ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

300 ದಿನಗಳಲ್ಲಿ ಸುರಂಗ ಮಾರ್ಗ ಪೂರ್ಣ

ಮೆಟ್ರೊ ಕಾಮಗಾರಿ ಪರಿಶೀಲಿಸಿದ ಮುಖ್ಯಮಂತ್ರಿ: ಕೆಲಸ ತ್ವರಿತಗೊಳಿಸಲು ಸೂಚನೆ
Last Updated 15 ಸೆಪ್ಟೆಂಬರ್ 2014, 20:20 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲ ಹಂತದ ಮೆಟ್ರೊ ರೈಲು ಸಂಪರ್ಕ ಜಾಲಕ್ಕೆ ಬಹುಮುಖ್ಯ ಕೊಂಡಿಯಾಗಿರುವ ಸುರಂಗ ಮಾರ್ಗವು ಪೂರ್ಣಗೊಳ್ಳಲು ಇನ್ನೂ 300 ದಿನಗಳ ಅಗತ್ಯವಿದೆ. ಗಟ್ಟಿಯಾದ ಬಂಡೆ ಎದುರಾಗಿದ್ದರಿಂದ ಸದ್ಯ ದಿನಕ್ಕೆ ತಲಾ ಒಂದು ಮೀಟರ್‌ನಷ್ಟು ಮಾತ್ರ ಸುರಂಗ ಕೊರೆಯಲು ನಾಲ್ಕೂ ಯಂತ್ರಗಳಿಗೆ ಸಾಧ್ಯವಾಗುತ್ತಿದೆ.

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಈ ಮಾಹಿತಿ ನೀಡಿದರು. ಮೆಟ್ರೊ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಅವರು ವಿವಿಧ ನಿಲ್ದಾಣಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

‘ನಾಲ್ಕೂ ನಿಟ್ಟಿನಿಂದ ಮಾರ್ಗ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದರೂ ಮೆಜಸ್ಟಿಕ್‌ ಹತ್ತಿರದ ಎರಡೂ ದಿಕ್ಕಿನ ನೆಲದಡಿ ಮಾರ್ಗ ನಿರ್ಮಾಣದ ಕೆಲಸ ತುಂಬಾ ನಿಧಾನವಾಗಿ ಸಾಗಿದೆ. ಬೇರೆ ಎಲ್ಲ ಸಿದ್ಧತೆಯಾದರೂ ಈ ಮಾರ್ಗ ಪೂರ್ಣಗೊಳ್ಳದೆ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಪ್ರಯಾಣ ಮಾಡಲು ಸಾಧ್ಯವಿಲ್ಲ’ ಎಂದು ಶಾಸಕ ಎಂ.ಕೃಷ್ಣಪ್ಪ ದೂರಿದರು.

ಮುಖ್ಯಾಂಶಗಳು

*ನೆಲದಡಿ ಕಾಮಗಾರಿಗೆ ಒತ್ತು ನೀಡಲು ಆದೇಶ
*ನಾಗಸಂದ್ರ ನಿಲ್ದಾಣಕ್ಕೆ ಫೆಬ್ರುವರಿಯಲ್ಲಿ ಸಂಚಾರ ಸೇವೆ
*2015ರ ಸೆಪ್ಟೆಂಬರ್‌ಗೆ ಮೊದಲ ಹಂತದ ಯೋಜನೆ ಪೂರ್ಣ

‘ಹೌದು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಪರ್ಕ ಸಾಧ್ಯವಾಗದಿದ್ದರೆ ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನ ಇಲ್ಲ. ಸುರಂಗ ಮಾರ್ಗ ಪೂರ್ಣಗೊಳಿಸುವ ಸಲುವಾಗಿ ಎಲ್ಲ ಬಲ ಹಾಗೂ ಸಂಪನ್ಮೂಲವನ್ನೂ ಬಳಕೆ ಮಾಡಬೇಕು. ಕಾಲಮಿತಿಯಲ್ಲಿ ಕೆಲಸ ಮುಗಿಸಬೇಕು’ ಎಂದು ಮುಖ್ಯಮಂತ್ರಿ, ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ಅವರಿಗೆ ಸೂಚಿಸಿದರು.

‘ಬಂಡೆಗಲ್ಲು ಎದುರಾಗಿದ್ದರಿಂದ ಕೆಲಸ ನಿಧಾನಗತಿಯಲ್ಲಿ ಸಾಗಿದೆ’ ಎಂದು ಖರೋಲಾ ಸಮಜಾಯಿಷಿ ನೀಡಿದರು. ‘ಮತ್ತೆ ಅವಧಿ ವಿಸ್ತರಣೆ ಸಾಧ್ಯವೇ ಇಲ್ಲ. 300 ದಿನಗಳಲ್ಲಿ ಕೆಲಸ ಮುಗಿಸಲೇಬೇಕು’ ಎಂದು ಮುಖ್ಯಮಂತ್ರಿ ತಾಕೀತು ಮಾಡಿದರು.

ಸಂಚಾರ ಸಮಯ ಬದಲು

ವಿದ್ಯುತ್‌ ಪೂರೈಕೆ ಕೇಬಲ್‌ಗಳ ಅಳ­ವಡಿಕೆ ಕಾರ್ಯ ನಡೆಯುತ್ತಿರುವ ಕಾರಣ ಸೆ. 20ರವರೆಗೆ ಮಂತ್ರಿ ಸ್ಕ್ವೇರ್‌ ಮತ್ತು ಪೀಣ್ಯ ಇಂಡಸ್ಟ್ರಿ ನಿಲ್ದಾಣಗಳ ಮಧ್ಯೆ ಬೆಳಿಗ್ಗೆ 6ರ ಬದಲು 8ಗಂಟೆಯಿಂದ ಮೆಟ್ರೊ ರೈಲುಗಳ ಓಡಾಟ ಆರಂಭವಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಮೊದಲು ನಾಗಸಂದ್ರ ನಿಲ್ದಾಣಕ್ಕೆ (ಹೆಸರುಘಟ್ಟ ಕ್ರಾಸ್‌) ಭೇಟಿ ನೀಡಿದ ಅವರು, ‘ಪೀಣ್ಯ ಇಂಡಸ್ಟ್ರಿ ನಿಲ್ದಾಣದಿಂದ ನಾಗಸಂದ್ರ ನಿಲ್ದಾಣದವರೆಗೆ 2.5 ಕಿ.ಮೀ ಉದ್ದದ ರೀಚ್‌ 3ಬಿ ಮಾರ್ಗ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದ್ದು, ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ.

ಎಲ್ಲ ಸುರಕ್ಷತಾ ಪರೀಕ್ಷೆ ಮುಗಿಸಿ ಅನುಮತಿ ಪತ್ರ ಪಡೆಯಲು ಮತ್ತೆರಡು ತಿಂಗಳ ಕಾಲಾವಕಾಶ ಬೇಕು.
2015ರ ಫೆಬ್ರುವರಿ ಅಂತ್ಯದಲ್ಲಿ ಈ ಮಾರ್ಗದಲ್ಲಿ ಮೆಟ್ರೊ ರೈಲುಗಳ ಓಡಾಟ ಶುರುವಾಗಲಿದೆ’ ಎಂದು ವಿವರಿಸಿದರು.

ಮುಖ್ಯಮಂತ್ರಿ ಅವರ ತಂಡ ವಿಜಯನಗರದ ಟೋಲ್‌ಗೇಟ್‌, ಕೆ.ಆರ್‌. ರಸ್ತೆಯ ನ್ಯಾಷನಲ್‌ ಕಾಲೇಜು ನಿಲ್ದಾಣ ಮತ್ತು ಸೆಂಟ್ರಲ್‌ ಕಾಲೇಜು ಪಕ್ಕದ ಸರ್‌ ಎಂ. ವಿಶ್ವೇಶ್ವರಯ್ಯ ನೆಲದಡಿ ನಿಲ್ದಾಣಗಳಿಗೆ ಸಹ ಭೇಟಿ ನೀಡಿ ಪರಿಶೀಲಿಸಿತು.

ಮೆಟ್ರೊ ನಿಲ್ದಾಣಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಮುಖ್ಯಮಂತ್ರಿ ಅವರು, ‘ನಿಮ್ಮದು ಯಾವ ಊರು’ ಎಂದು ಕೇಳಿದರು. ಬಹುತೇಕರು ‘ರಾಜಸ್ತಾನ’ ಎಂದು ಉತ್ತರಿಸಿದರೆ, ಕೆಲವರು ‘ಕರ್ನಾಟಕ’ ಎಂದು ಹೇಳಿದರು.

ಜಯಮಾಲಾಗೆ ಅಮ್ಮನ ಪಾತ್ರ

ಮೆಟ್ರೊ ಕಾಮಗಾರಿ ಪರಿಶೀಲನೆ ಮಾಡುವಾಗ ಸಿಬ್ಬಂದಿ ತಂದುಕೊಟ್ಟ ಸಮೋಸಾ ಹಾಗೂ ಸಿಹಿತಿನಿಸು ತಿನ್ನಲು ವಿಧಾನ ಪರಿಷತ್‌ ಸದಸ್ಯೆ ಜಯಮಾಲಾ ನಿರಾಕರಿಸಿದರು. ಆದರೆ, ಸುಮ್ಮನೆ ಬಿಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ನೀನೀಗ ನಾಯಕಿ ಆಗುವ ಕಾಲ ಮುಗಿದಿದೆಯಮ್ಮ. ತಿನ್ನು ಪರವಾಗಿಲ್ಲ, ಅಮ್ಮನ ಪಾತ್ರ ಮಾಡುವೆಯಂತೆ’ ಎಂದು ಸಿಹಿ ತಿಂಡಿಯನ್ನು ತೆಗೆದುಕೊಟ್ಟರು.
‘ಅಮ್ಮನ ಪಾತ್ರವನ್ನು ಈಗಾಗಲೇ ಒಪ್ಪಿಕೊಂಡಾಗಿದೆ’ ಎಂದು ನಗುತ್ತಲೇ ಜಯಮಾಲಾ ಸಿಹಿತಿಂಡಿಯನ್ನು ಬಾಯಿಗಿಳಿಸಿದರು.

‘ಮಾಗಡಿ ರಸ್ತೆ ಪ್ರವೇಶದ್ವಾರದಿಂದ ನಾಯಂಡಹಳ್ಳಿ ಜಂಕ್ಷನ್‌ವರೆಗಿನ ಮಾರ್ಗ ಸಹ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ. ಆದರೆ, ಪರೀಕ್ಷಾರ್ಥ ಸಂಚಾರ ನಡೆಸಿ, ಪ್ರಯಾಣಿಕರ ಸೇವೆಗೆ ಸನ್ನದ್ಧವಾಗಲು ಮುಂದಿನ ವರ್ಷದ ಏಪ್ರಿಲ್‌ವರೆಗೆ ಕಾಲಾವಕಾಶ ಅಗತ್ಯವಾಗಿದೆ.

ಸುರಂಗ ಮಾರ್ಗವೂ ಸೇರಿದಂತೆ ಮೊದಲ ಹಂತದ ಮೆಟ್ರೊ ಯೋಜನೆ 2015ರ ಸೆಪ್ಟೆಂಬರ್‌ ಹೊತ್ತಿಗೆ ಪೂರ್ಣಗೊಳ್ಳಲಿದೆ’ ಎಂದು ಸಿದ್ದರಾಮಯ್ಯ ವಿವರಿಸಿದರು.

‘ಏಪ್ರಿಲ್‌ ವೇಳೆಗೆ ಮೊದಲ ಹಂತದ ಯೋಜನೆ ಮುಗಿಯಬೇಕಿತ್ತು. ಆದರೆ, ಸುರಂಗ ಮಾರ್ಗ ನಿರ್ಮಾಣದಲ್ಲಿ ಉಂಟಾಗಿರುವ ವಿಳಂಬದಿಂದ ಐದು ತಿಂಗಳು ಹೆಚ್ಚುವರಿ ಸಮಯ ಬೇಕಾಗಿದೆ’ ಎಂದು ಹೇಳಿದರು.

ರೀಚ್‌ 3ಬಿ ಮಾರ್ಗ: ಪೀಣ್ಯ ಇಂಡಸ್ಟ್ರಿ ನಿಲ್ದಾಣದಿಂದ ನಾಗಸಂದ್ರ ನಿಲ್ದಾಣವರೆಗೆ (ಒಟ್ಟು ಉದ್ದ 2.5 ಕಿ.ಮೀ); ಬರುವ ನಿಲ್ದಾಣಗಳು ಜಾಲಹಳ್ಳಿ, ದಾಸರಹಳ್ಳಿ, ನಾಗಸಂದ್ರ
ನೆಲದಡಿ ಮಾರ್ಗ 1: ಸಂಪಿಗೆ ರಸ್ತೆ ನಿಲ್ದಾಣದಿಂದ ನ್ಯಾಷನಲ್‌ ಕಾಲೇಜು ನಿಲ್ದಾಣದವರೆಗೆ (ಉತ್ತರ–ದಕ್ಷಿಣ ಸುರಂಗ ಮಾರ್ಗ, ಒಟ್ಟು ಉದ್ದ 4.0 ಕಿ.ಮೀ)
ನೆಲದಡಿ ಮಾರ್ಗ 2: ಕ್ರಿಕೆಟ್‌ ಸ್ಟೇಡಿಯಂ ನಿಲ್ದಾಣದಿಂದ ಮಾಗಡಿ ರಸ್ತೆ ನಿಲ್ದಾಣದವರೆಗೆ (ಪೂರ್ವ–ಪಶ್ಚಿಮ ಸುರಂಗ ಮಾರ್ಗ, ಒಟ್ಟು ಉದ್ದ 4.8 ಕಿ.ಮೀ)

‘ಮೊದಲ ಹಂತದ 42 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ ₨ 13,500 ಕೋಟಿ ವ್ಯಯಿಸಲಾಗುತ್ತಿದ್ದು,ಎರಡನೇ ಹಂತದಲ್ಲಿ ₨ 26,500 ಕೋಟಿ ವೆಚ್ಚದಲ್ಲಿ 74 ಕಿ.ಮೀ. ಉದ್ದದ ಮಾರ್ಗ ನಿರ್ಮಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಸಚಿವರಾದ ರಾಮಲಿಂಗಾರೆಡ್ಡಿ, ರೋಷನ್‌ ಬೇಗ್‌, ವಿಧಾನ ಪರಿಷತ್‌ ಸದಸ್ಯೆ ಜಯಮಾಲಾ, ಶಾಸಕ ಮುನಿರತ್ನ, ಬೆಂಗಳೂರು ಮೆಟ್ರೊ ರೈಲು ನಿಗಮ ಮತ್ತು ಬಿಬಿಎಂಪಿ ಅಧಿಕಾರಿಗಳು ಹಾಜರಿದ್ದರು.

 

ಕಾಮಗಾರಿ ಇನ್ನೂ ಬಾಕಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಭೇಟಿ ನೀಡಿದ ನಾಲ್ಕೂ ನಿಲ್ದಾಣಗಳಲ್ಲಿ ಕಾಮಗಾರಿ ಇನ್ನೂ ಬಾಕಿ ಇರುವುದು ಕಂಡುಬಂತು. ಹಳಿಯನ್ನೂ ಅಳವಡಿಸಲಾಗಿದ್ದು, ಮಾರ್ಗ ಸಿದ್ಧ­ವಾಗಿ­ದ್ದರೂ ನಿಲ್ದಾಣಗಳು ಸನ್ನದ್ಧವಾಗಲು ಇನ್ನೂ ಕಾಲಾವಕಾಶ ಅಗತ್ಯವಿರುವುದು ಎದ್ದು ಕಂಡಿತು. ಕೆ.ಆರ್‌. ರಸ್ತೆಯ ನ್ಯಾಷ­ನಲ್‌ ಕಾಲೇಜು ನಿಲ್ದಾಣದ ಕಾಮಗಾರಿ ಮಾತ್ರ ಮುಕ್ತಾಯದ ಹಂತದಲ್ಲಿತ್ತು. ಅಲ್ಲಿ ದೀಪಗಳ ಜೋಡಣೆ ಕಾರ್ಯ ನಡೆದಿತ್ತು.

ನಿಲ್ದಾಣಗಳ ನಿರ್ಮಾಣದ ಕಾಮಗಾ­ರಿಯನ್ನು ತೀವ್ರಗತಿಯಲ್ಲಿ ಮುಗಿಸ­ಲಾ­ಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಎರಡನೇ ಹಂತದ ಯೋಜನೆಗೆ ಶೀಘ್ರವೇ ಟೆಂಡರ್‌ ಕರೆಯಲಾಗುತ್ತದೆ ಎಂದೂ ಅವರು ಹೇಳಿದರು.

ಒಂದು ನಿಲ್ದಾಣ; 12 ಗುತ್ತಿಗೆದಾರರು!
ಸೆಂಟ್ರಲ್‌ ಕಾಲೇಜು ಹತ್ತಿರದ ಸರ್‌ ಎಂ.ವಿಶ್ವೇಶ್ವರಯ್ಯ ನೆಲದಡಿ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ಒಟ್ಟು 12 ಸಂಸ್ಥೆಗಳು ಗುತ್ತಿಗೆ ಪಡೆದಿವೆ!
ಮೆಟ್ರೊ ರೈಲು ನಿಗಮದ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದರು. ಕಟ್ಟಡ ನಿರ್ಮಾಣ, ಹಳಿ ಜೋಡಣೆ, ವಿದ್ಯುತ್‌ ಸಂಪರ್ಕ, ದೂರಸಂಪರ್ಕ, ಸುರಕ್ಷಾ ವ್ಯವಸ್ಥೆ... ಹೀಗೆ ಒಟ್ಟು ನಿಲ್ದಾಣದ ಕಾಮಗಾರಿಗಳನ್ನು 12 ವಿಭಾಗ ಮಾಡಿ ಗುತ್ತಿಗೆ ನೀಡಲಾಗಿದೆ ಎಂದು ಹೇಳಿದರು. ನೆಲದಡಿ ನಿಲ್ದಾಣದಲ್ಲಿ ಬೆಂಕಿ ಅನಾಹುತ ಸಂಭವಿಸಿದರೆ ತಕ್ಷಣ ಬೆಂಕಿಯನ್ನು ನಂದಿಸುವ ಜತೆಗೆ ಹೊಗೆಯನ್ನು ಹೊರಹಾಕಲು ರೂಪಿಸಿರುವ ಅತ್ಯಾಧುನಿಕ ವ್ಯವಸ್ಥೆಯನ್ನು ಮುಖ್ಯಮಂತ್ರಿ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT