ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

29ರಂದು ಚುನಾವಣಾ ಆಯೋಗದ ಸಭೆ

Last Updated 18 ಡಿಸೆಂಬರ್ 2014, 20:27 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರಸಕ್ತ ಕೌನ್ಸಿಲ್‌ ಅವಧಿ 2015ರ ಮಾರ್ಚ್‌ನಲ್ಲಿ ಕೊನೆಗೊಳ್ಳಲಿದ್ದು, ಸಕಾಲದಲ್ಲಿ ಚುನಾವಣೆ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗ ಡಿ. 29ರಂದು ಸಭೆ ನಡೆಸಲಿದೆ.

ಈ ಸಂಬಂಧ ರಾಜ್ಯ ಚುನಾವಣಾ ಆಯೋಗ ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿಗೆ ಎರಡು ದಿನಗಳ ಹಿಂದೆ ಪತ್ರ ಬರೆದಿದೆ.
ಬಿಬಿಎಂಪಿ ವಿಭಜನೆ ಕುರಿತಂತೆ ಹೆಚ್ಚಿನ ಆಸಕ್ತಿ ವಹಿಸಿರುವ ರಾಜ್ಯ ಸರ್ಕಾರ ಈ ಸಂಬಂಧ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿಯೊಂದನ್ನು ರಚಿಸಿದೆ. ಸಮಿತಿ ಈಗಷ್ಟೇ ಅಧ್ಯಯನ ಕಾರ್ಯವನ್ನು ಆರಂಭಿಸಿದ್ದು, ವರದಿ ಸಲ್ಲಿಸಲು ಕನಿಷ್ಠ ಆರು ತಿಂಗಳ ಕಾಲಾವಕಾಶ ಅಗತ್ಯ ಎಂದು ಹೇಳಲಾಗಿದೆ. ಹೀಗಾಗಿ ಚುನಾವಣೆ ಸಹ ಮುಂದಕ್ಕೆ ಹೋಗಬಹುದು ಎಂಬ ಮಾತು ಕೇಳಿ ಬರುತ್ತಿದೆ.

ಚುನಾವಣಾ ಆಯೋಗ ಕರೆದ ಸಭೆಯಲ್ಲಿ ಕ್ಷೇತ್ರ ಪುನರ್‌ವಿಂಗಡಣೆ, ಮೀಸಲಾತಿ ಅಧಿಸೂಚನೆ, ಅನುದಾನ ಬಿಡುಗಡೆ, ಚುನಾವಣಾಧಿಕಾರಿಗಳ ನೇಮಕ, ಮತಗಟ್ಟೆ, ಎಣಿಕೆ ಕೇಂದ್ರಗಳ ಪಟ್ಟಿ ಸಿದ್ಧಪಡಿಸುವಿಕೆ ಮತ್ತು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಳ್ಳುವ ಸಿಬ್ಬಂದಿಗೆ ತರಬೇತಿ ನೀಡುವ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಬಿಬಿಎಂಪಿ ಚುನಾವಣೆ ನಡೆಸಲು ರೂ 20 ಕೋಟಿ ಅನುದಾನದ ಅಗತ್ಯವಿದೆ ಎಂದು ಪತ್ರದಲ್ಲಿ ತಿಳಿಸ­ಲಾಗಿದೆ. ಮಹಿಳಾ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕೆ ಹೆಚ್ಚಿಸುವ ಕುರಿತಂತೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.

ವಿಭಜನೆಗೆ ಆಸಕ್ತಿ: ಬೆಂಗಳೂರು ಮಹಾನಗರವು ದಿನದಿಂದ ದಿನಕ್ಕೆ ವ್ಯಾಪಕ­ವಾಗಿ ಬೆಳೆಯುತ್ತಿದ್ದು, ವಲಸಿಗರ ಸಂಖ್ಯೆ ಅಧಿಕವಾಗಿದೆ. ಯೋಜನಾರಹಿತ ನಗರೀ­ಕರಣ­ದಿಂದ ಸಾರ್ವಜನಿಕರಿಗೆ ಅಗತ್ಯ ಮೂಲ­ಸೌಕರ್ಯ­­ಗಳನ್ನು ಒದಗಿಸಲು ಕಷ್ಟ­ವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟಿದ್ದರು.

ಮುಂಬೈ, ಕೋಲ್ಕತ್ತ ಹಾಗೂ ದೆಹಲಿ ಪಾಲಿಕೆಗಳನ್ನು ಆಡಳಿತಾತ್ಮಕ ಕಾರಣಗಳಿಗೆ ವಿಭಜನೆ ಮಾಡಿದ್ದನ್ನು ಅವರು ಪ್ರಸ್ತಾಪ ಮಾಡಿದ್ದರು. ಈ ವಿಷಯದಲ್ಲಿ ತಜ್ಞರು ಹಾಗೂ ಸಾರ್ವಜನಿಕರ ಸಲಹೆ ಪಡೆಯುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ಸಚಿವರಿಂದ ಒತ್ತಾಯ ಕೇಳಿಬಂದ ಬಳಿಕ ಸರ್ಕಾರ ತಜ್ಞರ ಸಮಿತಿ ರಚನೆ ಮಾಡಿತು.

ಮುಂದೂಡಲು ಬಿಡಲ್ಲ: ‘ಬಿಬಿಎಂಪಿ ವಿಭಜನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಚುನಾವಣೆಯನ್ನು ಮುಂದೂಡಲು ಹೊರಟಿದ್ದು ಯಾವುದೇ ಕಾರಣಕ್ಕೂ ಬಿಜೆಪಿ ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್‌.ಆರ್‌. ರಮೇಶ್‌ ಹೇಳಿದರು.

‘ಬೆಂಗಳೂರು ನಗರವನ್ನು ಭಾಷೆ ಆಧಾರಿತ ನೆಲೆಯಲ್ಲಿ ಒಡೆಯುವ ಯತ್ನ­ಗಳು ನಡೆದಿವೆ. ಪೂರ್ವ ಪಾಲಿಕೆಯನ್ನೂ ಸೃಷ್ಟಿ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ. ಅಂತಹ ಯತ್ನಕ್ಕೆ ನಮ್ಮ ವಿರೋಧವಿದೆ’ ಎಂದು ತಿಳಿಸಿದರು.

ಸೋಲಿನ ಭೀತಿಯನ್ನು ಅನುಭವಿಸುತ್ತಿರುವ ಕಾಂಗ್ರೆಸ್‌ ಪಕ್ಷ ಚುನಾವಣೆ ಮುಂದೂಡುವ ಸಲುವಾಗಿ ಬಿಬಿಎಂಪಿ ವಿಭಜನೆ ಜಪ ಮಾಡುತ್ತಿದೆ

–ಎನ್‌.ಆರ್‌. ರಮೇಶ್‌, ಬಿಬಿಎಂಪಿ ಆಡಳಿತ ಪಕ್ಷದ ನಾಯಕ

‘ಪೂರ್ವ ಭಾಗದಲ್ಲಿ ಪರಭಾಷಿಕರೇ ಹೆಚ್ಚಿದ್ದು, ಕನ್ನಡಿಗರ ಸಂಖ್ಯೆ ಶೇ 15ರಷ್ಟು ಮಾತ್ರ ಇದೆ. ರಾಜ್ಯದ ಆಡಳಿತ ಭಾಷೆಯನ್ನು ಶೇ 33.3ರಷ್ಟು ಜನ ಕೂಡ ಆಡದಿದ್ದರೆ ಅಂತಹ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗುತ್ತದೆ. ಹೀಗಾಗಿ ಇಂತಹ ಯತ್ನಕ್ಕೆ ಸರ್ಕಾರ ಕೈಹಾಕಬಾರದು’ ಎಂದು ವಿವರಿಸಿದರು. ‘ಸೋಲಿನ ಭೀತಿಯಿಂದ ಕಾಂಗ್ರೆಸ್‌ ವಿಭಜನೆ ಜಪ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪ ಡಿಸಿದರು.

ನಿಗದಿಯಂತೆ ಚುನಾವಣೆ: ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಬಿ.ಎನ್‌. ಮಂಜು­ನಾಥ್‌ ರೆಡ್ಡಿ, ‘ಚುನಾ­ವಣೆಯನ್ನು ಮುಂದೂಡುವ ಯಾವ ಯತ್ನಗಳೂ ನಡೆಯುತ್ತಿಲ್ಲ. ನಿಗದಿತ ಅವಧಿಯೊಳಗೆ ಚುನಾವಣೆ ಪ್ರಕ್ರಿಯೆಯನ್ನು ಮುಗಿಸಬೇಕು ಎನ್ನುವುದು ಕಾಂಗ್ರೆಸ್‌ ಪಕ್ಷದ ಆಶಯವಾಗಿದೆ’ ಎಂದು ಹೇಳಿದರು.

ಆದಷ್ಟು ಬೇಗ ಚುನಾವಣೆ ನಡೆಯಬೇಕು ಮತ್ತು ಬಿಜೆಪಿ ಆಡಳಿತದ ಹಗರಣಗಳನ್ನು ಜನತೆ ಮುಂದಿಡಬೇಕು ಎಂಬ ತುಡಿತ ನಮ್ಮದಾಗಿದೆ

–ಬಿ.ಎನ್‌. ಮಂಜುನಾಥ್‌ ರೆಡ್ಡಿ, ಬಿಬಿಎಂಪಿ ವಿರೋಧ ಪಕ್ಷದ ನಾಯಕ

‘ಅಧಿವೇಶನ ಮುಗಿದ ಕೂಡಲೇ ಸರ್ಕಾರ ಬಿಬಿಎಂಪಿ ಕಡೆಗೆ ಗಮನ ಹರಿಸಲಿದೆ. ಅಧ್ಯಯನ ವರದಿ ಆದಷ್ಟು ಬೇಗ ಕೈಸೇರಬೇಕು ಎನ್ನುವ ಸೂಚನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ರಾಮಲಿಂಗಾ ರೆಡ್ಡಿ ಅವರು ಸಮಿತಿ ಸದಸ್ಯರಿಗೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಬೇಗ ಚುನಾವಣೆ ನಡೆಯಬೇಕು ಮತ್ತು ಬಿಜೆಪಿ ಆಡಳಿತದ ಹಗರಣಗಳನ್ನು ಜನತೆ ಮುಂದಿಡಬೇಕು ಎಂಬ ಉತ್ಸಾಹದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT