ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2016-ವಾಹನ ಲೋಕದ ಹೊಸ ನಿರೀಕ್ಷೆ

ವಿವಾದ, ಸಮಸ್ಯೆಗಳಲ್ಲೇ ಮುಳುಗೆದ್ದ ವರ್ಷ
Last Updated 30 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ವಾಹನ ಲೋಕದ ಹೊಸ ನಿರೀಕ್ಷೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ ಎಂಬ ಕಾರಣಕ್ಕೆ ಡೀಸೆಲ್‌ ಕಾರುಗಳ ಮೇಲೆ ನಿಯಂತ್ರಣ. ಮಾಲಿನ್ಯ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮದಲ್ಲೇ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಯುರೋಪ್‌ನ ಪ್ರತಿಷ್ಠಿತ ಕಾರು ಕಂಪೆನಿಗೆ ದಂಡ ಮತ್ತು ಕಾರುಗಳ ಹಿಂಪಡೆತ. ಚೆನ್ನೈ ಮಹಾಮಳೆ. ಈ ಮೂರು ಪ್ರಮುಖ ಘಟನೆಗಳಿಂದಾಗಿ 2015 ಕಾರು ಮಾರುಕಟ್ಟೆ ತಲ್ಲಣಿಸಿದ್ದಂತೂ ಸತ್ಯ.

ಕಳೆದ ಕೆಲವು ವರ್ಷಗಳಿಂದ ಭಾರತದ ಕಾರು ಪ್ರಪಂಚ ಡೀಸೆಲ್‌ನತ್ತ ವಾಲಿದ್ದೇ ಹೆಚ್ಚು. ಇದಕ್ಕೆ ಮುಖ್ಯ ಕಾರಣ ಇಂಧನದ ಬೆಲೆ ಕಡಿಮೆ ಹಾಗೂ ಇಂಧನ ಕ್ಷಮತೆ ಹೆಚ್ಚು. ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಲು ಇದೇ ಕಾರಣ ಎಂದೇನೂ ಅಲ್ಲದಿರಬಹುದು. ಆದರೆ ಅಂಕುಶ ಹಾಕಿಸಿಕೊಂಡಿದ್ದು ಮಾತ್ರ ಡೀಸೆಲ್ ಕಾರುಗಳು.

ಸುಪ್ರೀಂಕೋರ್ಟ್‌ನ ಸ್ಪಷ್ಟ ನಿರ್ದೇಶನದಂತೆ ಜ. 1ರಿಂದ ಮೂರು ತಿಂಗಳುಗಳ ಕಾಲ ದೆಹಲಿ ನಗರದಲ್ಲಿ 2ಲೀಟರ್‌ಗೂ ಅಧಿಕ ಸಾಮರ್ಥ್ಯದ ಡೀಸೆಲ್‌ ಕಾರುಗಳು ಹಾಗೂ ಎಸ್‌ಯುವಿಗಳ ನೋಂದಣಿಯನ್ನು ನಿರ್ಬಂಧಿಸಲಾಗಿದೆ. ಈ ಮೂಲಕ ನಗರದ ಮಾಲಿನ್ಯ ನಿಯಂತ್ರಣಕ್ಕೆ ಮೊದಲ ಹೆಜ್ಜೆ ಇಡಲಾಗಿದೆ. ಈ ಆದೇಶದ ಮೂಲಕ ಡೀಸೆಲ್ ಕಾರುಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಟಾಟಾ, ಮಹೀಂದ್ರ ಹಾಗೆಯೇ ಐಷಾರಾಮಿ ಕಾರು ತಯಾರಿಕಾ ಕಂಪೆನಿಗಳಾದ ಮರ್ಸಿಡೀಸ್‌ ಬೆಂಜ್‌, ಆಡಿ, ಬಿಎಂಡಬ್ಲೂ ಹಾಗೂ ಜಾಗ್ವರ್‌ ಲ್ಯಾಂಡ್‌ರೋವರ್‌ಗಳ ಮೇಲೆ ನೇರ ಪರಿಣಾಮ ಉಂಟಾಗಲಿದೆ.

ಈ ನಡುವೆ ಐಐಟಿ ಕಾನ್ಪುರದ ವರದಿಯ ಅನ್ವಯ ಡೀಸೆಲ್ ಕಾರುಗಳಿಂದ ಉಂಟಾಗುವ ಮಾಲಿನ್ಯವು ದೂಳು ಹಾಗೂ ಭತ್ತದ ಗದ್ದೆಗಳಿಗೆ ಬೆಂಕಿ ಹಾಕಿದಾಗ ಏಳುವ ಹೊಗೆಗಿಂತ ಕಡಿಮೆಯಂತೆ. ದೆಹಲಿ ಸುತ್ತಮುತ್ತ ಇಂಥ ಸಂಗತಿಗಳು ಹೆಚ್ಚು ನಡೆಯುತ್ತಿವೆ ಎಂದು ವರದಿ ಹೇಳಿರುವುದು ಕಾರು ತಯಾರಕರಿಗೆ ವರವಾಗಲಿದೆಯೇ ಎಂದು ಮುಂದೆ ಕಾದು ನೋಡಬೇಕು.

ಮಾಲಿನ್ಯ ಪರೀಕ್ಷೆ ವಂಚನೆ
ಇದರೊಂದಿಗೆ ಅತ್ಯಂತ ಪ್ರತಿಷ್ಠಿತ ಹಾಗೂ ಹೆಚ್ಚು ಮನ್ನಣೆ ಪಡೆದ ಯುರೋಪ್‌ನ ಫೋಕ್ಸ್‌ವ್ಯಾಗನ್‌ನ ಡೀಸೆಲ್ ಮಾದರಿಯ ಕಾರುಗಳ ಮಾಲಿನ್ಯ ಪರೀಕ್ಷೆ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ 3,23,700 ಕಾರುಗಳನ್ನು ಹಿಂಪಡೆಯಲು ತೀರ್ಮಾನಿಸಿದ್ದು ಕಂಪೆನಿಗೆ ಮಾತ್ರವಲ್ಲ ಇಡೀ ಕಾರು ಪ್ರಪಂಚಕ್ಕೆ ಎಚ್ಚರಿಕೆ ಗಂಟೆಯಾಯಿತು. ತನ್ನ ವಿವಾದಾತ್ಮಕ ಇಎ 189 ಡೀಸೆಲ್ ಎಂಜಿನ್‌ಗಳಿಂದಾಗಿ ಸ್ಕೋಡಾ ಹಾಗೂ ಐಷಾರಾಮಿ ಆಡಿ ಕೂಡ ವಿವಾದಕ್ಕೆ ಒಳಗಾಗಿದ್ದು ಕಂಪೆನಿಯ ಪ್ರತಿಷ್ಠೆಗೆ ಹಾಗೂ ಅದರ ಮೇಲೆ ಗ್ರಾಹಕರು ಇಟ್ಟಿರುವ ನಂಬಿಕೆಗೆ ದೊಡ್ಡ ಪೆಟ್ಟು ಬಿದ್ದಿದ್ದಂತೂ ನಿಜ.

ಆದರೂ ವರ್ಷದ ಆರಂಭದಿಂದಲೂ ಕಾರು ಮಾರುಕಟ್ಟೆ ಮಂದಗತಿಯಲ್ಲೇ ಸಾಗಿತ್ತು. ವರ್ಷಾಂತ್ಯದ ಹೊತ್ತಿಗೆ ಬಹಳಷ್ಟು ಕಾರು ಕಂಪೆನಿಗಳು ಇರುವ ಚೆನ್ನೈನಲ್ಲಿ ಸುರಿದ ಭಾರೀ ಮಳೆಯಿಂದ ತತ್ತರಿಸಿ ಹೋಯಿತು. ಫೋರ್ಡ್‌, ನಿಸ್ಸಾನ್‌, ರಿನೊ, ಬಿಎಂಡಬ್ಲೂ, ಹ್ಯುಂಡೈ, ಅಶೋಕ ಲೇಲ್ಯಾಂಡ್‌ ಹಾಗೂ ರಾಯಲ್‌ ಎನ್‌ಫೀಲ್ಡ್‌ನಂಥ ಕಂಪೆನಿಗಳ ಕಾರು ಪೂರೈಕೆಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದವು. ಇದು ಕಾರು ರಫ್ತು ಮೇಲೂ ಪರಿಣಾಮ ಬೀರಿತು. ಇದರಿಂದಾಗಿ ಒಟ್ಟು ವಾಹನ ಕ್ಷೇತ್ರಕ್ಕೆ ಶೇ 15ರಷ್ಟು ನಷ್ಟ ಉಂಟಾಗಿದೆ ಎಂದು ಭಾರತೀಯ ವಾಹನ ತಯಾರಿಕಾ ಸಂಸ್ಥೆ (ಎಸ್‌ಐಎಎಂ) ತನ್ನ ವರದಿಯಲ್ಲಿ ತಿಳಿಸಿದೆ.

ದೋಷಪೂರಿತ ವಾಹನಗಳು ಎಂಬ ಕಾರಣಕ್ಕಾಗಿ ಹೋಂಡಾ ಹಾಗೂ ಜನರಲ್‌ ಮೋಟಾರ್ಸ್‌, ನಿಸ್ಸಾನ್‌, ಮಾರುತಿ ಸುಜುಕಿ ಹಾಗೂ ಫೋರ್ಡ್‌ ತನ್ನ ಕಾರುಗಳನ್ನು ಹಿಂಪಡೆಯಲು ನಿರ್ಧರಿಸಿದ್ದು ಇದೇ ವರ್ಷ. ಇವುಗಳಲ್ಲಿ ಪ್ರಮುಖವಾಗಿ 2003ರಿಂದ 2012ರ ಒಳಗೆ ತಯಾರಾದ ಹೋಂಡಾ ಸಿವಿಕ್‌, ಸಿಟಿ, ಜಾಝ್‌ ಹಾಗೂ ಸಿಆರ್‌ವಿ ಮಾದರಿಯ ಏರ್‌ಬ್ಯಾಗ್‌ ದೋಷದಿಂದ ಅವುಗಳನ್ನು ಹಿಂಪಡೆಯಲಾಯಿತು. ಜನರಲ್‌ ಮೋಟಾರ್ಸ್‌ ಕೂಡಾ ತನ್ನ ಬೀಟ್‌ ಡೀಸೆಲ್‌ ಮಾದರಿಯ ಕ್ಲಚ್‌ ಲಿವರ್‌ ದೋಷದಿಂದ ಒಂದು ಲಕ್ಷ ಕಾರುಗಳನ್ನು ಹಿಂಪಡೆಯಲಾಯಿತು. ಇದೇ ರೀತಿಯ ಕ್ಲಚ್‌ ಸಮಸ್ಯೆ ಹೊಂದಿದ್ದ ಮಾರುತಿ 800 ಮತ್ತು ಆಲ್ಟೊ ಕೆ10 ಮಾದರಿಯ 33,098 ಕಾರುಗಳನ್ನು ಹಿಂಪಡೆಯಿತು.

ಪುಟ್ಟ ಎಸ್‌ಯುವಿಗಳತ್ತ ಆಸಕ್ತಿ
ಇವೆಲ್ಲದರ ನಡುವೆಯೂ ವರ್ಷವರ್ಷಕ್ಕೂ ಬದಲಾಗುವ ಭಾರತೀಯ ಕಾರು ಮಾರುಕಟ್ಟೆ 2015ರ ಮಧ್ಯದಲ್ಲಿ ಪುಟ್ಟ ಎಸ್‌ಯುವಿಗಳ ಮಾರಾಟದ ಕುರಿತು ಆಸಕ್ತಿ ತಾಳಿರುವುದು ಗೋಚರಿಸಿತು. ಫೋರ್ಡ್‌ ಇಕೋ ಸ್ಪೋರ್ಟ್‌ ಮಾದರಿಯಲ್ಲೇ ಹ್ಯುಂಡೈ ಕೂಡಾ ಕ್ರೆಟಾ ಕಾರನ್ನು ರೋಡಿಗಿಳಿಸಿ ಸೈ ಎನಿಸಿಕೊಂಡಿತು. ರಿನೊ ಡಸ್ಟರ್‌ ಹಾಗೂ ನಿಸ್ಸಾನ್‌ ಟೆರ್ರಾನೊಗಿಂತ ಚಿಕ್ಕ ಹಾಗೂ ಎತ್ತರದ ಕಾರಿಗೆ ಜನರು ಮನಸೋತರು. ಹೀಗಾಗಿಯೇ ವರ್ಷದ ಕಾರ್‌ ಗರಿಯನ್ನು ಕ್ರೆಟಾ ಮುಡಿಗೇರಿಸಿಕೊಂಡಿತು. ಇದರೊಂದಿಗೆ ಮಾರುತಿ ಬಲೆನೊ ಎಂಬ ಪ್ರೀಮಿಯಂ ವಿಭಾಗದ ಹ್ಯಾಚ್‌ಬ್ಯಾಕ್‌, ರಿನೋ ಕ್ವಿಡ್‌ ಎಂಬ ಮಧ್ಯಮ ಗಾತ್ರದ ಕಾರನ್ನು ರಸ್ತೆಗಿಳಿಸಿತು.

ಹಾಗೆಯೇ ಕಚ್ಚಾ ರಸ್ತೆಯ ಎಸ್‌ಯುವಿಗಳಲ್ಲಿ ಮಹೀಂದ್ರಾ ಥಾರ್‌ ಹೊಸ ರೂಪದೊಂದಿಗೆ ಮಾರುಕಟ್ಟೆ ಪ್ರವೇಶಿಸಿತು. ಬೆಟ್ಟಗುಡ್ಡಗಳ ತಾಣದಲ್ಲಿ ಬಳಕೆಯಾಗುವ ಈ ಕಾರಿಗೆ ನಗರವಾಸಿಗಳು ಮನಸೋತ ಕಾರಣ, ಇದನ್ನು ಅವರಿಗಾಗಿಯೇ ಸಿದ್ಧಪಡಿಸಿ ಕಂಪೆನಿ ನೀಡಿರುವುದು ವಿಶೇಷ. ಇದೇ ವರ್ಷ ಕಾರು ಮಾರುಕಟ್ಟೆಯು ಕಡಿಮೆ ಬಡ್ಡಿದರ ಹಾಗೂ ಇಂಧನ ಬೆಲೆ ಇಳಿಕೆಯ ಲಾಭವನ್ನು ಪಡೆಯಿತು. ಆ ಮೂಲಕ ನವೆಂಬರ್‌ನಿಂದ ಶೇ 3ರ ದರದಲ್ಲಿ ವೃದ್ಧಿ ಕಂಡಿದ್ದೇ ಈ ವರ್ಷದ ಒಳ್ಳೆಯ ಬೆಳವಣಿಗೆ.

ಐಷಾರಾಮಿ ಕಾರುಗಳ ಬಿಡುಗಡೆ
ಸಣ್ಣ ಹಾಗೂ ಮಧ್ಯಮ ಕಾರುಗಳ ಮಾರಾಟದಲ್ಲಿ ಅಷ್ಟಾಗಿ ಪ್ರಗತಿ ಸಾಧಿಸಲಾಗದಿದ್ದರೂ ಭಾರತದ ರಸ್ತೆಗೆ ಎಂಟು ಪ್ರಮುಖ ಐಷಾರಾಮಿ ಕಾರುಗಳು 2015ರಲ್ಲಿ ಇಳಿದಿವೆ. ಪ್ರಮುಖವಾಗಿ ₹ 8.9ಕೋಟಿ ಮೊತ್ತದ ಮರ್ಸಿಡೀಸ್‌ ಬೆಂಜ್‌ ಎಸ್‌ ಗಾರ್ಡ್‌. ಎಕೆ47ರಿಂದ ಸಿಡಿದ ಗುಂಡು ಕೂಡಾ ಇದರೊಳಗೆ ಹೋಗದಷ್ಟು ಗಟ್ಟಿ ಗಾಜು ಹಾಗೂ ದೇಹವನ್ನು ಹೊಂದಿರುವುದು ಇದರ ಒಂದು ವಿಶೇಷ. ಫೆರಾರಿ ಕ್ಯಾಲಿಫೋರ್ನಿಯಾ ಟಿ (₹ 3.4ಕೋಟಿ), ಲ್ಯಾಂಬೋರ್ಗಿನಿ ಹುರಾಕ್ಯಾನ್‌ (₹2.99ಕೋಟಿ), ಮರ್ಸಿಡೀಸ್‌ ಮೇಬ್ಯಾಕ್‌ ಎಸ್‌600 (₹2.6ಕೋಟಿ), ಮರ್ಸಿಡೀಸ್‌ ಬೆಂಜ್‌ ಎಸ್‌63 ಎಎಂಜಿ (₹2.54ಕೋಟಿ), ಮರ್ಸಿಡೀಸ್‌ ಬೆಂಜ್‌ ಎಎಂಜಿ ಜಿಟಿ ಎಸ್‌ (₹2.4ಕೋಟಿ), ಮರ್ಸಿಡೀಸ್‌ ಬೆಂಜ್‌ ಜಿ63 ಎಎಂಜಿ (₹ 2.17ಕೋಟಿ) ಹಾಗೂ ಮರ್ಸಿಡೀಸ್‌ ಬೆಂಜ್‌ ಎಸ್‌500ಕೂಪ್‌ (₹ 2.0ಕೋಟಿ) ಬಿಡುಗಡೆ ಮಾಡಿದೆ.

ಈ ವರ್ಷ ರಿನೊ ಶೇ 144.27ರಷ್ಟು ವೃದ್ಧಿಯೊಂದಿಗೆ ಈ ವರ್ಷ ಮಾರುಕಟ್ಟೆಯಲ್ಲಿ ಲಾಭಗಳಿಸಿದ್ದರೂ ಒಟ್ಟು ಮಾರುಕಟ್ಟೆ ಪಾಲಿನಲ್ಲಿ ಮಾರುತಿ ತನ್ನ ಅಗ್ರಸ್ಥಾನ ಕಾಯ್ದುಕೊಂಡಿದೆ. ಫೋರ್ಡ್‌, ನಿಸ್ಸಾನ್‌, ಮಹೀಂದ್ರಾ, ಹ್ಯುಂಡೈ ಹಾಗೂ ಫೋರ್ಸ್‌ಗೆ 2015 ಲಾಭವನ್ನು ತಂದುಕೊಟ್ಟಿದೆ. ಉಳಿದಂತೆ ಅತಿ ನಷ್ಟ ಅನುಭವಿಸಿದ್ದು ಅಶೋಕ ಲೇಲ್ಯಾಂಡ್‌, ಹಿಂದುಸ್ತಾನ್‌ ಮೋಟಾರ್ಸ್‌, ಜನರಲ್ ಮೋಟಾರ್ಸ್‌, ಟಾಟಾ, ಟೊಯೊಟಾ, ಹೋಂಡಾ, ಫಿಯೆಟ್‌, ಫೋಕ್ಸ್‌ ವ್ಯಾಗನ್‌, ಸ್ಕೋಡಾ ಪಾಲಿಗೆ 2015 ಕಹಿಯಾಗಿತ್ತು.

2016ರಲ್ಲಿ ಹಲವು ಹೊಸ ಕಾರುಗಳು ರಸ್ತೆಗಿಳಿಯುವ ನಿರೀಕ್ಷೆಯಲ್ಲಿದೆ. ಇಂಥದ್ದೇ ಮಾದರಿ ಅಲ್ಲದಿದ್ದರೂ ಪ್ರತಿಯೊಂದು ಕಂಪೆನಿಗಳು ಬಹುನಿರೀಕ್ಷೆಯಲ್ಲಿ ಹೊಸ ವರ್ಷವನ್ನು ಎದುರುನೋಡುತ್ತಿವೆ. 2016ರಲ್ಲಿ ಬಿಡುಗಡೆಯಾಗಲಿರುವ ಕಾರುಗಳಲ್ಲಿ ಪ್ರಮುಖವಾಗಿ ಮಹೀಂದ್ರಾ ಕೆಯುವಿ100, ಟಾಟಾ ಝಿಕಾ, ಸ್ಕೋಡಾ ನ್ಯೂ ಸೂಪರ್ಬ್‌, ಆಡಿ ನ್ಯೂ ಎ4, ಟಾಟಾ ಕೈಟ್‌, ಡಟ್ಸನ್‌ ರೆಡಿಗೋ, ರಿನೊ ನ್ಯೂ ಡಸ್ಟರ್‌, ನಿಸ್ಸಾನ್‌ ಜಿಟಿಆರ್‌, ಜಾಗ್ವಾರ್ ಎಕ್ಸ್‌ಇ, ಟೊಯೊಟೊ ನ್ಯೂ ಇನ್ನೋವಾ, ಬಿಎಂಡಬ್ಲೂ 3 ಸಿರೀಸ್‌, ಟಾಟಾ ನಿಕ್ಸಾನ್‌, ಮಾರುತಿ ಸುಜುಕಿ ಮಿನಿ ಎಸ್‌ಯುವಿ, ಮಾರುತಿ ವೈಆರ್‌ಬಿಗಳು ಪ್ರಮುಖ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT