ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ಸಾವು, ನೂರಾರು ಜನರು ನಾಪತ್ತೆ

ಲಿಬಿಯಾ ಕರಾವಳಿ ಪ್ರದೇಶದಲ್ಲಿ ಮುಳುಗಿದ ದೋಣಿ
Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ರೋಮ್‌ (ಎಎಫ್‌ಪಿ): ಸುಮಾರು 700 ಜನ ಅಕ್ರಮ ವಲಸಿಗರನ್ನು ತುಂಬಿಕೊಂಡು ಲಿಬಿಯಾದಿಂದ ಯುರೋಪ್‌ಗೆ ತೆರಳುತ್ತಿದ್ದ ಮೀನುಗಾರಿಕೆ ದೋಣಿ ಯೊಂದು ಮುಳುಗಿ ಕನಿಷ್ಠ 24 ಜನರು ಜಲಸಮಾಧಿಯಾಗಿರುವ ಘಟನೆ ಲಿಬಿಯಾ ಕರಾವಳಿ ಪ್ರದೇಶದಲ್ಲಿ ಭಾನುವಾರ ನಡೆದಿದೆ.

ಮೆಡಿಟರೇನಿಯನ್‌ ಪ್ರದೇಶದಲ್ಲಿ ಇತ್ತೀಚೆಗಿನ ವರ್ಷದಲ್ಲಿ  ಸಂಭವಿಸಿದ ಅತಿ ಭಯಾನಕ ದುರಂತವಿದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ 28 ಜನರನ್ನು ರಕ್ಷಿಸಲಾಗಿದೆ. ನೂರಾರು ಜನರು ಕಾಣೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್‌ ಕಚೇರಿ ವಕ್ತಾರೆ  ಕರ್ಲೊಟ್ಟ ಸಮಿ ತಿಳಿಸಿದ್ದಾರೆ. ದೋಣಿಯಲ್ಲಿ ಸುಮಾರು 700 ಜನರಿದ್ದರು ಎಂದು ರಕ್ಷಣೆಗೊಳಗಾದವರು ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಳೆದ ರಾತ್ರಿ ಈ ಘಟನೆ ಸಂಭವಿಸಿದೆ.  ಪೋರ್ಚುಗೀಸ್‌ ದೋಣಿಯೊಂದು ತಮ್ಮ ದೋಣಿಯತ್ತ ಬರುತ್ತಿದ್ದದ್ದನ್ನು ಕಂಡು ದೋಣಿಯ ಒಂದೇ ಕಡೆ ಜನ ಸೇರಿದ್ದರಿಂದ ದೋಣಿ ಮುಳುಗಿರಬಹುದು ಎಂದು ಕರಾವಳಿ ಪಡೆ ಸಿಬ್ಬಂದಿ ತಿಳಿಸಿದ್ದಾರೆ. ಇಟಲಿಯ ಕರಾವಳಿ ಕಾವಲು ನೌಕಾಪಡೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.  ಘಟನೆ ಕುರಿತು ಹೆಚ್ಚಿನ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ.

ಲಿಬಿಯಾ ಕರಾವಳಿ ಪ್ರದೇಶದಿಂದ 96 ಕಿ. ಮೀ  ಹಾಗೂ ಇಟಲಿಯ ದ್ವೀಪ  ಲಂಪೆಡುಸಾದಿಂದ 193 ಕಿ. ಮೀ ದೂರದಲ್ಲಿ ದೋಣಿ ದುರಂತ ಸಂಭವಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಲಿಬಿಯಾ, ಇಟಲಿ ಹಾಗೂ ಇತರ ಮೆಡಿಟರೇನಿಯನ್‌ ರಾಷ್ಟ್ರಗಳಲ್ಲಿ ದೋಣಿ ದುರಂತ ಸಾಮಾನ್ಯವಾಗಿದ್ದು, ಲಿಬಿಯಾ ಕರಾವಳಿ ಪ್ರದೇಶದಲ್ಲಿ ಈ ವಾರದಲ್ಲಿ ಸಂಭವಿಸಿದ ಎರಡನೇ ದೋಣಿ ದುರಂತ ಇದಾಗಿದೆ. ಈ ಮೊದಲ ದೋಣಿ ದುರಂತದಲ್ಲಿ ಸುಮಾರು 450 ಜನರು ಸಾವನ್ನಪ್ಪಿದ್ದರು.  ಈ ವರ್ಷದ ಆರಂಭದಿಂದ ಸುಮಾರು 1,500 ವಲಸಿಗರು ಲಿಬಿಯಾ ಹಾಗೂ ಇಟಲಿಯ ಮಧ್ಯದ ಜಲಪ್ರದೇಶದಲ್ಲಿ ಸಮಾಧಿಯಾಗಿದ್ದಾರೆ.

ದುರಂತ ಕುರಿತು ಪೋಪ್‌ ಫ್ರಾನ್ಸಿಸ್‌ ಸಂತಾಪ ಸೂಚಿಸಿದ್ದಾರೆ. ವಿದೇಶಾಂಗ ಮತ್ತು ಆಂತರಿಕ ಸಚಿವರುಗಳ ತುರ್ತುಸಭೆ ಆಯೋಜಿಸುವುದಾಗಿ ದುರಂತದ ಬಳಿಕ ಯೂರೋಪಿಯನ್‌ ಒಕ್ಕೂಟ ಹೇಳಿದೆ.

ಅಂಕಿ–ಅಂಶಗಳು
28 ಜನರ ರಕ್ಷಣೆ
11ಸಾವಿರ ಮಂದಿ, ಪ್ರಸಕ್ತ ವರ್ಷ ಇಟಲಿ ಸಾಗರ ಕಾವಲು ಪಡೆಯಿಂದ ರಕ್ಷಣೆ
1,500 ಜನರು ನೌಕಾಪಡೆಯಿಂದ ರಕ್ಷಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT