ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

541 ಎಕರೆ ಡಿನೋಟಿಫೈ ಸಿಬಿಐ ತನಿಖೆಗೆ ಪಟ್ಟು

ಬಿಜೆಪಿ ಧರಣಿ, ಕೋಲಾಹಲ: ಸದನ ಮುಂದಕ್ಕೆ
Last Updated 25 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಅರ್ಕಾವತಿ ಬಡಾ­ವಣೆಯ 541 ಎಕರೆ ಭೂಮಿಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಡಿನೋಟಿಫೈ ಮಾಡಿದೆ ಎಂದು ಶುಕ್ರವಾರ ವಿಧಾನಸಭೆಯಲ್ಲಿ ಆರೋಪಿಸಿದ ಬಿಜೆಪಿ, ಈ ಬಗ್ಗೆ ಸಿಬಿಐ ತನಿಖೆಗೆ ಪಟ್ಟು ಹಿಡಿದಿದೆ.

‘ನಮ್ಮ ಸರ್ಕಾರ ಒಂದೇ ಒಂದು ಗುಂಟೆ ಜಮೀ­ನನ್ನೂ ಡಿನೋಟಿಫೈ ಮಾಡಿಲ್ಲ; ಮಾಡುವುದೂ ಇಲ್ಲ. ಅರ್ಕಾವತಿ ಬಡಾವಣೆಯಲ್ಲಿಯೂ ಡಿನೋಟಿಫೈ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಸ್ಪಷ್ಟನೆಯನ್ನು ಒಪ್ಪದ ಬಿಜೆಪಿ ಸದಸ್ಯರು ಸದನದಲ್ಲಿ ಧರಣಿ ನಡೆಸಿದರು. ಇದರಿಂದ ಕೋಲಾ­ಹಲ ಉಂಟಾಗಿ ಕಲಾಪವನ್ನು ಶನಿವಾರಕ್ಕೆ ಮುಂದೂಡಲಾಯಿತು.

‘ಸಿದ್ದರಾಮಯ್ಯ ಅವರು 541 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ್ದಾರೆ. ಅದು ಸೇರಿದಂತೆ ಇದು­ವರೆಗೆ ಒಟ್ಟು 983 ಎಕರೆ ಜಮೀನಿನ ಡಿನೋಟಿಫೈ ಅವ್ಯವಹಾರದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿ­ಸಬೇಕು’ ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು.

ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಹೈಕಮಾಂಡನ್ನು ತೃಪ್ತಿ ಪಡಿಸುವ ಸಲುವಾಗಿ ಸರ್ಕಾರ ಈ ಹಗರಣ ನಡೆಸಿದೆ’ ಎಂದು ದೂರಿದರು.
ಕಾಂಗ್ರೆಸ್‌ ಸದಸ್ಯರೆಲ್ಲರೂ ಎದ್ದುನಿಂತು ಬಿಜೆಪಿ ಸದಸ್ಯರ ವಿರುದ್ಧ  ಧಿಕ್ಕಾರದ ಘೋಷಣೆಗಳನ್ನು ಕೂಗಲಾರಂಭಿಸಿದರು. ಆಗ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು.

ಧರಣಿ ವಾಪಸ್‌ ತೆಗೆದುಕೊಳ್ಳುವಂತೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಪದೇ ಪದೇ ಮಾಡಿದ ಮನವಿಗೆ ಬಿಜೆಪಿ ಸದಸ್ಯರು ಸ್ಪಂದಿಸಲಿಲ್ಲ.













ಹಂಚಿಕೆಯಾದ ನಿವೇಶನಗಳಿಗೂ ಕುತ್ತು: ‘ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಹೆಬ್ಬಾಳ, ಥಣಿಸಂದ್ರ, ಶ್ರೀರಾಮಪುರ ಸೇರಿದಂತೆ 16 ಹಳ್ಳಿಗಳ 3,839 ಎಕರೆ ಭೂಸ್ವಾಧೀನಕ್ಕೆ 2003ರಲ್ಲಿ ಬಿಡಿಎ ಪ್ರಾಥ­ಮಿಕ ಅಧಿಸೂಚನೆ ಹೊರಡಿಸಿತ್ತು. 2004ರಲ್ಲಿ ಹೊರಡಿಸಿದ ಅಂತಿಮ ಅಧಿಸೂಚನೆ ವೇಳೆಗೆ ಅದರ­ಲ್ಲಿನ ಸುಮಾರು 1,000 ಎಕರೆ ಡಿನೋಟಿಫೈ ಮಾಡ­ಲಾಯಿತು.

ಬಡಾವಣೆ ಅಭಿವೃದ್ಧಿಗೆ ಉಳಿದಿದ್ದು 2,750 ಎಕರೆ ಮಾತ್ರ. 2014ರ ಜೂನ್‌ 18ರಂದು ನಗರಾಭಿವೃದ್ಧಿ ಇಲಾಖೆ ಪರಿಷ್ಕೃತ ಅಧಿಸೂಚನೆ (ರೀ–ಡು ಆದೇಶ) ಹೊರಡಿಸಿ,  1,766 ಎಕರೆ ಜಾಗದಲ್ಲಿ ಬಡಾವಣೆ ಅಭಿವೃದ್ಧಿಪಡಿಸುವುದಾಗಿ ಹೇಳಿದೆ. ಅಂದರೆ, 983 ಎಕರೆ ಜಾಗವನ್ನು ಈವರೆಗೆ ಡಿನೋಟಿಫೈ ಮಾಡಲಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ದೂರಿದರು.

‘ಒಟ್ಟು 28 ಸಾವಿರ ನಿವೇಶನ ಹಂಚಿಕೆ ಮಾಡುವ ಗುರಿ ಇಟ್ಟುಕೊಂಡಿದ್ದ ಬಿಡಿಎ ಮೊದಲ ಹಂತದಲ್ಲಿ ಎಂಟು ಸಾವಿರ ನಿವೇಶನ ವಿಂಗಡಿಸಿ, ಅದರಲ್ಲಿ ಐದು ಸಾವಿರ ನಿವೇಶನ ಹಂಚಿಕೆ ಮಾಡಿತ್ತು. ಹಂಚಿಕೆ ಮಾಡಿದ್ದ ನಿವೇಶನಗಳ ಜಾಗ ಕೂಡ ಡಿನೋಟಿಫಿ­ಕೇಷನ್‌ನಲ್ಲಿ ಸೇರಿವೆ. ಹಣದ ಆಸೆಗೆ ಹೀಗೆ ಮಾಡಿ­ದರೆ ನಿವೇಶನ ಖರೀದಿಸಿದವರ ಗತಿ ಏನಾಗಬೇಕು’ ಎಂದು ಪ್ರಶ್ನಿಸಿದರು.

ನಾನು ಮಣಿದಿರಲಿಲ್ಲ: ‘ರೀ–ಡು’ ಹೆಸರಿನಲ್ಲಿ ಮತ್ತೆ ಡಿನೋಟಿಫಿಕೇಷನ್‌ ಅವ್ಯವಹಾರ ಚಾಲ್ತಿಗೆ ಬಂದಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 10–20 ಎಕರೆ ಡಿನೋಟಿಫೈ ಮಾಡಿದ್ದನ್ನೇ ದೊಡ್ಡದು ಮಾಡಿ ಟೀಕಿಸುತ್ತಿದ್ದ ಸಿದ್ದರಾಮಯ್ಯ ಅವರು ಈಗ ಮಾಡಿದ್ದೇನು? ಇದರಲ್ಲಿ ಬಿಡಿಎ ಅಧಿಕಾರಿಗಳ ಪಾತ್ರವೂ ಇದೆ. ನಾನು ಮುಖ್ಯಮಂತ್ರಿಯಾ­ಗಿದ್ದಾ­ಗಲೂ ರೀ–ಡು ಅಧಿಸೂಚನೆ ಹೊರಡಿಸಲು ಪ್ರಯತ್ನ ನಡೆಸಿದ್ದರು. ಅದಕ್ಕೆ ನಾನು ಅವಕಾಶ ನೀಡಿರಲಿಲ್ಲ’ ಎಂದು ಅವರು ಹೇಳಿದರು.

‘ಹೈಕೋರ್ಟ್‌ನ ವಿಭಾಗೀಯ ಪೀಠ 2005ರಲ್ಲಿ ಕೊಟ್ಟ ತೀರ್ಪಿನಲ್ಲಿ ಡಿನೋಟಿಫೈಗೆ ಮಾರ್ಗಸೂಚಿ ರಚಿಸಿತ್ತು. ಹಸಿರು ವಲಯದಲ್ಲಿದ್ದರೆ, ಕಟ್ಟಡಗಳು ನಿರ್ಮಾಣ ಆಗಿದ್ದರೆ, ನರ್ಸರಿ ಜಮೀನ ಮತ್ತು ಕೈಗಾರಿಕೆಗಳಿದ್ದರೆ ಮಾತ್ರ ಅಂತಹ ಜಮೀನುಗಳನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬಹುದು ಎಂದು ಕೋರ್ಟ್‌ ಹೇಳಿತ್ತು. ಆದರೆ, ಆ ರೀತಿ ಮಾಡಲಿಲ್ಲ. ಬದಲಿಗೆ, ಡಿನೋಟಿಫೈ ಮಾಡಲು ಬರುವುದಿಲ್ಲ ಎಂದು ಸಂಬಂಧಪಟ್ಟ ರೈತರಿಗೆ ಬಿಡಿಎ ಮುಚ್ಚಳಿಕೆ ಬರೆದುಕೊಟ್ಟಿತು. ಅಂತಹ ಜಮೀನುಗಳನ್ನೇ ಈಗ ಡಿನೋಟಿಫೈ ಮಾಡಲಾಗಿದೆ. ಅದು ಹೇಗೆ ಸಾಧ್ಯ ಆಯಿತು’ ಎಂದು ಶೆಟ್ಟರ್‌ ಪ್ರಶ್ನಿಸಿದರು.

ಬಿಜೆಪಿಯ ಎಸ್‌.ಆರ್‌.ವಿಶ್ವನಾಥ್‌ ಮಾತನಾಡಿ, ‘ಭೂ ಪರಿಹಾರ ಪಡೆದುಕೊಂಡವರ ಜಮೀನು­ಗಳನ್ನೂ ಡಿನೋಟಿಫೈ ಮಾಡಲಾಗಿದೆ’ ಎಂದು ದೂರಿದರು. ಕಾಂಗ್ರೆಸ್‌ನ ಎಸ್‌.ಟಿ. ಸೋಮಶೇಖರ್‌ ಮಾತ­ನಾಡಿ, ‘ಬಿಜೆಪಿ ಸರ್ಕಾರ ಇದ್ದಾಗ ಅಂತಿಮ ಅಧಿ­ಸೂಚನೆ ಆಗಿದ್ದನ್ನೂ ಡಿನೋಟಿಫೈ ಮಾಡಲಾಗಿತ್ತು. ಅದನ್ನು ವಿಶ್ವನಾಥ್‌ ಮರೆತಿದ್ದಾರೆ’ ಎಂದು ತಿರುಗೇಟು ನೀಡಿದರು.

‘ಆಧಾರ ರಹಿತ ಆರೋಪ’
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನ­ಪಡಿಸಿಕೊಂಡಿದ್ದ ಜಮೀನುಗಳನ್ನು ಅಧಿ­ಸೂಚನೆ­ಯಿಂದ ಕೈಬಿಡಲು ಹಣ ಸಂಗ್ರಹಿಸಿದ್ದಾರೆ ಎಂದು ಜಗದೀಶ ಶೆಟ್ಟರ್‌ ಆರೋಪ ಮಾಡಿ­ದ್ದಾರೆ. ಆದರೆ, ಆರೋಪಗಳಿಗೆ ಪೂರಕ­ವಾದ ದಾಖಲೆಗಳನ್ನು ಒದಗಿಸಿಲ್ಲ. ಯಾವುದೇ ದಾಖಲೆ­ಗಳಿಲ್ಲದೆ ಇಂತಹ ಗಂಭೀರ ಆರೋಪ ಮಾಡುವುದು ಸರಿಯಲ್ಲ’ ಎಂದು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

‘ಬಿಡಿಎ ಸ್ವಾಧೀನಪಡಿಸಿಕೊಂಡ ಜಮೀನನ್ನು ಅಕ್ರಮವಾಗಿ ಕೈಬಿಟ್ಟಿದ್ದರೆ ಆ ಬಗ್ಗೆ ತನಿಖೆ ಆಗಬೇಕು. ನಾವು ಕೂಡ ಈ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸುತ್ತೇವೆ. ಸರ್ಕಾರ ಇದನ್ನು ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸ­ಬಾರದು. ತನಿಖೆಗೆ ಆದೇಶಿಸಲಿ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಬೇಕು’ ಎಂದು ಒತ್ತಾಯಿಸಿದರು.

‘ಬಿಎಸ್‌ವೈ ವಿರುದ್ಧ ಸಂಚು’
‘ಅರ್ಕಾವತಿ ಬಡಾವ­ಣೆಯ ಡಿನೋಟಿಫೈ ಪ್ರಕರ­ಣ­ದಲ್ಲಿ ಮಾಜಿ ಮುಖ್ಯ­ಮಂತ್ರಿ ಬಿ.ಎಸ್‌. ಯಡಿ­ಯೂರಪ್ಪ ಅವರನ್ನು ಸಿಕ್ಕಿ­ಸಲು ಸಭಾನಾಯಕ ಸಿದ್ದ­ರಾ­ಮಯ್ಯ, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಒಂದುಗೂಡಿದ್ದೀರಿ. ಇದನ್ನು ಖಂಡಿಸಿ ನಾನು ಮತ್ತು ಎಚ್‌.ಡಿ. ಕುಮಾರ­ಸ್ವಾಮಿ ಸದನದಲ್ಲಿಯೇ ಆಮ­ರಣ ಉಪವಾಸ ಸತ್ಯಾ­ಗ್ರಹ ಆರಂಭಿಸು­ತ್ತೇವೆ’ ಎಂದು ಕಾಂಗ್ರೆಸ್‌ ಶಾಸಕ ರಮೇಶ್‌ಕುಮಾರ್‌ ಮಾರ್ಮಿಕವಾಗಿ ಹೇಳಿದರು.

‘ನೀವು (ಶೆಟ್ಟರ್‌) ಮತ್ತು ಯಡಿಯೂರಪ್ಪ ಎಲ್ಲ ಭಿನ್ನಾಭಿಪ್ರಾಯ ಮರೆತು ಒಂದಾಗಿದ್ದೀರಿ. ಅವರ ಪರವಾಗಿಯೇ ನೀವಿರುತ್ತೀರಿ ಎಂದು ನಾನು ಭಾವಿಸಿದ್ದೆ. ಆದರೆ  ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಅವರನ್ನು ಸಿಕ್ಕಿ ಹಾಕಿಸುವ ಸಲುವಾಗಿಯೇ ವಿಷಯ ಪ್ರಸ್ತಾಪಿಸಿದ್ದಿರಿ ಎಂದೆನಿಸುತ್ತಿದೆ’ ಎಂದು ಅವರು ನುಡಿದರು. ರಮೇಶ್‌ಕುಮಾರ್‌ ಮಾತಿಗೆ ಸದನದಲ್ಲಿ ನಗೆಯ ಅಲೆ ಎದ್ದಿತು. ಆದರೆ ಶೆಟ್ಟರ್‌ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ರಮೇಶ್‌ಕುಮಾರ್‌ ಅವರದ್ದು ದಾರಿ ತಪ್ಪಿಸುವ ಮಾತು’ ಎಂದು ಕಾಗೇರಿ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT