ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ವರ್ಷದಲ್ಲಿ ಶಾಲೆಬಿಟ್ಟ 2.91 ಲಕ್ಷ ಮಕ್ಕಳು

Last Updated 25 ಜನವರಿ 2015, 20:27 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ (2011–12 ಮತ್ತು 2013–14) ಒಂದರಿಂದ ಐದನೇ ತರಗತಿವರೆಗೆ ಓದುತ್ತಿದ್ದ 2.91 ಲಕ್ಷ ಮಕ್ಕಳು ಶಾಲೆಯನ್ನು ತೊರೆದಿದ್ದಾರೆ.  ಅದರಲ್ಲಿ ಶೇ 48 ರಷ್ಟು ಪರಿಶಿಷ್ಟ ಜಾತಿ ಮತ್ತು  ಪರಿಶಿಷ್ಟ ಪಂಗಡಕ್ಕೆ ಸೇರಿರುವ ವಿದ್ಯಾರ್ಥಿಗಳಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ. 

‘ಇಂಡಿಯಾ ಗವರ್ನ್ಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ (ಐಜಿಆರ್‌ಐ)’  ಅಧ್ಯಯನ ವರದಿಯಲ್ಲಿ ಈ ವಿಷಯದ ಮೇಲೆ ಬೆಳಕು ಚೆಲ್ಲಲಾಗಿದೆ.
ಐಜಿಆರ್‌ಐ ನಿರ್ದೇಶಕಿ ವೀಣಾ ರಾಮಣ್ಣ ಅವರು ರಾಜ್ಯದ ಶಿಕ್ಷಣ ಕ್ಷೇತ್ರದ ವಿಧಾನಸಭಾ ಕ್ಷೇತ್ರವಾರು ಅಂಕಿ– ಅಂಶಗಳನ್ನು ಕಲೆಹಾಕಿ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ.

‘ಶಾಲೆ ತೊರೆದ ಹುಡುಗಿಯರ ಸಂಖ್ಯೆ, ಶೌಚಾಲಯದ ವ್ಯವಸ್ಥೆ, ಕೊಠಡಿಯ ಸ್ಥಿತಿ ಹಾಗೂ ಇನ್ನಿತರ ವಿಷಯಗಳಲ್ಲಿ ಕಳಪೆಯಾಗಿ ನಿರ್ವಹಿಸಿದ ವಿಧಾನಸಭಾ ಕ್ಷೇತ್ರಗಳ ಅಂಕಿ–ಅಂಶಗಳು ಹಾಗೂ ಕ್ಷೇತ್ರವಾರು ಅನುದಾನ, ಪರಿಶಿಷ್ಟ ಜಾತಿ/ಪಂಗಡಗಳ ದಾಖಲಾತಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿ ಅನೇಕ ಮಾನದಂಡಗಳ ವಿಧಾನಸಭಾ ಕ್ಷೇತ್ರವಾರು ಪಟ್ಟಿಯನ್ನು ಸರ್ಕಾರದ ಅಂಕಿ ಅಂಶಗಳ ನೆರವಿನಿಂದ ತಯಾರಿಸಲಾಗಿದೆ’ ಎಂದರು.

‘113 ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳು 2011–12 ರಿಂದ 2013–14ರ ವರೆಗಿನ ಎರಡು ವರ್ಷಗಳಲ್ಲಿ ಶಾಲೆ ಬಿಟ್ಟಿದ್ದಾರೆ. ಹಿಂದುಳಿದ ವರ್ಗಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಹಾಜರಾತಿ ಇಳಿಕೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಶಾಲೆಗಳನ್ನು ಬಿಟ್ಟವರಲ್ಲಿ ಶೇ 48 ರಷ್ಟು ಮಕ್ಕಳು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ್ದಾರೆ’ ಎಂದು ವಿವರಿಸಿದರು.

‘2011–12 ರಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿಯಲ್ಲಿ 30.33 ಲಕ್ಷ ಮಕ್ಕಳು ಕಲಿಯುತ್ತಿದ್ದರು. ಎರಡು ವರ್ಷಗಳ ನಂತರ ಅಂದರೆ, 2013–14 ರ ಶೈಕ್ಷಣಿಕ ವರ್ಷದಲ್ಲಿ ಸುಮಾರು 28.21 ಲಕ್ಷ ವಿದ್ಯಾರ್ಥಿಗಳು (ಮೂರನೇ ತರಗತಿಯಿಂದ ಏಳನೇ ತರಗತಿವರೆಗೆ) ಉಳಿದಿದ್ದಾರೆ. ಅಂದರೆ, ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿ ಶೇ 6.9 ರಷ್ಟು ಕಡಿಮೆಯಾಗಿದೆ’ ಎಂದು ವಿವರಿಸಿದರು.

‘2011–12 ರಲ್ಲಿ 23.17 ಲಕ್ಷ ಮಕ್ಕಳು ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿಯಲ್ಲಿ ಕಲಿಯುತ್ತಿದ್ದರು. ಆದರೆ, ಎರಡು ವರ್ಷಗಳ ನಂತರ, 2013–14 ನೇ ಶೈಕ್ಷಣಿಕ ವರ್ಷದಲ್ಲಿ ಮೂರನೇ ತರಗತಿಯಿಂದ ಏಳನೇ ತರಗತಿಯಲ್ಲಿ ಸುಮಾರು 22.43 ಲಕ್ಷ ವಿದ್ಯಾರ್ಥಿಗಳಿದ್ದರು. ಖಾಸಗಿ ಶಾಲೆಗಳಲ್ಲಿನ ದಾಖಲಾತಿ ಶೇ 3.2 ರಷ್ಟು ಇಳಿಕೆಯಾಗಿದೆ’ ಎಂದರು.

‘2013–14 ರಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಒಂದರಿಂದ ಎಂಟನೇ ತರಗತಿಗಳಲ್ಲಿರುವ ಹುಡುಗರಿಗಿಂತ 2,54,866 ರಷ್ಟು ಹುಡುಗಿಯರ ಸಂಖ್ಯೆ ಕಡಿಮೆಯಿದೆ. 2013–14ರಲ್ಲಿ ಕೇವಲ 11 ಕ್ಷೇತ್ರಗಳಲ್ಲಿ ಹುಡುಗಿಯರ ದಾಖಲಾತಿ ಹುಡುಗರಿಗಿಂತ ಹೆಚ್ಚಿದೆ. 10 ವಿಧಾನಸಭಾ ಕ್ಷೇತ್ರಗಳಲ್ಲಿ ಹುಡುಗರ ದಾಖಲಾತಿಗೆ ಹೋಲಿಸಿದಾಗ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಹುಡುಗಿಯರ ದಾಖಲಾತಿಯಾಗಿದೆ’ ಎಂದು ಹೇಳಿದರು.

‘ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ. 2013–14ರಲ್ಲಿ 1ರಿಂದ 8ನೇ ತರಗತಿಯ ಶೇ 45 ರಷ್ಟು ವಿದ್ಯಾರ್ಥಿಗಳು ಖಾಸಗಿ ಶಾಲೆಯಲ್ಲಿದ್ದಾರೆ. ಆದರೆ, 2008–09 ರಲ್ಲಿ ಶೇ 35 ರಷ್ಟು ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿದ್ದರು. ಖಾಸಗಿ ಶಾಲೆಗಳಲ್ಲಿ ಹುಡುಗರ ಸಂಖ್ಯೆಯೇ ಅಧಿಕವಾಗಿದೆ’ ಎಂದು ವಿವರಿಸಿದರು.

‘ರಾಜ್ಯದ ಒಟ್ಟು ಎರಡು ಲಕ್ಷ ಸರ್ಕಾರಿ ಶಾಲಾ ಕೊಠಡಿಗಳಲ್ಲಿ ಸುಮಾರು 34,591 ಕೊಠಡಿಗಳಿಗೆ ದುರಸ್ತಿಯ ಅಗತ್ಯವಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಸುಮಾರು ಶೇ 16 ಶಾಲಾ ಕೊಠಡಿಗಳಿಗೆ ದುರಸ್ತಿ ಮಾಡಬೇಕಾಗಿದೆ. ಖಾಸಗಿ ಶಾಲೆಗಳಲ್ಲಿ ಕಾಪು ಕ್ಷೇತ್ರದ ಶೇ 15 ಶಾಲಾ ಕೊಠಡಿಗಳಿಗೆ ತುರ್ತು ದುರಸ್ತಿ ಆಗಬೇಕಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಇದು ಅತ್ಯಂತ ಹೆಚ್ಚಿನದ್ದಾಗಿದೆ’ ಎಂದು ಹೇಳಿದರು.

‘ಶಿಕ್ಷಣದಲ್ಲಿ ಹಿಂದೆ ಬಿದ್ದಿರುವ ಮಕ್ಕಳಿಗೆ ವಿಶೇಷ ತರಬೇತಿ ನೀಡುವಂತೆ ಶಿಕ್ಷಣ ಹಕ್ಕು ಕಾಯ್ದೆ ಸೂಚಿಸುತ್ತದೆ. ಆದರೆ, 2013–14 ರಲ್ಲಿ 69 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ವಿದ್ಯಾರ್ಥಿಗೆ ವಿಶೇಷ ತರಬೇತಿಯನ್ನು ನೀಡಿಲ್ಲ’ ಎಂದು ತಿಳಿಸಿದರು.

‘ಕುಣಿಗಲ್‌ ಮತ್ತು ಸೊರಬದ ಶೇ 99 ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿದೆ. ಉಳಿದ 222 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ 100 ರಷ್ಟು ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರು ದೊರೆಯುತ್ತಿದೆ’ ಎಂದು ಹೇಳಿದರು.

‘ವಿಧಾನಸಭಾ ಕ್ಷೇತ್ರಗಳಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ 2013–14 ರಲ್ಲಿ ಸರಾಸರಿಯಾಗಿ ಶಾಲಾಭಿವೃದ್ಧಿಗೆ ರೂ 20 ಲಕ್ಷ ಹಾಗೂ ಶಿಕ್ಷಣ–ಕಲಿಕಾ–ವಸ್ತು ಅನುದಾನ ರೂ 3.9 ಲಕ್ಷ ಸೇರಿದಂತೆ ಒಟ್ಟು ರೂ 24 ಲಕ್ಷ ಅನುದಾನ ನೀಡಲಾಗಿದೆ’ ಎಂದು ತಿಳಿಸಿದರು.

‘ರಾಯಚೂರು ವಿಧಾನಸಭಾ ಕ್ಷೇತ್ರಕ್ಕೆ ಗರಿಷ್ಠ ರೂ 51 ಲಕ್ಷ ಅನುದಾನ ದೊರೆತಿದೆ. ಇದರಲ್ಲಿ ರೂ 43 ಲಕ್ಷ ಶಾಲಾಭಿವೃದ್ಧಿಗೆ ಹಾಗೂ ರೂ 8 ಲಕ್ಷ ಶಿಕ್ಷಣ–ಕಲಿಕಾ–ವಸ್ತು ಅನುದಾನವೆಂದು ವಿಭಾಗಿಸಲಾಗಿದೆ. ಬಸವನಗುಡಿ ಕ್ಷೇತ್ರಕ್ಕೆ ಅತ್ಯಂತ ಕಡಿಮೆ ಅನುದಾನ ದೊರೆತಿದೆ. ಕೇವಲ 87,000 ಶಾಲಾಭಿವೃದ್ಧಿಗೆ ಹಾಗೂ ರೂ 18 ಸಾವಿರ ಶಿಕ್ಷಣ– ಕಲಿಕಾ–ವಸ್ತು ಅನುದಾನ ದೊರೆತಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT