ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ತಾಲ್ಲೂಕುಗಳಲ್ಲಿ ಸಿಡಿಪಿಒ ಹುದ್ದೆ ಖಾಲಿ

Last Updated 1 ಸೆಪ್ಟೆಂಬರ್ 2014, 19:44 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳ ಬೆಳವಣಿಗೆಗೆ ಪೂರಕವಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌) ಜಾರಿಗೊಳಿಸಲು ರಾಜ್ಯದ ಕೆಲ ಜಿಲ್ಲೆಗಳಲ್ಲಿ  ಅಧಿಕಾರಿಗಳೇ ಇಲ್ಲ!

ಐಸಿಡಿಎಸ್‌ ಜಾರಿಯ ನೇರ ಹೊಣೆ ಹೊತ್ತಿರುವ ತಾಲ್ಲೂಕು ಮಟ್ಟದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (ಸಿಡಿಪಿಒ) 60 ಹುದ್ದೆಗಳು ಖಾಲಿ ಇವೆ. ಅಂಗನವಾಡಿ ಮೇಲ್ವಿಚಾರಕರ 566 ಹುದ್ದೆಗಳು ಭರ್ತಿಯಾಗಿಲ್ಲ. 1,500 ಅಂಗನವಾಡಿಗಳಿಗೆ ಕಾರ್ಯ­ಕರ್ತೆ­ಯರಿಲ್ಲ. 2000 ಅಂಗನವಾಡಿ­ಗಳಲ್ಲಿ ಸಹಾಯಕಿಯರಿಲ್ಲ.

ರಾಜ್ಯದ ಎರಡು ಜಿಲ್ಲೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಹುದ್ದೆಗಳೂ ಖಾಲಿ ಇವೆ. ಇದರಿಂದಾಗಿ ಐಸಿಡಿಎಸ್‌ ಅನುಷ್ಠಾನ ಮತ್ತು ಅಂಗನವಾಡಿಗಳ ಕಾರ್ಯನಿರ್ವಹಣೆಗೆ ತೊಡಕು ಉಂಟಾಗಿದೆ.

ಅಂಗನವಾಡಿಗಳ ಕಾರ್ಯನಿರ್ವಹಣೆ ಕುರಿತ ಮೇಲ್ವಿಚಾರಣೆ ಸೇರಿದಂತೆ ಆಯಾ ತಾಲ್ಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳ ಪೂರ್ಣ ಉಸ್ತುವಾರಿ ಶಿಶು ಅಭಿವೃದ್ಧಿ ಅಧಿಕಾರಿಗಳದ್ದೇ ಆಗಿರುತ್ತದೆ. ಅಂಗನ­ವಾಡಿ­ಗಳಿಗೆ ಮೂಲಸೌಕರ್ಯ ಒದಗಿಸಲು ಈ ವರ್ಷದ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ₨19 ಕೋಟಿ ಅನುದಾನ ಒದಗಿಸಿದೆ.  ಆದರೆ, ಅಧಿ­ಕಾ­ರಿಗಳು ಮತ್ತು ಸಿಬ್ಬಂದಿ ಕೊರತೆಯಿಂದ ಅನು­ದಾನ ಬಳಕೆಗೂ ಅಡ್ಡಿಯಾಗಿದೆ ಎಂದು ರಾಜ್ಯ ಅಂಗನ­ವಾಡಿ ನೌಕರರ ಸಂಘದ ಪದಾಧಿಕಾರಿಗಳು ಹೇಳುತ್ತಾರೆ.

ಶಿಶು ಅಭಿವೃದ್ಧಿ ಯೋಜನಾ­ಧಿಕಾರಿಗಳು, ಮೇಲ್ವಿಚಾರಕರು ಇಲ್ಲದಿ­ರು­ವುದರಿಂದ  ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಮಹತ್ವದ ಯೋಜನೆಗೂ ಹಿನ್ನಡೆಯಾಗಲಿದೆ.

ಪಾಟೀಲ್‌ ವರದಿ ನನೆಗುದಿಗೆ
ಹೈಕೋರ್ಟ್‌ ನ್ಯಾಯಮೂರ್ತಿ ಎನ್‌.ಕೆ. ಪಾಟೀಲ್‌ ಸಮಿತಿ 2012ರಲ್ಲಿ ಮಕ್ಕಳ ಅಪೌಷ್ಟಿಕತೆಗೆ ಸಂಬಂಧಿಸಿದಂತೆ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಅಂಗನವಾಡಿಗಳಿಗೆ ಶೌಚಾಲಯ, ವಿದ್ಯುತ್‌ ಸಂಪರ್ಕ, ಶುದ್ಧ ನೀರು, ಅಡುಗೆ ಅನಿಲ, ಆಟದ ಮೈದಾನ, ಆಟಿಕೆಗಳು, ಔಷಧಿ ಕಿಟ್‌ಗಳನ್ನು ಒದಗಿಸುವುದರ ಜೊತೆಗೆ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಹುದ್ದೆ­ಗಳನ್ನು ಭರ್ತಿ ಮಾಡಬೇಕು ಎಂದು ಹೇಳಿತ್ತು. ಇವರ ಸೇವೆಯನ್ನು ಬೇರೆ ಯಾವುದೇ ಉದ್ದೇಶ­ಗಳಿಗೆ ಬಳಸದಂತೆಯೂ ನಿರ್ದೇಶನ ನೀಡಿತ್ತು.

ಆದರೆ, ಶೇ 41ರಷ್ಟು ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಶೇ 58ರಷ್ಟು ಅಂಗನವಾಡಿಗಳಲ್ಲಿ ಶೌಚಾ­ಲಯ ಇಲ್ಲ. ಶೇ 78ರಷ್ಟು ಅಂಗನ­ವಾಡಿಗಳಲ್ಲಿ ಆಟದ ಮೈದಾನ ಇಲ್ಲ. ಅಂಗನವಾಡಿ ನೌಕರರನ್ನು ಭಾಗ್ಯಲಕ್ಷ್ಮಿ, ಸ್ತ್ರೀಶಕ್ತಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ಹಳ್ಳಿ­ಗಳಲ್ಲಿ  ಭಾಗ್ಯಲಕ್ಷ್ಮಿ ಯೋಜನೆಯ ಫಲಾನು­ಭವಿಗಳಿಗೆ ಬೇಕಿರುವ ಪ್ರಮಾಣಪತ್ರ­ಗಳನ್ನೂ ಅಂಗನ­ವಾಡಿ ಕಾರ್ಯಕರ್ತರೇ  ಸಂಬಂಧಪಟ್ಟ ಕಚೇರಿ­ಗಳಿಂದ ಪಡೆದು­ಕೊಳ್ಳಬೇಕಾದ ಅನಿ­ವಾ­ರ್ಯತೆ ಇದೆ.  ಅಂಗನವಾಡಿ ನೌಕರರನ್ನು ಸಮಗ್ರ ಶಿಶು ಅಭಿ­ವೃದ್ಧಿ ಯೋಜನೆಯ ಉದ್ದೇಶ­ಗಳಿಗೆ ನಿಯೋಜಿಸ­ಲಾಗಿದ್ದು, ಬೇರೆ ಕೆಲಸ­ಗಳನ್ನು ಮಾಡಿಸಿ­ಕೊಳ್ಳು­ವುದರಿಂದ  ಮೂಲ ಉದ್ದೇಶಕ್ಕೆ ಧಕ್ಕೆಯಾಗಿದೆ’ ಎಂದು ಅಂಗನವಾಡಿ ನೌಕರರ ಸಂಘ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT