನ್‌ ಎಂಬ ಗೌರವ ಒಲಿಸಿಕೊಂಡಿದ್ದರು.

* ಅಂಪೈರ್‌ಗಳಾದ ಡಿಕಿ ಬರ್ಡ್‌ ಮತ್ತು ಬಿ.ಜೆ. ಮೇಯರ್‌ ಅವರು ಫೈನಲ್‌ ಪಂದ್ಯವನ್ನು ನಿಯಂತ್ರಿಸಿದ್ದರು. ಈ ಮೂಲಕ ಡಿಕಿ ಬರ್ಡ್‌ ಸತತ ಮೂರು ವಿಶ್ವಕಪ್‌ ಫೈನಲ್‌ಗಳಲ್ಲಿ ಕಾರ್ಯನಿರ್ವಹಿಸಿದ ಶ್ರೇಯ ಪಡೆದಿದ್ದರು. ಅವರು 1975ರ ವಿಶ್ವಕಪ್‌ನಲ್ಲಿ ಟಿ.ಡಬ್ಲ್ಯು ಸ್ಪೆನ್ಸರ್‌ ಜತೆ ಹಾಗೂ 1979ರ ವಿಶ್ವಕಪ್‌ನಲ್ಲಿ ಬಿ.ಜೆ. ಮೇಯರ್‌ ಅವರೊಂದಿಗೆ ಕಾರ್ಯನಿರ್ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT