ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20,500ಕ್ಕೆ ಇಳಿಯಲಿದೆ ಚಿನ್ನ

ಅಮೆರಿಕ ಬ್ಯಾಂಕ್‌ ಬಡ್ಡಿ ಏರಿಕೆ ಪ್ರಭಾವ: ಇಂಡಿಯಾ ರೇಟಿಂಗ್‌ ಸಂಸ್ಥೆ ಭವಿಷ್ಯ
Last Updated 29 ಜುಲೈ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಮೆರಿಕದ ಕೇಂದ್ರ ಬ್ಯಾಂಕ್‌ ಬಡ್ಡಿದರದಲ್ಲಿ ಏರಿಕೆ ಮಾಡಿದರೆ ಭಾರತದ ಚಿನಿವಾರ ಪೇಟೆಯ ಮೇಲೆಯೂ ಅದು ಪರಿಣಾಮ ಬೀರಲಿದೆ. ಭಾರತದಲ್ಲಿ‌ಚಿನ್ನದ ಧಾರಣೆ 10 ಗ್ರಾಂಗೆ ₨20,500ದವರೆಗೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಇಂಡಿಯಾ ರೇಟಿಂಗ್‌ ಆ್ಯಂಡ್‌ ರಿಸರ್ಚ್‌ ಸಂಸ್ಥೆ ಭವಿಷ್ಯ ನುಡಿದಿದೆ.

ಅಮೆರಿಕದ ಕೇಂದ್ರ ಬ್ಯಾಂಕ್‌ ಮುಂದಿನ ಕೆಲವು ತಿಂಗಳುಗಳಲ್ಲಿ ಬಡ್ಡಿದರದಲ್ಲಿ ಏರಿಕೆ ಮಾಡುವ ಸಂಭವವಿದೆ. ಆಗ ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಔನ್ಸ್‌ಗೆ 900 ಡಾಲರ್‌ (₨57,150) ಅಥವಾ 1050 ಡಾಲರ್‌ (₨66,675) ಮಟ್ಟಕ್ಕೆ ತಗ್ಗಲಿದೆ. ಅಂದರೆ, ಐದು ವರ್ಷಗಳ ಹಿಂದೆ (2009-10ರಲ್ಲಿ) ಇದ್ದ ಧಾರಣೆಯ ಮಟ್ಟಕ್ಕೆ ತಗ್ಗಲಿದೆ. ಭಾರತದಲ್ಲಿಯೂ ಚಿನ್ನದ ಧಾರಣೆ ₨20,500 ಮತ್ತು ₨24 ಸಾವಿರದ ನಡುವಿನ ಶ್ರೇಣಿಗೆ ಇಳಿಯಲಿದೆ ಎಂದು ರೇಟಿಂಗ್‌ ಸಂಸ್ಥೆ ಅಂದಾಜು ಮಾಡಿದೆ.

ಚಿನ್ನ ನಗದೀಕರಣ ಯೋಜನೆ: ಈ ಮಧ್ಯೆ, ಚಿನ್ನ ನಗದೀಕರಣ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಮರುಚಿಂತನೆ ಮಾಡಬೇಕಾದ ಅಗತ್ಯವಿದೆ ಎಂದು ಹಣಕಾಸಿಗೆ ಸಂಬಂಧಿಸಿದ ಸಂಸದೀಯ ಸಮಿತಿ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಜನೆ ಕುರಿತು ಚಿನ್ನಾಭರಣ ತಯಾರಿಕೆ ಮತ್ತು ಮಾರಾಟ ಉದ್ಯಮ ಕ್ಷೇತ್ರದ ಪ್ರತಿನಿಧಿಗಳು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ಹಣಕಾಸಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯ ಮುಂದೆಯೂ ಪ್ರಶ್ನೆಗಳನ್ನಿಟ್ಟಿದ್ದಾರೆ. ಹಾಗಾಗಿ ಸರ್ಕಾರ ಯೋಜನೆಯನ್ನು ಮರುಪರಿಶೀಲನೆ ಮಾಡಬೇಕಿದೆ ಎಂದು ಗಮನ ಸೆಳೆದಿದ್ದಾರೆ.

ದೇಶೀಯ ಚಿನ್ನದ ಬೇಡಿಕೆಯನ್ನು ಸರಿದೂಗಿಸಲು, ಆ ಮೂಲಕ ಬಂಗಾರದ ಆಮದು ತಗ್ಗಿಸಲು ಕೇಂದ್ರ ಸರ್ಕಾರ ಚಿನ್ನ ನಗದೀಕರಣ ಯೋಜನೆ ಜಾರಿಗೆ ತರಲು ಮುಂದಾಗಿದೆ. ಫೆಬ್ರುವರಿ 28ರಂದು ಸಂಸತ್ತಿನಲ್ಲಿ 2015-15ನೇ ಹಣಕಾಸು ವರ್ಷದ ಬಜೆಟ್‌ ಮಂಡಿಸಿದಾಗಲೇ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಈ ಹೊಸ ಯೋಜನೆಯನ್ನು ಪ್ರಸ್ತಾಪಿಸಿದ್ದರು. 

ದೇಶದಲ್ಲಿ ಚಿನ್ನದ ವಹಿವಾಟುಗಳಿಗೆ ಸಂಬಂಧಿಸಿದಂತೆ ಸಮರ್ಥ ಹಾಗೂ ಸಮಗ್ರ ಸ್ವರೂಪದ ನೀತಿಯೊಂದನ್ನು ರೂಪಿಸಬೇಕಿದೆ.-ವೀರಪ್ಪ ಮೊಯಿಲಿ, ಹಣಕಾಸು ಸಂಸದೀಯ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT