ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಲಕ್ಷ ಎಕರೆ ಭೂಕಬಳಿಕೆ: ಆರೋಪ

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ದಾಖಲೆ ಬಿಡುಗಡೆ
Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಬೆಂಗಳೂರು ನಗರ ಸೇರಿದಂತೆ ವಿವಿಧೆಡೆ 4 ಲಕ್ಷ ಎಕರೆ ಸರ್ಕಾರಿ ಭೂಮಿಯನ್ನು ಭೂಗಳ್ಳರು ಕಬಳಿಸಿದ್ದಾರೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಗಂಭೀರ ಆರೋಪ ಮಾಡಿದರು.

ಪಟ್ಟಣದ ಸುಬ್ರಹ್ಮಣ್ಯಸ್ವಾಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಸರ್ವೋದಯ ಮೇಳದಲ್ಲಿ ಅವರು ಮಾತನಾಡಿದರು.

ಬೆಂಗಳೂರು ಸುತ್ತಮುತ್ತ ಸಹಸ್ರಾರು ಕೋಟಿ ರೂಪಾಯಿ ಬೆಲೆಯ ಭೂಮಿ ಕಬಳಿಕೆಯಾಗಿದೆ. ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರದಲ್ಲಿ ಅತಿ ಹೆಚ್ಚು ಭೂಮಿ ಭೂದಾಹಿಗಳ ಪಾಲಾಗಿದೆ. ಪ್ರತಿ ಎಕರೆ ಭೂಮಿಯ ಬೆಲೆ ₹ 4 ಕೋಟಿಗೂ ಹೆಚ್ಚು ಇದೆ.

73,923 ಎಕರೆ ಗೋಮಾಳ, 26 ಸಾವಿರ ಎಕರೆ ಕೆರೆ, 850 ಎಕರೆ ಗೋ ಕುಂಟೆ, 1600 ಎಕರೆ ಗುಂಡು ತೋಪು ಹಾಗೂ ಸಹಸ್ರಾರು ಎಕರೆ ಸರ್ಕಾರಿ ಭೂಮಿ ಅತಿಕ್ರಮವಾಗಿದೆ ಎಂದು ಅವರು ದಾಖಲೆ ಪ್ರದರ್ಶಿಸಿದರು. ಎ.ಟಿ. ರಾಮಸ್ವಾಮಿ ಸಮಿತಿ ಹಾಗೂ ಬಾಲಸುಬ್ರಹ್ಮಣ್ಯ ವರದಿಯಂತೆ ಸರ್ಕಾರ ಭೂಗಳ್ಳರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಂಬಂಧ ನೇಮಕವಾಗಿದ್ದ 6 ಮಂದಿ ವಿಶೇಷ ಉಪ ಆಯುಕ್ತರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಅವರು ದೂರಿದರು.

ಸಚಿವ ಡಿ.ಕೆ. ಶಿವಕುಮಾರ್‌ ‘ಶಾಂತಿನಗರ ಹೌಸಿಂಗ್‌ ಸೊಸೈಟಿ’ ಹೆಸರಿನ ಸಂಸ್ಥೆ ಹುಟ್ಟು ಹಾಕಿ ಅವ್ಯವಹಾರಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಈ ಮೊದಲು ಇದ್ದ ‘ಶಾಂತಿನಗರ ಕೋ–ಆಪರೇಟಿವ್‌ ಸೊಸೈಟಿ’ಗೆ ಪ್ರತಿಯಾಗಿ ಕಲಬುರ್ಗಿಯಲ್ಲಿದ್ದ ಒಂದು ಸಂಸ್ಥೆಗೆ ಅವರು ಮರುಜೀವ ನೀಡಿದ್ದಾರೆ.

ಶಾಂತಿನಗರ ಕೋ–ಆಪರೇಟಿವ್‌ ಸೊಸೈಟಿ ಹೆಸರಿಗೆ ಸರ್ಕಾರ ಮಂಜೂರು ಮಾಡಿದ್ದ 67 ಎಕರೆ ಭೂಮಿ ಕೆಲವೇ ಮಂದಿಯ ಸ್ವತ್ತಾಗಿದೆ. ಶಾಸಕರಾಗಿದ್ದ ವ್ಯಕ್ತಿ ತಮ್ಮ ಕುಟುಂಬದ ಸದಸ್ಯರಿಗೆ 57 ನಿವೇಶನಗಳು ಹಂಚಿಕೆಯಾಗಿವೆ. ಹೋರಾಟದ ಫಲವಾಗಿ ಭೈರಸಂದ್ರ ಕೆರೆ ಅತಿಕ್ರಮ ತಡೆದಿದ್ದೇವೆ. ಸಾರಕ್ಕಿ ಕೆರೆ ಅಂಗಳದಲ್ಲಿ ನಿರ್ಮಿಸಿರುವ 60 ಮನೆಗಳನ್ನು ಕೆಡವಲು ಹೈಕೋರ್ಟ್‌ ಆದೇಶ ನೀಡಿದೆ ಎಂದರು.

ಭೂರಹಿತರಿಗೆ ಸರ್ಕಾರಿ ಭೂಮಿ ಹಂಚಿಕೆ ಮಾಡಬೇಕು ಎಂಬ ಉದ್ದೇಶ ಇಟ್ಟುಕೊಂಡು ಬರುವ ಆಗಸ್ಟ್‌ನಲ್ಲಿ ತೀವ್ರ ಸ್ವರೂಪದ ಹೋರಾಟ ರೂಪಿಸಲಾಗುವುದು. ನಕ್ಸಲ್‌ ಚಳವಳಿಯಲ್ಲಿ ಇದ್ದ ಇಬ್ಬರು ಇದರ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.

ಈ ದೇಶದಲ್ಲಿ ಕಾನೂನು ಇದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ. ಬಿಲ್ಡರುಗಳಿಂದಾಗಿ ಭೂಮಿಯ ಬೆಲೆ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ಸರ್ಕಾರದ ನೀತಿ ಕೂಡ ಬಿಲ್ಡರುಗಳಿಗೆ ವರವಾಗಿದೆ. ಸಾಮಾನ್ಯ ರೈತ ಭೂಮಿ ಖರೀದಿಸಲು ಆಗದ ಸ್ಥಿತಿ ತಲುಪಿದ್ದಾನೆ. ಭೂ ಕಬಳಿಕೆ ಮತ್ತು ಅಕ್ರಮಗಳಿಗೆ ತಡೆ ನೀಡುವ ಸಂಬಂಧ ತಾರ್ಕಿಕ ಅಂತ್ಯ ಕಾಣುವವರೆಗೆ ನಮ್ಮ ಹೋರಾಟ ಅಬಾಧಿತವಾಗಿರುತ್ತದೆ ಎಂದರು.

ಮುಖ್ಯಾಂಶಗಳು

* ಸಚಿವ ಡಿ.ಕೆ. ಶಿವಕುಮಾರ್‌ ಅವರಿಂದ ಅವ್ಯವಹಾರ

* ಬಿಲ್ಡರುಗಳ ಲಾಬಿಯಿಂದ ಭೂಮಿಯ ಬೆಲೆ ಗಗನಕ್ಕೆ

* ಭೂ ಹಂಚಿಕೆಗಾಗಿ ಆಗಸ್ಟ್‌ನಿಂದ ಹೋರಾಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT