ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

42 ಸಚಿವರೊಂದಿಗೆ ಮಮತಾ ಪ್ರಮಾಣವಚನ

ಸತತ ಎರಡನೇ ಅವಧಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ
Last Updated 27 ಮೇ 2016, 19:50 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸತತ  ಎರಡನೇ ಅವಧಿಗೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.

ಕಾಂಗ್ರೆಸ್‌, ಬಿಜೆಪಿ ಹಾಗೂ ಎಡಪಂಥೀಯ ಪಕ್ಷಗಳು ಪ್ರಮಾಣವಚನ ಸಮಾರಂಭವನ್ನು ಬಹಿಷ್ಕರಿಸಿದ್ದರೆ, ಬಿಜೆಪಿಯ ಕೇಂದ್ರದ ಕೆಲವು ನಾಯಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಮುಖಂಡರು, ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಮುಂದಿನ ಸಾಲಿನಲ್ಲಿ ಕುಳಿತಿದ್ದುದು ಗಮನ ಸೆಳೆಯುವಂತಿತ್ತು.

ಇಲ್ಲಿನ ರೆಡ್‌ ರೋಡ್‌ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಮತಾ ಅವರಿಗೆ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. ಅವರ ಜೊತೆಯಲ್ಲಿ 42 ಸಚಿವರು ಸಹ ಪ್ರಮಾಣವಚನ ಸ್ವೀಕರಿಸಿದರು.

ಚುನಾವಣೆಯ ನಂತರ ರಾಜ್ಯದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಬಿಜೆಪಿ ಸೇರಿದಂತೆ ರಾಜ್ಯದ ಟಿಎಂಸಿಯೇತರ ಪಕ್ಷಗಳೆಲ್ಲವೂ ಪ್ರಮಾಣವಚನ ಸಮಾರಂಭವನ್ನು ಬಹಿಷ್ಕರಿಸಿದ್ದವು. ಆದರೆ ಕೇಂದ್ರ ಸಚಿವರಾದ ಅರುಣ್‌ ಜೇಟ್ಲಿ, ಅಶೋಕ ಗಜಪತಿ ಹಾಗೂ ಬಾಬುಲ್‌ ಸುಪ್ರಿಯೋ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಮಾರಂಭದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅರುಣ್‌ ಜೇಟ್ಲಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ನಾವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ’ ಎಂದಿದ್ದಾರೆ.

ಇವರಲ್ಲದೆ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌, ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಫಾರೂಕ್‌ ಅಬ್ದುಲ್ಲ, ಡಿಎಂಕೆ ನಾಯಕಿ ಕನ್ನಿಮೋಳಿ ಇದ್ದರು.

ಎಂದಿನಂತೆ ಬಿಳಿ ಸೀರೆಯುಟ್ಟು, ತಮ್ಮ ಕಾಲಿಘಾಟ್‌ ನಿವಾಸದಿಂದ ಸ್ವಲ್ಪ ದೂರದವರೆಗೆ ನಡೆಯುತ್ತಲೇ ಬಂದ 61 ವರ್ಷದ ಮಮತಾ, ಅಕ್ಕಪಕ್ಕದಲ್ಲಿ ನಿಂತಿದ್ದ ಜನರಿಂದ ಅಭಿನಂದನೆಗಳನ್ನು ಸ್ವೀಕರಿಸಿ ನಂತರ ಕಾರನ್ನು ಏರಿದರು.

ತಮ್ಮ ಪಕ್ಷಕ್ಕೆ ಬಹುಮತ ಕೊಟ್ಟದ್ದಕ್ಕಾಗಿ ಜನರಿಗೆ ಅವರು ಧನ್ಯವಾದಗಳನ್ನು ಹೇಳಿದರು. 294 ಸ್ಥಾನಗಳ ಪಶ್ಚಿಮ ಬಂಗಾಲ ವಿಧಾನಸಭೆಯಲ್ಲಿ ಟಿಎಂಸಿ 211 ಸ್ಥಾನಗಳನ್ನು ಪಡೆದಿದೆ. 42 ಸಚಿವರನ್ನೊಳಗೊಂಡ ಮಮತಾ ಅವರ ಸಂಪುಟದಲ್ಲಿ 18 ಮಂದಿ ಹೊಸಬರಿಗೆ ಅವಕಾಶ ಕೊಡಲಾಗಿದೆ.

ಜಿಎಸ್‌ಟಿ ಮೇಲೆ ಕಣ್ಣಿಟ್ಟ ಜೇಟ್ಲಿ
ನವದೆಹಲಿ: 
ಪಶ್ಚಿಮ ಬಂಗಾಳ ಬಿಜೆಪಿ ಪ್ರಮಾಣ ವಚನ ಸಮಾರಂಭ ಬಹಿಷ್ಕರಿಸಿದ್ದರೂ, ರಾಜ್ಯಸಭೆಯಲ್ಲಿ ಜಿಎಸ್‌ಟಿ ಮಸೂದೆಗೆ ಅಂಗೀಕಾರ ಪಡೆಯುವ ಉದ್ದೇಶದಿಂದ ಜೇಟ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ  ಎಂದು ವಿಶ್ಲೇಷಿಸಲಾಗುತ್ತಿದೆ.

ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಸಂಖ್ಯಾಬಲದ ಕೊರತೆಯಿಂದ ರಾಜ್ಯಸಭೆಯಲ್ಲಿ ಅಂಗೀಕಾರ ಆಗಿಲ್ಲ. ಈಗ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಬಲ ಕಡಿಮೆಯಾಗಿದ್ದು, ಜುಲೈನಲ್ಲಿ  ಆರಂಭವಾಗಲಿರುವ ಅಧಿವೇಶನದಲ್ಲಿ ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆಯುವ  ಈ ಮಸೂದೆಗೆ ಅಂಗೀಕಾರ ಪಡೆಯುವ ಲೆಕ್ಕಾಚಾರ ಬಿಜೆಪಿ ಹಾಕಿಕೊಂಡಿದೆ.

ಹೊಸ ರಾಜಕೀಯ ಲೆಕ್ಕಾಚಾರ
ಮಮತಾ ಬ್ಯಾನರ್ಜಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಾದೇಶಿಕ ಪಕ್ಷಗಳ ಮುಖಂಡರೆಲ್ಲರೂ ಪಾಲ್ಗೊಂಡಿದ್ದರಿಂದ ದೇಶದಲ್ಲಿ ಹೊಸ ರಾಜಕೀಯ ಲೆಕ್ಕಾಚಾರ ಆರಂಭವಾದಂತಾಗಿದೆ.

2019ರಲ್ಲಿ ಬಿಜೆಪಿ, ಕಾಂಗ್ರೆಸೇತರ ಪಕ್ಷಗಳು ಸೇರಿ ಕೇಂದ್ರದಲ್ಲಿ ಸರ್ಕಾರ ರಚಿಸಬಲ್ಲವೇ ಎಂಬ ಚಿಂತನೆಗಳಿಗೆ ಈ ಸಮಾರಂಭ ವೇದಿಕೆ ಒದಗಿಸಿದೆ.
‘ಪ್ರಧಾನಿ ಪಟ್ಟಕ್ಕೇರಿದ ಪಶ್ಚಿಮ ಬಂಗಾಳದ ಮೊದಲ ಮಹಿಳೆಯಾಗುವ ಇಚ್ಛೆ ನಿಮಗಿದೆಯೇ’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಮತಾ ಬ್ಯಾನರ್ಜಿ ಸಿಡಿಮಿಡಿಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT