ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2040ರಲ್ಲಿ ವಿಶ್ವದೆಲ್ಲೆಡೆ ಜಲಕ್ಷಾಮ

Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ಕೇಳಿಬರು­ವುದು ಸಹಜ. ಆದರೆ 2040ರ ಹೊತ್ತಿಗೆ ಜಗತ್ತಿನೆ­ಲ್ಲೆಡೆ ಜಲಕ್ಷಾಮ ಎದುರಾಗಲಿದೆ­ಯಂತೆ. ನಾವೆಲ್ಲರೂ ವಿದ್ಯುತ್‌ ಮತ್ತು ಇಂಧನವನ್ನು ಲಂಗು­ಲಗಾ­ಮಿಲ್ಲದೆ ವ್ಯಯಿ­ಸುವುದನ್ನು ಯಥಾ­ಪ್ರಕಾರ ಮುಂದುವರಿಸಿದ್ದೇ ಆದಲ್ಲಿ ನೀರಿಲ್ಲದೆ ಪರದಾಡಬೇಕಾ­ದೀತು ಎಂಬ ಆತಂಕ­ವನ್ನು ಭಾರತದ ದೃಷ್ಟಾಂತವನ್ನೂ ಒಳ­ಗೊಂಡ ಹೊಸ ಅಧ್ಯಯನ ವರದಿ­ಯೊಂದು ಎಚ್ಚರಿಸಿದೆ.

ಪ್ರಸ್ತುತ ಚಾಲ್ತಿಯಲ್ಲಿರುವ ಇಂಧನ ಮತ್ತು ವಿದ್ಯುಚ್ಛಕ್ತಿ ಪರಿಹಾರಗಳನ್ನೇ ಮೊರೆಹೋದರೆ ಮತ್ತು ಈಗಿನಂ­ತೆಯೇ  ಅನಿಯಂತ್ರಿತವಾಗಿ ಅವುಗಳನ್ನು ಖರ್ಚು ಮಾಡಿದರೆ 2040ರ ಹೊತ್ತಿಗೆ ವಿಶ್ವದ ಜನಸಂಖ್ಯೆಗೆ ಅವಶ್ಯವಿರುವಷ್ಟು ಪ್ರಮಾ­ಣದ ನೀರು ಪೂರೈಸಲು ಸಾಧ್ಯ­ವಾಗದು ಎಂದು, ಮೂರು ವರ್ಷಗಳ ಕಾಲ ನಡೆ­ದಿ­ರುವ ಈ ಅಧ್ಯಯನ ವರದಿ ಹೇಳಿದೆ.

ಡೆನ್ಮಾರ್ಕ್‌ನ ಆರ್‌ಹಸ್‌ ವಿವಿ, ಅಮೆರಿ­ಕದ ವರ್ಮೊಂಟ್‌ ಕಾನೂನು ಶಾಲೆ ಮತ್ತು ಸಿಎನ್ಎ ಕಾರ್ಪೊ­ರೇಶನ್‌ ಕೈಗೊಂಡ ಈ ಅಧ್ಯಯನದಲ್ಲಿ ಕುಡಿಯುವ ನೀರಿನ ಬೇಡಿಕೆ ಮತ್ತು ವಿದ್ಯುತ್ತಿನ ಬೇಡಿಕೆ ನಡುವೆ ಪೈಪೋಟಿ ಸಾಮಾನ್ಯ ಎಂದು ಹೇಳಲಾಗಿದೆ. ಬಹುತೇಕ ರಾಷ್ಟ್ರಗಳಲ್ಲಿ ವಿದ್ಯುತ್‌ ಉತ್ಪಾದನೆಗೆ ಅತಿ ಹೆಚ್ಚು ನೀರು ಬಳಕೆ­ಯಾಗುತ್ತಿದೆ ಎಂಬುದನ್ನೂ ಅಧ್ಯಯನ ಗುರುತಿಸಿದೆ.

2020ರಲ್ಲೇ ಸಂಕಷ್ಟ?: ವಿಶ್ವದ ಜನ­ಸಂಖ್ಯೆ ಮತ್ತು ನೀರಿನ ಲಭ್ಯತೆ ಕುರಿತು ಗಮನಹರಿಸಿರುವ ಇದೇ ಅಧ್ಯಯನ ತಂಡ, 2020ರ ಹೊತ್ತಿಗೆ ಜಗತ್ತಿನ ಬಹಳ  ಭಾಗಗಳಲ್ಲಿ ಶುದ್ಧ ಕುಡಿಯುವ ನೀರು ಲಭ್ಯವಾಗದು ಮತ್ತು ವಿಶ್ವದ ಶೇ 30ರಿಂದ 40 ರಷ್ಟು ಭಾಗಗಳಲ್ಲಿ ನೀರಿನ ಕೊರತೆ ಎದುರಾಗಲಿದೆ ಎಂದೂ ಹೇಳಿದೆ.

ವಿಶ್ವದ ನೀರಿನ ಭವಿಷ್ಯ ಹೀಗಿರುವಾಗ ಲಭ್ಯವಿರುವ ಸೀಮಿತ ಪ್ರಮಾಣದ ನೀರನ್ನು ವಿದ್ಯುತ್‌ ಯೋಜನೆಗಳನ್ನು ನಡೆಸಲು ಉಪಯೋಗಿಸಬೇಕೇ ಅಥವಾ ಕುಡಿಯಲು ಪೂರೈಸಬೇಕೇ ಎಂಬುದನ್ನು ನಿರ್ಧರಿಸಬೇಕಿದೆ ಎಂದು ತಂಡ ಕಿವಿಮಾತು ಹೇಳಿದೆ.
ಫ್ರಾನ್ಸ್, ಅಮೆರಿಕ, ಚೀನಾ ಮತ್ತು ಭಾರತದಲ್ಲಿನ ನೀರಿನ ಸಮಸ್ಯೆಗಳನ್ನು ಕುರಿತ ನಿದರ್ಶನಗಳನ್ನು ಗಣನೆಗೆ ತೆಗೆದುಕೊಂಡು ಈ ತಂಡ ಅಧ್ಯಯನ ವರದಿ ಸಿದ್ಧಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT