ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5ನೇ ಹಂತದ ಮತದಾನ: ಪ. ಬಂಗಾಳದಲ್ಲಿ ಗರಿಷ್ಠ ಶೇ 80 ಮತದಾನ

Last Updated 18 ಏಪ್ರಿಲ್ 2014, 8:51 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಕೆಲವೆಡೆ ಹಿಂಸಾಚಾರದ ಸಣ್ಣಪುಟ್ಟ ಘಟನೆ­ಗಳನ್ನು ಹೊರತುಪಡಿಸಿ 12 ರಾಜ್ಯಗಳ 121 ಲೋಕಸಭಾ ಸ್ಥಾನಗಳಿಗೆ ಗುರುವಾರ ನಡೆದ 5ನೇ ಹಂತದ ಚುನಾವಣೆ ಶಾಂತಿಯುತವಾಗಿ ನಡೆಯಿತು.

ಚುನಾವಣಾ ಆಯೋಗದ ಪ್ರಾಥಮಿಕ ಮಾಹಿತಿಯ ಅನ್ವಯ ಒಟ್ಟು 16.61 ಕೋಟಿ ಮತದಾರರ ಪೈಕಿ 11.6 ಕೊಟಿ ಮತದಾರರು 1,767 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲು ಮುದ್ರೆ ಒತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಗರಿಷ್ಠ (ಶೇ 80) ಮತದಾನವಾಗಿದೆ.
ಲೋಕಸಭೆಯ ಒಟ್ಟು 543 ಸ್ಥಾನ­ಗಳ ಪೈಕಿ ಇದೀಗ 232 ಸ್ಥಾನಗಳಿಗೆ ಚುನಾವಣೆ ನಡೆದಂತಾಗಿದೆ. ಇನ್ನೂ ನಾಲ್ಕು ಹಂತಗಳಲ್ಲಿ ಉಳಿದ ಕ್ಷೇತ್ರಗಳ ಚುನಾವಣೆ ನಡೆಯಬೇಕಾಗಿದೆ.

ನಕ್ಸಲರ ದಾಳಿಯ ಭೀತಿಯ ನಡುವೆಯೂ ಛತ್ತೀಸ್‌ಗಡದ  ಮೂರು ಕ್ಷೇತ್ರಗಳಲ್ಲಿ ಶೇ 65 ರಷ್ಟು ಮತದಾನ­ವಾಗಿದ್ದು ಗಮನಾರ್ಹ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಶೇ 57.60 ಮತದಾನವಾಗಿತ್ತು.

ಜಾರ್ಖಂಡ್‌ನ ಗಿರಿಧ್‌ ಲೋಕಸಭಾ ವ್ಯಾಪ್ತಿಯ ಬೊಕಾರೊ ಎಂಬಲ್ಲಿ ಮಾವೊವಾದಿಗಳು  ನೆಲಬಾಂಬ್‌ ಸ್ಫೋಟಿಸಿದ ಪರಿಣಾಮ ನಾಲ್ವರು ಸೇನಾ ಸಿಬ್ಬಂದಿ ಗಾಯಗೊಂಡರು. ಈ ಭಾಗ­ದಲ್ಲಿ ದುಷ್ಕರ್ಮಿಗಳ ಕೃತ್ಯಕ್ಕೆ ಶಾಲಾ ಕಟ್ಟಡವೊಂದು ಹಾನಿಗೊಳಗಾಗಿದೆ.

ಮತದಾರರಿಗೆ ಬೆದರಿಕೆ ಒಡ್ಡಿದ ಆರೋಪಗಳ ಹಿನ್ನೆಲೆಯಲ್ಲಿ ಬಿಹಾರದ 9 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಆದೇಶಿಸಲಾಗಿದೆ.



ವಿವಿಧ ಪಕ್ಷಗಳ ಪ್ರಮುಖರಾದ  ಜಸ್ವಂತ್‌ ಸಿಂಗ್‌ (ಬಾರ್ಮೇರ್‌), ಸಚಿನ್‌ ಪೈಲಟ್‌ (ಅಜ್ಮೀರ್‌), ಅಶೋಕ್‌ ಚೌಹಾಣ್‌ (ನಾಂದೇಡ್‌), ಲಾಲು ಪ್ರಸಾದ್‌ ಪುತ್ರಿ ಮಿಶಾ ಭಾರ್ತಿ (ಪಾಟಲೀಪುತ್ರ), ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಳೆ (ಬಾರಾಮತಿ), ಗುಲಾಂ ನಬಿ ಆಜಾದ್‌ (ಉಧಮ್‌ಪುರ), ಮೇನಕಾ ಗಾಂಧಿ (ಪಿಲಿಭೀತ್‌), ಶತ್ರುಘ್ನ ಸಿನ್ಹಾ (ಪಟ್ನಾ ಸಾಹೀಬ್‌), ಸುಶೀಲಕುಮಾರ್‌ ಶಿಂಧೆ (ಸೊಲ್ಲಾಪುರ) ಮತ್ತಿತರ ಗಣ್ಯರ ಭವಿಷ್ಯ ಈಗ ಮತಪೆಟ್ಟಿಗೆಗಳಲ್ಲಿ ಭದ್ರವಾಗಿ ಕೂತಿದ್ದು ಮೇ 16 ರಂದು ಬಹಿರಂಗವಾಗಲಿದೆ.

7 ಕಡೆ ಮತದಾರರೇ ಬರಲಿಲ್ಲ: ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯ 7 ಮತಗಟ್ಟೆಗಳಲ್ಲಿ ಒಬ್ಬರೂ ಮತದಾನ ಮಾಡಲಿಲ್ಲ.
ನಕ್ಸಲ್‌ಪೀಡಿತ ಈ ಭಾಗದಲ್ಲಿ ಭಯಗ್ರಸ್ಥ ಸ್ಥಿತಿ ಇದ್ದು ಬಹುಶಃ ಇದೇ ಕಾರಣದಿಂದ ಮತದಾರರು ಮತಗಟ್ಟೆಗೆ ಬಂದಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT