ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

471 ಗ್ರಾಮಗಳಿಗೆ ಟ್ಯಾಂಕರ್ ನೀರು

Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ರಾಜ್ಯದ 17 ಜಿಲ್ಲೆಗಳಲ್ಲಿರುವ 471 ಗ್ರಾಮ­ಗಳ 3.76 ಲಕ್ಷ ಜನರಿಗೆ ನಿತ್ಯ 1,419 ಟ್ಯಾಂಕರ್‌ಗಳ  ಮೂಲಕ ನೀರು ಪೂರೈಸಲಾಗುತ್ತಿದೆ. ಇದು ಅಧಿಕಾರಿಗಳ ಲೆಕ್ಕ. ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿಯೂ  ನೀರಿನ ಸಮಸ್ಯೆ ತಲೆದೋರಿದೆ. ಬರಪೀಡಿತ ಎಂದು ಘೋಷಿಸಿರುವ 125 ತಾಲ್ಲೂಕು­ಗಳ­ಲ್ಲಿಯೂ ನೀರಿನ ಅಭಾವ ಗಂಭೀರ ಸ್ವರೂಪ ಪಡೆದಿದೆ. ಅಗತ್ಯ ಇರುವ ಕಡೆ ಕೊಳವೆ ಬಾವಿ­ಗಳನ್ನು ಕೊರೆಯಬೇಕು. ಅನಿ­ವಾರ್ಯ­ವಾದರೆ ಖಾಸಗಿ ಕೊಳವೆ ಬಾವಿ­ಗಳನ್ನು ವಶಕ್ಕೆ ಪಡೆಯಬೇಕು ಎಂದು  ಅಧಿ­ಕಾರಿ­ಗಳಿಗೆ ಸರ್ಕಾರ ಸೂಚಿಸಿದ್ದರೂ ಈ ಕಾರ್ಯ ಸಮರ್ಪಕವಾಗಿ ಆಗಿಲ್ಲ.

ಈ ತಿಂಗಳ ಮೊದಲ ವಾರದಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾ­ಖೆಯ ಹಿರಿಯ ಅಧಿಕಾರಿಗಳು ಒಮ್ಮೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ್ದು ಬಿಟ್ಟರೆ, ಆ ನಂತರ ಕುಡಿಯುವ ನೀರಿಗೆ ಸಂಬಂಧ­ಪ­ಟ್ಟಂತೆ ಯಾವುದೇ ಸಭೆ ನಡೆದಿಲ್ಲ. ಚುನಾವಣೆ ಕಾರ್ಯದಲ್ಲಿ ತೊಡಗಿದ್ದರಿಂದ ಅಧಿಕಾರಿ­ಗಳು ಕೂಡ ಇತ್ತ ಗಮನ ಹರಿಸಿರಲಿಲ್ಲ.

ಮಾರ್ಚ್‌ ಮಧ್ಯಭಾಗದಲ್ಲಿ ಹಾಗೂ 2–3 ದಿನಗಳಿಂದ ಈಚೆಗೆ ಕೆಲವು ಜಿಲ್ಲೆ­ಗಳಲ್ಲಿ ಮಳೆಯಾಗಿರುವುದು ಸ್ವಲ್ಪ ಸಮಾ­ಧಾನ ತಂದಿದೆ. ಆದರೆ, ಮಳೆ­ಯಾ­ಗದ ಜಿಲ್ಲೆಗಳಲ್ಲಿ ಸಮಸ್ಯೆ ಈಗಲೂ ಗಂಭೀರ­ವಾಗಿದೆ. ಅಂತಹ ಗ್ರಾಮಗಳನ್ನು ನಿಖರ­ವಾಗಿ ಗುರುತಿಸುವ ಕಾರ್ಯ ಸರಿ­ಯಾಗಿ ಆಗಿಲ್ಲ ಎಂಬ ಮಾಹಿತಿ ಇದೆ. ಜಲಮೂಲಗಳು ಸಂಪೂರ್ಣವಾಗಿ  ಬರಿ­­ದಾಗಿರುವ  ಗ್ರಾಮಗಳಿಗೆ ಮಾತ್ರ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡ­­ಲಾಗುತ್ತಿದೆ. ಕೆಲವೆಡೆ ಒಂದೇ ಕೊಳವೆಬಾವಿ ಇರುತ್ತದೆ. ಅದರಲ್ಲಿ ಅಗತ್ಯ­ವಿರು­ವಷ್ಟು ನೀರು ಸಿಗುವುದಿಲ್ಲ.

ಆದರೂ, ಅಲ್ಲಿ ಕೊಳವೆಬಾವಿ ಇದೆ ಎಂಬುದನ್ನೇ ನೆಪ ಮಾಡಿಕೊಂಡು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ. ಈ ರೀತಿಯ ತಾಂತ್ರಿಕ ಸಮಸ್ಯೆಗಳಿಂದ ಕೆಲವು ಗ್ರಾಮಗಳಲ್ಲಿ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ. ನೀರು, ಮೇವಿನ ವ್ಯವಸ್ಥೆಗಾಗಿ ಕಂದಾಯ ಇಲಾಖೆ ರೂ. 65 ಕೋಟಿ ಬಿಡುಗಡೆ ಮಾಡಿದೆ. ಇದಲ್ಲದೆ ಕೊಳವೆಬಾವಿ ಕೊರೆಯಲು ಪಟ್ಟಣ ಪ್ರದೇಶಗಳಿಗೆ  ರೂ. 50 ಕೋಟಿ, ಹಳ್ಳಿಗಳಿಗೆ ರೂ. 20 ಕೋಟಿ ಬಿಡುಗಡೆಯಾಗಿದೆ.            l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT