ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ವರ್ಷ ಕಳೆದರೂ ಪರಿಹಾರ ಮರೀಚಿಕೆ

ಹನೂರು ಸಮೀಪ ಹುಬ್ಬೆಹುಣಸೆ ಹೊಸಕೆರೆ ನಾಲೆ ನಿರ್ಮಾಣಕ್ಕೆ ಭೂ ಸ್ವಾಧೀನ
Last Updated 27 ಜೂನ್ 2016, 11:10 IST
ಅಕ್ಷರ ಗಾತ್ರ

ಹನೂರು: ಸಮೀಪದ ಹುಬ್ಬೆಹುಣಸೆ ಹೊಸಕೆರೆ ನಾಲೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಗೆ 7 ವರ್ಷ ಕಳೆದರೂ ಪರಿಹಾರ ದೊರೆತಿಲ್ಲ. ಅತ್ತ ಜಮೀನೂ ಇಲ್ಲದೆ, ಇತ್ತ ಪರಿಹಾರವೂ ಇಲ್ಲದೆ ಸಂತ್ರಸ್ತ ರೈತರ ಬದುಕು ಅತಂತ್ರವಾಗಿದೆ.

ಸಮೀಪದ ಉದ್ದನೂರು ಬಳಿ ಕಾವೇರಿ ನೀರಾವರಿ ನಿಗಮದಿಂದ ಹೊಸಕೆರೆ ನಿರ್ಮಿಸಲಾಗಿದೆ. ಉದ್ದನೂರು, ಬೆಳತ್ತೂರು, ಮಹಾ ಲಿಂಗನಕಟ್ಟೆ ಹಾಗೂ ಹನೂರು ಪಟ್ಟಣಕ್ಕೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯ ಕಲ್ಪಿಸಲು ಉದ್ದೇಶದಿಂದ ಕೆರೆ ನಿರ್ಮಿಸಲಾಗಿದೆ. ಕೆರೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರ ವಿತರಿಸಲಾಗಿದೆ.ಆದರೆ, ಮುಖ್ಯನಾಲೆ ಹಾಗೂ ವಿತರಣಾ ನಾಲೆಗಳ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರ ವಿತರಿಸಿಲ್ಲ.

ಕೆರೆ ನಿರ್ಮಾಣದ ಬಳಿಕ ನಾಲೆ ನಿರ್ಮಿಸಲು 2007ರಲ್ಲಿ ಹನೂರು ಪಟ್ಟಣದ 130 ರೈತರಿಂದ 29.22 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಇಲ್ಲಿಯವರೆಗೂ ಸೂಕ್ತ ಪರಿಹಾರ ವಿತರಿಸಿಲ್ಲ ಎಂಬುದ ರೈತರ ಆರೋಪ.

ಬೆಳೆಗೆ ಪರಿಹಾರ: ಸ್ವಾಧೀನಪಡಿಸಿ ಕೊಂಡ ಜಮೀನಿನಲ್ಲಿ ಬೆಳೆದಿದ್ದ ತೆಂಗು, ಬೀಟೆ, ಬೇವು ಇತರೆ ಮರಗಳು ಹಾಗೂ ಬೆಳೆಗಳಿಗೆ ಮಾತ್ರ ಪರಿಹಾರ ವಿತರಿಸ ಲಾಗಿದೆ. ಆದರೆ, ಜಮೀನಿಗೆ ಪರಿಹಾರ ನೀಡಿಲ್ಲ. ಹೀಗಾಗಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಸಂತ್ರಸ್ತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪರಿಹಾರಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಪ್ರತಿ ಬಾರಿಯೂ ಮೂರು ತಿಂಗಳ ಒಳಗೆ ಪರಿಹಾರ ನೀಡುವುದಾಗಿ ಭರವಸೆ ನೀಡುತ್ತಾರೆ. ಆದರೆ, 7 ವರ್ಷ ಕಳೆದರೂ ಭರವಸೆ ಈಡೇರಿಲ್ಲ. ಸ್ಥಳೀಯ ಶಾಸ ಕರಿಗೂ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ’ ಎಂದು ಹನೂರು ರೈತ ಎ.ಆರ್‌. ರಮೇಶ್‌ ಸೇರಿದಂತೆ ಇತರರು ಕಿಡಿಕಾರಿದ್ದಾರೆ.

ರಾಜ್ಯಪಾಲರಿಗೆ ಪತ್ರ: ಸ್ವಾಧೀನಪಡಿಸಿ ಕೊಂಡ ಜಮೀನುಗಳಿಗೆ ಸೂಕ್ತ ಪರಿಹಾರ ನೀಡದಿದ್ದರೆ ಕುಟುಂಬದ ಸದಸ್ಯರೆಲ್ಲರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂತ್ರಸ್ತ ರೈತ ನಾರಾಯಣ ನಾಯ್ಡು ಎಂಬುವವರು ರಾಜ್ಯಪಾಲರು ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಆದರೂ, ಪ್ರಯೋಜನವಾಗಿಲ್ಲ ಎಂಬುದು ಅವರ ಆರೋಪ.

‘ಒಂದೇ ಸರ್ವೆ ನಂಬರ್‌ ಜಮೀನಿನ ದಾಖಲೆಯಲ್ಲಿ ನಾಲ್ಕೈದು ಮಾಲೀಕರ ಹೆಸರಿದೆ. ಇದು ಪರಿಹಾರ ನೀಡಲು ಅಡೆತಡೆಯಾಗಿದೆ. ಇವರೆಲ್ಲರೂ ಒಟ್ಟಾಗಿ ಒಬ್ಬರ ಹೆಸರಿಗೆ ಪರಿಹಾರ ನೀಡುವಂತೆ ಅರ್ಜಿ ನೀಡಿದರೆ ಶೀಘ್ರದಲ್ಲೇ ಪರಿಹಾರ ವಿತರಿಸಲಾಗುವುದು’ ಎಂದು ಕೊಳ್ಳೇಗಾಲದ ಕಾವೇರಿ ನೀರಾವರಿ ನಿಗಮ ಕಚೇರಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀಧರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT