ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ

Last Updated 26 ಅಕ್ಟೋಬರ್ 2014, 13:07 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ದೀಪಾವಳಿ ಮುಗಿಯುತ್ತಿದ್ದಂತೆಯೇ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆ ವೇಗ ಪಡೆದಿದ್ದು, ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ (ಬಿಎಲ್‌ಪಿ) ನಾಯಕನ ಆಯ್ಕೆಗೆ ಮಂಗಳವಾರ ಸಭೆ ನಡೆಯಲಿದೆ.

ಶಾಸಕಾಂಗ ಪಕ್ಷದ ನಾಯಕ ಹಾಗೂ ನಿಯೋಜಿತ ಮುಖ್ಯಮಂತ್ರಿಯ ಆಯ್ಕೆಗಾಗಿ ಮಂಗಳವಾರ ಅಕ್ಟೋಬರ್ 28ರಂದು ಸಭೆ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಮುಖಂಡ ಏಕನಾಥ್ ಖಾದ್ಸೆ ಅವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸರ್ಕಾರ ರಚನೆ ಸಿದ್ಧತೆಗಳ ಬಗೆಗೆ ಚರ್ಚಿಸಿಲು ಮಹಾರಾಷ್ಟ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೇವೇಂದ್ರ ಫಡ್ನವೀಸ್‌, ಪಕ್ಷದ ಹಿರಿಯ ಮುಖಂಡರಾದ ವಿನೋದ್‌ ತಾವಡೆ ಹಾಗೂ ಖಾದ್ಸೆ ಅವರು ಈಗಾಗಲೇ ಭೇಟಿ ಮಾಡಿದ್ದರು.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಹಾಗೂ ಮಹಾರಾಷ್ಟ್ರ ರಾಜ್ಯದ ಬಿಜೆಪಿ ಉಸ್ತುವಾರಿ ಜೆ.ಪಿ.ನಡ್ಡಾ ಅವರು ಮಂಗಳವಾರ ನಡೆಯಲಿರುವ ಸಭೆಯಲ್ಲಿ ವೀಕ್ಷಕರಾಗಿ ಉಪಸ್ಥಿತ ಇರಲಿದ್ದಾರೆ.

ಸಭೆಯ ಬಳಿಕ ಶಾಸಕಾಂಗ ಪಕ್ಷದ ನಾಯಕ ಸರ್ಕಾರ ರಚಿಸುವ ನಿಟ್ಟಿನಲ್ಲಿ ರಾಜ್ಯಪಾಲರಾದ ಸಿ.ಎಚ್‌.ವಿದ್ಯಾಸಾಗರ ಅವರನ್ನು ಭೇಟಿ ಮಾಡಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

‘ಒಂದು ವೇಳೆ ರಾಜ್ಯಪಾಲರು ಬಯಸಿದರೆ ನಾವು ಸದನದಲ್ಲಿ ಬಹುಮತ ಸಾಬೀತು ಮಾಡುತ್ತೇವೆ’ ಎಂದು ಖಾದ್ಸೆ ನುಡಿದರು.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 122 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಆದರೆ ಸರಳ ಬಹುಮತಕ್ಕೆ 23 ಸ್ಥಾನಗಳ ಕೊರತೆಯಿದೆ. 41 ಸ್ಥಾನಗಳನ್ನು ಪಡೆದಿರುವ ಎನ್‌ಸಿಪಿ ಸರ್ಕಾರಕ್ಕೆ ಷರತ್ತು ರಹಿತ ಬಾಹ್ಯ ಬೆಂಬಲ ನೀಡುವುದಾಗಿ ಈಗಾಗಲೇ ಘೋಷಿಸಿದೆಯಾದರೂ ಬಿಜೆಪಿ ಅದರ ಆಹ್ವಾನವನ್ನು ಪರಿಗಣಿಸುವ ಸಾಧ್ಯತೆಯಿಲ್ಲ.

63 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಮಾಜಿ ಅಂಗ ಪಕ್ಷ ಶಿವಸೇನೆಯೊಂದಿಗೆ ಮರುಮೈತ್ರಿ ಮಾಡಿಕೊಳ್ಳುವುದು ಬಹುತೇಕ ನಿಚ್ಚಳವಾಗಿದೆ.

25 ವರ್ಷಗಳ ಮೈತ್ರಿಯನ್ನು ಸೀಟು ಹಂಚಿಕೆ ಬಿಕ್ಕಟ್ಟಿನಿಂದಾಗಿ ಬಿಜೆಪಿ–ಶಿವಸೇನೆ ಅಕ್ಟೋಬರ್‌ 15ರಂದು ನಡೆದ ಚುನಾವಣೆಗೂ ಕೊನೆಗೊಳಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT