ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

370ನೇ ವಿಧಿ ವಿವಾದ: ಹಿಂದುತ್ವದ ಕಾರ್ಯಸೂಚಿ ಪ್ರತಿಬಿಂಬ

Last Updated 29 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನರೇಂದ್ರ ಮೋದಿ ಅವರ ಸರ್ಕಾರದ ಆರಂಭದ ನಡೆಗಳು, ಕೋಮುವಾದಿ ಧ್ರುವೀಕರಣವನ್ನು ಮತ್ತಷ್ಟು ಹರಿತಗೊಳಿಸುವ ಹಾಗೂ ಇನ್ನಷ್ಟು ಉದಾರವಾದ ಆರ್ಥಿಕ ನೀತಿಗಳನ್ನು ಜಾರಿಗೊಳಿಸಬಹುದೆಂಬ ಕುರಿತು ಇದ್ದ ಭೀತಿಯನ್ನು ದೃಢಪಡಿಸಿವೆ ಎಂದು ಸಿಪಿಎಂ ಗುರುವಾರ ಆಪಾದಿಸಿದೆ.

ಬಿಜೆಪಿ ಸರ್ಕಾರದಿಂದ ಇಂತಹ ಪ್ರಯತ್ನ ನಡೆಯಬಹುದೆಂಬ ಸುಳಿವು ಚುನಾವಣಾ ಪ್ರಚಾರದ ವೇಳೆಯೇ ಬಹಿರಂಗವಾಗಿತ್ತು. ಪ್ರಧಾನಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಅವರು 370ನೇ ವಿಧಿ ಕುರಿತು, ಸಚಿವರಾದ ನಜ್ಮಾ ಹೆಫ್ತುಲ್ಲಾ ಮತ್ತು ತಾವರ್‌ಚಂದ್‌ ಗೆಹ್ಲೋಟ್‌ ಅವರು ಅಲ್ಪಸಂಖ್ಯಾತರ ಕುರಿತು ನೀಡಿರುವ ಹೇಳಿಕೆಗಳಲ್ಲಿ ಹಿಂದುತ್ವದ ಕಾರ್ಯಸೂಚಿ ಪ್ರತಿಬಿಂಬಿತವಾಗು­ತ್ತಿರುವುದನ್ನು ತೋರಿಸುತ್ತದೆ ಎಂದು ಪಕ್ಷದ ನಾಯಕ ಸೀತಾರಾಂ ಯಚೂರಿ ಹೇಳಿದರು.

ಕರಣ್‌ಸಿಂಗ್‌ ಹತಾಶೆ: ಈ ಮಧ್ಯೆ ಹಿರಿಯ ಕಾಂಗ್ರೆಸ್‌ ಮುಖಂಡ ಕರಣ್‌ ಸಿಂಗ್‌ ಅವರು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲು ಅವಕಾಶ ಕಲ್ಪಿಸಿರುವ ಸಂವಿಧಾನದ 370ನೇ ವಿಧಿಯು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ಇದನ್ನು ತುಂಬಾ ಪ್ರಬುದ್ಧತೆಯಿಂದ ನಿಭಾಯಿಸಬೇಕು ಎಂದಿದ್ದಾರೆ.

‘ಈಗ ಈ ಕುರಿತು ತೀವ್ರ ವಿವಾದ ಭುಗಿಲೆದ್ದಿರುವ ಬಗ್ಗೆ ಮಾಧ್ಯಮಗಳ ವರದಿಗಳನ್ನು ನೋಡಿ ಹತಾಶೆಯಾಗಿದೆ. ಪ್ರಧಾನಿ ಕಚೇರಿಯ ರಾಜ್ಯ ಸಚಿವರು ಈ ಕುರಿತು ಹೇಳಿಕೆ ನೀಡಬಾರದಿತ್ತು’ ಎಂದೂ ಅವರು ಹೇಳಿದ್ದಾರೆ.

1947ರಲ್ಲಿ ಜಮ್ಮು ಕಾಶ್ಮೀರವನ್ನು ಭಾರತಕ್ಕೆ ಸೇರಿಸಲು ಒಪ್ಪಂದಕ್ಕೆ ಸಹಿ ಹಾಕಿದ ಮಹಾರಾಜ ಹರಿ ಸಿಂಗ್ ಅವರ ಮಗನಾದ ಕರಣ್‌ ಸಿಂಗ್‌ ಅವರು, ‘ಈ ವಿಧಿಯ ಕುರಿತು ಆವೇಶದ ಕ್ರಮ ತೆಗೆದು­ಕೊಳ್ಳುವುದು ಸೂಕ್ತವಲ್ಲ’ ಎಂದು ಎಚ್ಚರಿಸಿದ್ದಾರೆ.

ಚೀನಾದ ಅವಿಭಾಜ್ಯ ಅಂಗವಾಗಿರುವ ಹಾಂಕಾಂಗ್‌ಗೆ ವಿಶೇಷ ಸ್ಥಾನಮಾನ ನೀಡಿರುವುದನ್ನು ಉದಾಹರಿಸಿದ ಅವರು, ಜಗತ್ತಿನಲ್ಲಿ ಅನೇಕ ಪ್ರದೇಶಗಳಿಗೆ ಈ ರೀತಿಯ ವಿಶೇಷ ಸ್ಥಾನಮಾನ ನೀಡಲಾಗಿದೆ ಎಂದಿದ್ದಾರೆ.

ನಿಜವಾದ ಭೀತಿ: ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಸಂವಿಧಾನದ 370ನೇ ವಿಧಿ ರದ್ದಾಗುವ ಸಾಧ್ಯತೆಯ ಭೀತಿ ನಿಜವಾಗಿದೆ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಖ್‌ ಅಬ್ದುಲ್ಲಾ ಶ್ರೀನಗರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT