ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ಜನರಿಗೆ ಗಲ್ಲು ಬದಲು ಜೀವಾವಧಿ

ಸರಣಿ ಚರ್ಚ್ ಸ್ಫೋಟ ಪ್ರಕರಣ
Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಾಡಿ, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ನಡೆದಿದ್ದ ಸರಣಿ ಚರ್ಚ್ ಸ್ಫೋಟ ಪ್ರಕರಣಗಳಿಗೆ ಸಂಬಂ­ಧಿಸಿದಂತೆ ಎಂಟು ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ವಿಧಿಸಿದ್ದ ಮರಣ­ದಂಡನೆಯನ್ನು ಹೈಕೋರ್ಟ್ ಬುಧವಾರ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದೆ.

ಅಲ್ಲದೆ ಪ್ರಕರಣದ ಇತರ 12 ಅಪರಾಧಿಗಳಿಗೆ ವಿಧಿಸಲಾಗಿದ್ದ ಜೀವಾ­ವಧಿ ಶಿಕ್ಷೆಯನ್ನು ನ್ಯಾಯ­ಮೂರ್ತಿ ಎನ್.ಕುಮಾರ್ ಹಾಗೂ ರತ್ನಕಲಾ ಅವರಿದ್ದ ವಿಭಾಗೀಯ ಪೀಠವು ಕಾಯಂಗೊಳಿಸಿದೆ. ಎಲ್ಲ 20 ಅಪರಾಧಿಗಳೂ ನಿಷೇಧಿತ ಶ್ರೀ ಚನ್ನಬಸವೇಶ್ವರ ದೀನ್‌ದಾರ್ ಅಂಜುಮನ್ ಸಿದ್ದಿಕಿ ಸಂಘಟನೆಯ ಸದಸ್ಯರು. ಇವರಲ್ಲಿ ಬಹುತೇಕರು  ಹೈದರಾಬಾದ್‌ ಮೂಲದವರು.

‘ದೇಶದ ವಿರುದ್ಧ ಸಮರ ಸಾರಿದ ಗುರುತರ ಆರೋಪ ಸಾಬೀತಾಗಿದೆ. ಆದ್ದರಿಂದ ಇವರೆಲ್ಲಾ ಶಿಕ್ಷೆಗೆ ಅರ್ಹರು. ಆದಾಗ್ಯೂ ಈ ಪ್ರಕರಣದಲ್ಲಿ ಸಾರ್ವ­ಜನಿಕರ ಜೀವಗಳಿಗೆ ಹಾನಿ ಉಂಟಾ­ಗಿಲ್ಲ. ಆದ್ದರಿಂದ 8 ಜನ ಅಪರಾಧಿ­ಗಳಿಗೆ ವಿಶೇಷ ನ್ಯಾಯಾಲಯ ವಿಧಿಸಿದ್ದ ಮರಣದಂಡ­ನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಆದೇಶದ ಪ್ರತಿ ಕೈಸೇರಿದ ನಂತರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ. 
ಹಸ್ಮತ್ ಪಾಷಾ  22 ಅಪರಾಧಿಗಳ ಪರ ವಕೀಲರು

‘ಅಪರಾಧಿಗಳು ಕ್ರಿಶ್ಚಿಯನ್ ಮತ್ತು ಹಿಂದೂ ಸಮುದಾಯಗಳ ನಡುವೆ ಕೋಮು ಭಾವನೆ ಕೆರಳಿಸುವ ದುರುದ್ದೇಶ ಹೊಂದಿದ್ದವರು. ಇವರು ಪಾಕಿಸ್ತಾನದ ಮರ್ದಾನ್ ಹಾಗೂ ರಾವಲ್ಪಿಂಡಿಯ ಕೆಲ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿರುವುದು ದೃಢಪ­ಟ್ಟಿದೆ. ತಮ್ಮ ದುಷ್ಕೃತ್ಯಗಳಿಗೆ ಅಗತ್ಯ­ವಾದ ಹಣವನ್ನು ಇವರೆಲ್ಲಾ ಡಕಾ­ಯಿತಿ ನಡೆಸುವ ಮೂಲಕ ಸಂಗ್ರಹಿಸು­ತ್ತಿದ್ದರು. ದಕ್ಷಿಣ ಭಾರತದಲ್ಲಿ ಇಸ್ಲಾಮಿಕ್ ರಾಷ್ಟ್ರ ನಿರ್ಮಾಣ ಮಾಡುವುದು ಇವರ ಮುಖ್ಯ ಗುರಿಯಾಗಿತ್ತು. ಹಾಗಾಗಿ ಇವರು ಭಾರತೀಯ ದಂಡ ಸಂಹಿತೆಯ ಕಲಂ 153–ಎ ಮತ್ತು 124–ಎ ಅನ್ವಯ ಜೀವಾವಧಿ ಶಿಕ್ಷೆಗೆ ಅರ್ಹರಾಗಿದ್ದಾರೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

2000ನೇ ಇಸ್ವಿಯ ಜೂನ್‌ 6ರ  ಬೆಳಿಗ್ಗೆ 9.30ಕ್ಕೆ ಗುಲ್ಬರ್ಗ ಜಿಲ್ಲೆಯ ವಾಡಿಯ ಸೇಂಟ್ ಆ್ಯನ್ಸ್ ಕ್ಯಾಥೊಲಿಕ್ ಚರ್ಚ್, ಜುಲೈ 7ರಂದು ಹುಬ್ಬಳ್ಳಿಯ ಕೇಶ್ವಾಪುರದ ಜಾನ್ ಲೂಥರ್ ಚರ್ಚ್‌ನಲ್ಲಿ ಬೆಳಗಿನ ಜಾವದ 4.30ರ ವೇಳೆ ಹಾಗೂ ಜುಲೈ 9ರಂದು ರಾತ್ರಿ 10.15ರಲ್ಲಿ ಬೆಂಗಳೂರಿನ ಜಗ­ಜೀವನರಾಮ್ ನಗರದ ಸೇಂಟ್ ಪೀಟರ್ ಪಾಲ್ ಚರ್ಚ್‌ನಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ನಡೆದಿದ್ದವು.
ಈ ಮಧ್ಯೆ ಜುಲೈ 10ರಂದೇ ಮಾಗಡಿ ರಸ್ತೆಯ ಮಿನರ್ವ ಮಿಲ್ಸ್ ಬಳಿ ವ್ಯಾನ್ ಸ್ಫೋಟ ಪ್ರಕರಣದಲ್ಲಿ ಒಬ್ಬ ಮೃತಪಟ್ಟಿದ್ದ. ಈ ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಚರ್ಚ್‌ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಾಗಿದ್ದರು. ಈ ಘಟನೆ ಎಲ್ಲ ಸ್ಫೋಟಗಳಿಗೆ  ಸುಳಿವು ನೀಡಿತ್ತು.

ವಿಚಾರಣೆ ತಡವಾಗುತ್ತಿದೆ ಎಂಬ ಕಾರಣಕ್ಕಾಗಿ  2005ರ ನಂತರ ಬೆಂಗ­ಳೂರಿನ ಕೇಂದ್ರ ಕಾರಾಗೃಹದ ವಿಶೇಷ ನ್ಯಾಯಾಲಯ ಒಂದೇ ಸೂರಿನಡಿ ಮೂರೂ ಪ್ರಕರಣಗಳ ವಿಚಾರಣೆ ನಡೆಸಿತ್ತು. ಕೋರ್ಟ್ ಹಾಲ್ ಸಂಖ್ಯೆ 3ರಲ್ಲಿ ಮಧ್ಯಾಹ್ನ 2.55ಕ್ಕೆ ನ್ಯಾಯ­ಮೂರ್ತಿ ಎನ್.ಕುಮಾರ್ ಅವರು ಆದೇಶದ 1,654 ಪುಟಗಳಲ್ಲಿನ ಪ್ರಮುಖ ಭಾಗಗಳನ್ನು ಓದಲು ಆರಂ­ಭಿಸಿ 3.30 ಕ್ಕೆ ಮುಕ್ತಾಯ­ಗೊಳಿಸಿ­ದರು. ಈ ವೇಳೆ ಕೋರ್ಟ್‌ಹಾಲ್‌ನ ಒಳಗೆ, ಹೊರಗೆ ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT