ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7,620 ಕುಂಟುಂಬಕ್ಕೆ ಉಚಿತ ಬಯೊಗ್ಯಾಸ್

ರಾಮನಗರ ಜಿಲ್ಲೆಯಲ್ಲಿ ಇನ್ಫೊಸಿಸ್ ಫೌಂಡೇಷನ್ ನೆರವು
Last Updated 31 ಮೇ 2016, 9:46 IST
ಅಕ್ಷರ ಗಾತ್ರ

ಚನ್ನಪಟ್ಟಣ: ರಾಮನಗರ ಜಿಲ್ಲೆಯಲ್ಲಿನ ಒಟ್ಟು 7,620 ಕುಟುಂಬ ಗಳಿಗೆ ಇನ್ಫೋಸಿಸ್ ಸಂಸ್ಥೆಯಿಂದ ₹ 22 ಕೋಟಿ ವೆಚ್ಚದಲ್ಲಿ ಉಚಿತವಾಗಿ ಬಯೊಗ್ಯಾಸ್ ಸೌಲಭ್ಯ ನೀಡಲಾಗುವುದು ಎಂದು ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ತಿಳಿಸಿದರು.

ತಾಲ್ಲೂಕಿನ ಕರಲಹಳ್ಳಿ ಗ್ರಾಮದಲ್ಲಿ ಇನ್ಫೊಸಿಸ್ ಗೃಹ ಬಳಕೆಯ ಬಯೊಗ್ಯಾಸ್ ಡೈಜೆಸ್ಟರ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಯೋಜನೆಯಲ್ಲಿ ಮುಂದಿನ 10 ವರ್ಷಗಳ ಅವಧಿಯಲ್ಲಿ ಗೃಹ ಬಳಕೆಯ ಒಂದು ಮಿಲಿಯನ್ ಸಿಲಿಂಡರ್ ಅನಿಲ ಉತ್ಪಾದಿಸಲಿದೆ. ಇದಕ್ಕೆ ಫಲಾನುಭವಿಗಳ ಸ್ಪಂದನಾ ಸಹಕಾರ ಅಗತ್ಯ ಎಂದರು.

ಸಂಘ ಸಂಸ್ಥೆಗಳು ಅಥವಾ ಸರ್ಕಾರ ಫಲಾ ನುಭವಿಗಳಿಗೆ ಯಾವುದೇ ಯೋಜನೆಯನ್ನು ಉಚಿತವಾಗಿ ನೀಡಿದರೂ ಸಹ ಆತ ಅದನ್ನು ತನ್ನ ಆಸ್ತಿ ಎಂದು ಭಾವಿಸಿ, ಅದನ್ನು ಸಮಪಕವಾಗಿ ನಿರ್ವಹಣೆ ಮಾಡಬೇಕು ಎಂದು ಅವರು ಹೇಳಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಹಲವು ಜನರು ಎಲ್ ಪಿಜಿ ಗ್ಯಾಸ್ ಸೌಲಭ್ಯವಿಲ್ಲದೆ ಈಗಲೂ ತಮ್ಮ ಮನೆಗಳಲ್ಲಿ ಸೌದೆಗಳಿಂದ ಅಡುಗೆ ಮಾಡುತ್ತಿದ್ದಾರೆ. ಇದರಿಂದ ವಾಯು ಮಾಲಿನ್ಯದ ಜೊತೆಗೆ ಆರೋಗ್ಯವು ಹಾಳಾಗುತ್ತದೆ. ಅರಣ್ಯ ನಾಶವೂ ಆಗುತ್ತದೆ. ಇದನ್ನು ಮನಗಂಡು ಇನ್ಫೋಸಿಸ್ ಸಂಸ್ಥೆಯು ಕೈಗೊಂಡಿರುವ ಮನೆಯಲ್ಲಿಯೇ ಸಗಣಿಯನ್ನು ಬಳಸಿ ಬಯೊಗ್ಯಾಸ್ ಉತ್ಪಾದಿಸಿ ಬಳಸುವ ಹೊಗೆ ಮುಕ್ತವಾಗಿಸುವ ಈ ಯೋಜನೆಯು ಸಫಲತೆಯಾಗಲು ಫಲಾನುಭವಿಗಳ ಸಹಕಾರ ಅಗತ್ಯವಿದೆ ಎಂದು ಅವರು ಹೇಳಿದರು.

ಸಂಸ್ಥೆಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ರಾಮದಾಸ್ ಕಾಮತ್ ಮಾತನಾಡಿ, ಕೇಂದ್ರ ಅಂಕಿ ಅಂಶಗಳ ಸಚಿವಾಲಯದ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಸಾಂಪ್ರದಾಯಿಕ ಅಡುಗೆ ಕ್ರಮದಲ್ಲಿ ಉಂಟಾಗುವ ಪರಿಸರ ಮಾಲಿನ್ಯದಿಂದಾಗಿ ಭಾರತದಲ್ಲಿ ಅಂದಾಜು ಮಿಲಿಯನ್ ಸಾವುಗಳು ಸಂಭವಿಸುತ್ತಿವೆ ಎಂದರು.

ಇನ್ಫೋಸಿಸ್ ಸಂಸ್ಥೆಯು ಜಿಲ್ಲೆಯಲ್ಲಿನ ಒಂದು ಗ್ರಾಮವನ್ನು ದತ್ತು ಪಡೆದು, ಆ ಗ್ರಾಮದಲ್ಲಿ ಆಸ್ಪತ್ರೆ, ಶಾಲೆ, ಬ್ಯಾಂಕ್, ನೀರು ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಲು ತೀರ್ಮಾನಿಸಿದೆ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿ.ಪಿ.ರಾಜೇಶ್, ರಾಮನಗರ ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾಗೌಡ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹರೂರು ರಾಜಣ್ಣ, ವೈ.ಟಿ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ.ರಾಜು ಮುಂತಾದವರು ಭಾಗವಹಿಸಿದ್ದರು.

ಏನಿದು ಯೋಜನೆ
ಇನ್ಫೋಸಿಸ್ ಸಂಸ್ಥೆಯು ಎಸ್.ಕೆ.ಸಿ. ಸಂಸ್ಥೆಯ ಮೂಲಕ ಜಾರಿಗೆ ತಂದಿರುವ ಈ ಯೋಜನೆಯಲ್ಲಿ ರೈತರು ತಮ್ಮ ಹಸುಗಳ ಸಗಣಿ ಮತ್ತು ನೀರನ್ನು ಬಳಸಿ ಯಾವುದೇ ಖರ್ಚಿಲ್ಲದೆ ದಿನಕ್ಕೆ 6 ಗಂಟೆ ಉರಿಯುವ ಬಯೋಗ್ಯಾಸ್ ತಯಾರಿಸಬಹುದು.

ನಂತರ ಮತ್ತೆ ಆ ಸಗಣಿಯನ್ನು ಗೊಬ್ಬರವಾಗಿ ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸಬಹುದು. ಒಂದು ಘಟಕಕ್ಕೆ ರೂ 29 ಸಾವಿರ ವೆಚ್ಚವಾಗಲಿದ್ದು, ಇದು ಫಲಾನುಭವಿಗೆ ಸಂಪೂರ್ಣ ಉಚಿತವಾಗಿ ದೊರೆಯಲಿದೆ.

ಇನ್ಫೋಸಿಸ್ ಸಂಸ್ಥೆಯು ಜಿಲ್ಲೆಯಲ್ಲಿ ಜಾರಿಗೆ ತಂದಿರುವ ಬಯೊಗ್ಯಾಸ್ ಡೈಜೆಸ್ಟರ್ ಯೋಜನೆಯ ಅನುಕೂಲವನ್ನು ತಾಲ್ಲೂಕಿನ ಕರಲಹಳ್ಳಿ ಗ್ರಾಮದ 20 ಫಲಾನುಭವಿಗಳು ಉಚಿತವಾಗಿ ಪಡೆದಿದ್ದಾರೆ.

ಸಂಸ್ಥೆಯ ವತಿಯಿಂದ ಬಯೋಗ್ಯಾಸ್ ಗೆ ಬೇಕಾದ ಸ್ಟವ್, ಪೈಪ್, ಬಾವಿ, ಸಿಮೆಂಟ್ ಬಳೆ ಮುಂತಾದ ಸೌಲಭ್ಯಗಳನ್ನು ನೀಡಿ ಸಂಸ್ಥೆಯವರೆ ಜೋಡಿಸಿಕೊಟ್ಟು ಬಳಕೆಗೆ ಸಿದ್ಧಗೊಳಿಸುತ್ತಾರೆ. ರೈತರು ಅದನ್ನು ನಿರ್ವಹಣೆ ಮಾಡುವುದಷ್ಟೇ ಅವರ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT