ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

29 ಕಂಬಗಳು ನೆಲಕ್ಕೆ

ರಾಜಧಾನಿಯ ಹಲವೆಡೆ ಶನಿವಾರ ಮತ್ತೆ ಅಬ್ಬರಿಸಿದ ಮಳೆರಾಯ
Last Updated 2 ಮೇ 2015, 19:41 IST
ಅಕ್ಷರ ಗಾತ್ರ

ಬೆಂಗಳೂರು: ಗುಡುಗು ಸಹಿತ  ಶನಿವಾರ ಸುರಿದ ಧಾರಾಕಾರ ಭಾರಿ ಮಳೆಗೆ ರಾಜಧಾನಿ ಮತ್ತೆ ತತ್ತರಿಸಿದ್ದು, ನಗರದ ವಿವಿಧೆಡೆ 20ಕ್ಕೂ ಹೆಚ್ಚು ಮರಗಳು ಹಾಗೂ 29 ವಿದ್ಯುತ್‌ ಕಂಬಗಳು ಧೆರೆಗುರುಳಿವೆ.

ಜಯನಗರ, ಜೆ.ಪಿ. ನಗರ, ಬಿಟಿಎಂ ಲೇಔಟ್, ಬನಶಂಕರಿ, ಮೈಕೊ ಲೇಔಟ್, ಮಲ್ಲೇಶ್ವರ, ಕಬ್ಬನ್ ರಸ್ತೆ,  ರಾಜಾಜಿನಗರ, ಮಹಾಲಕ್ಷ್ಕೀ ಲೇಔಟ್‌, ಅಶೋಕ ಪಿಲ್ಲರ್, ವಿಲ್ಸನ್‌ ಗಾರ್ಡ್‌ನ್‌, ಹಾಸ್‌ಮಾಟ್‌ ಆಸ್ಪತ್ರೆ,  ಆಸ್ಟಿನ್ ಟೌನ್, ಜಾನ್ಸನ್‌ ಮಾರ್ಕೆಟ್‌, ವಿವೇಕನಗರ, ಅಶೋಕನಗರ ಸೇರಿದಂತೆ ವಿವಿಧೆಡೆ ಮರಗಳು ಹಾಗೂ ವಿದ್ಯುತ್‌ ಕಂಬಗಳು ನೆಲ ಕಚ್ಚಿದವು.

ಮಧ್ಯಾಹ್ನದ ಹೊತ್ತಿಗೆ ಆರಂಭವಾದ ಮಳೆ ಸುಮಾರು ಮುಕ್ಕಾಲು ತಾಸು ಸುರಿಯಿತು. ಒಳಚರಂಡಿಗಳು ತುಂಬಿ ಹರಿದಿದ್ದರಿಂದ ವಾಹನ ಚಾಲಕರು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದರಿಂದ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲೇ ಕಾಲ ಕಳೆಯಬೇಕಾಯಿತು.

‘ನಗರ ವ್ಯಾಪ್ತಿಯಲ್ಲಿ 9.5 ಮಿ.ಮೀ, ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 0.4 ಮಿ.ಮೀ. ಮಳೆಯಾಗಿದೆ. ಯಲಹಂಕದಲ್ಲಿ ಹೆಚ್ಚು (1.8 ಮಿ.ಮೀ) ಮಳೆ ಸುರಿದಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

1,586 ದೂರುಗಳು: ಮರ ಹಾಗೂ ವಿದ್ಯುತ್‌ ಕಂಬ ಬಿದ್ದಿರುವ ಸಂಬಂಧ ಇದುವರೆಗೆ 1,586 ದೂರುಗಳು ಬಂದಿವೆ. ಅವುಗಳಲ್ಲಿ 380 ದೂರುಗಳನ್ನು ಇತ್ಯರ್ಥಪಡಿಸಲಾಗಿದ್ದು, 1,206 ಇತ್ಯರ್ಥಗೊಳ್ಳಬೇಕಿದೆ’ ಎಂದು ಬೆಸ್ಕಾಂ ತಿಳಿಸಿದೆ.

‘ಜಯನಗರ, ಜೆ.ಪಿ. ನಗರ ಹಾಗೂ ಬನಶಂಕರಿಯಲ್ಲಿ ಹೆಚ್ಚು ಮರಗಳು ಬಿದ್ದಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಸಿಬ್ಬಂದಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ತೆರವಾಗದ ಮರಗಳು: ಗುರುವಾರದ ಗಾಳಿ–ಮಳೆಯಿಂದ ಧರೆಗುರುಳಿದ್ದ ಮರಗಳ ತೆರವು ಕಾರ್ಯ ಇನ್ನೂ ಕುಂಟುತ್ತಾ ಸಾಗುತ್ತಿದೆ. ಬಿ.ಟಿ.ಎಂ, ಜೆ.ಪಿ. ನಗರ, ಮಲ್ಲೇಶ್ವರ, ಬನಶಂಕರಿಯಲ್ಲಿ ಬಿದ್ದಿದ್ದ ಮರಗಳು ಇನ್ನೂ ತೆರವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT