ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ರಾಜ್ಯಗಳಲ್ಲಿ ಮಹಿಳೆಯರ ಪಾರುಪತ್ಯ

ಜಯಲಲಿತಾ 4ನೇ ಬಾರಿಗೆ, ಮಮತಾ 2ನೇ ಅವಧಿಗೆ ಸಿ.ಎಂ
Last Updated 19 ಮೇ 2016, 19:54 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಐದು ರಾಜ್ಯಗಳಲ್ಲಿ ಈಗ ಮಹಿಳಾ ಮುಖ್ಯ ಮಂತ್ರಿಗಳ ಆಡಳಿತ. ಪುರುಷ ಮುಖ್ಯಮಂತ್ರಿಗಳಿಗಿಂತ ಇವರ ಆಡಳಿತ ಹೇಗೆ ಭಿನ್ನವಾಗಿರುತ್ತದೆ ಎಂಬುದು ಸಹಜ ಕುತೂಹಲ.

ಕಳೆದ ಏಪ್ರಿಲ್‌ನಲ್ಲಿ ಮೆಹಬೂಬಾ ಮುಫ್ತಿ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿ ಕೊಂಡಾಗಲೇ ದೇಶದ ಐದು ರಾಜ್ಯಗಳಲ್ಲಿ ಐವರು ಮಹಿಳಾ ಮುಖ್ಯಂತ್ರಿಗಳಿದ್ದರು.

ಆದರೆ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಹತ್ತಿರದಲ್ಲಿ ಇದ್ದುದರಿಂದ ಜಯಲಲಿತಾ ಮತ್ತು ಮಮತಾ ಬ್ಯಾನರ್ಜಿ   ಮತ್ತೆ ಅಧಿಕಾರಕ್ಕೆ ಬರುತ್ತಾರೆಯೇ ಎಂಬುದರ ಬಗ್ಗೆ  ಅನುಮಾನವಿತ್ತು.

ಈ ಇಬ್ಬರು ನಾಯಕಿಯರು ಈ ಚುನಾವಣೆಯಲ್ಲಿ ಇನ್ನಷ್ಟು ಪ್ರಭಾವಿಗಳಾಗಿ ಹೊರ ಹೊಮ್ಮಿದ್ದಾರೆ. ಮಹಿಳಾ ಮುಖ್ಯಮಂತ್ರಿಗಳ ನೇತೃತ್ವದ ಐದು ರಾಜ್ಯಗಳ ಅಭಿವೃದ್ಧಿ ಚಿತ್ರಣ ಯಾವ ರೀತಿ ಬದಲಾಗಲಿದೆ ಎಂದು ದೇಶದ ಜನತೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ವಸುಂಧರಾ ರಾಜೆ ಮುಖ್ಯಮಂತ್ರಿ ಆಗಿರುವ ರಾಜಸ್ತಾನದಲ್ಲಿ  2018ಕ್ಕೆ ಮತ್ತು ಆನಂದಿಬೆನ್ ಮುಖ್ಯಮಂತ್ರಿ ಆಗಿರುವ ಗುಜರಾತ್‌ನಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಅದೇ ರೀತಿ ಉತ್ತರಪ್ರದೇಶದಲ್ಲಿಯೂ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳಾ ಮುಖ್ಯಮಂತ್ರಿಗಳ ಸಂಖ್ಯೆ ಆರಕ್ಕೇರಲಿದೆ.

ಮಮತಾ ಬ್ಯಾನರ್ಜಿ ಅವರಿಗೆ ಎರಡನೇ ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದೆ. ಜಯಲಲಿತಾ ನಾಲ್ಕನೇ ಬಾರಿ ಮುಖ್ಯಮಂತ್ರಿ ಆಗುತ್ತಿದ್ದಾರೆ.
ದಶಕದ ಹಿಂದೆ ದೇಶದಲ್ಲಿ ನಾಲ್ಕು ರಾಜ್ಯಗಳಿಗೆ ಮಹಿಳಾ ಮುಖ್ಯಮಂತ್ರಿ ಇದ್ದರು. ತಮಿಳುನಾಡಿನಲ್ಲಿ  ಜಯಲಲಿತಾ, ದೆಹಲಿಯಲ್ಲಿ ಶೀಲಾ ದೀಕ್ಷಿತ್, ಬಿಹಾರದಲ್ಲಿ ರಾಬ್ಡಿ ದೇವಿ ಮತ್ತು ಮಧ್ಯಪ್ರದೇಶದಲ್ಲಿ ಉಮಾ ಭಾರತಿ ಮುಖ್ಯಮಂತ್ರಿ ಆಗಿದ್ದರು.

ಸ್ಯಾತಂತ್ರ್ಯಾನಂತರದ ಮೊದಲ ಎರಡು ದಶಕಗಳು ಪುರುಷ ಪಾರುಪತ್ಯದ ರಾಜಕಾರಣ. ದೇಶದ ಪ್ರಥಮ ಮಹಿಳಾ ಮುಖ್ಯಮಂತ್ರಿ ಸುಚೇತಾ ಕೃಪಲಾನಿ. 1963ರಿಂದ 1967ರ ವರೆಗೆ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಆಗಿದ್ದರು.

ಕಳೆದ 50 ವರ್ಷಗಳಲ್ಲಿ 15 ಮಹಿಳೆಯರು ಮುಖ್ಯಮಂತ್ರಿ ಆಗಿದ್ದಾರೆ. ಕೃಪಲಾನಿ ನಂತರ ನಂದಿನಿ ಸತ್ಪತಿ (ಒಡಿಶಾ), ಶಶಿಕಲಾ ಕಾಕೋಡ್ಕರ್ (ಗೋವಾ), ಸೈದಾ ಅನ್ವರಾ ತೈಮುರ್ (ಅಸ್ಸಾಂ), ಜಾನಕಿ ರಾಮಚಂದ್ರನ್ (ತಮಿಳುನಾಡು), ರಾಜಿಂದರ್ ಕೌರ್ ಭಟ್ಟಲ್ (ಪಂಜಾಬ್) ಮತ್ತು ಸುಷ್ಮಾ ಸ್ವರಾಜ್ (ದೆಹಲಿ) ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಜಾನಕಿ ರಾಮಚಂದ್ರನ್ ಮತ್ತು ಸುಷ್ಮಾ ಅವರು ಅತಿ ಕಡಿಮೆ ಅವಧಿಗೆ ಅಂದರೆ 21 ಮತ್ತು 51 ದಿನಗಳ ಕಾಲ ಮುಖ್ಯಮಂತ್ರಿ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT