ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

627 ಹೆಸರಿನ ಪಟ್ಟಿ ಕೋರ್ಟ್‌ಗೆ ಸಲ್ಲಿಕೆ

ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತದ ಖಾತೆದಾರರು
Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸ್ವಿಟ್ಜರ್‌ಲೆಂಡ್‌ನ ಜಿನೀವಾ ಎಚ್‌ಎಸ್‌­ಬಿಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ೬೨೭ ಭಾರತೀಯರ ಹೆಸರು­ಗಳ ಪಟ್ಟಿ­ಯನ್ನು ಕೇಂದ್ರ ಸರ್ಕಾರ ಬುಧ­ವಾರ ಸುಪ್ರೀಂಕೋರ್ಟ್‌ ಮುಂದಿ­ರಿಸಿತು. ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಪಟ್ಟಿಯನ್ನು ತೆರೆಯದ ಸುಪ್ರೀಂ­ಕೋರ್ಟ್‌, ಈ ಖಾತೆದಾರರ ಮೇಲೆ ಕಾನೂನು ಕ್ರಮ ಕೈ ಗೊ­ಳ್ಳಲು ರಚಿಸಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸೂಚಿಸಿತು.

ಮುಖ್ಯ ನ್ಯಾಯಮೂರ್ತಿ ಎಚ್‌.­ಎಲ್‌. ದತ್ತು ಅವರ ನೇತೃತ್ವದ ನ್ಯಾಯ­ಪೀಠವು ಮುಚ್ಚಿದ ಲಕೋಟೆ­ಯನ್ನು ತೆರೆ­ಯಲಿಲ್ಲ. ಎಸ್‌ಐಟಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮಾತ್ರ ಈ ಲಕೋಟೆ­ ತೆರೆಯು­ತ್ತಾರೆ ಎಂದು ಸ್ಪಷ್ಟಪಡಿಸಿದ ಪೀಠ, ತನಿಖೆ ಕುರಿತ ವಸ್ತುಸ್ಥಿತಿ ವರದಿ­ನವೆಂಬರ್‌ ಕೊನೆಯ ವೇಳೆಗೆ ಸಲ್ಲಿಸಬೇಕೆಂದು ಎಸ್‌ಐಟಿಗೆ ಗಡುವು ನೀಡಿತು. ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ, ಈ ಪಟ್ಟಿಯಲ್ಲಿ ಇರುವವರೆಲ್ಲರೂ ೨೦೦೬­ರಲ್ಲಿ ಖಾತೆದಾರರಾಗಿದ್ದಾರೆ. ಫ್ರಾನ್‌್ಸ ಸರ್ಕಾರವು ೨೦೧೧ರಲ್ಲಿ ಈ ಮಾಹಿತಿ­ಯನ್ನು ಭಾರತ ಸರ್ಕಾರಕ್ಕೆ ಒದಗಿಸಿತ್ತು ಎಂದರು.

ಜಿನೀವಾದ ಎಚ್‌ಎಸ್‌ಬಿಸಿ ಬ್ಯಾಂಕ್‌ನ ಭಾರತದ ಖಾತೆದಾರರ ಈ ವಿವರವು ಮೊದಲು ಫ್ರಾನ್‌್ಸ ಸರ್ಕಾರಕ್ಕೆ ಲಭ್ಯವಾ­ಗಿತ್ತು. ಅಲ್ಲಿಂದ ಈ ಮಾಹಿತಿ ನಮ್ಮ ಸರ್ಕಾರಕ್ಕೆ ಸಿಕ್ಕಿತು.  ಈ ಪಟ್ಟಿಯಲ್ಲಿರುವ ಕೆಲವರು, ವಿದೇಶಿ ಬ್ಯಾಂಕ್‌ನಲ್ಲಿ ತಾವು ಖಾತೆ ಹೊಂದಿರುವುದನ್ನು ಒಪ್ಪಿಕೊಂಡು ಸಂಬಂಧಿಸಿದ  ತೆರಿಗೆ ಕಟ್ಟಿದ್ದಾರೆ. ಫ್ರಾನ್‌್ಸ ಸರ್ಕಾರದೊಂದಿಗೆ ಕೇಂದ್ರ ಸರ್ಕಾರ ನಡೆಸಿದ ಮಾತು­ಕತೆಯ ವಿವರ, ಖಾತೆದಾರರ ಪಟ್ಟಿ ಹಾಗೂ ವಸ್ತುಸ್ಥಿತಿ ವರದಿ­ಗಳನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಲಾಗಿದೆ ಎಂದು ರೋಹಟಗಿ ಹೇಳಿದರು.

ವಿದೇಶಿ ಬ್ಯಾಂಕುಗಳ ಖಾತೆದಾರರ ಮಾಹಿತಿಗಳನ್ನು ಹಂಚಿ­ಕೊಳ್ಳುವ ಸಲು­ವಾಗಿ ಅನ್ಯದೇಶಗಳೊಡನೆ ಮಾಡಿ­ಕೊಂಡಿ­ರುವ ಒಪ್ಪಂದ­ಗಳಿಗೆ ಸಂಬಂಧಿಸಿ­ದಂತೆ ಏನೇ ಅಹವಾಲು ಇದ್ದರೂ ಅದನ್ನು ಎಸ್‌ಐಟಿ ಮುಂದೆ ಹೇಳಿಕೊ­ಳ್ಳುವಂತೆ ನ್ಯಾಯಮೂರ್ತಿ­ಗಳಾದ ರಂಜನಾ ಪ್ರಕಾಶ್‌ ದೇಸಾಯಿ ಮತ್ತು ಮದನ್‌ ಬಿ.ಲೋಕೂರ್‌ ಅವರನ್ನು ಒಳಗೊಂಡ ಪೀಠ ಸರ್ಕಾರಕ್ಕೆ ಸೂಚಿಸಿತು.

ಎಸ್‌ಐಟಿ ಅಧ್ಯಕ್ಷರು ಮತ್ತು ಉಪಾ­ಧ್ಯಕ್ಷರು ಸಾಧಾರಣ ವ್ಯಕ್ತಿ­ಗಳೇ-­ನಲ್ಲ.  ಕಪ್ಪುಹಣದ ತನಿಖೆಯಿಂದ ಏನೇನು ಬಿಕ್ಕಟ್ಟುಗಳು ಹುಟ್ಟುತ್ತವೆ ಎಂಬುದು ಅವರಿಗೆ ಗೊತ್ತಾಗುತ್ತದೆ. ಅದೆಲ್ಲವನ್ನೂ ಮನಸ್ಸಿನಲ್ಲಿ ಇರಿಸಿಕೊಂಡೇ ಎಸ್‌ಐಟಿ ತನ್ನ ಕಾರ್ಯ ಮಾಡುತ್ತದೆ ಎಂದರು. ಎಸ್‌ಐಟಿಗೆ ಹೆಚ್ಚುವರಿ ಮಾಹಿತಿ ಒದಗಿಸಬೇಕೆಂದು ಕೋರಿ ಆಮ್‌ ಆದ್ಮಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಹಾಕಿರುವ ಅರ್ಜಿಯನ್ನು ಸುಪ್ರೀಂ­ಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಳ್ಳ­ಲಿಲ್ಲ. ಇದರ ವಿಚಾರಣೆಯನ್ನು ಡಿ.೩ರಂದು ನಡೆಸುವುದಾಗಿ ತಿಳಿಸಿತು.

‘ಮಾರ್ಚ್‌ 31ರೊಳಗೆ ಆದಾಯ ತೆರಿಗೆ ತನಿಖೆ’
ನವದೆಹಲಿ: ಸ್ವಿಟ್ಜರ್‌ಲೆಂಡ್‌ ಜಿನೀವಾ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರ ಬಗ್ಗೆ ಆದಾಯ ತೆರಿಗೆ ಕಾಯ್ದೆ ಅನ್ವಯ ಬರುವ ಮಾರ್ಚ್‌ ೩೧ರೊಳಗೆ ತನಿಖೆ ಮುಗಿಸುವುದಾಗಿ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ತಿಳಿಸಿದರು.
ಈ ಪಟ್ಟಿಯಲ್ಲಿರುವ ಅರ್ಧದಷ್ಟು ಖಾತೆದಾರರು ಭಾರತೀಯ­ರಾದರೆ, ಉಳಿದ ಅರ್ಧದಷ್ಟು ಖಾತೆದಾರರು ಅನಿವಾಸಿ ಭಾರತೀ­ಯರಾಗಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ವಿದೇಶಿ ಬ್ಯಾಂಕುಗಳ ಖಾತೆದಾರರಿಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲು ಅನ್ಯ ದೇಶ­ಗಳೊಂದಿಗೆ ಮಾಡಿಕೊಂಡಿ­ರುವ ಒಪ್ಪಂದಗಳ ಕುರಿತ ಅಹವಾಲು ಗಳನ್ನು ಎಸ್‌ಐಟಿ ಮುಂದೆ ಹೇಳಿಕೊಳ್ಳಲು ನ್ಯಾಯಾಲಯ ಸೂಚಿಸಿದೆ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT