ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ

ಮೆಟ್ರೊ ರೈಲು ಎರಡನೇ ಹಂತಕ್ಕೆ ಭೂಸ್ವಾಧೀನ ಪ್ರಕ್ರಿಯೆ, l97.90 ಹೆಕ್ಟೇರ್‌ ಭೂಮಿ ಅಗತ್ಯ
Last Updated 2 ಸೆಪ್ಟೆಂಬರ್ 2015, 20:12 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಯೋಜನೆಗಾಗಿ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ಮುಂದಿನ ಎಂಟು ತಿಂಗಳುಗಳ ಒಳಗೆ ಪೂರ್ಣಗೊಳಿಸಲು ಬೆಂಗಳೂರು ಮೆಟ್ರೊ ರೈಲು ನಿಗಮವು ಉದ್ದೇಶಿಸಿದೆ.

ಎರಡನೇ ಹಂತದ ಯೋಜನೆಗೆ ಒಟ್ಟು 97.90 ಹೆಕ್ಟೇರ್‌ ಭೂಮಿಯ ಅಗತ್ಯವಿದೆ. ಮೆಟ್ರೊ ಮಾರ್ಗ ಮತ್ತು ನಿಲ್ದಾಣಗಳ ನಿರ್ಮಾಣಕ್ಕಾಗಿ ವಸತಿ, ವಾಣಿಜ್ಯ ಕಟ್ಟಡಗಳು ಸೇರಿದಂತೆ ಒಟ್ಟು 941 ಕಟ್ಟಡಗಳು ನೆಲಸಮಗೊಳ್ಳಲಿವೆ. ಭೂ ಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿರುವ ನಿಗಮವು  ಕಾಮಗಾರಿಗಳನ್ನು ಗುತ್ತಿಗೆಗೆ ನೀಡುವ ಕಾರ್ಯಕ್ಕೂ ಚಾಲನೆ ನೀಡಿದೆ.

ಎರಡನೇ ಹಂತದಲ್ಲಿ ಒಟ್ಟು ಆರು ಮಾರ್ಗಗಳು (ರೀಚ್‌) ನಿರ್ಮಾಣಗೊಳ್ಳಲಿವೆ. ಈ ಪೈಕಿ ನಾಲ್ಕು ವಿಸ್ತರಣೆಯಾಗುವ ಮತ್ತು ಎರಡು ಹೊಸ ಮಾರ್ಗಗಳಿವೆ. ಬೈಯಪ್ಪನಹಳ್ಳಿಯಿಂದ ಮಹದೇವ­ಪುರ­ದವರೆಗೆ ಬೇಕಾಗುವ ಭೂಮಿಯ ಅಳತೆ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಬೈಯಪ್ಪನಹಳ್ಳಿ­ಯಿಂದ ಸತ್ಯ ಸಾಯಿ ಆಸ್ಪತ್ರೆವರೆಗಿನ ಭೂಮಿ ಸ್ವಾಧೀನಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕಾಯ್ದೆ ಅಡಿಯಲ್ಲಿ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ.

ನಾಯಂಡಹಳ್ಳಿ– ಕೆಂಗೇರಿ  ಮಾರ್ಗದಲ್ಲಿ  ಚಳ್ಳಘಟ್ಟದಲ್ಲಿ ಡಿಪೊ ನಿರ್ಮಿಸುವ ಯೋಜನೆಯೂ ಅಂತಿಮಗೊಂಡಿದೆ. ಕೃಷ್ಣಲೀಲಾ ಪಾರ್ಕ್‌ನಿಂದ ಅಂಜನಾಪುರ ಟೌನ್‌ಶಿಪ್‌ ವರೆಗಿನ ವಿಸ್ತರಣಾ ಮಾರ್ಗಕ್ಕೆ  (ಪುಟ್ಟೇನಹಳ್ಳಿಯಿಂದ ಅಂಜನಾಪುರ) ಬೇಕಾದ ಭೂ ಅಳತೆ ಕಾರ್ಯವೂ ಪ್ರಗತಿಯಲ್ಲಿದೆ. ಹೊಸ ಮಾರ್ಗಗಳಾದ ಆರ್‌.ವಿ. ರಸ್ತೆಯಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ನಿಲ್ದಾಣದ ಹಾಗೂ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಿಂದ ಬೊಮ್ಮಸಂದ್ರದ ವರೆಗಿನ ಮಾರ್ಗಕ್ಕೆ ಜಮೀನು ಸ್ವಾಧೀನಕ್ಕಾಗಿಯೂ   ಅಧಿಸೂಚನೆ ಹೊರಡಿಸಲಾಗಿದೆ.  ಇದರಲ್ಲಿ ಹೆಬ್ಬಗೋಡಿ ಡಿಪೊ ಕೂಡ ಒಳಗೊಂಡಿದೆ.

ಹೆಚ್ಚು ಮರ ಕಡಿಯದಿರಲು ತೀರ್ಮಾನ: ಮೊದಲ ಹಂತದ ಮೆಟ್ರೊ ಕಾಮಗಾರಿ ವೇಳೆ ನಿಗಮವು 1,420ಕ್ಕೂ ಹೆಚ್ಚು ಮರಗಳನ್ನು ಕಡಿದಿತ್ತು. ಆದರೆ ಎರಡನೇ ಹಂತದ ಕಾಮಗಾರಿ ವೇಳೆ ಹೆಚ್ಚು ಮರಗಳನ್ನು ಕತ್ತರಿಸದಿರಲು ನಿರ್ಧರಿಸಿದೆ. ವೈಟ್‌ಫೀಲ್ಡ್‌ ಮಾರ್ಗದಲ್ಲಿ ಬರುವ ಸುಮಾರು 50 ವರ್ಷ ಹಳೆಯ ಮೂರು ಆಲದ ಮರಗಳ ಜೊತೆಗೇ ಸಾಧ್ಯವಾದಷ್ಟು ಮರಗಳನ್ನು ಉಳಿಸಿಕೊಳ್ಳುವ ತೀರ್ಮಾನಕ್ಕೆ ಬಂದಿದೆ.

‘ವೈಟ್‌ಫೀಲ್ಡ್‌ ಮಾರ್ಗದಲ್ಲಿ ಹೇಳಿಕೊಳ್ಳುವ ಸಂಖ್ಯೆಯಲ್ಲಿ ಮರಗಳು ಇಲ್ಲ. ಈ ಮಾರ್ಗದಲ್ಲಿ ಮೆಟ್ರೊ ಕಾಮಗಾರಿ ಆರಂಭಿಸುವುದಕ್ಕೂ ಮುನ್ನ ಮಹದೇವಪುರವರೆಗೆ 4 ಕಿ.ಮೀ ರಸ್ತೆ ವಿಸ್ತರಣೆ ಮಾಡುವ ಪ್ರಸ್ತಾವವೂ ಇದೆ. ಮೂರು ಹಳೆಯ ಮರಗಳನ್ನು ಕತ್ತರಿಸಿ ರಸ್ತೆ ವಿಸ್ತರಣೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಈಗ ನಮ್ಮ ನಿರ್ಧಾರ ಬದಲಿಸಿದ್ದೇವೆ.

ರಸ್ತೆಯನ್ನು ಎರಡು ಮೀಟರ್‌ಗಳ ಬದಲಾಗಿ ಒಂದು ಮೀಟರ್‌ ವಿಸ್ತರಣೆ ಮಾಡಿ ಮರಗಳನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು. ‘ಈ ಭಾಗದಲ್ಲಿ ರಸ್ತೆಯ ಮಧ್ಯದಿಂದ ಮೆಟ್ರೊ ಎತ್ತರಿಸಿದ ಮಾರ್ಗ ಹಾದು ಹೋಗಲಿದೆ. ಇದರಿಂದಾಗಿ ಉದ್ದೇಶಿತ ಮೆಟ್ರೊ ನಿಲ್ದಾಣಗಳನ್ನು ಹೊರತುಪಡಿಸಿದರೆ ಹೆಚ್ಚಿನ ಮರಗಳಿಗೆ ಯಾವುದೇ ಹಾನಿ ಇಲ್ಲ’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT