ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ವರ್ಷಗಳಲ್ಲಿ 344 ಒ.ಸಿ ವಿತರಣೆ!

ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ವಿವರ ಪ್ರಕಟ
Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಆರು ವರ್ಷಗಳಲ್ಲಿ ಲಕ್ಷಾಂತರ ಕಟ್ಟಡಗಳು ನಿರ್ಮಾಣ ಆಗಿರಬಹುದು. ಆದರೆ, ಬಿಬಿಎಂಪಿಯಿಂದ ವಾಸಯೋಗ್ಯ ಪ್ರಮಾಣ ಪತ್ರ ಪಡೆದ ಕಟ್ಟಡಗಳ ಸಂಖ್ಯೆ ಕೇವಲ 344 !

ನಕಲಿ ಒ.ಸಿ.ಗಳ ಹಾವಳಿ ಹೆಚ್ಚಾಗಿರುವ ಕುರಿತು ವ್ಯಾಪಕ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕಳೆದ ಆರು ವರ್ಷಗಳಲ್ಲಿ ಬಿಬಿಎಂಪಿಯಿಂದ ಅಧಿಕೃತವಾಗಿ ಒ.ಸಿ. ಪಡೆದವರ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಅವಧಿಯಲ್ಲಿ ಒ.ಸಿ. ಪಡೆದ ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಕಟ್ಟಡಗಳ ವಿವರ ಸಹ ಅದರಲ್ಲಿದೆ.

ಫ್ಲ್ಯಾಟ್‌ ಖರೀದಿಸಲು ಆಸಕ್ತರಾದ ಜನಸಾಮಾನ್ಯರು ಯಾವುದು ಅಧಿಕೃತ ದಾಖಲೆ ಹೊಂದಿದ ಕಟ್ಟಡ ಎಂಬುದನ್ನು ಸುಲಭವಾಗಿ ಅರಿಯಲು ಇದರಿಂದ ಸಾಧ್ಯವಾಗಲಿದೆ. ‘ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತೆ (ಕಂದಾಯ) ವಿ.ರಶ್ಮಿ ಹೇಳುತ್ತಾರೆ.

ನಕಲಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿರುವ ಕುರಿತು ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಚರ್ಚೆಯಾಗಿತ್ತು. ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಸಾವಿರಾರು ಸಂಖ್ಯೆಯಲ್ಲಿ ನಕಲಿ ಒ.ಸಿ.ಗಳನ್ನು ವಿತರಿಸಲಾಗಿದೆ ಎಂದು ದೂರಿದ್ದರು.

ಸುಮಾರು 30 ಸಾವಿರ ಕಟ್ಟಡಗಳಿಗೆ ನಕಲಿ ನಕ್ಷೆ, ನಿರ್ಮಾಣ ಪ್ರಾರಂಭ (ಸಿ.ಸಿ) ಹಾಗೂ ಒ.ಸಿ ಪ್ರಮಾಣ ಪತ್ರ ನೀಡಲಾಗಿದೆ. ನಗರ ಯೋಜನೆಯಲ್ಲಿ ನಡೆದ ಈ ಅವ್ಯವ­ಹಾರದಿಂದ ಬಿಬಿಎಂಪಿಗೆ ಸಾವಿ­ರಾರು ಕೋಟಿ ರೂಪಾಯಿ ಆದಾಯ ಸೋರಿಕೆಯಾಗಿದೆ’ ಎಂಬ ದೂರೂ ಕೌನ್ಸಿಲ್‌ ಸಭೆಯಲ್ಲಿ ಕೇಳಿಬಂದಿತ್ತು.

‘2010ರಿಂದ 2014ರವ­ರೆಗೆ ಕೇವಲ 1,298 ಕಟ್ಟಡಗಳಿಗೆ ಮಾತ್ರ ನಕ್ಷೆ ಮಂಜೂರು ಮಾಡಲಾ­ಗಿದ್ದು, 350 ಕಟ್ಟಡಗಳಿಗೆ ಸಿ.ಸಿ ಹಾಗೂ 95 ಕಟ್ಟಡಗಳಿಗೆ ಒ.ಸಿ ನೀಡಲಾಗಿದೆ. ಇದರಿಂದ 111.98 ಕೋಟಿ ಆದಾಯವಷ್ಟೇ ಬಂದಿದೆ’ ಎಂಬ ವಿವರ ದಾಖಲೆಗಳಲ್ಲಿತ್ತು.

‘ಕೆಂಗೇರಿ ವಿಭಾಗದ ವಳಗೆರೆಹಳ್ಳಿ ಗ್ರಾಮದಲ್ಲಿ 200 ಫ್ಲ್ಯಾಟ್‌ಗಳನ್ನು ಹೊಂದಿದ ಕಟ್ಟಡಕ್ಕೆ ಸೂಕ್ತ ದಾಖಲೆ ಇಲ್ಲದಿದ್ದರೂ ಅಲ್ಲಿನ ಸಹಾಯಕ ಕಂದಾಯ ಅಧಿಕಾರಿಯೊಬ್ಬರು ‘ಎ’ ಖಾತೆ ನೀಡಿದ್ದು ಬೆಳಕಿಗೆ ಬಂದಿತ್ತು.

‘ನಕಲಿ ಪ್ರಮಾಣ ಪತ್ರಗಳ ಹಾವಳಿಯಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುವಂತೆ ಆಗಬಾರದು ಎಂಬ ಉದ್ದೇಶದಿಂದ ಒ.ಸಿ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಇನ್ನುಮುಂದೆ ಯಾವುದೇ ಕಟ್ಟಡಕ್ಕೆ ಪ್ರಮಾಣ ಪತ್ರ ನೀಡಿದರೂ ಅದರ ವಿವರ ವೆಬ್‌ಸೈಟ್‌ನಲ್ಲಿ ಸಿಗಲಿದೆ’ ಎಂದು ರಶ್ಮಿ ವಿವರಿಸುತ್ತಾರೆ.

ಒ.ಸಿ ವಿವರಗಳನ್ನು ಆನ್‌ಲೈನ್‌ನಲ್ಲಿ ಹಾಕಿದ್ದಕ್ಕೆ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ‘ಬಿಬಿಎಂಪಿಯ ಇಂತಹ ಒಳ್ಳೆಯ ಕೆಲಸಗಳಿಗೆ ನಮ್ಮ ಬೆಂಬಲ ಇದ್ದೇ ಇರುತ್ತದೆ’ ಎಂದು ಹೇಳುತ್ತಾರೆ ಸಿಟಿಜನ್‌ ಆ್ಯಕ್ಷನ್‌ ಫೋರಂ ಅಧ್ಯಕ್ಷ ಡಿ.ಎಸ್‌. ರಾಜಶೇಖರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT