ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ಕ್ಕೆ 1.28 ಲಕ್ಷ ಕೋಟಿ ವರಮಾನ

ಪರಿವರ್ತನೆ ಹಾದಿಯಲ್ಲಿ ಇನ್ಫೊಸಿಸ್‌: ಸಿಇಒ ಸಿಕ್ಕಾ ವಿಶ್ವಾಸ
Last Updated 27 ಮೇ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು(ಪಿಟಿಐ): ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪೆನಿ ಇನ್ಫೊಸಿಸ್‌, 2020ರ ವೇಳೆಗೆ ವಾರ್ಷಿಕವಾಗಿ 2000 ಕೋಟಿ ಅಮೆರಿಕನ್‌ ಡಾಲರ್‌ (ಈಗಿನ ವಿದೇಶಿ ವಿನಿಮಯ ಲೆಕ್ಕದಲ್ಲಿ ₨1.28 ಲಕ್ಷ ಕೋಟಿ) ವರಮಾನ ಗಳಿಸುವ ಮಟ್ಟಕ್ಕೆ ಬೆಳವಣಿಗೆ ಕಾಣಲಿದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶಾಲ್‌ ಸಿಕ್ಕಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಂಪೆನಿಯನ್ನು ಬೃಹತ್‌ ವರಮಾನ ಗಳಿಕೆಯ ಹಂತಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿ ಆಡಳಿತ ಮಂಡಳಿ ಸಂಪೂರ್ಣವಾಗಿ ಕಾರ್ಯಮಗ್ನವಾಗಿದೆ ಎಂದು ಹೇಳಿದ್ದಾರೆ. ಕಂಪೆನಿಯ 2014-15ನೇ ಹಣಕಾಸು ವರ್ಷದ ವರದಿಯ ಜತೆಗೆ ಷೇರುದಾರರಿಗೆ ಪತ್ರ ಬರೆದಿರುವ ಸಿಇಒ ಸಿಕ್ಕ ಅವರು, ಇನ್ಫೊಸಿಸ್‌ಗೆ ಅಭಿವೃದ್ಧಿ ಪಥದಲ್ಲಿ ಹಾಗೂ ವಿಶ್ವದ ಮಾಹಿತಿ ತಂತ್ರಜ್ಞಾನ ಸೇವೆಗಳ ಕ್ಷೇತ್ರದ ಉದ್ಯಮದಲ್ಲಿ ಮುಂಚೂಣಿಯಲ್ಲಿರಲು ಅದ್ಭುತ ಅವಕಾಶಗಳಿವೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ಪ್ರಗತಿಯ ಹೆಬ್ಬಾಗಿಲೇ ತೆರೆದಿದೆ:  ಜಗತ್ತು ಡಿಜಿಟಲ್‌ ಯುಗಕ್ಕೆ ಹಂತ ಹಂತವಾಗಿ ಪರಿವರ್ತನೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಸೇವೆಗಳ ಕ್ಷೇತ್ರದ ಕಂಪೆನಿಗಳಿಗೆ ವಿಪುಲ ಅವಕಾಶಗಳಿವೆ. ಹಾಗಾಗಿ, ಇನ್ಫೊಸಿಸ್‌ಗೆ ಇದು ಪ್ರಗತಿಯ ಹಾದಿಯಲ್ಲಿ ದೊಡ್ಡ ಬಾಗಿಲನ್ನೇ ತೆರೆದಿಡಲಿದೆ. ಅವಕಾಶವನ್ನು ಸದುಪಯೋಗ ಪಡಿಸಿಕೊಂಡಲ್ಲಿ ಕಂಪೆನಿಯು ಜಾಗತಿಕ ಮಟ್ಟದಲ್ಲಿ ಮತ್ತೆ ಮುಂಚೂಣಿ ನೆಲೆಗೆ ಬರಲಿದೆ ಎಂದು ಉತ್ತೇಜನ ನುಡಿಗಳನ್ನು ಬರೆದಿದ್ದಾರೆ.

ಇತ್ತೀಚೆಗೆ ಕಂಪೆನಿಯಲ್ಲಿ ಕೈಗೊಂಡ ಬದಲಾವಣೆಯ ಕ್ರಮಗಳು ಫಲ ನೀಡಲು ಸ್ವಲ್ಪ ಕಾಲ ಕಾಯಬೇಕಿದೆ. ಅಲ್ಲದೇ, ಬದಲಾವಣೆ ಮತ್ತು ಸುಧಾರಣೆಯ ಕ್ರಮಗಳನ್ನು ನಿರಂತರ ಮುಂದುವರಿಸಿಕೊಂಡು ಹೋಗಬೇಕಿದೆ. ಬದಲಾವಣೆ ಎಂಬುದು ಕಂಪೆನಿಯ ಒಳಗೆ ಮತ್ತು ಹೊರಗೆ ಎರಡೂ ಬದಿಯಲ್ಲಿ ಜರುಗಬೇಕಿದೆ ಎಂದಿದ್ದಾರೆ.

ಹೊಸತನ ಮೈಗೂಡಿಸಿಕೊಳ್ಳಬೇಕಿದೆ: ಹಣಕಾಸು ಮತ್ತು ಕಾನೂನು ಸೇವೆಗಳ ಕ್ಷೇತ್ರದ  ಗ್ರಾಹಕ ಕಂಪೆನಿಗಳಿಗೆ ಐ.ಟಿ ಆಧರಿಸಿದ ಸೇವೆಗಳನ್ನು ಒದಗಿಸುವುದರಲ್ಲಿ ಪರಿವರ್ತನೆ ಮಾಡಿಕೊಳ್ಳಲು, ಹೊಸತನ ಮೈಗೂಡಿಸಿಕೊಳ್ಳಬೇಕಿದೆ. ಅದಕ್ಕೂ ಸಹ ಸಮಯ ಹಿಡಿಯಲಿದೆ ಎಂಬುದನ್ನು ಷೇರುದಾರರ ಗಮನಕ್ಕೆ ತಂದಿದ್ದಾರೆ.

ಹೊಸ ಸೇವೆಗಳ ಕ್ಷೇತ್ರ: ಡಿಸೈನ್‌ ಥಿಂಕಿಂಗ್‌, ಸಲ್ಯೂಷನ್ಸ್‌ ಇನ್‌ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಆ್ಯಂಡ್‌ ಇಂಟಲೆಕ್ಚುವಲ್‌ ಪ್ರಾಪರ್ಟಿ ಆಧರಿಸಿದ ಹೊಸ ಸೇವೆಗಳ ಕ್ಷೇತ್ರವು ಇನ್ಫೊಸಿಸ್‌ಗೆ ಏನಿಲ್ಲವೆಂದರೂ ಕನಿಷ್ಠ ಶೇ 10ರಷ್ಟು ವರಮಾನವನ್ನು ತಂದುಕೊಡಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಕೆಲಸ ತ್ಯಜಿಸುವವರ ಒತ್ತಡ: ಇನ್ಫೊಸಿಸ್‌ ಕಂಪೆನಿಯು ಸೇವೆ ಸಲ್ಲಿಸಲು ಅತ್ಯುತ್ತಮ ಸಂಸ್ಥೆ  ಎಂಬ ಭಾವ ಉದ್ಯೋಗಿಗಳಲ್ಲಿ ಹಾಗೂ ಉದ್ಯೋಗ ಆಕಾಂಕ್ಷಿಗಳಲ್ಲಿ ಮೂಡುವಂತೆ ಮಾಡಲು ವಿಶಿಷ್ಟ ಪ್ರಯತ್ನ ನಡೆಸಲಾಗುತ್ತಿದೆ. ಅದೇ ವೇಳೆ, ಸಿಬ್ಬಂದಿಗಳು ಕಂಪೆನಿಯನ್ನು ತ್ಯಜಿಸುವ ವಾರ್ಷಿಕ ಪ್ರಮಾಣವನ್ನೂ ತಗ್ಗಿಸಲು ನಿರಂತರ ಯತ್ನಗಳೂ ನಡೆದಿವೆ ಎಂದು ಷೇರುದಾರರಿಗೆ ಬರೆದ ಪತ್ರದಲ್ಲಿ ಸಿಕ್ಕ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT