ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27ಕ್ಕೆ ಕೋಟೆಯಿಂದ ಮೆರವಣಿಗೆಗೆ ನಿರ್ಧಾರ

‘ವಾಲ್ಮೀಕಿ ಜಯಂತಿ’ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ
Last Updated 10 ಅಕ್ಟೋಬರ್ 2015, 8:42 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಸರ್ಕಾರದ ನೀತಿ ನಿಯಮಗಳು, ಮಾರ್ಗಸೂಚಿ ಹಾಗೂ ಶಿಷ್ಟಾಚಾರದೊಂದಿಗೆ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.27ರಂದು ಜನಾಂಗದ ಸರ್ವರ ಸಹಯೋಗ ದೊಂದಿಗೆ ಅದ್ಧೂರಿಯಾಗಿ ಆಚರಿಸಲಾ ಗುತ್ತದೆ’ ಎಂದು ಜಿಲ್ಲಾಧಿಕಾರಿ ಎಂ.ಕೆ.­ಶ್ರೀರಂಗಯ್ಯ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಾಯಕ ಜನಾಂಗದ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಐತಿಹಾಸಿಕ ಕೋಟೆಯ ಮುಂಭಾಗದಿಂದ ಮಧ್ಯಾಹ್ನ 12ಕ್ಕೆ ಮೆರವಣಿಗೆ ಪ್ರಾರಂಭಿಸಬೇಕು. ಸಂಜೆ 4ಕ್ಕೆ ವೇದಿಕೆ ಕಾರ್ಯಕ್ರಮದಲ್ಲಿ ಸಮಾವೇಶಗೊಳ್ಳಬೇಕು. ಈ ಕಾರ್ಯ ಕ್ರಮಕ್ಕಾಗಿ ಸರ್ಕಾರದ ವತಿಯಿಂದ ₹ 50 ಸಾವಿರ ಅನುದಾನ ನೀಡಲಾಗುತ್ತಿದೆ. ಈ ಅನುದಾನದಲ್ಲಿ ವೇದಿಕೆ ಕಾರ್ಯಕ್ರಮ, ಆಹ್ವಾನ ಪತ್ರಿಕೆ ಮುದ್ರಣ ಸೇರಿದಂತೆ ಇತರೆ ಖರ್ಚುವೆಚ್ಚಗಳನ್ನು ವ್ಯಯಿಸಲಾ ಗುತ್ತದೆ. ಇದರ ಜೊತೆಗೆ ನಗರಸಭೆ ಹಾಗೂ ಜನಾಂಗದ ಮುಖಂಡರ ಸಹಕಾರದಿಂದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲಾಗುವುದು’ ಎಂದು ಅವರು ತಿಳಿಸಿದರು.

‘ಸರ್ಕಾರದ ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು, ನಗರಸಭೆ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು, ಇತರೆ ಜನಪ್ರತಿನಿಧಿಗಳು, ಜನಾಂಗದ ಮುಖಂಡರು, ಹಿರಿಯರು ಹಾಗೂ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಡಿ.ಬೋರಪ್ಪ ಅವರನ್ನು ಕಾರ್ಯಕ್ರಮಕ್ಕೆ ಜನಾಂಗದ ಪರವಾಗಿ ಆಹ್ವಾನಿಸಲಾ ಗುವುದು’ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಸಾಹಿತಿ, ಸಂಶೋಧಕರ ಹೆಸರು ಸೂಚಿಸುವ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದರು ಸಾಹಿತಿ ಬಿ.ಎಲ್.ವೇಣು, ಹಂಪಿ ವಿಶ್ವವಿದ್ಯಾಲಯದ ಪ್ರೊ.ವಿರೂಪಾಕ್ಷಪ್ಪ ಪೂಜಾರಹಳ್ಳಿ ಹಾಗೂ ರಂಗರಾಜ್ ವನದುರ್ಗ ಅವರ ಹೆಸರು ಕೇಳಿಬಂತು. ಈ ಮೂವರಲ್ಲಿ ಒಬ್ಬರ ಹೆಸರನ್ನು ಅಂತಿಮಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಮೆರವಣಿಗೆ ಹೊರಡುವ ವಿಚಾರ ದಲ್ಲಿ ನಾಯಕ ಜನಾಂಗದ ಮುಖಂಡರಲ್ಲೇ ಗೊಂದಲ ಏರ್ಪಟ್ಟಿತು. ಒಂದು ಗುಂಪು ಕನಕ ವೃತ್ತದಿಂದ, ಮತ್ತೊಂದು ಗುಂಪು ಚಳ್ಳಕೆರೆ ಗೇಟ್ ಅಥವಾ ಕೆಳಗೋಟೆಯ ಚನ್ನಕೇಶವ ದೇವಸ್ಥಾನದಿಂದ ಮೆರವಣಿಗೆ ಹೊರಡ ಬೇಕು ಎಂದು ಒತ್ತಾಯ ಮಾಡಿತು. ಅಂತಿಮವಾಗಿ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ, ‘ಜಿಲ್ಲಾಡಳಿತ ಎಲ್ಲ ರಾಷ್ಟ್ರೀಯ ಹಬ್ಬಗಳನ್ನು ಕೋಟೆ ಸಮೀಪದಿಂದ ಆರಂಭಿಸಿ ಏಕನಾಥೇಶ್ವರಿ ದೇವಾಲಯ ದಲ್ಲಿ ಪೂಜೆ ಸಲ್ಲಿಸಿ ನಂತರ ರಂಗಯ್ಯನ ಬಾಗಿಲು ಮೂಲಕ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತದೆ. ಈ ಪ್ರಕಾರವೇ ವಾಲ್ಮೀಕಿ ಜಯಂತಿಯೂ ನಡೆಯುತ್ತದೆ. ನೀವೆಲ್ಲ ಒಂದಾಗಿ  ಒಂದಾಗಿ ತೀರ್ಮಾನ ಮಾಡಿದ ನಂತರ ಸಮಾರಂಭ ನಡೆಯುವ ಜಾಗ ನಿದಿಪಡಿಸಲಾಗುತ್ತದೆ’ ಎಂದರು.

‘ಆಹ್ವಾನ ಪತ್ರಿಕೆ ವಿಚಾರದಲ್ಲೂ ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಹೆಸರು ಸೇರಿ ಇಬ್ಬರು ಹೆಸರು ಮುದ್ರಿಸಲು ಮಾತ್ರ ಅವಕಾಶ ವಿದೆ. ನೀವು ಸೂಚಿಸುವ ಒಮ್ಮತದ ಅಧ್ಯಕ್ಷ-ಕಾರ್ಯದರ್ಶಿಗಳ ಹೆಸರು ಮಾತ್ರ ಹಾಕುತ್ತೇವೆ’ ಎಂದರು. ಆಗ, ಜನಾಂಗದ ಮುಖಂಡ ಗೋಪಾಲ ಸ್ವಾಮಿ ನಾಯಕ್ ಅವರು ಡಿ.ಬೋರಪ್ಪ ಅವರ ಹೆಸರು ಸೂಚಿಸಿದರು. ಎಲ್ಲರೂ ಚಪ್ಪಾಳೆ ಮೂಲಕ ಸಹಮತ ವ್ಯಕ್ತಪಡಿಸಿದರು.

ಇದೇವೇಳೆ ಜಿಲ್ಲಾ ಮದಕರಿ ಸಂಸ್ಥೆಯಿಂದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಐದು ಕಲಾ ತಂಡಗಳನ್ನು ಪ್ರಾಯೋಜಿಸುವುದಾಗಿ ಸಂಸ್ಥೆಯ ಸಂಸ್ಥಾಪಕ ಡಿ.ಬೋರಪ್ಪ ಸಭೆಗೆ ತಿಳಿಸಿದರು. ಜಿಲ್ಲಾಧಿಕಾರಿ ‘ಮೆರವಣಿಗೆ ಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 3–4 ಕಲಾತಂಡಗಳನ್ನು ನಿಯೋಜಿಸಲಾಗುವುದು’ ಎಂದು ತಿಳಿಸಿದರು.

ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗುವ ಮೆರವಣಿಗೆ ಹಾಗೂ ವೇದಿಕೆ ಸಮಾರಂಭದಲ್ಲಿ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯ ವಾಗಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಇದೇ ವೇಳೆ ಪೂರ್ವಭಾವಿ ಸಭೆಗೆ ಗೈರುಹಾಜರಾಗಿ ರುವ ವಿವಿಧ ಇಲಾಖೆಯ ಅಧಿಕಾರಿ ಗಳಿಗೆ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ‘ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯ ಐವರು ಗಣ್ಯರನ್ನು ಸನ್ಮಾನಿಸುವಂತೆ ಜನಾಂಗದ ಗಣ್ಯರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಗಿರಿ ಎಂ.ಜಾನಕಲ್, ನಗರಸಭೆ ಅಧ್ಯಕ್ಷ ಕಾಂತರಾಜ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ  ಪ್ರತಿಭಾ ರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಉಪ ವಿಭಾಗಾಧಿಕಾರಿ ತಿಪ್ಪೇಸ್ವಾಮಿ, ನಾಯಕ ಜನಾಂಗದ ಜಿಲ್ಲಾ ಮುಖಂಡರು,
ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

***
ಸಮುದಾಯದಲ್ಲಿ ಎಷ್ಟು ಗುಂಪು ಗಳಿದ್ದರೂ ನಮಗೆ ಸಂಬಂಧವಿಲ್ಲ. ಎಲ್ಲ ಜಯಂತಿಯಂತೆ, ಸರ್ಕಾರದ ಶಿಷ್ಟಾಚಾರದಂತೆ ಆಚರಿಸಲಾಗುತ್ತದೆ.
-ಎಂ.ಕೆ.ಶ್ರೀರಂಗಯ್ಯ,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT