ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

71ರ ಪತ್ರಕರ್ತೆಗೆ 7 ವರ್ಷ ಸಜೆ

Last Updated 28 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಅನಾರೋಗ್ಯಪೀಡಿತ ಪತ್ರಕರ್ತೆಗೆ ಶಿಕ್ಷೆ ವಿಧಿಸಿದ ಈ ಪ್ರಕರಣ, ಚೀನಾ ಸರ್ಕಾರದ ದಮನಕಾರಿ ನೀತಿಗೆ ತಾಜಾ ನಿದರ್ಶನ

ದಶಕಗಳ ಕಾಲದ ದೀರ್ಘ ಅವಧಿಯ ತಮ್ಮ ವೃತ್ತಿ ಜೀವನದಲ್ಲಿ ಕಮ್ಯುನಿಸ್ಟ್ ಸರ್ಕಾರಕ್ಕೆ ಪದೇ ಪದೇ ಸವಾಲು ಒಡ್ಡಿದ 71 ವರ್ಷದ ಪತ್ರಕರ್ತೆ ಗಾವೊ ಯು ಅವರಿಗೆ ಇತ್ತೀಚೆಗೆ ಏಳು ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಸರ್ಕಾರಿ ರಹಸ್ಯಗಳನ್ನು ವಿದೇಶಗಳಲ್ಲಿ ಬಹಿರಂಗಪಡಿಸಿದ್ದಾರೆ ಎಂಬ ತಪ್ಪಿಗೆ ಬೀಜಿಂಗ್‌ನ ನ್ಯಾಯಾಲಯವೊಂದು ಈ ಶಿಕ್ಷೆ ವಿಧಿಸಿದೆ. ಆಕೆ ಮೇಲ್ಮನವಿ ಸಲ್ಲಿಸುತ್ತಾರೆ ಎಂದು ಆಕೆಯ ವಕೀಲ ಮತ್ತು ಸಹೋದರ ಹೇಳಿದ್ದಾರೆ.

ದಿ ಥರ್ಡ್‌ ಇಂಟರ್‌ಮೀಡಿಯಟ್‌ ಪೀಪಲ್ಸ್‌ ಕೋರ್ಟ್‌ನಲ್ಲಿ  ಗಾವೊ ವಿಚಾರಣೆಗೆ ಒಳಗಾದ ಐದು ತಿಂಗಳ ಬಳಿಕ ತೀರ್ಪು ಪ್ರಕಟಗೊಂಡಿದೆ. ಗಾವೊ ಅವರ ವಕೀಲರಾದ ಮೊ ಶಾವೊಪಿಂಗ್ ಪ್ರಕಾರ ಇಂತಹ ವಿಳಂಬ ಹೊಸದು. ಇಂತಹ ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕು ಎಂಬ ಅಸ್ಪಷ್ಟತೆಯೇ ಈ ವಿಳಂಬಕ್ಕೆ ಕಾರಣ ಎಂಬುದು ಅವರ ಅಭಿಪ್ರಾಯ. ವಿಶೇಷವಾಗಿ ರಾಜಕೀಯ ಸಂಘರ್ಷದ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಮಾಡುವಂತೆಯೇ ಕೊನೆಯಲ್ಲಿ ಈ ಪ್ರಕರಣದಲ್ಲಿಯೂ ನ್ಯಾಯಾಲಯ ಪ್ರಾಸಿಕ್ಯೂಷನ್ ಪರವಾಗಿ ತೀರ್ಪು ನೀಡಿತು.

‘ಈ ತೀರ್ಪು ನಿರೀಕ್ಷಿತವೇ ಆಗಿದೆ. ಆದರೆ ಗಾವೊ ಪರ ವಕೀಲರ ವಾದವನ್ನೇ ಆಲಿಸದಿರುವುದು ತಪ್ಪು. ಮೇಲ್ಮನವಿ ಸಲ್ಲಿಸುವುದಾಗಿ ಆಕೆ ಹೇಳಿದ್ದಾಳೆ’ ಎಂದು ಗಾವೊ ಕಿರಿಯ ಸಹೋದರ ಗಾವೊ ವೈ ಹೇಳಿದ್ದಾರೆ. ಸರ್ಕಾರಿ ರಹಸ್ಯಗಳು ಎಂಬುದಕ್ಕೆ ಚೀನಾ ಸರ್ಕಾರ ಹೊಂದಿರುವ ವ್ಯಾಖ್ಯೆಯೇ ವ್ಯಾಪಕವಾಗಿರುವುದರಿಂದ ವಿದೇಶದಲ್ಲಿ ಸರ್ಕಾರಿ ರಹಸ್ಯಗಳ ಸೋರಿಕೆ ಎಂಬ ಆರೋಪ ಅಸಂಗತ ಎಂದು ಗಾವೊ ಅವರ ವಕೀಲರು ಮತ್ತು ಬೆಂಬಲಿಗರು ಹೇಳುತ್ತಿದ್ದಾರೆ.

ಕಮ್ಯುನಿಸ್ಟ್ ಪಕ್ಷದ ನಿರ್ದೇಶನವೊಂದನ್ನು ಬಹಿರಂಗ ಪಡಿಸಿರುವುದಕ್ಕಾಗಿ ಗಾವೊ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಆದರೆ ಈ ನಿರ್ದೇಶನ, ಸಾರಾಂಶ ರೂಪದಲ್ಲಿ ಚೀನಾ ಸರ್ಕಾರದ ಹಲವು ಅಂತರ್ಜಾಲ ತಾಣಗಳಲ್ಲಿ ಲಭ್ಯ ಇದೆ ಎಂದು ಮೊ ಹೇಳುತ್ತಾರೆ. ಉದಾರವಾದಿ ರಾಜಕೀಯ ಚಿಂತನೆಗಳು ಮತ್ತು ಮೌಲ್ಯಗಳನ್ನು ಹೇಗೆ ಹತ್ತಿಕ್ಕಬಹುದು ಎಂಬ ಪಕ್ಷದ ಯೋಜನೆಗಳನ್ನು ದಾಖಲೆ ಸಂಖ್ಯೆ 9 ಎಂಬ ಈ ನಿರ್ದೇಶನ ವಿವರಿಸುತ್ತದೆ.

2013ರ ಜುಲೈಯಲ್ಲಿ ಈ ದಾಖಲೆಯನ್ನು ಅಮೆರಿಕ ಮೂಲದ ‘ಮಿರರ್ ಮೀಡಿಯಾ ಗ್ರೂಪ್’ ಎಂಬ ಚೀನೀ ಮಾಧ್ಯಮ ಸಂಸ್ಥೆಗೆ ಗಾವೊ ನೀಡಿದ್ದಾರೆ ಎಂದು ನ್ಯಾಯಾಲಯದ ತೀರ್ಪು ಹೇಳುತ್ತದೆ ಎಂದು ಮೊ ತಿಳಿಸಿದ್ದಾರೆ. ಆದರೆ ಈ ದಾಖಲೆಯನ್ನು ಪ್ರಕಟಿಸಿದ ಸಂಸ್ಥೆ ಅದನ್ನು ಗಾವೊ ಅವರಿಂದ ಪಡೆದುಕೊಳ್ಳಲಾಗಿದೆ ಎಂಬುದನ್ನು ನಿರಾಕರಿಸಿದೆ. 2014ರಲ್ಲಿ ಗಂಡನನ್ನು ಕಳೆದುಕೊಂಡ ಗಾವೊ ಅವರನ್ನು ಸೆರೆಮನೆಗೆ ತಳ್ಳಿರುವುದು ಭಿನ್ನಮತ ಹತ್ತಿಕ್ಕುವ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅಧಿಕಾರ ಕೇಂದ್ರೀಕರಣದ ಪ್ರಯತ್ನಗಳ ಇತ್ತೀಚಿನ ಉದಾಹರಣೆಯಾಗಿದೆ.

ಪ್ರಸಿದ್ಧ ವಕೀಲ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಪು ಜಿಕಿಯಾಂಗ್ ಅವರನ್ನು ಕಳೆದ ವರ್ಷ ಬಂಧಿಸಲಾಗಿದೆ. ತಮ್ಮ ಬ್ಲಾಗ್‌ನಲ್ಲಿ ಅವರು ಪ್ರಕಟಿಸಿದ ಟಿಪ್ಪಣಿಗಳಿಗೆ ಸಂಬಂಧಿಸಿ ಅವರ ವಿರುದ್ಧ ಹಲವು ಆರೋಪಗಳನ್ನು ಹೊರಿಸಲಾಗಿದೆ. ನಾಗರಿಕ ಸಮಾಜಕ್ಕೆ ಹೆಚ್ಚಿನ ಸ್ವಾತಂತ್ರ್ಯ ಬೇಕು ಎಂದು ಪ್ರತಿಪಾದಿಸಿದ ಎಲ್ಲರೂ ಪೊಲೀಸ್ ವಶದಲ್ಲಿದ್ದಾರೆ ಇಲ್ಲವೇ  ಬಂಧನಕ್ಕೆ ಒಳಗಾಗಿದ್ದಾರೆ.  ಅವರ ಸಂಘಟನೆಗಳ ಬಾಗಿಲು ಮುಚ್ಚಿಸಲಾಗಿದೆ. ಇತ್ತೀಚೆಗೆ, ಲಿಂಗ ಸಮಾನತೆಯನ್ನು ಪ್ರತಿಪಾದಿಸುತ್ತಿದ್ದ ಐವರು ಮಹಿಳೆಯರನ್ನು ಬಂಧಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇದರ ವಿರುದ್ಧ ಕೇಳಿ ಬಂದ ಜೋರು ಧ್ವನಿಯ ನಂತರ ಅವರನ್ನು ಮೊನ್ನೆ  ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಗಾವೊ ಅವರನ್ನು ಜೈಲಿಗೆ ತಳ್ಳಿರುವುದು ಕೂಡ ಕ್ಸಿ ಅವರ ನಿಯಂತ್ರಣವನ್ನು ಬಲಪಡಿಸುವ ಪ್ರಯತ್ನದ ಭಾಗವೇ ಆಗಿದೆ ಎಂದು ಅಂತರರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು ಹೇಳುತ್ತಿವೆ. ಅನಾರೋಗ್ಯಪೀಡಿತ ಪತ್ರಕರ್ತೆಗೆ  ನೀಡಿರುವ ಕಠಿಣ ಶಿಕ್ಷೆ ಕ್ಸಿ ಜಿನ್‌ಪಿಂಗ್ ಅಧ್ಯಕ್ಷರಾಗಿ ಅಧಿಕಾರಕ್ಕೇರಿದ ಬಳಿಕ ನಾಗರಿಕ ಸಮಾಜ ಮತ್ತು ಅದರ ಸ್ವಾತಂತ್ರ್ಯದ ಪ್ರತಿಪಾದಕರನ್ನು ದಮನಗೊಳಿಸುವ ಪ್ರಯತ್ನ ತೀವ್ರಗೊಂಡಿದೆ ಎಂಬುದನ್ನು ಬಿಂಬಿಸುತ್ತದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಸಂಘಟನೆಯ ಏಷ್ಯಾ ವಿಭಾಗದ ಸಂಶೋಧಕಿ ಮಾಯಾ ವಾಂಗ್ ಇ-ಮೇಲ್‌ನಲ್ಲಿ ಹೇಳಿದ್ದಾರೆ.

ವಿಮರ್ಶಾತ್ಮಕ ಅಭಿಪ್ರಾಯವನ್ನು ಸರ್ಕಾರ ಸಹಿಸಿಕೊಳ್ಳುವುದೇ ಇಲ್ಲ ಎಂಬ ಸಂದೇಶವನ್ನು ಇತರ ಹೋರಾಟಗಾರರಿಗೆ ನೀಡುವುದು ಇದರ ಉದ್ದೇಶವಾಗಿದೆ. ಈಗಿನದು, 1979ರಿಂದ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿರುವ ಗಾವೊ  ಎದುರಿಸುತ್ತಿರುವ ಮೂರನೇ ದೀರ್ಘಾವಧಿ ಜೈಲು ವಾಸವಾಗಿದೆ. 1989ರ ಜೂನ್‌ನಲ್ಲಿ ನಡೆದ ಪ್ರಜಾಪ್ರಭುತ್ವ ಪರ ಪ್ರತಿಭಟನೆಯ 25ನೇ ವರ್ಷಾಚರಣೆಯ ಮೊದಲು 2014ರ ಏಪ್ರಿಲ್‌ನಲ್ಲಿ ಬೀಜಿಂಗ್‌ನಲ್ಲಿ ಪೊಲೀಸರು ಗಾವೊರನ್ನು ವಶಕ್ಕೆ ಪಡೆದಿದ್ದರು. 1989ರ ಪ್ರತಿಭಟನೆಗೂ ಮೊದಲೇ ಗಾವೊ ಖ್ಯಾತರಾಗಿದ್ದರು.

ಆ ಸಂದರ್ಭದಲ್ಲಿ ಅವರು  ನಿರ್ಭೀತ ಉದಾರವಾದಿ ಪತ್ರಿಕೆ ‘ಎಕನಾಮಿಕ್ಸ್ ವೀಕ್ಲಿ’ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 1989ರಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಗಾರರನ್ನು ದಮನಿಸಿದ ಸಂದರ್ಭದಲ್ಲೂ ಗಾವೊರನ್ನು 15 ತಿಂಗಳ ಕಾಲ ಜೈಲಿಗೆ ತಳ್ಳಲಾಗಿತ್ತು. ಸಂಘರ್ಷ ಮತ್ತು ಬಂಡಾಯಕ್ಕೆ ಗಾವೊ  ಬರೆದ ಒಂದು ಲೇಖನವೇ ನೀಲ ನಕ್ಷೆಯಾಗಿತ್ತು ಎಂದು ಸರ್ಕಾರ ವಾದಿಸಿತ್ತು. ಹಾಂಕಾಂಗ್ ಪಬ್ಲಿಕೇಷನ್ಸ್‌ಗೆ ಗಾವೊ ಅವರು ಚೀನಾದ ಮೇಲ್ವರ್ಗದ ರಾಜಕಾರಣದ ಬಗ್ಗೆ ಬರೆದ ಲೇಖನ, ಸರ್ಕಾರಿ ರಹಸ್ಯಗಳ ಬಹಿರಂಗ ಎಂಬ ಆರೋಪದಲ್ಲಿ 1993ರಿಂದ 1999ರ ವರೆಗೆ ಅವರನ್ನು ಜೈಲಿಗೆ ತಳ್ಳಲಾಗಿತ್ತು.

1999ರಲ್ಲಿ ವೈದ್ಯಕೀಯ ನೆಲೆಯಲ್ಲಿ ಅವರು ಪೆರೋಲ್‌ನಲ್ಲಿ ಬಿಡುಗಡೆಯಾದರು. ತೀರಾ ಇತ್ತೀಚೆಗೆ, ಬಂಧನಕ್ಕೆ ಒಳಗಾಗುವ ಮುನ್ನ ಜರ್ಮನ್ ನ್ಯೂಸ್ ಸರ್ವಿಸ್‌ನ ಚೀನೀ ಭಾಷಾ ಅಂತರ್ಜಾಲ ತಾಣ ಡಾಯ್‌ಷೆ ವೆಲ್‌ಗೆ ಬರೆದ ಲೇಖನದಲ್ಲಿ ಕ್ಸಿ ಸೇರಿದಂತೆ ಚೀನೀ ನಾಯಕರನ್ನು ಗಾವೊ ಟೀಕಿಸಿದ್ದರು. ರಹಸ್ಯ ದಾಖಲೆ ಬಹಿರಂಗ ಪ್ರಕರಣದಲ್ಲಿ ಗಾವೊ ತಪ್ಪೊಪ್ಪಿಕೊಂಡಿರುವುದನ್ನು ಆಕೆಯ ಬಂಧನದ ನಂತರ  ಚೀನಾದ ಸುದ್ದಿ ಮಾಧ್ಯಮಗಳಲ್ಲಿ ತೋರಿಸಲಾಗಿತ್ತು. 

ಆದರೆ ವಿಚಾರಣೆ ವೇಳೆ ತಾನು ತಪ್ಪಿತಸ್ಥೆ ಅಲ್ಲ ಎಂಬುದನ್ನು ಗಾವೊ ದೃಢವಾಗಿ ಹೇಳಿದ್ದಾರೆ. ಆಕೆಯೊಂದಿಗೆ ಮಗ ಜಾವೊ ಮೆಂಗ್ ಅವರನ್ನೂ ಬಂಧಿಸಲಾಗಿತ್ತು. ಮಗನ ಬಗೆಗಿನ ಚಿಂತೆಯಿಂದ ಈ ಹೇಳಿಕೆ ನೀಡಿದ್ದಾಗಿ ಗಾವೊ ತಿಳಿಸಿದ್ದಾರೆ. ಜಾವೊ ಅವರನ್ನು ನಂತರ ಬಿಡುಗಡೆ ಮಾಡಲಾಗಿದೆ. ಗಾವೊ ಬಂಧನದ ನಂತರ ವಿದೇಶಿ ಮಾಧ್ಯಮ ಸಂಸ್ಥೆಗಳಿಗೆ ಕೆಲಸ ಮಾಡುವ ಚೀನೀಯರ ವಿರುದ್ಧ ಚೀನಾ ಸರ್ಕಾರ ಹಲವು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿದೆ.
ದಿ ನ್ಯೂಯಾರ್ಕ್ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT