ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

520 ಅಕ್ರಮ ವಾಸಿಗಳ ಗಡೀಪಾರಿಗೆ ಸಿದ್ಧತೆ

ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ ವರದಿ ಸಲ್ಲಿಕೆ
Last Updated 5 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿರುವ 520 ಮಂದಿ ವಿದೇಶಿಗರನ್ನು ಗಡೀಪಾರು ಮಾಡುವಂತೆ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಈಗಾಗಲೇ ವರದಿ ಸಲ್ಲಿಸಲಾಗಿದೆ ಎಂದು ನಗರ ಪೊಲೀಸರು ಹೇಳಿದ್ದಾರೆ.

‘ಕಳೆದ ವರ್ಷ ವರ್ತೂರು ಹಾಗೂ ಬೈರತಿ ಗ್ರಾಮಗಳಲ್ಲಿ ಸ್ಥಳೀಯರು ಹಾಗೂ ಆಫ್ರಿಕಾ ಖಂಡದ ವಿದ್ಯಾರ್ಥಿಗಳ ಮಧ್ಯೆ ದೊಡ್ಡ ಗಲಾಟೆ ಆಗಿತ್ತು. ಆ ಘಟನೆ ಕೂಡ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ದಾಂದಲೆ ಮಾಡಿದವರಲ್ಲಿ ಅಕ್ರಮ ನಿವಾಸಿಗಳೇ ಹೆಚ್ಚಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿ ಎಫ್‌ಆರ್‌ಆರ್‌ಒಯಿಂದ ಮಾಹಿತಿ ಕಲೆ ಹಾಕಿದಾಗ ನಗರದಲ್ಲಿ 520 ಮಂದಿ ವಿದೇಶಿಗರು ಅಕ್ರಮವಾಗಿ ನೆಲೆಸಿರುವ ಸಂಗತಿ ಬೆಳಕಿಗೆ ಬಂದಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಗೃಹ ಸಚಿವರ ಸೂಚನೆಯಂತೆ ಆ 520 ಮಂದಿಯ ಗಡಿಪಾರು ಸಂಬಂಧ ವರದಿಯೊಂದನ್ನು ಸಿದ್ಧಪಡಿಸಿ ಎಫ್‌ಆರ್‌ಆರ್‌ಒಗೆ ಸಲ್ಲಿಸಲಾಗಿದೆ. ಅಲ್ಲಿನ ಸಿಬ್ಬಂದಿ ಈಗಾಗಲೇ ಸಂಬಂಧಪಟ್ಟ ರಾಷ್ಟ್ರಗಳ ರಾಯಭಾರಿ ಕಚೇರಿಗಳಿಗೆ ಪತ್ರದ ಮುಖೇನ ವಿಷಯ ತಿಳಿಸಿದ್ದಾರೆ. ಸದ್ಯದಲ್ಲೇ ಅಷ್ಟೂ ಮಂದಿಯನ್ನು ರಾಷ್ಟ್ರಗಳಿಗೆ ವಾಪಸ್ ಕಳುಹಿಸಲಾಗುವುದು’ ಎಂದು ಮಾಹಿತಿ ನೀಡಿದರು.

ದಾಂದಲೆ ಮೊದಲಲ್ಲ: ‘ಸ್ಥಳೀಯರು ಮತ್ತು ವಿದೇಶಿ ಪ್ರಜೆಗಳ ನಡುವೆ ಕ್ಷುಲ್ಲಕ ಕಾರಣಗಳಿಗೆ ಉಂಟಾಗುವ ಜಗಳ, ಕೊನೆಗೆ ಜನಾಂಗೀಯ ಬಣ್ಣ ಬಳಿದುಕೊಂಡು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಒಂದು ವರ್ಷದಿಂದೀಚೆಗೆ ನಗರದಲ್ಲಿ ಇಂಥ ಐದಾರು ಪ್ರಕರಣಗಳು ವರದಿಯಾಗಿವೆ. ಅಕ್ರಮವಾಗಿ ನೆಲೆಸಿರುವ ವಿದೇಶಿಗರು, ಸ್ಥಳೀಯ ಕಾನೂನಿಗೆ ವಿಧೇಯತೆ ತೋರದೆ ಉದ್ಧಟತನ ಪ್ರದರ್ಶಿಸುತ್ತಿರುವುದು ಮುಖ್ಯ ಕಾರಣ’ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಸೈಬರ್ ಅಪರಾಧ, ಮಾದಕ ವಸ್ತುಗಳ ಮಾರಾಟ, ವೇಶ್ಯಾವಾಟಿಕೆ ಸೇರಿದಂತೆ ಇನ್ನಿತರೆ ಅಪರಾಧ ಪ್ರಕರಣಗಳಲ್ಲಿ  ನೈಜೀರಿಯಾ, ತಾಂಜಾನಿಯಾ, ಐವರಿ ಕೋಸ್ಟಾ, ಉಂಗಾಡ ಸೇರಿದಂತೆ ಆಫ್ರಿಕಾ ಖಂಡದ ಪ್ರಜೆಗಳು ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ. ಕೆಲವು ಲೇಔಟ್‌ಗಳಲ್ಲಿ ತಮ್ಮದೇ ‘ಕೋಟೆ’ ಕಟ್ಟಿಕೊಂಡು ಅಕ್ರಮವಾಗಿ ನೆಲೆಸಿದ್ದಾರೆ.

ದುರ್ವರ್ತನೆ ಪ್ರಶ್ನಿಸುವ ಸ್ಥಳೀಯರ ಜತೆ ಅವರು ಸಂಘರ್ಷಕ್ಕಿಳಿದ ಹಾಗೂ ಪೊಲೀಸರ ಮೇಲೆಯೇ ಕೈ ಎತ್ತಿದ ಸಾಕಷ್ಟು ನಿದರ್ಶನಗಳಿವೆ. ಅವರನ್ನು ಆದಷ್ಟು ಬೇಗ ಹೊರದಬ್ಬಿ ಪುಂಡಾಟಿಕೆ ಅಂಕುಶ ಹಾಕಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಹಿಂದಿನ ಘಟನೆಗಳು
* 2015, ಅಕ್ಟೋಬರ್:
ಬಾಗಲೂರು ಸಮೀಪ ಬೈಕ್‌ಗೆ ಆಫ್ರಿಕಾ ವಿದ್ಯಾರ್ಥಿಯ ಕಾರು ಡಿಕ್ಕಿ ಹೊಡೆದು ದಂಪತಿಗೆ ಗಾಯ. ಸ್ಥಳೀಯರು ಹಾಗೂ ಆಫ್ರಿಕಾ ವಿದ್ಯಾರ್ಥಿಗಳ ನಡುವೆ ಗಲಾಟೆ.

* 2015, ಜುಲೈ: ಬಸ್ ಪಾಸ್ ಕೇಳಿದ ಬಿಎಂಟಿಸಿ ಕಂಡಕ್ಟರ್‌ ಮೇಲೆ ಆಫ್ರಿಕಾ ವಿದ್ಯಾರ್ಥಿನಿಯರಿಂದ ಹಲ್ಲೆ.  ವಿಲ್ಸನ್‌ ಗಾರ್ಡನ್ ಪೊಲೀಸರಿಂದ ಆ ವಿದ್ಯಾರ್ಥಿನಿಯರ ಬಂಧನ

* 2015, ಮಾರ್ಚ್: ಭೈರತಿಯಲ್ಲಿ ಮಧ್ಯರಾತ್ರಿ ರಸ್ತೆ ಮಧ್ಯೆ ಕುಡಿದು ದಾಂದಲೆ ಮಾಡುತ್ತಿದ್ದ ಕಾರಣಕ್ಕೆ ಆಫ್ರಿಕಾ ವಿದ್ಯಾರ್ಥಿಗಳು ಮತ್ತು ಸ್ಥಳೀಯರ ಮಧ್ಯೆ ಜಗಳ.

ವಿದ್ಯಾರ್ಥಿಗಳ ರಕ್ಷಣೆಗೆ ‘ಆಚಾರ್ಯ’ ತಂಡ
ಹೆಸರಘಟ್ಟ ಮುಖ್ಯರಸ್ತೆಯಲ್ಲಿ ನಡೆದ ದಾಂದಲೆಯಿಂದ ಭೀತಿಗೆ ಒಳಗಾಗಿರುವ ವಿದೇಶಿ ವಿದ್ಯಾರ್ಥಿಗಳ ಆತಂಕ ದೂರ ಮಾಡಲು, ಆಚಾರ್ಯ ಕಾಲೇಜಿನ ಆಡಳಿತ ಮಂಡಳಿಯು ಸಿಬ್ಬಂದಿಯ 3 ತಂಡ ರಚಿಸಿದೆ.

‘ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು ಹೆಚ್ಚಾಗಿ ಸೋಲದೇವನಹಳ್ಳಿ, ಎಜಿಬಿ ಲೇಔಟ್, ಚಿಕ್ಕಸಂದ್ರ, ಎಂಇಐ ಲೇಔಟ್, ಕಿರ್ಲೋಸ್ಕರ್ ಲೇಔಟ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಅವರಿಗೆ ರಕ್ಷಣೆ ಒದಗಿಸುವ ಹಾಗೂ ಆತಂಕ ದೂರ ಮಾಡುವ ಸಲುವಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ ನಾಲ್ವರು ಸಿಬ್ಬಂದಿ ಇರುತ್ತಾರೆ.

ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ಹಾಗೂ ತರಗತಿ ಮುಗಿಸಿಕೊಂಡು ಮನೆಗೆ ಹೋಗುವಾಗ ತಂಡಗಳು ಅವರ ಜತೆಗಿರುತ್ತವೆ’ ಎಂದು ಕಾಲೇಜಿನ ಆಡಳಿತಾಧಿಕಾರಿ ರಾಮಕೃಷ್ಣ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಬ್ಬಂದಿಯ ತಂಡಗಳು ಮಾತ್ರವಲ್ಲದೆ, ಕಾಲೇಜಿನ ಆರು ಮಂದಿ ಭದ್ರತಾ ಸಿಬ್ಬಂದಿಯನ್ನೂ ಗಸ್ತಿಗೆ ಕಳುಹಿಸಲಾಗುತ್ತಿದೆ. ಅವರು ಸಹ ವಿದ್ಯಾರ್ಥಿಗಳ ಮೇಲೆ ನಿಗಾ ಇಡುತ್ತಿದ್ದಾರೆ. ಈ ಮೂಲಕ ಅವರ ಆತಂಕ ದೂರ ಮೂಡಿ, ಆತ್ಮಸ್ಥೈರ್ಯ ಹೆಚ್ಚಿಸುವ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಹೇಳಿದರು.

***
ಯಾರೇ ಆದರೂ ತಾವು ನೆಲೆಸಿರುವ ದೇಶದ ಕಾನೂನನ್ನು ಗೌರವಿಸಲೇಬೇಕು. ಅದನ್ನು ಮೀರಿ ನಡೆದುಕೊಂಡರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
-ಜಿ.ಪರಮೇಶ್ವರ್,
ಗೃಹಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT